
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಮೊಮ್ಮಗ ಮತ್ತು ಕಾಫೀ ಡೇ ಮಾಲೀಕ ದಿ.ಸಿದ್ದಾರ್ಥ್ ಹೆಗ್ಡೆ ಪುತ್ರ ಅಮರ್ತ್ಯ ಹೆಗ್ಡೆ ಜೊತೆ ಇಂದು (ಫೆ.14) ಹಸೆಮಣೆ ಏರಲಿದ್ದಾರೆ. ಬೆಳಗ್ಗೆ 9.45 ರ ಮುಹೂರ್ತದಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಇಂದು ಪ್ರೇಮಿಗಳ ದಿನಾಚರಣೆ. ಈ ದಿನದಂದೇ ಐಶ್ವರ್ಯಾ ಮದುವೆ ನೆರವೇರುತ್ತಿರುವುದು ವಿಶೇಷ.
ಶಿವಕುಮಾರ್ ಹಾಗೂ ಎಸ್.ಎಂ. ಕೃಷ್ಣ ಇಬ್ಬರೂ ರಾಜಕೀಯ ಬಣದಲ್ಲಿ ಅತ್ಯಂತ ಪ್ರಭಾವಿಗಳು. ಹೀಗಾಗಿ, ರಾಜಕೀಯ ವಲಯದ ದಿಗ್ಗಜರು ಮದುವೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಎಐಸಿಸಿ ನಾಯಕ ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ ಭಾಗಿಯಾಗುವ ಸಾಧ್ಯತೆ ಇದೆ.
ಬೆಂಗಳೂರಿನ ಐಷಾರಾಮಿ ಹೋಟೆಲ್ಗಳಲ್ಲಿ ಒಂದಾದ ವೈಟ್ ಫೀಲ್ಡ್ ಬಳಿಯ ಶೆರಟಾನ್ನಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ಫೆಬ್ರವರಿ 17ರಂದು ಪ್ರೆಸ್ಟೀಜ್ ಗಾಲ್ಫ್ಶೈರ್ ರೆಸಾರ್ಟ್ನಲ್ಲಿ ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ. ಫೆ.8ರಂದು ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಬೀಗರ ಊಟ ನಡೆಯಲಿದೆ.
ಇದನ್ನೂ ಓದಿ: ಐಶ್ವರ್ಯ ಶಿವಕುಮಾರ್ಗೆ ಅರಿಶಿಣ ಶಾಸ್ತ್ರದ ಸಂಭ್ರಮ
ಇನ್ನು, ಮದುವೆ ಫೆಬ್ರವರಿ 14ಕ್ಕೆ ಆದರೂ, ಮದುವೆ ಕಾರ್ಯಕ್ರಮ ಫೆ.5ರಿಂದಲೇ ಆರಂಭಗೊಂಡಿತ್ತು. ಸಂಗೀತ ಕಾರ್ಯಕ್ರಮಗಳು ರಸವತ್ತಾಗಿ ಏರ್ಪಟ್ಟಿದ್ದವು. ಫೆಬ್ರವರಿ 10ರಂದು ಅರಿಶಿಣ ಕಾರ್ಯಕ್ರಮ ನೆರವೇರಿದೆ. ಕಳೆದ ನವೆಂಬರ್ 18ರಂದು ಬೆಂಗಳೂರಿನ ಹೊರ ವಲಯದಲ್ಲಿ ಸಿಂಪಲ್ ಆಗಿ ನಿಶ್ಚಿತಾರ್ಥ ಕಾರ್ಯ ನೆರವೇರಿತ್ತು.