ನಮ್ಮ ರಾಜ್ಯಾಧ್ಯಕ್ಷರು ಹೀಗೆಲ್ಲಾ ಮಾತನಾಡಲ್ಲ; ಅದ್ಯಾರೋ ಮಿಮಿಕ್ರಿ ಆರ್ಟಿಸ್ಟು ಮಾತಾಡಿರಬಹುದು – ಡಾ.ಕೆ.ಸುಧಾಕರ್

ಈ ಆಡಿಯೋ ಟೇಪು ಇವೆಲ್ಲವೂ ಕೂಡ ದಾಖಲೆ ಆಗುವುದಿಲ್ಲ. ಕೋರ್ಟ್ ಕೂಡ ಈಗಾಗಲೇ ದಾಖಲೆ ಅಲ್ಲ ಎಂದು ಹೇಳಿದೆ. ಮೇಲಾಗಿ ಇದು ನನ್ನ ಧ್ವನಿ ಅಲ್ಲ ಅಂತ ರಾಜ್ಯಾಧ್ಯಕ್ಷರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇದಕ್ಕೆಲ್ಲಾ ಎಷ್ಟೊಂದು ಜನ ಮಿಮಿಕ್ರಿ ಆರ್ಟಿಸ್ಟು ಇರ್ತಾರೆ. ಇದೆಲ್ಲಾ ರಾಜಕೀಯ ಪಿತೂರಿ: ಸುಧಾಕರ್

ನಮ್ಮ ರಾಜ್ಯಾಧ್ಯಕ್ಷರು ಹೀಗೆಲ್ಲಾ ಮಾತನಾಡಲ್ಲ; ಅದ್ಯಾರೋ ಮಿಮಿಕ್ರಿ ಆರ್ಟಿಸ್ಟು ಮಾತಾಡಿರಬಹುದು - ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್, ನಳಿನ್ ಕುಮಾರ್ ಕಟೀಲ್

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಲೀಕ್ (Audio Leak) ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ.ಸುಧಾಕರ್ (Dr K Sudhakar), ರಾಜ್ಯಾಧ್ಯಕ್ಷರ ಪರ ಬ್ಯಾಟಿಂಗ್ ಮಾಡಿದ್ದಾರೆ. ನಮ್ಮ ರಾಜ್ಯಾಧ್ಯಕ್ಷರು ಹೀಗೆಲ್ಲಾ ಮಾತನಾಡುವ ಸ್ವಭಾವದವರು ಅಲ್ಲ. ಇದೆಲ್ಲಾ ರಾಜಕೀಯ ಪಿತೂರಿ, ಷಡ್ಯಂತ್ರ ಎಂದು ಹೇಳಿದ್ದಾರೆ. ಇದು ನನ್ನ ಧ್ವನಿ ಅಲ್ಲ ಎಂದು ರಾಜ್ಯಾಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ (Chief Minister of Karnataka) ಕೂಡ ಸ್ಪಷ್ಟನೆ ನೀಡಿದ್ದಾರೆ. ಅಷ್ಟಾದ ನಂತರವೂ ಅನಗತ್ಯವಾಗಿ ಚರ್ಚೆ ಆಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಳಿನ್​ ಕುಮಾರ್ ಕಟೀಲ್ ಬೆನ್ನಿಗೆ ನಿಂತ ಸಚಿವ ಸುಧಾಕರ್, ಈ ಆಡಿಯೋ ಟೇಪು ಇವೆಲ್ಲವೂ ಕೂಡ ದಾಖಲೆ ಆಗುವುದಿಲ್ಲ. ಕೋರ್ಟ್ ಕೂಡ ಈಗಾಗಲೇ ದಾಖಲೆ ಅಲ್ಲ ಎಂದು ಹೇಳಿದೆ. ಮೇಲಾಗಿ ಇದು ನನ್ನ ಧ್ವನಿ ಅಲ್ಲ ಅಂತ ರಾಜ್ಯಾಧ್ಯಕ್ಷರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇದಕ್ಕೆಲ್ಲಾ ಎಷ್ಟೊಂದು ಜನ ಮಿಮಿಕ್ರಿ ಆರ್ಟಿಸ್ಟು ಇರ್ತಾರೆ. ಇದೆಲ್ಲಾ ರಾಜಕೀಯ ಪಿತೂರಿ ಎನ್ನುವುದು ಸ್ಪಷ್ಟ. ನಾವು ಕಳೆದ ಒಂದೂವರೆ ವರ್ಷದಿಂದ ಗಮನಿಸಿದಂತೆ ಅವರು ಬಹಳಷ್ಟು ಎಚ್ಚರಿಕೆಯಿಂದ ಮಾತನಾಡುತ್ತಾರೆ. ಈ ರೀತಿಯ ಹೇಳಿಕೆ ಕೊಟ್ಟಿಲ್ಲ, ಕೋಡೋದು ಇಲ್ಲ ಎಂದು ಹೇಳುವ ಮೂಲಕ ಬಿಜೆಪಿ ಅಧ್ಯಕ್ಷರ ಬೆಂಬಲಕ್ಕೆ ನಿಂತಿದ್ದಾರೆ.

ಇತ್ತ ಇಂದು ದೆಹಲಿಗೆ ತೆರಳಬೇಕಿದ್ದ ನಳಿನ್ ಕುಮಾರ್ ಕಟೀಲ್, ತಮ್ಮ ದೆಹಲಿ ಪ್ರವಾಸವನ್ನು ದಿಢೀರ್ ಎಂದು ರದ್ದು ಮಾಡಿದ್ದಾರೆ. ಇಂದು ಮಂಗಳೂರಿನಲ್ಲೇ ಉಳಿಯಲಿರುವ ನಳಿನ್ ಕುಮಾರ್ ನಾಳೆ ದೆಹಲಿಯಲ್ಲಿ ಸಂಸತ್ ಅಧಿವೇಶನಕ್ಕೆ ಹಾಜರಾಗಲು ನಿರ್ಧರಿಸಿದ್ದಾರೆ. ಆಡಿಯೋ ವೈರಲ್ ಬಗ್ಗೆ ಸ್ಪಷ್ಟನೆ ನೀಡಿದ ನಂತರ ಅವರು ದೆಹಲಿಗೆ ತೆರಳಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ, ಆಡಿಯೋ ವೈರಲ್ ಬಗ್ಗೆ ಸ್ಪಷ್ಟನೆ ನೀಡಿದ ನಳಿನ್ ಕುಮಾರ್ ದೆಹಲಿ ಪ್ರವಾಸವನ್ನು ಮಾತ್ರ ದಿಢೀರ್ ಎಂದು ರದ್ದುಗೊಳಿಸಿದ್ದಾರೆ.

ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಇಂದು ದೆಹಲಿಗೆ ತೆರಳಬೇಕಿದ್ದ ಕಟೀಲ್, ನಾಳೆ ದೆಹಲಿಗೆ ತೆರಳಲಿದ್ದು ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಸದ್ಯ ರಾಜ್ಯದಲ್ಲಿ ಈಶ್ವರಪ್ಪ, ಸುಧಾಕರ್ ಎಲ್ಲರೂ ನಳೀನ್ ಕುಮಾರ್​ಗೆ ಬೆಂಬಲವಾಗಿ ನಿಂತಿದ್ದು ಯಾರೋ ಬೇಕಂತಲೇ ಇದನ್ನು ಮಾಡಿದ್ದಾರೆ. ವೈರಲ್ ಮಾಡಿದವರು ಯಾರೆಂದು ಗೊತ್ತಾಗಲಿ ಎಂದು ಆಗ್ರಹಿಸಿದ್ದಾರೆ.

ವೈರಲ್ ಆದ ಆಡಿಯೋದಲ್ಲಿ ಏನಿದೆ?
‘ಯಾರಿಗೂ ಹೇಳೋಕೆ ಹೋಗ್ಬೇಡ. ಈಶ್ವರಪ್ಪ, ಜಗದೀಶ್ ಶೆಟ್ಟರ್ ಆ ಟೀಮನ್ನೇ ತೆಗೆಯೋದು. ಎಲ್ಲಾ ಹೊಸ ಟೀಮ್ ಮಾಡ್ತಾ ಇದ್ದೇವೆ. ಯಾರಿಗೂ ಹೇಳ್ಬೇಡ. ಏನೂ ತೊಂದ್ರೆ ಇಲ್ಲ. ಹೆದರ್ಬೇಡ, ಇದ್ದೇವೆ. ಎಲ್ರೂ ನಮ್ಮ ಕೈಯಲ್ಲೇ ಇನ್ನು‌. ಮೂರು ಹೆಸರಿದೆ, ಯಾರೂ ಆಗುವ ಚಾನ್ಸ್ ಇದೆ.‌ ಇಲ್ಲಿನವ್ರನ್ನ ಯಾರನ್ನೂ ಮಾಡಲ್ಲ. ಡೆಲ್ಲಿಯಿಂದನೇ ಹಾಕ್ತಾರೆ’. ಇದು ವೈರಲ್​ ಆಗಿರುವ ಆಡಿಯೋದಲ್ಲಿ ಹೇಳಲಾದ ಮಾತುಗಳು.

ಇಡೀ ಟೀಮನ್ನೇ ತೆಗೆದುಹಾಕಲಾಗುತ್ತದೆ, ಹೊಸ ಟೀಮ್ ಮಾಡ್ತಾರೆ. ಮೂರು ಹೆಸರು ಇದೆ, ಯಾರಾದಾರೂ ಆಗಲು ಚಾನ್ಸ್ ಇದೆ. ಇಲ್ಲಿಯವರನ್ನು ಯಾರನ್ನೂ ಮಾಡಲ್ಲ, ದೆಹಲಿಯಿಂದಲೇ ಎಲ್ಲವೂ ಆಗುತ್ತೆ ಎಂದು ಹೇಳಿರುವ ಮಾತುಗಳು ಬಿಜೆಪಿಯಲ್ಲಿ ಘಟಿಸಲಿರುವ ಮಹತ್ತರ ಬದಲಾವಣೆಗಳನ್ನು ಸೂಚಿಸುತ್ತಿದ್ದು, ಹೊಸ ಮುಖಗಳಿಗೆ ಹೈಕಮಾಂಡ್ ಮಣೆ ಹಾಕಲಿದೆ ಎಂಬುದನ್ನು ತಿಳಿಸುವ ಕಾರಣದಿಂದಲೇ ಸಾಕಷ್ಟು ಅನುಮಾನ ಹಾಗೂ ಚರ್ಚೆಗಳಿಗೆ ಕಾರಣವಾಗಿದೆ.

ಇದನ್ನೂ ಓದಿ:
ನಳಿನ್​ ಕುಮಾರ್​ ಕಟೀಲ್​ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ತುಣುಕಿನಲ್ಲಿ ಇರುವ ಸೀಕ್ರೇಟ್ ಏನು? ಇಲ್ಲಿದೆ ಸಂಪೂರ್ಣ ವಿವರ