ಮೆಟ್ರೋ ಟಿಕೆಟ್ ದರ ಏರಿಕೆ ಬಗ್ಗೆ ತಪ್ಪು ಲೆಕ್ಕ ನೀಡಿತಾ BMRCL? ಅಧಿಕಾರಿಗಳಿಗೆ ಗಣಿತ ಪಾಠದ ಅವಶ್ಯಕತೆ ಇದೆ ಎಂದ ತೇಜಸ್ವಿ ಸೂರ್ಯ

ಬಿಎಂಆರ್​​ಸಿಎಲ್​​ ಅಧಿಕಾರಿಗಳು ದರ ಏರಿಕೆ ಸಮಿತಿಗೆ ತಪ್ಪು ಮಾಹಿತಿ ನೀಡಿ, ಟಿಕೆಟ್ ದರವನ್ನು ಹೆಚ್ಚಿಸಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರಿಂದ 100 ಕೋಟಿ ರೂ ಹೆಚ್ಚುವರಿ ಸಂಗ್ರಹವಾಗಿದೆ ಎಂದು ಆರೋಪಿಸಿದ್ದಾರೆ. ತಪ್ಪು ಸರಿಪಡಿಸಿ, ದರ ಇಳಿಸುವಂತೆ ಆಗ್ರಹಿಸಿದ್ದು, ಇಲ್ಲವಾದರೆ ಹೈಕೋರ್ಟ್ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮೆಟ್ರೋ ಟಿಕೆಟ್ ದರ ಏರಿಕೆ ಬಗ್ಗೆ ತಪ್ಪು ಲೆಕ್ಕ ನೀಡಿತಾ BMRCL? ಅಧಿಕಾರಿಗಳಿಗೆ ಗಣಿತ ಪಾಠದ ಅವಶ್ಯಕತೆ ಇದೆ ಎಂದ ತೇಜಸ್ವಿ ಸೂರ್ಯ
ಮೆಟ್ರೋ, ಸಂಸದ ತೇಜಸ್ವಿ ಸೂರ್ಯ
Updated By: ಗಂಗಾಧರ​ ಬ. ಸಾಬೋಜಿ

Updated on: Oct 27, 2025 | 10:27 PM

ಬೆಂಗಳೂರು, ಅಕ್ಟೋಬರ್​ 27: ನಮ್ಮ ಮೆಟ್ರೋ ದೇಶದಲ್ಲೇ ದುಬಾರಿ ಮೆಟ್ರೋ ಎನ್ನುವ ಕುಖ್ಯಾತಿ ಪಡೆದುಕೊಂಡಿದೆ. ಇದಕ್ಕೆ ಪ್ರಮುಖ ಕಾರಣ ಅಂದರೆ ಬಿಎಂಆರ್​​ಸಿಎಲ್​​ (BMRCL) ಅಧಿಕಾರಿಗಳು ದರ ಏರಿಕೆ ಕಮಿಟಿಗೆ ತಪ್ಪು ಮಾಹಿತಿ ನೀಡಿದ್ದು, ದುಪ್ಪಟ್ಟು ಏರಿಕೆ ಮಾಡಿದ್ದಾರಂತೆ. ಹಾಗಾಗಿ ಅಧಿಕಾರಿಗಳಿಗೆ ಗಣಿತ ಪಾಠದ ಅವಶ್ಯಕತೆ ಇದೆ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫೆಬ್ರವರಿ 9 ರಂದು ನಮ್ಮ ಮೆಟ್ರೋ 105% ರಷ್ಟು ಟಿಕೆಟ್ ದರ ಏರಿಕೆ ಮಾಡಿತ್ತು. ನಂತರ ಪ್ರಯಾಣಿಕರ ಆಕ್ರೋಶ ಬೆನ್ನಲ್ಲೇ ಫೆಬ್ರವರಿ 13 ರಂದು 71.5 ಕ್ಕೆ ಟಿಕೆಟ್ ದರವನ್ನು ಇಳಿಕೆ ಮಾಡಿತ್ತು. ಆದರೆ ಇದೀಗ ಮತ್ತೆ ನಮ್ಮ ಮೆಟ್ರೋ ಟಿಕೆಟ್ ದರ ಇಳಿಕೆ ಮಾಡಬೇಕಿದೆ ಅಂತಿದ್ದಾರೆ ಸಂಸದ ತೇಜಸ್ವಿ ಸೂರ್ಯ.

ಇದನ್ನೂ ಓದಿ: ಅತ್ಯಂತ ದುಬಾರಿ ನಮ್ಮ ಮೆಟ್ರೋ: ದೆಹಲಿ ಮೆಟ್ರೋ ದರ ಏರಿಕೆ ಜತೆ ಹೋಲಿಸಿ ಸರ್ಕಾರದ ವಿರುದ್ಧ ತೇಜಸ್ವಿ ಸೂರ್ಯ ವಾಗ್ದಾಳಿ

ಕಳೆದ ಬಾರಿ 2017 ರಲ್ಲಿ ಟಿಕೆಟ್ ದರ ಏರಿಕೆ ಮಾಡುವಾಗ, ವಿದ್ಯುತ್ ದರ ಪ್ರತಿ ಯೂನಿಟ್​ಗೆ 6 ರೂ. ಇತ್ತು. ಸದ್ಯ 5.25 ಪೈಸೆ ಇದ್ದರೂ ಕಳೆದ ಬಾರಿ 15% ರಷ್ಟು ಮಾತ್ರ ಟಿಕೆಟ್ ದರ ಏರಿಕೆ ಮಾಡಿದ್ದರು. ಹೀಗೆ ಸಾಕಷ್ಟು ತಪ್ಪು ಮಾಹಿತಿಗಳನ್ನು ನೀಡಿ ಶೇ 105.5 ರಷ್ಟು ದರ ಏರಿಕೆಗೆ ಮನವಿ ಮಾಡಿ ಕೊನೆಗೆ ದರ ಏರಿಕೆ ಕಮಿಟಿಯೂ ನಮ್ಮ ಮೆಟ್ರೋಗೆ ಶೇ 51.55 ರಷ್ಟು ಹೆಚ್ಚಳಕ್ಕೆ ಅನುಮತಿ ನೀಡಿತ್ತು. ಆದರೆ ನಮ್ಮ ಮೆಟ್ರೋ 71.5% ರಷ್ಟು ದರ ಏರಿಕೆ ಮಾಡಿದೆ. ಹಾಗಾಗಿ ನಮ್ಮ ಮೆಟ್ರೋ ಅಧಿಕಾರಿಗಳಿಗೆ ಗಣಿತದ ಪಾಠ ಅವಶ್ಯಕತೆ ಇದೆ ಎಂದಿದ್ದಾರೆ ಸಂಸದ ತೇಜಸ್ವಿ ಸೂರ್ಯ.

ದರ ಏರಿಕೆಯಿಂದ 100 ಕೋಟಿ ರೂ ಹೆಚ್ಚುವರಿ ಪಡೆದಿದ್ದಾರೆಂದ ತೇಜಸ್ವಿ ಸೂರ್ಯ

ಇಂದು ಸಂಸದ ತೇಜಸ್ವಿ ಸೂರ್ಯ ಬಿಎಂಆರ್​​​​​​​ಸಿಎಲ್​​ ಎಂಡಿ ಸೇರಿದಂತೆ ಅಧಿಕಾರಿಗಳಿಗೆ ಗಣಿತ ಪಾಠ ಮಾಡಲು ಸಿದ್ದತೆ ಮಾಡಿಕೊಂಡಿದ್ದರು, ಆದರೆ ಈ ವಿಚಾರ ತಿಳಿದ ಬಿಎಂಆರ್​​ಸಿಎಲ್​ ಎಂಡಿ ಡಾ.ಶಿವಶಂಕರ್ ಅನಾರೋಗ್ಯದ ಕಾರಣ ನೀಡಿ ಸಂಸದರ ಗಣಿತ ಪಾಠ ಕೇಳಲು ಸಮಯ ನೀಡಲೇ ಇಲ್ಲ.

ಮೆಟ್ರೋ ಅಧಿಕಾರಿಗಳು ಮೆಟ್ರೋ ದರ ಪರಿಷ್ಕರಣೆ ಸಮಿತಿ ‌ಮುಂದೆ ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಇಲ್ಲಿಯವರೆಗೆ ಪ್ರಯಾಣಿಕರಿಂದ 100 ಕೋಟಿ ರೂ. ಹೆಚ್ಚುವರಿ ಹಣವನ್ನು ಸಂಗ್ರಹ ಮಾಡಿದ್ದಾರಂತೆ. ಈ ತಪ್ಪುಗಳನ್ನು ಸರಿಪಡಿಸಿ ಎಂದು ಡಿಸಿಎಂ ಡಿಕೆ ಶಿವಕುಮಾರ್, ಬಿಎಂಆರ್​​ಸಿಎಲ್​​ ಎಂಡಿಗೆ ಪತ್ರ ಬರೆದು ಮನವಿ ಮಾಡುವ ಜೊತೆಗೆ, ದರ ಕಡಿಮೆ ಮಾಡಿಲ್ಲ ಅಂದರೆ ಮೆಟ್ರೋ ಅಧಿಕಾರಿಗಳು ದರ ಪರಿಷ್ಕರಣೆ ಸಮಿತಿಗೆ ನೀಡಿರುವ ತಪ್ಪು ಮಾಹಿತಿಯನ್ನು ಪ್ರಶ್ನೆ ಮಾಡಿ ಹೈಕೋರ್ಟ್ ಮೆಟ್ಟಿಲು ಹತ್ತಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.

ನವೆಂಬರ್ ಗಿಫ್ಟ್ ನೀಡುವಂತೆ ಸರ್ಕಾರಕ್ಕೆ ಪ್ರಯಾಣಿಕರು ಮನವಿ

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಮ್ಮ ಮೆಟ್ರೋ ಪ್ರಯಾಣಿಕರು, ಕೂಡಲೇ ಬಿಎಂಆರ್​​ಸಿಎಲ್​​ ಅಧಿಕಾರಿಗಳು ತಪ್ಪು ಮಾಡಿ ಏರಿಕೆ ಮಾಡಿರುವ ದರವನ್ನು ಕಡಿಮೆ ಮಾಡುವ ಮೂಲಕ ಕನ್ನಡಿಗರಿಗೆ ನವೆಂಬರ್ ಗಿಫ್ಟ್ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಲಾಲ್​ಬಾಗ್​ನ 6 ಎಕರೆ ಅಲ್ಲ, 6 ಇಂಚನ್ನೂ ಸುರಂಗ ಮಾಡಲು ಬಿಡಲ್ಲ: ಗುಡುಗಿದ ತೇಜಸ್ವಿ ಸೂರ್ಯ

ಒಟ್ಟಿನಲ್ಲಿ ನಮ್ಮ ಮೆಟ್ರೋ ಅಧಿಕಾರಿಗಳು ಟಿಕೆಟ್ ದರ ಪರಿಷ್ಕರಣೆ ಸಮಿತಿ ಮುಂದೆ ತಪ್ಪು ಲೆಕ್ಕ ನೀಡಿ, ಪ್ರಯಾಣಿಕರಿಂದ ದುಪ್ಪಟ್ಟು ದರವನ್ನು ವಸೂಲಿ ಮಾಡ್ತಿದ್ದಾರೆ ಅಂತಿದ್ದಾರೆ ತೇಜಸ್ವಿ ಸೂರ್ಯ. ಆದರೆ ಇದಕ್ಕೆ ಬಿಎಂಆರ್​​ಸಿಎಲ್​​ ಎಂಡಿ ಮತ್ತು ಅಧಿಕಾರಿಗಳು ಯಾವ ರೀತಿಯಲ್ಲಿ ಉತ್ತರ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.