ಬೆಂಗಳೂರು: ಡಿಪ್ಲೊಮಾ ಪರೀಕ್ಷಾ ದಿನಾಂಕ ಘೋಷಣೆಯಾದ ಬೆನ್ನಲ್ಲೆ ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದಾರೆ. ಪರೀಕ್ಷೆಗೆ ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನೆಗೆ ಎಐಡಿಎಸ್ಒ (AIDSO) ವಿದ್ಯಾರ್ಥಿ ಸಂಘಟನೆ ಸಾಥ್ ನೀಡಿದೆ. ಜುಲೈ 28 ರಿಂದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದಾಗಿ ತಾಂತ್ರಿಕ ಶಿಕ್ಷಣ ಇಲಾಖೆ ಘೋಷಿಸಿದೆ. ಪರೀಕ್ಷೆ ದಿನಾಂಕ ಘೋಷಣೆಯಿಂದ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ.
ಎಲ್ಲಾ ವಿದ್ಯಾರ್ಥಿಗಳಿಗೂ ಸರಿಯಾಗಿ ಲಸಿಕೆ ಸಿಕ್ಕಿಲ್ಲ. ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸುವ ತೀರ್ಮಾನವನ್ನು ಕೈಬಿಡಬೇಕು ಅಂತ ಪರೀಕ್ಷೆಯ ಸುತ್ತೋಲೆ ಹೊರಡಿಸಿರುವ ಡಿಟಿಇ (DTE) ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳೇನು?
* ಹಿಂದಿನ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವ ನಿರ್ಧಾರವನ್ನು ಕೈ ಬಿಡಬೇಕು.
* ಪ್ರಸಕ್ತ ಸೆಮಿಸ್ಟರ್ ಪರೀಕ್ಷೆಯನ್ನು ಅಚ್ಚುಕಟ್ಟಾಗಿ ಮಾಡಿ.
* ಪಿಯು ಪರೀಕ್ಷೆಯನ್ನು ರದ್ದುಗೊಳಿಸಿದಂತೆ ಡಿಪ್ಲೋಮಾ ಸೆಮಿಸ್ಟರ್ ಪರೀಕ್ಷೆಯನ್ನು ರದ್ದುಗೊಳಿಸಿ.
* ಆಂತರಿಕ ಮೌಲ್ಯಮಾಪನ ಅಥವಾ ಇನ್ನಾವುದಾದರೂ ವೈಜ್ಞಾನಿಕ ಮಾನದಂಡದ ಮೂಲಕ ಮೌಲ್ಯಮಾಪನ ಮಾಡಿ.
* ಶಿಕ್ಷಣ ತಜ್ಞರು, ಉಪನ್ಯಾಸಕರು, ಪೋಷಕರು ಹಾಗೂ ವಿದ್ಯಾರ್ಥಿಗಳೊಡನೆ ಪ್ರಜಾ ತಾಂತ್ರಿಕ ಚರ್ಚೆಗಳನ್ನು ನಡೆಸಿ.
* ಶೈಕ್ಷಣಿಕ ವೇಳಾಪಟ್ಟಿ, ಪರೀಕ್ಷೆ, ಮೌಲ್ಯಮಾಪನ ಅಥವಾ ಇನ್ನಾವುದಾದರೂ ವೈಜ್ಞಾನಿಕ ಪ್ರಜಾ ತಾಂತ್ರಿಕ ನೀತಿಯನ್ನು ರೂಪಿಸಿ.
ಈ ಎಲ್ಲಾ ಬೇಡಿಕೆಯನ್ನು ಆಗ್ರಹಿಸಿ ಪ್ರತಿಭಟಿಸುತ್ತಿರುವ ಡಿಪ್ಲೊಮಾ ವಿದ್ಯಾರ್ಥಿಗಳು, ಯುಜಿಸಿ ಹಾಗೂ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.
ಧಾರವಾಡದಲ್ಲೂ ಪ್ರತಿಭಟನೆ
ಧಾರವಾಡ: ಒಂದೇ ತಿಂಗಳಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ನಡೆಸುತ್ತಿರುವ ಹಿನ್ನೆಲೆ ಎಐಡಿಎಸ್‌ಒ ಸಂಘಟನೆ ಪ್ರತಿಭಟನೆ ನಡೆಸುತ್ತಿದೆ. ಕಳೆದ ಸೆಮಿಸ್ಟರ್ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಮುಂದೂಡಿದ್ದ ಪರೀಕ್ಷೆಯನ್ನು ಇದೇ ತಿಂಗಳಲ್ಲಿ ಮಾಡಲು ನಿರ್ಧರಿಸಲಾಗಿದೆ. ಈ ಸೆಮಿಸ್ಟರ್ ಪರೀಕ್ಷೆ ನಡೆಸಲು ಸಿದ್ಧತೆ ನಡೆಯುತ್ತಿದೆ. ಒಂದೇ ತಿಂಗಳಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ
(Diploma students are protesting demanding the cancellation of semester exam in Bengaluru)
Published On - 1:02 pm, Mon, 19 July 21