ನವದೆಹಲಿ: ಕರ್ನಾಟಕ ಕಾಂಗ್ರೆಸ್ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಹಣ ನೀಡುವ ನಿರ್ಧಾರ ಕೈಗೊಂಡಿರುವುದನ್ನು ಬಿಜೆಪಿ ನಾಯಕರು ಟೀಕಿಸುತ್ತಿರುವುದಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಗುರುವಾರ ತಿರುಗೇಟು ನೀಡಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಅಕ್ಕಿ ಸಿಗದಿದ್ರೆ ಹಣ ನೀಡುವಂತೆ ಬಿಜೆಪಿಯವರೇ ಸಲಹೆ ನೀಡಿದ್ದರು. ತಾತ್ಕಾಲಿಕವಾಗಿ ಅಕ್ಕಿ ಬದಲು ನಾವು ಜನರಿಗೆ ಹಣ ನೀಡುತ್ತಿದ್ದೇವೆ. ನಮ್ಮ ರಾಜ್ಯದಲ್ಲೇ ಅಕ್ಕಿ ಸಂಗ್ರಹ ಮಾಡಲು ಚಿಂತನೆ ಇದೆ ಎಂದು ಹೇಳಿದರು.
5 ಕೆಜಿ ಸೇರಿ 10 ಕೆಜಿ ಅಕ್ಕಿ ಕೊಡುವುದಾಗಿ ಮಾತು ಕೊಟ್ಟಿದ್ದೆವು. ಕೊಟ್ಟ ಮಾತು ಉಳಿಸಿಕೊಳ್ಳಲು ಜನರ ಖಾತೆಗೆ ಹಣ ವರ್ಗಾವಣೆ ಮಾಡಲು ಮುಂದಾಗಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿ ಮಾಡಲು ದೆಹಲಿಗೆ ಬಂದಿದ್ದೇನೆ. ರಾಜ್ಯದ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಬಂದಿದ್ದೇನೆ. ಈಗ ಅವರನ್ನು ಭೇಟಿ ಮಾಡುತ್ತೇನೆ. ಸಚಿವರ ಜತೆ ಏನೆಲ್ಲಾ ಚರ್ಚೆ ಮಾಡಿದ್ದೇನೆಂದು ನಾಳೆ (ಶುಕ್ರವಾರ) ಬೆಳಗ್ಗೆ ತಿಳಿಸುತ್ತೇನೆ ಎಂದು ಅವರು ಹೇಳಿದರು. ಬಳಿಕ ಗಜೇಂದ್ರ ಸಿಂಗ್ ಭೇಟಿಗೆ ತೆರಳಿದರು.
ಇದನ್ನೂ ಓದಿ: ಶ್ರಮ ಒಬ್ಬರದ್ದು, ಅನುಭವಿಸುವವರು ಮತ್ತೊಬ್ಬರು; ಚರ್ಚೆಗೆ ಗ್ರಾಸವಾಯ್ತು ಡಿಕೆ ಶಿವಕುಮಾರ್ ‘ಮಾರ್ಮಿಕ’ ಹೇಳಿಕೆ
ಮೇಕೆದಾಟು ಮಾತ್ರವಲ್ಲ, ರಾಜ್ಯದ ಸಮಗ್ರ ಹಲವು ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುವುದು. ನೀರಾವರಿ ಇಲಾಖೆ ಬಗ್ಗೆ ಸಮಾಲೋಚನೆ ಮಾಡಲಾಗುತ್ತದೆ. ಮೊದಲ ಬಾರಿಗೆ ಸೌಹಾರ್ದಯುತವಾಗಿ ಮಾತುಕತೆ ನಡೆಸಲಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿರುವುದನ್ನು ಕೆಲವು ಮಂದಿ ಬಿಜೆಪಿ ನಾಯಕರು ಟೀಕಿಸಿರುವುದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನಾನು ಎಲ್ಲಾ ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತಿದ್ದೇನೆ. ಎಸ್ಎಂ ಕೃಷ್ಣ, ಜಗದೀಶ ಶೆಟ್ಟರ್, ಹೆಚ್ಡಿ ದೇವೇಗೌಡರನ್ನು ಭೇಟಿಯಾಗಿದ್ದೇನೆ. ಸದಾನಂದಗೌಡ ಭೇಟಿಗೂ ಸಮಯ ಕೇಳಿದ್ದೇನೆ, ಅದರಲ್ಲಿ ತಪ್ಪಿಲ್ಲ. ಚುನಾವಣಾ ರಾಜಕೀಯವೇ ಬೇರೆ, ಅಭಿವೃದ್ಧಿ ರಾಜಕೀಯವೇ ಬೇರೆ. ಯಾರೋ ಕೆಲವು ಮಂದಿ ಬಿಜೆಪಿ ನಾಯಕರ ಟೀಕೆಗೆ ನಾನು ತಲೆಕೆಡಿಸಿಕೊಳ್ಳಲ್ಲ. ಹಿರಿಯರು, ಅನುಭವಿಗಳ ಸಲಹೆ ಪಡೆಯುವುದರಲ್ಲಿ ಯಾವ ತಪ್ಪಿಲ್ಲ ಎಂದು ಹೇಳಿದರು.
ಸ್ವಪಕ್ಷ ನಾಯಕರ ವಿರುದ್ಧವೇ ಬಿಜೆಪಿಗರ ಅಸಮಾಧಾನ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ಬಿಜೆಪಿ ವಿಚಾರವನ್ನು ಅವರ ಪಕ್ಷದವರು ನೋಡಿಕೊಳ್ಳುತ್ತಾರೆ. ನಾನ್ಯಾಕೆ ಬಿಜೆಪಿಯ ತಟ್ಟೆಗೆ ಕೈ ಹಾಕಲು ಹೋಗಲಿ? ಅವರ ಪಕ್ಷದದಲ್ಲಿ ದೊಡ್ಡ ದೊಡ್ಡ ಲೀಡರ್ಗಳೇ ಇದ್ದಾರೆ. ಕಾಂಗ್ರೆಸ್ ಪಕ್ಷವನ್ನೂ ಸಹ ಟೀಕೆ ಮಾಡುವವರು ಇದ್ದಾರೆ. ಅವರ ಪಕ್ಷದ ಬಗ್ಗೆ ಟೀಕೆ ಮಾಡುವವರು ಕೂಡ ಇದ್ದಾರೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:20 pm, Thu, 29 June 23