ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಪರೀಕ್ಷೆಗಳನ್ನು ರದ್ದುಪಡಿಸಲು ಉನ್ನತ ಶಿಕ್ಷಣ ಇಲಾಖೆಗೆ ವಿದ್ಯಾರ್ಥಿಗಳಿಂದ ಒತ್ತಡ
ಕಳೆದ ವರ್ಷದ ಇಡೀ ಸೆಮಿಸ್ಟರ್ಗೆ ಸಂಬಂಧಿಸಿದ ಪಠ್ಯವನ್ನು ಆನ್ಲೈನ್ ಮೂಲಕ ಕಲಿಸಲಾಗಿರುವ ಕಾರಣ, ಈಗಿನ ಸೆಮಿಸ್ಟರ್ ಪಠ್ಯವನ್ನೂ ಪರೀಕ್ಷೆಗೆ ಕಲಿತು, ಆನ್ಲೈನ್ಲ್ಲಿ ಕಲಿಸಿದ್ದನ್ನೂ ಪುನಃ ಆಫ್ಲೈನ್ ಪರೀಕ್ಷೆಗಾಗಿ ಓದುವುದು ಒತ್ತಡ ಉಂಟುಮಾಡುತ್ತದೆ ಎನ್ನುವುದು ವಿದ್ಯಾರ್ಥಿಗಳ ಅಳಲು.
ಬೆಂಗಳೂರು: ಕೊರೊನಾ ಎರಡನೇ ಅಲೆ ಕಾರಣಕ್ಕೆ ದ್ವಿತೀಯ ಪಿಯು ಪರೀಕ್ಷೆಗಳನ್ನು ರದ್ದುಗೊಳಿಸಿದ ಬೆನ್ನಲ್ಲೇ ಪದವಿ, ಡಿಪ್ಲೊಮಾ, ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನೂ ನಿಲ್ಲಿಸಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಲಾರಂಭಿಸಿದ್ದಾರೆ. ಕೊವಿಡ್ ಹಿನ್ನೆಲೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಇಂಜಿನಿಯರಿಂಗ್ ಪರೀಕ್ಷೆಗಳು ಮುಂದೂಡಲ್ಪಟ್ಟಿದ್ದು, ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿ ಮುಂದೂಡುವಂತೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಸೂಚಿಸಿದ್ದರು. ಅದರನ್ವಯ ಮುಂದಿನ ಆದೇಶದವರೆಗೆ ಪರೀಕ್ಷೆ ಮುಂದೂಡಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿತ್ತು. ಆದರೆ, ಈಗ ಸದರಿ ತರಗತಿಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳು ಪರೀಕ್ಷೆ ರದ್ದು ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ.
ಕೊರೊನಾ ಎರಡನೇ ಅಲೆ ನಿಯಂತ್ರಣ ಮೀರಿ ಹರಡುತ್ತಿದ್ದ ಕಾರಣ ಪದವಿಯ 1, 3 ಮತ್ತು 5ನೇ ಸೆಮಿಸ್ಟರ್ ಪರಿಕ್ಷೆಗಳು ನಡೆದಿಲ್ಲ. ಆದರೆ, ಪರೀಕ್ಷೆ ನಡೆಸದೆಯೇ 2, 4 ಮತ್ತು 6ನೇ ಸೆಮಿಸ್ಟರ್ ತರಗತಿ ಪ್ರಾರಂಭಕ್ಕೆ ಅವಕಾಶ ನೀಡಲಾಗಿದೆ. ಕೊರೊನಾ ನಿಯಂತ್ರಣಕ್ಕೆ ಬಂದ ನಂತರ 1, 3 ಮತ್ತು 5ನೇ ಸೆಮಿಸ್ಟರ್ ಪರೀಕ್ಷೆ ನಡೆಸಿ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಸೂಚನೆ ನೀಡಿದ್ದಾರೆ. ಸದ್ಯದ ಲೆಕ್ಕಾಚಾರಗಳ ಪ್ರಕಾರ ಆಗಸ್ಟ್ ತಿಂಗಳ ಕೊನೆಯ ವಾರ ಅಥವಾ ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಪರೀಕ್ಷೆ ನಡೆಸಲು ಉನ್ನತ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಎರಡೆರೆಡು ಸೆಮಿಸ್ಟರ್ ಪರೀಕ್ಷೆಗಳು ಏಕಕಾಲಕ್ಕೆ ಬರುತ್ತವೆ. ಅದು ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತಡ ಉಂಟುಮಾಡಲಿದೆ. ಹೀಗಾಗಿ ಬೆಸ ಸೆಮಿಸ್ಟರ್ ಪರೀಕ್ಷೆಯನ್ನು ರದ್ದುಪಡಿಸಿ ಎಂದು ಆಗ್ರಹಿಸಿದ್ದಾರೆ. ಈ ಹಿಂದೆ 1, 3 ಮತ್ತು 5ನೇ ಸೆಮಿಸ್ಟರ್ ಪರೀಕ್ಷೆಗಳು ಮಾರ್ಚ್ ಕೊನೆ ವಾರದಿಂದ ಮೇ ತಿಂಗಳ ಮೊದಲ ವಾರದವರೆಗೆ ನಿಗದಿಯಾಗಿದ್ದವು. ಈಗ ಅವುಗಳನ್ನೇ ಆಗಸ್ಟ್ ಅಥವಾ ಸೆಪ್ಟೆಂಬರ್ನಲ್ಲಿ ನಡೆಸಲು ಹೊರಟರೆ 2, 4 ಮತ್ತು 6ನೇ ಸೆಮಿಸ್ಟರ್ ಪರೀಕ್ಷೆಗಳೂ ಹತ್ತಿರದಲ್ಲೇ ಬರಲಿವೆ. ಆ ಸಂದರ್ಭದಲ್ಲಿ 12 ಅಥವಾ ಅದಕ್ಕಿಂತ ಹೆಚ್ಚು ವಿಷಯಗಳನ್ನ ಬರೆಯಲು ಸಾಧ್ಯವಾಗುವುದಿಲ್ಲ ಎಂದು ವಿದ್ಯಾರ್ಥಿಗಳು ಸಮಸ್ಯೆ ಹೇಳಿಕೊಂಡಿದ್ದಾರೆ.
ಈ ಸಮಸ್ಯೆಯನ್ನು ಪರಿಗಣಿಸಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದತಿ ರೀತಿಯಲ್ಲೇ ಪದವಿ ಪರೀಕ್ಷೆಗಳನ್ನೂ ರದ್ದು ಮಾಡಿ ಎಂದು ಬೆಂಗಳೂರು ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದಾರೆ. ಬೆಂಗಳೂರು ವಿವಿ ಜ್ಞಾನ ಭಾರತಿ ಕ್ಯಾಂಪಸ್, ಬೆಂಗಳೂರು ಕೇಂದ್ರ ವಿವಿ, ಬೆಂಗಳೂರು ನಾರ್ಥ್ ವಿವಿ ಹಾಗೂ ಪದವಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರನ್ನು ಭೇಟಿ ಮಾಡಿದ ವಿದ್ಯಾರ್ಥಿ ಸಂಘಟನೆಗಳು ತಮ್ಮ ಆಗ್ರಹವನ್ನು ಮುಂದಿಟ್ಟಿವೆ. ಪರೀಕ್ಷೆ ರದ್ದತಿ ವಿಚಾರವನ್ನು ಕ್ಯಾಬಿನೆಟ್ನಲ್ಲಿ ಪ್ರಸ್ತಾಪಿಸುವುದಾಗಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಕುಮಾರ್ ಭರವಸೆ ನೀಡಿದ್ದಾರೆ.
ಈ ಎಲ್ಲಾ ಸಮಸ್ಯೆಗಳ ಜತೆಗೆ ಕಳೆದ ವರ್ಷದ ಇಡೀ ಸೆಮಿಸ್ಟರ್ಗೆ ಸಂಬಂಧಿಸಿದ ಪಠ್ಯವನ್ನು ಆನ್ಲೈನ್ ಮೂಲಕ ಕಲಿಸಲಾಗಿರುವ ಕಾರಣ, ಈಗಿನ ಸೆಮಿಸ್ಟರ್ ಪಠ್ಯವನ್ನೂ ಪರೀಕ್ಷೆಗೆ ಕಲಿತು, ಆನ್ಲೈನ್ಲ್ಲಿ ಕಲಿಸಿದ್ದನ್ನೂ ಪುನಃ ಆಫ್ಲೈನ್ ಪರೀಕ್ಷೆಗಾಗಿ ಓದುವುದು ಒತ್ತಡ ಉಂಟುಮಾಡುತ್ತದೆ ಎನ್ನುವುದು ವಿದ್ಯಾರ್ಥಿಗಳ ಅಳಲು. ಪರೀಕ್ಷೆಯ ಬದಲು ತರಗತಿಯಲ್ಲಿ ನಡೆಸಲಾದ ಟೆಸ್ಟ್ ಆಧರಿಸಿ ಉತ್ತೀರ್ಣ ಮಾಡಿ ಎಂದು ವಿದ್ಯಾರ್ಥಿಗಳು ಒತ್ತಡ ಹೇರುತ್ತಿದ್ದು, ಕೊರೊನಾ ಮೂರನೇ ಅಲೆ ಬರುವ ನಿರೀಕ್ಷೆ ಇರುವ ಸಂದರ್ಭದಲ್ಲಿ ಎರಡೆರೆಡು ಸೆಮಿಸ್ಟರ್ ಪರೀಕ್ಷೆ ಬೇಡವೇ ಬೇಡ ಎಂದು ಪಟ್ಟು ಹಿಡಿದಿದ್ದಾರೆ.