AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಡಾ ಪ್ರಾಸಿಕ್ಯೂಷನ್ ನೊಟೀಸ್ ವಾಪಸಿಗೆ ಸಚಿವ ಸಂಪುಟ ನಿರ್ಣಯ, ರಾಜ್ಯಪಾಲ-ಸರ್ಕಾರದ ನಡುವೆ ಸಂಘರ್ಷಕ್ಕೆ ಮುನ್ನುಡಿ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರವಿದೆ ಎಂದು ದೂರು ಕೇಳಿ ಬಂದ ಬೆನ್ನಲ್ಲಿಯೇ ರಾಜ್ಯಪಾಲರಿಂದ ನೊಟೀಸ್ ಜಾರಿ ಮಾಡಲಾಗಿದ್ದು, ಇದೀಗ ರಾಜ್ಯಪಾಲರ ನೋಟಿಸ್ ಅನ್ನು ಹಿಂಪಡೆಯುವಂತೆ ಒತ್ತಾಯಿಸಿ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಮುಡಾ ಪ್ರಾಸಿಕ್ಯೂಷನ್ ನೊಟೀಸ್ ವಾಪಸಿಗೆ ಸಚಿವ ಸಂಪುಟ ನಿರ್ಣಯ, ರಾಜ್ಯಪಾಲ-ಸರ್ಕಾರದ ನಡುವೆ ಸಂಘರ್ಷಕ್ಕೆ ಮುನ್ನುಡಿ
ಸಿದ್ದರಾಮಯ್ಯ, ಡಿಕೆ ಶಿವಕುಮಾರ್​
ಪ್ರಸನ್ನ ಗಾಂವ್ಕರ್​
| Updated By: ರಮೇಶ್ ಬಿ. ಜವಳಗೇರಾ|

Updated on:Aug 01, 2024 | 3:00 PM

Share

ಬೆಂಗಳೂರು (ಆಗಸ್ಟ್, 01): ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದದಲ್ಲಿ ಇಂದು(ಆಗಸ್ಟ್ 01) ನಡೆದ ಸಚಿವ ಸಂಪುಟ ಸಭೆಯಲ್ಲಿ ಎರಡು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಮುಡಾ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ನೋಟಿಸ್​ ಹಿಂಪಡೆಯುವಂತೆ ಒತ್ತಾಯಿಸಿ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಹಾಗೇ ಇನ್ನೊಂದು ಈ ಬಗ್ಗೆ ಕಾನೂನು ಹೋರಾಟ ನಡೆಸಲು ಸಹ ಸಂಪುಟ ಸಭೆಯಲ್ಲಿ ನಿರ್ಣಯವಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರವಿದೆ ಎಂದು ದೂರು ನೀಡಿದ ಬೆನ್ನಲ್ಲಿಯೇ ರಾಜ್ಯಪಾಲರು ನೊಟೀಸ್ ಜಾರಿ ಮಾಡಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಷನ್ ಎದುರಿಸಬೇಕಿದ್ದ ಹಿನ್ನೆಲೆಯಲ್ಲಿ ಅವರನ್ನು ಹೊರಗಿಟ್ಟು ಸಚಿವ ಸಂಪುಟ ಸಭೆ ನಡೆಸಿದ್ದು,  ಈ ಎರಡು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಈ ಮೂಲಕ ರಾಜ್ಯಪಾಲ ಹಾಗೂ ಸರ್ಕಾರದ ನಡುವಿನ ಕಾನೂನು ಸಂಘರ್ಷ ಶುರುವಾಗುವ ಲಕ್ಷಣಗಳು ಕಾಣಿಸುತ್ತಿವೆ.

ಸಚಿವ ಸಂಪುಟದಲ್ಲಿ ಏನೆಲ್ಲಾ ಚರ್ಚೆ ಆಯ್ತು?

ಮುಡಾ ಹಗರಣದ ಆರೋಪ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಿಎಂ ಸಿದ್ದರಾಮ್ಯಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವ ಚಿಂತನೆ ನಡೆಸಿದ್ದಾರೆ. ಇದಕ್ಕೂ ಮೊದಲು ನೋಟಿಸ್​ ನೀಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ರಾಜ್ಯಪಾಲರ ನೋಟಿಸ್​ಗೆ ಸಚಿವ ಸಂಪುಟ ವಿರೋಧಿಸಿದ್ದು, ನೋಟಿಸ್​​​ನಲ್ಲಿ ಬಳಸಿದ ಪದ ಮತ್ತು ಒಕ್ಕಣಿಕೆಗೆ ಆಕ್ಷೇಪಿಸಿದೆ. ಅಲ್ಲದೇ ನೋಟಿಸ್​ ಹಿಂಪಡೆಯುವಂತೆ ನಿರ್ಣಯ ಕೈಗೊಂಡಿದೆ. ಇನ್ನು ಈ ಬಗ್ಗೆ ಹೋರಾಟ ನಡೆಸಲು ಸಹ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿ: 2010ರಲ್ಲಿ ಯಡಿಯೂರಪ್ಪಗೆ ಆದಂತೆ ಸಿದ್ದರಾಮಯ್ಯಗೆ ಕುತ್ತು ತರುತ್ತಾ ಪ್ರಾಸಿಕ್ಯೂಷನ್? ಅಂದು ಏನಾಗಿತ್ತು ಗೊತ್ತಾ?

  • ರಾಜ್ಯಪಾಲ ನೋಟಿಸ್​ ನೀಡಿರುವ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದ್ದು, ಈ ಹಿಂದೆ ಬಿಜೆಪಿ ನಾಯಕರ ವಿರುದ್ಧ ದೂರು ದಾಖಲು ಆಗಿವೆ. ಆ ದೂರುಗಳ ಬಗ್ಗೆ ರಾಜ್ಯಪಾಲರು ಯಾವುದೆ ಕ್ರಮ ಕೈಗೊಂಡಿಲ್ಲ. ಮುಡಾ ಪ್ರಕರಣದಲ್ಲಿ ದೂರು ದಾಖಲು ಆಗಿರುವ ದಿನವೇ ನೋಟೀಸ್ ನೀಡಲಾಗಿದೆ. ಮುಖ್ಯ ಕಾರ್ಯದರ್ಶಿಗೆ ನೋಟಿಸ್ ನೀಡಲಾಗಿದೆ. ಯಾಕಿಷ್ಟು ಆತುರದ ನೋಟಿಸ್? ಇದೊಂದು ರಾಜಕೀಯ ಪ್ರೇರಿತ ಎಂದು ಸಚಿವ ಸಂಪುಟ ನಿರ್ಧಾರ ಮಾಡಿದೆ.
  • ಮೊಟ್ಟೆ ಹಗರಣಕ್ಕೆ ಸಂಬಂಧಿಸಿ ಇದೇ ರಾಜ್ಯಪಾಲರ ಮುಂದೆ ದೂರು ದಾಖಲಾಗಿತ್ತು. ಮೊಟ್ಟೆ ಪ್ರಕರಣ ದಲ್ಲಿ ದೂರು ನೀಡಿ ಮೂರು ತಿಂಗಳಾದರೂ ರಾಜ್ಯಪಾಲರು ಕ್ರಮ ಕೈಗೊಂಡಿರಲಿಲ್ಲ. ಹಿಂದೆ ಬಿಜೆಪಿಯವರ ವಿರುದ್ದ ಖಾಸಗಿ ದೂರು ದಾಖಲಾದಾಗ ಪ್ರಾಸಿಕ್ಯುಷನ್ ಗೂ ಅನುಮತಿ ನೀಡಿಲ್ಲ, ಶೋಕಾಸ್ ನೊಟೀಸ್ ಕೂಡ ನೀಡಿರಲಿಲ್ಲ. ಆದ್ರೆ, ಈಗ ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಒತ್ತಡ ಹೇರುತ್ತಿರುವುದು ಸರಿಯಲ್ಲ ಎಂದು ಸಚಿವ ಸಂಪುಟದಲ್ಲಿ ಚರ್ಚೆ ಮಾಡಲಾಗಿದೆ.

ಸಭೆ ಬಳಿಕ ಸಚಿವರುಗಳು ಹೇಳಿದ್ದೇನು?

ಇನ್ನು ಸಚಿವ ಸಂಪುಟ ಬಳಿಕ ಮಾಧ್ಯಗಳಿಗೆ ಪ್ರತಿಕ್ರಿಯಿಸಿದ ಸಚಿವ ರಾಜಣ್ಣ, ಕೋಣನಿಗೆ ಕಾಯಿಲೆ ಬಂದರೆ ಎಮ್ಮೆಗೆ ಬರೆ ಹಾಕಿದ್ರಂತೆ. ಎಮ್ಮೆಗೆ ಕಾಯಿಲೆ ಬಂದ್ರೆ ಕೋಣನಿಗೆ ಬರೆ ಹಾಕಿದ್ರಂತೆ ಹಾಗಾಯ್ತು. 20 ವರ್ಷಗಳ ಹಿಂದೆಯೇ ಸಿಎಂ ಪತ್ನಿ ಸೈಟ್​ ಪಡೆದುಕೊಂಡಿದ್ದಾರೆ. ಕಾನೂನು ಪ್ರಕಾರವಾಗಿಯೇ ಮುಡಾ ಸೈಟ್​​ ಪಡೆದುಕೊಂಡಿದ್ದಾರೆ. ಈಗ ಗವರ್ನರ್ ಗೆಹ್ಲೋಟ್​ ಮುಂದೆ‌ ಎಷ್ಟು ಅರ್ಜಿಗಳು ಇವೆ?. ಇದು ರಾಜಕೀಯ ಮಿಶ್ರಣ, ಇದು ಪೂರ್ಣ ರಾಜಕಾರಣ ಎಂದರು.

ರಾಜ್ಯಪಾಲರಿಂದ ಸಿಎಂ ಸಿದ್ದರಾಮಯ್ಯಗೆ ನೋಟಿಸ್ ವಿಚಾರವಾಗಿ ಸಂಪುಟ ಸಭೆ ಬಳಿಕ ಟಿವಿ9 ಜೊತೆ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಈಗ ನೀಡಿದ ನೋಟಿಸ್ ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ. ಶೋಕಾಸ್​ ನೋಟಿಸ್ ತಿರಸ್ಕರಿಸಲು ನಿರ್ಣಯ ಮಾಡಿದ್ದೇವೆ. ಗವರ್ನರ್ ಬಳಸಿಕೊಂಡು ಕೇಂದ್ರ ಸರ್ಕಾರ ಅಧಿಕಾರದ ದುರುಪಯೋಗ ಮಾಡಿಕೊಳ್ಳುತ್ತಿದೆ. ಮುಡಾ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ತನಿಖೆ ನಡೆಯುತ್ತಿದೆ. ರಾಜ್ಯ ಸರ್ಕಾರವನ್ನ ಅಸ್ಥಿರಗೊಳಿಸಲು ಕೇಂದ್ರ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.

ಒಟ್ಟಿನಲ್ಲಿ ಮುಡಾ ಹಗರಣ ಆರೋಪ ಕ್ಷಣ ಕ್ಷಣಕ್ಕೂ ಸಿಎಂ ಕೊರಳಿಗೆ ಬಿಗಿಯಾಗಿ ಸುತ್ತಿಕೊಳ್ಳುತ್ತಿದ್ದು, ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡುತ್ತಾರಾ? ಇದಕ್ಕೆ ಸರ್ಕಾರ ಹೇಗೆ ಮೆಟ್ಟಿ ನಿಲ್ಲುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:36 pm, Thu, 1 August 24