ಇಂದಿನಿಂದ 2 ದಿನಗಳ ಕಾಲ ಡಿಕೆ ಶಿವಕುಮಾರ್ ದೆಹಲಿ ಪ್ರವಾಸ: ರಾಹುಲ್ ಗಾಂಧಿ ಭೇಟಿಯಾಗ್ತಾರಾ, ಸಿಗುತ್ತಾ ಕುರ್ಚಿ ಅಭಯ?

ಡಿಸಿಎಂ ಡಿಕೆ ಶಿವಕುಮಾರ್ ಇಂದಿನಿಂದ 2 ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ. ರಾಹುಲ್ ಗಾಂಧಿ ಮೈಸೂರಿಗೆ ಬಂದು ಹೋದ ಬೆನ್ನಲ್ಲೇ ಡಿಕೆಶಿ ದೆಹಲಿ ಯಾತ್ರೆ ಕುತೂಹಲ ಕೆರಳಿಸಿದೆ. ಅಸ್ಸಾಂ ಚುನಾವಣೆ ನೆಪವಾದರೂ ಕುರ್ಚಿ ಆಟದ್ದೇ ಜಪ ರಾಜ್ಯ ಕಾಂಗ್ರೆಸ್​​ನಲ್ಲಿ ಜೋರಾಗಿದೆ. ಇದೀಗ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಚಟುವಟಿಕೆಗಳು ಮತ್ತೆ ಗರಿಗೆದರಿವೆ.

ಇಂದಿನಿಂದ 2 ದಿನಗಳ ಕಾಲ ಡಿಕೆ ಶಿವಕುಮಾರ್ ದೆಹಲಿ ಪ್ರವಾಸ: ರಾಹುಲ್ ಗಾಂಧಿ ಭೇಟಿಯಾಗ್ತಾರಾ, ಸಿಗುತ್ತಾ ಕುರ್ಚಿ ಅಭಯ?
ಇಂದಿನಿಂದ 2 ದಿನಗಳ ಕಾಲ ಡಿಕೆ ಶಿವಕುಮಾರ್ ದೆಹಲಿ ಪ್ರವಾಸ
Edited By:

Updated on: Jan 16, 2026 | 6:41 AM

ಬೆಂಗಳೂರು, ಜನವರಿ 16: ಸಂಕ್ರಮಣದ ದಿನ ಸೂರ್ಯ ತನ್ನ ಪಥ ಬದಲಿಸಿದ್ದಾನೆ. ಆದರೆ ಸಂಕ್ರಾಂತಿಗೆ ಕಾಂಗ್ರೆಸ್‌ನಲ್ಲಿ (Congress)  ಪಥಬದಲಾಗುತ್ತದೆ, ಕ್ರಾಂತಿಯಾಗುತ್ತದೆ ಎಂಬೆಲ್ಲ ಗೊಂದಲಗಳಿಗೆ ತೆರೆಬಿದ್ದಿಲ್ಲ. ಅಧಿಕಾರ ಹಂಚಿಕೆಗೆ ಸಂಬಂಧಪಟ್ಟಂತೆ ಸದ್ಯಕ್ಕೆ ಕಾಂಗ್ರೆಸ್‌ನಲ್ಲಿ ಅಂತಾ ಮಹತ್ವದ ಬೆಳವಣಿಗೆ ನಡೆಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಮೈಸೂರಿಗೆ ಬಂದಿದ್ದ ರಾಹುಲ್ ಗಾಂಧಿಯನ್ನು ವಿಮಾನ ನಿಲ್ದಾಣದಲ್ಲೇ ಸಿಎಂ, ಡಿಸಿಎಂ ಭೇಟಿ ಮಾಡಿದ್ದರು. ಅದರಲ್ಲೂ ಡಿಕೆ ಶಿವಕುಮಾರ್‌ (DK Shivakumar) ಪ್ರತ್ಯೇಕವಾಗಿ ನಿಂತು ಅಧಿಕಾರ ಹಂಚಿಕೆ ಗೊಂದಲವನ್ನು ಬಗೆಹರಿಸುವಂತೆ ಒತ್ತಾಯಿಸಿದ್ದರು ಎನ್ನಲಾಗಿತ್ತು. ಏರ್‌ಪೋರ್ಟ್‌ ರನ್‌ವೇನಲ್ಲಿ ಇಂತಹ ಚರ್ಚೆ ಬೇಡ. ದೆಹಲಿಗೆ ಬನ್ನಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದೂ ಮೂಲಗಳು ತಿಳಿಸಿದ್ದವು. ಅದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯಗೂ ದೆಹಲಿಗೆ ಬರುವಂತೆ ಆಹ್ವಾನ ನೀಡಿದ್ದರು.

ರಾಹುಲ್ ಗಾಂಧಿ ಭೇಟಿಯಾಗೋದು ಹೊಸದೇನು ಅಲ್ಲ ಎಂದ ಡಿಕೆಶಿ!

ರಾಹುಲ್‌ ಗಾಂಧಿಯವರ ಆಹ್ವಾನ ದೊರೆಯುತ್ತಿದ್ದಂತೆಯೇ ಡಿಕೆ ಶಿವಕುಮಾರ್‌ ಉತ್ಸಾಹದಲ್ಲಿ ಸಂಕ್ರಾಂತಿ ಹಬ್ಬದ ನಡುವೆಯೇ ಇಂದು ದೆಹಲಿಯತ್ತ ಮುಖ ಮಾಡಿದ್ದಾರೆ. ಮುಂದಿನ ವಾರ ರಾಹುಲ್‌ ಗಾಂಧಿ ವಿದೇಶ ಪ್ರವಾಸಕ್ಕಾಗಿ ತೆರಳುತ್ತಿದ್ದು, ಅದಕ್ಕೂ ಮುನ್ನವೇ ದೆಹಲಿಯಲ್ಲಿ ಭೇಟಿ ಮಾಡಿ ತಮ ಗೊಂದಲವನ್ನು ಬಗೆ ಹರಿಸಿಕೊಳ್ಳಲು ಡಿಕೆ ಶಿವಕುಮಾರ್‌ ಕಾತರರಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ದೆಹಲಿಗೆ ಹೋಗುತ್ತಿದ್ದೇನೆ. ಪಕ್ಷದ ಎಲ್ಲ ನಾಯಕರನ್ನು ಅಲ್ಲಿ ಭೇಟಿ ಮಾಡುತ್ತೇನೆ. ರಾಹುಲ್ ಗಾಂಧಿ ಭೇಟಿಯಾಗುವುದು ಹೊಸದೇನು ಅಲ್ಲ. ಅವುಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದಿಲ್ಲ ಎಂದರು. ಇನ್ನು ರಾಹುಲ್ ಗಾಂಧಿ ಭೇಟಿ ನಂತರ ನಿಮ್ಮ ಬೆಂಬಲಿಗ ಶಾಸಕರು ಸಂತೋಷವಾಗಿದ್ದಾರೆ. ಅವರ ಅಪೇಕ್ಷೆಯನ್ನು ರಾಹುಲ್ ಬಳಿ ಹೇಳಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, ರಾಹುಲ್ ನಮ್ಮ ಪಕ್ಷದ ನಾಯಕರು. ಬಯಕೆಯನ್ನು ಅವರ ಮುಂದೆ ಪ್ರಸ್ತಾಪಿಸುತ್ತೇನೆ ಎಂದು ಹೇಳಿರುವುದು ಕುತೂಹಲ ಹುಟ್ಟಿಸಿದೆ.

ಅಸ್ಸಾಂ ಚುನಾವಣೆ ನೆಪ: ಕುರ್ಚಿ ಆಟದ್ದೇ ಜಪ!

ಇಂದು ಬೆಳಗ್ಗೆ 10.55ಕ್ಕೆ ಡಿಕೆಶಿ ದೆಹಲಿಗೆ ತೆರಳುತ್ತಿದ್ದಾರೆ. ಅಸ್ಸಾಂ, ಪಶ್ಚಿಮಬಂಗಾಳ, ಕೇರಳ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಕಾಂಗ್ರೆಸ್ಸಿನ ಉಸ್ತುವಾರಿ ನಾಯಕರ ಮಹತ್ವದ ಸಭೆ ನಡೆಯಲಿದೆ. ಅಸ್ಸಾಂ ಚುನಾವಣೆಗೆ ಕಾಂಗ್ರೆಸ್‌‍ ವೀಕ್ಷಕರಾಗಿರುವ ಡಿ.ಕೆ.ಶಿವಕುಮಾರ್‌, ಸಂಸದೆ ಪ್ರಿಯಾಂಕಾ ಗಾಂಧಿ ಅವರ ಜೊತೆ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಆದರೆ ಅಸ್ಸಾಂ ಚುನಾವಣೆ ಕೇವಲ ನೆಪಮಾತ್ರವಾಗಿದ್ದು ಅಧಿಕಾರ ಹಂಚಿಕೆ ವಿಚಾರವೇ ಡಿಕೆ ದೆಹಲಿ ಭೇಟಿಗೆ ಪ್ರಧಾನ ಕಾರಣ ಎನ್ನಲಾಗಿದೆ.

ಮಲ್ಲಿಕಾರ್ಜುನ ಖರ್ಗೆ ಜೊತೆ ಡಿಕೆಶಿ ಚರ್ಚಿಸಿದ್ದೇನು?

ಸಂಕ್ರಾಂತಿ ದಿನ ರಾಜಕೀಯ ಚಟುವಟಿಕೆಗೆಳು ಗಮನ ಸೆಳೆದವು. ಡಿಸಿಎಂ ಡಿಕೆ ಎಐಸಿಸಿ ಅಧ್ಯಕ್ಷಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿದ್ದು, ಇದಕ್ಕೂ ಮುನ್ನ ಸಚಿವ ಪ್ರಿಯಾಂಕ್ ಖರ್ಗೆ ಡಿಸಿಎಂ ಡಿಕೆಶಿ ನಿವಾಸಕ್ಕೆ ಭೇಟಿಯಾಗಿ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಜೊತೆ ಮಾತುಕತೆ ನಡೆಸಿದ್ದು ಕುತೂಹಲ ಹುಟ್ಟಿಸಿತು. ಸಂದೇಶ ವಾಹಕರಂತೆ ಕೆಲಸ ಮಾಡುತ್ತಿರುವ ಪ್ರಿಯಾಂಕ ಖರ್ಗೆ, ಡಿ.ಕೆ.ಶಿವಕುಮಾರ್‌ ಅವರಿಗೆ ಸಿದ್ದರಾಮಯ್ಯ ಮತ್ತು ಹೈಕಮಾಂಡ್‌ ನೀಡಿದ ಸಂದೇಶಗಳನ್ನು ತಲುಪಿಸಿದರಾ ಎಂಬ ಪ್ರಶ್ನೆ ಮೂಡಿದೆ.

ಕರ್ನಾಟಕ ಕಾಂಗ್ರೆಸ್ ಕ್ರಾಂತಿ, ಶಿವರಾತ್ರಿಗೆ ಮುಂದೂಡಿಕೆ?

ಸಂಕ್ರಾಂತಿ ಬಳಿಕ ನಡೆಯಬೇಕಿದ್ದ ಕಾಂಗ್ರೆಸ್​​​ನ ಕ್ರಾಂತಿ, ಶಿವರಾತ್ರಿಗೆ ಮುಂದೂಡಿಕೆ ಆಗುತ್ತಾ ಎಂಬ ಅನುಮಾನ ಶುರುವಾಗಿದೆ. ಜನವರಿ 22ರ ಒಳಗಾಗಿ ಗೊಂದಲ ಬಗೆಹರಿದರೆ ಸರಿ. ಇಲ್ಲದಿದ್ದರೆ ಮತ್ತೆ ಒಂದರ ಹಿಂದೊಂದು ಬೆಳವಣಿಗೆಗಳ ಅಡೆತಡೆ ರಾಜ್ಯ ಕಾಂಗ್ರೆಸ್ ಗೊಂದಲವನ್ನು ಹೆಚ್ಚು ಮಾಡಲಿದೆ‌‌.

ದಾಳ ಉರುಳಿಸಿದ್ರಾ ಸಿದ್ದರಾಮಯ್ಯ?

ಡಿಸಿಎಂ ಡಿಕೆ ಇಂದು ದೆಹಲಿಗೆ ತೆರಳುತ್ತಿದ್ದಾರೆ. ಮತ್ತೆ ಜನವರಿ 22ರ ಬಳಿಕ ದೆಹಲಿಗೆ ಪ್ಲ್ಯಾನ್ ಮಾಡಿದ್ದಾರೆ. ಆದರೆ ಜನವರಿ 22 ರಿಂದ 31ವರೆಗೆ ವಿಧಾನಮಂಡಲ ವಿಶೇಷ ಅಧಿವೇಶನ ಆಯೋಜನೆ ಮಾಡಲಾಗಿದೆ. ಹೀಗಾಗಿ ದೆಹಲಿಯ ನಾಯಕರು ಸಿಎಂಗೆ ದೆಹಲಿ ಬುಲಾವ್ ಕೊಡೋದು ಬಹುತೇಕ ಅನುಮಾನ. ಈ ಮಧ್ಯೆ ಜನವರಿ 28ರಿಂದ ಸಂಸತ್ ಬಜೆಟ್ ಅಧಿವೇಶ ಆರಂಭವಾಗಲಿದೆ. ಹೈಕಮಾಂಡ್ ನಾಯಕರು ಸಂಸತ್​​ನಲ್ಲಿಯೇ 1 ತಿಂಗಳು ವ್ಯಸ್ತರಾಗಿರಲಿದ್ದಾರೆ. ಈ ಹಿನ್ನೆಲೆ ಸಂಕ್ರಾಂತಿಯ ಕ್ರಾಂತಿ ಮತ್ತೆ ಫೆಬ್ರವರಿಗೆ ಮುಂದೂಡಿಕೆ ಆಗುತ್ತದಯೇ ಎಂಬ ಚರ್ಚೆ ಕಾಂಗ್ರೆಸ್​ ಆಂತರಿಕ ವಲದಲ್ಲಿ ಶುರುವಾಗಿದೆ.

ಇದನ್ನೂ ಓದಿ: ಜನವರಿ 22ರಿಂದ 31ರ ವರೆಗೆ ವಿಶೇಷ ಅಧಿವೇಶನಕ್ಕೆ ಕ್ಯಾಬಿನೆಟ್​​ ನಿರ್ಧಾರ: ಕಾರಣ ಏನು?

ಒಟ್ಟಾರೆ, ಉತ್ತರಾಯಣದ ಪುಣ್ಯ ಕಾಲದಲ್ಲಿ ಸೂರ್ಯನ ಪಥ ಬದಲಾಗಿದೆ. ರಾಜ್ಯ ಕಾಂಗ್ರೆಸ್​​​ನ ಗೊಂದಲದ ದಿಕ್ಕು ಯಾವಾಗ ಬದಲಾಗುತ್ತದೆ ಎಂಬುದಷ್ಟೇ ಬಾಕಿ ಉಳಿದಿರುವ ಕುತೂಹಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ