ಅಕ್ರಮ ಆಸ್ತಿಗಳಿಕೆ ಪ್ರಕರಣ: ಡಿಕೆಶಿ ವಿರುದ್ಧ ಎಫ್​ಐಆರ್​, ಲೋಕಾಯುಕ್ತದಿಂದ ಮರು ತನಿಖೆ

| Updated By: ರಮೇಶ್ ಬಿ. ಜವಳಗೇರಾ

Updated on: Feb 13, 2024 | 3:07 PM

ಲೋಕಸಭಾ ಚುನಾವಣೆ ಹೊತ್ತಲ್ಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಮರು ತನಿಖೆ ಮಾಡಲು ಲೋಕಾಯುಕ್ತ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಇದೀಗ ಹೊಸ ಎಫ್​ಐರ್​​ ದಾಖಲಾಗಿದೆ.

ಅಕ್ರಮ ಆಸ್ತಿಗಳಿಕೆ ಪ್ರಕರಣ: ಡಿಕೆಶಿ ವಿರುದ್ಧ ಎಫ್​ಐಆರ್​, ಲೋಕಾಯುಕ್ತದಿಂದ ಮರು ತನಿಖೆ
ಡಿಕೆ ಶಿವಕುಮಾರ್
Follow us on

ಬೆಂಗಳೂರು, (ಫೆಬ್ರವರಿ 13): ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (DK Shivakumar) ವಿರುದ್ಧ ಅಕ್ರಮ ಆಸ್ತಿಗಳಿಕೆ ಪ್ರಕರಣ ಸಂಬಂಧಿಸಿದಂತೆ ಲೋಕಾಯುಕ್ತ (karnataka lokayukta)ಎಫ್‌ಐಆರ್ ದಾಖಲಿಸಿಕೊಂಡಿದೆ. ಸಿಬಿಐಯಲ್ಲಿದ್ದ ಪ್ರಕರಣವನ್ನು ಮರು ತನಿಖೆಗೆ ಲೋಕಾಯುಕ್ತ ಎಫ್​ಐಆರ್ ದಾಖಲಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಸಿಬಿಐಗೆ ಪತ್ರ ಬರೆದಿದೆ. ಆದ್ರೆ, ಸಿಬಿಐ ಈವರೆಗೂ ಲೋಕಾಯುಕ್ತಕ್ಕೆ ಸಂಬಂಧಿಸಿದ ದಾಖಲೆ ಒದಗಿಸಿಲ್ಲ.

ಏನಿದು ಪ್ರಕರಣ?

ಗುಜರಾತ್‌ನಲ್ಲಿ ರಾಜಕೀಯ ಬಿಕ್ಕಟ್ಟು ಹಿನ್ನೆಲೆಯಲ್ಲಿ ಅಲ್ಲಿನ 42 ಕಾಂಗ್ರೆಸ್‌ ಶಾಸಕರಿಗೆ ಬೆಂಗಳೂರು ಸಮೀಪದ ಈಗಲ್‌ಟನ್ ರೆಸಾರ್ಟ್‌ನಲ್ಲಿ ಉಳಿಯಲು ಡಿಕೆ ಶಿವಕುಮಾರ್ ವ್ಯವಸ್ಥೆ ಮಾಡಿದ್ದರು. ಈ ಶಾಸಕರ ಜವಾಬ್ದಾರಿಯನ್ನು ಇವರೇ ವಹಿಸಿದ್ದರು. ಅದೇ ಸಂದರ್ಭದಲ್ಲಿ ಅಂದರೆ 2017ರ ಆಗಸ್ಟ್‌ನಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಡಿಕೆಶಿ ಅವರ ಕನಕಪುರ ಮನೆ, ಬೆಂಗಳೂರಿನ ನಿವಾಸ, ಕಚೇರಿ ಹಾಗೂ ಆಪ್ತರ ಮನೆಗಳು ಸೇರಿದಂತೆ 39 ಕಡೆ ದಾಳಿ ನಡೆಸಿದ್ದರು. ಕಾಂಗ್ರೆಸ್ ಎಂಎಲ್‌ಸಿ ಗೋವಿಂದರಾಜು ಅವರ ಡೈರಿಯಲ್ಲಿ ಹೆಸರು ಪತ್ತೆಯಾದ ನಂತರ ಶಿವಕುಮಾರ್ ಅವರನ್ನು ವಿಚಾರಣೆ ನಡೆಸಿದ್ದರು. ಆದರೆ ಅವರ ಉತ್ತರ ಮನವರಿಯಾಗದ ಹಿನ್ನೆಲೆಯಲ್ಲಿ ಈ ದಾಳಿ ಮಾಡಲಾಗಿತ್ತು.

ಐಟಿ ಅಧಿಕಾರಿಗಳ ದಾಳಿ ವೇಳೆ ಸುಮಾರು 7.5 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದರು. ಮತ್ತೊಂದೆಡೆ ಐಟಿ ಅಧಿಕಾರಿಗಳು ಮಾಹಿತಿ ಆಧಾರದ ಮೇಲೆ ಜಾರಿನಿರ್ದೇಶನಾಯ-ಇಡಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿದ್ದರು. ವಿಚಾರಣೆಯ ಸಲುವಾಗಿ ಡಿಕೆಶಿ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಇಡಿ ತನಿಖೆಯನ್ನು ಆಧಾರಿಸಿ ಸಿಬಿಐ ಕೂಡ ಫೀಲ್ಡ್‌ಗೆ ಇಳಿದಿತ್ತು. ಡಿಕೆ ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಹಿಂದಿನ ಬಿಜೆಪಿ ಸರ್ಕಾರದ ಅನುಮತಿಯನ್ನು ಕೋರಲಾಗಿತ್ತು. 2019ರ ಸೆಪ್ಟೆಂಬರ್ 15 ರಂದು ಸಿಬಿಐ ತನಿಖೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಸಿಬಿಐ ಅಧಿಕಾರಿಗಳು 2020ರ ಅಕ್ಟೋಬರ್ 3 ರಂದು ಡಿಕೆ ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದೆ.

ಸಿಬಿಐ ತನಿಖೆ ಆದೇಶ ವಾಪಸ್ ಪಡೆದಿರುವ ಸರ್ಕಾರ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸಿಬಿಐ ತನಿಖೆಗೆ ವಹಿಸಿರುವ ಆದೇಶವನ್ನು ವಾಪಸ್ ಪಡೆದುಕೊಂಡಿತ್ತು. ಡಿಕೆಶಿ ಪ್ರಕರಣವನ್ನು ಸಿಬಿಐಗೆ ವಹಿಸಿರುವುದು ಕಾನೂನಾತ್ಮಕವಾಗಿ ಇಲ್ಲ. ಸ್ಪೀಕರ್ ಅನುಮತಿ, ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯ ಪಡೆಯದೇ ತನಿಖೆಗೆ ನೀಡಲಾಗಿದೆ ಸರ್ಕಾರ ಸ್ಪಷ್ಟನೆ ನೀಡಿತ್ತು. ಈ ವಿಚಾರವಾಗಿ ಕಾಂಗ್ರೆಸ್, ಬಿಜೆಪಿ ಜೊತೆ ಜೆಡಿಎಸ್ ನಾಯಕ ನಡುವೆ ಪರಸ್ಪರ ಆರೋಪ ಪ್ರತ್ಯಾರೋಪಗಳಜು ನಡೆದಿದ್ದವು.

ಕೋರ್ಟ್​ ಮೆಟ್ಟಿಲೇರಿದ ಯತ್ನಾಳ್

ಇನ್ನು ಡಿಕೆ ಶಿವಕುಮಾರ್​​​ ವಿರುದ್ಧದ ಸಿಬಿಐ ತನಿಖೆಯ ಆದೇಶವನ್ನು ಸರ್ಕಾರ ವಾಪಸ್ ಪಡೆದುಕೊಂಡಿರುವುದನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಕೋರ್ಟ್​ ಮೊರೆ ಹೋಗಿದ್ದಾರೆ. ಯತ್ನಾಳ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಫೆಬ್ರವರಿ 29ಕ್ಕೆ ಮುಂದೂಡಿದೆ.

Published On - 2:49 pm, Tue, 13 February 24