ಚಿತ್ರದುರ್ಗ: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಇಳಿಮುಖವಾಗುತ್ತಿದೆ. ಆದರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಮಾತ್ರ ಕೊರೊನಾ ಎರಡನೇ ಅಲೆಯ ಸೋಂಕು ಏರಿಕೆ ಆಗುತ್ತಿದೆ. ಹೀಗಾಗಿ, ಕೊವಿಡ್ ನಿಯಂತ್ರಣಕ್ಕೆ ತರಲು ಜಿಲ್ಲಾಡಳಿತ ಮುಂದಾಗಿದ್ದು, ದಿನಬಿಟ್ಟು ದಿನ ಲಾಕ್ಡೌನ್ ಘೋಷಿಸಿದೆ. ಆದರೆ ಕೊರೊನಾ ನಿಯಂತ್ರಣಕ್ಕಿಂತ ಈ ಭಾಗದ ಜನರಲ್ಲಿ ಈ ರೀತಿಯಾ ಲಾಕ್ಡೌನ್ ಗೊಂದಲ ಸೃಷ್ಟಿಸಿದೆ.
ಕೊರೊನಾ ಸೋಂಕಿನ ಪ್ರಮಾಣ ಶೇಕಡಾ 4ರಷ್ಟಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ, ಈಗ ಶೇ. 20ಕ್ಕೆ ಏರಿದೆ. ಹೀಗಾಗಿ, ಜಿಲ್ಲಾಡಳಿತ ದಿನಬಿಟ್ಟು ದಿನ ಲಾಕ್ಡೌನ್ ಘೋಷಿಸಿದೆ. ಮೇ 26ರಿಂದ ಜೂನ್ 07ರವರೆಗೆ ದಿನಬಿಟ್ಟು ದಿನ ಸಂಪೂರ್ಣ ಲಾಕ್ಡೌನನ್ಗೆ ಡಿಸಿ ಆದೇಶಿಸಿದ್ದಾರೆ. ಜಿಲ್ಲಾಡಳಿತದ ಆದೇಶ ಸಾರ್ವಜನಿಕರು ಮತ್ತು ವ್ಯಾಪಾರಿಗಳಲ್ಲಿ ಗೊಂದಲ ಸೃಷ್ಟಿಸಿದೆ. ಹೀಗಾಗಿ ಜನ ನಿತ್ಯವೂ ರಸ್ತೆಗಿಳಿಯುತ್ತಿದ್ದು, ಪೊಲೀಸರಿಂದ ದಂಡಕ್ಕೆ ಗುರಿಯಾಗುವಂತಾಗಿದೆ.
ಅಂತೆಯೇ ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿ ಬೀಳುವಂತಾಗಿದೆ. ಆದರೆ ಬೇರೆ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಘೋಷಿಸಿದ್ದು, ಇಲ್ಲಿ ಈ ರೀತಿಯ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಹಾಗೆಯೇ ಜನರು ಕೂಡ ಈ ಬಗ್ಗೆ ಸರಿಯಾದ ಮಾಹಿತಿ ಹೊಂದಿಲ್ಲ. ಹೀಗಾಗಿ ಚಿತ್ರದುರ್ಗ ಜಿಲ್ಲಾಡಳಿತ ದಿನಬಿಟ್ಟು ದಿನ ಲಾಕ್ಡೌನ್ ಘೋಷಿಸಿದ ಬಗ್ಗೆ ಬಗ್ಗೆ ಮರುಪರಿಶೀಲನೆ ನಡೆಸಬೇಕು ಎಂದು ಸ್ಥಳೀಯರಾದ ಶಫಿವುಲ್ಲಾ ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರು ಮಾತ್ರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ತಡೆಗೆ ದಿನ ಬಿಟ್ಟು ದಿನ ಸಂಪೂರ್ಣ ಲಾಕ್ಡೌನ್, ವಾರಾಂತ್ಯದ ಶನಿವಾರ, ಭಾನುವಾರವೂ ಸಂಪೂರ್ಣ ಲಾಕ್ ಮಾಡಲಾಗುತ್ತಿದೆ. ತರಕಾರಿ, ಹಣ್ಣಿನ ವ್ಯಾಪಾರಿಗಳು ಹಾಗೂ ಜನರನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲಾಡಳಿತ ಘೋಷಿಸಿರುವ ದಿನಬಿಟ್ಟು ದಿನ ಲಾಕ್ಡೌನ್ ಸಾರ್ವಜನಿಕರಲ್ಲಿ ಗೊಂದಲು ಹುಟ್ಟುಹಾಕಿದೆ. ಹೀಗಾಗಿ, ಜಿಲ್ಲಾಡಳಿತ ಈ ಬಗ್ಗೆ ಮರು ಪರಿಶೀಲನೆ ನಡೆಸಬೇಕು ಹಾಗೂ ಕೊರೊನಾ ನಿಯಂತ್ರಣಕ್ಕೆ ಸೂಕ್ತ ರೀತಿಯ ಕ್ರಮಕೈಗೊಳ್ಳಬೇಕಿದೆ.
ಇದನ್ನೂ ಓದಿ:
ಕೊರೊನಾ 3ನೇ ಅಲೆಯ ಆತಂಕ, ಮತ್ತೆ ಲಾಕ್ಡೌನ್ಗೆ ಒಲವು: ಹೀಗಿರಲಿದೆ ಜೂನ್ ತಿಂಗಳ ಚಿತ್ರಣ