ಮಂಗಳೂರಿನಲ್ಲಿ ಮಾಸ್ಕ್ ಧರಿಸದ ಪ್ರಕರಣ: ಸೂಪರ್ ಮಾರ್ಕೆಟ್ ಮಾಲೀಕನ ವಿರುದ್ಧ ದೂರು ದಾಖಲಿಸಿದ ವೈದ್ಯ ಕಕ್ಕಿಲಾಯ

| Updated By: ಆಯೇಷಾ ಬಾನು

Updated on: May 25, 2021 | 8:23 AM

ಈ ವಿಡಿಯೊದೊಂದಿಗೆ ಪೈ ಎಂಬ ಹೆಸರಿನ ವ್ಯಕ್ತಿ ಮತ್ತು ಸದರಿ ವೈದ್ಯರ ನೆರೆಹೊರೆಯವರೆಂದು ಹೇಳಲಾಗುತ್ತಿರುವ ಇನ್ನೊಬ್ಬ ವ್ಯಕ್ತಿ ಸೂಪರ್ ಮಾರ್ಕೆಟ್​ ಮಾಲೀಕನೊಂದಿಗೆ ಮಾತಾಡಿರುವ ಆಡಿಯೋ ಕ್ಲಿಪ್ಪಿಂಗ್ ಸಹ ಕಳೆದ ಮೂರು ದಿನಗಳಲ್ಲಿ ವೈರಲ್ ಆಗಿದೆ. ಇದು ತನ್ನ ವಿರುದ್ಧ ನಡೆದಿರುವ ಯೋಜಿತ ಕೃತ್ಯವಾಗಿದೆ ಎಂದು ಕಕ್ಕಿಲಾಯ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾಸ್ಕ್ ಧರಿಸದ ಪ್ರಕರಣ: ಸೂಪರ್ ಮಾರ್ಕೆಟ್ ಮಾಲೀಕನ ವಿರುದ್ಧ ದೂರು ದಾಖಲಿಸಿದ ವೈದ್ಯ ಕಕ್ಕಿಲಾಯ
ಮಾರ್ಕೆಟ್​ ಸಿಬ್ಬಂದಿಯೊಂದಿಗೆ ವಾದಿಸುತ್ತಿರುವ ವೈದ್ಯರು
Follow us on

ಮಂಗಳೂರು: ವೃತ್ತಿಯಲ್ಲಿ ವೈದ್ಯನಾಗಿದ್ದರೂ ಸೂಪರ್ ಮಾರ್ಕೆಟ್​ ಒಂದಕ್ಕೆ ಮಾಸ್ಕ್ ಧರಿಸದೆ ಹೋಗಿದ್ದ ವ್ಯಕ್ತಿ ತಾನು ಮಾರ್ಕೆಟ್​ನಲ್ಲಿದ್ದಾಗ ಅಲ್ಲಿನ ಸಿಬ್ಬಂದಿ ಜೊತೆ ವಾದ ಮಾಡುತ್ತಿರುವ ಸಿಸಿಟಿವಿ ಫುಟೇಜನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಕ್ಕೆ ಮಾರ್ಕೆಟ್ ಮಾಲೀಕನ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಕೊವಿಡ್ ಸುರಕ್ಷತೆ ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಗಳು ಮೂರ್ಖತನವಲ್ಲದೆ ಬೇರೇನೂ ಅಲ್ಲ ಅಂತ ವೈದ್ಯರು ಮಾತಾಡಿರುವುದು ವೈರಲ್ ಆಗಿದೆ. ಬಿ ಶ್ರೀನಿವಾಸ್ ಕಕ್ಕಿಲಾಯ ಹೆಸರಿನ ವೈದ್ಯರು ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ತಮ್ಮ ದೂರಿನಲ್ಲಿ ಅವರು ಸದರಿ ಘಟನೆಯನ್ನು ಸೂಪರ್ ಮಾರ್ಕೆಟ್​ನವರು ಕಾನೂನುಬಾಹಿರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಕೃತ್ಯದಿಂದಾಗಿ ಹಲವಾರು ಜನ ತನ್ನ ಗೌರವಕ್ಕೆ ಚ್ಯುತಿ ಬರುವಂಥ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಭಾರತದಲ್ಲಿ ಮಾತ್ರವಲ್ಲದೆ ಬೇರೆ ದೇಶಗಳ ಪತ್ರಿಕೆಗಳಲ್ಲೂ ಲೇಖನಗಳು ಪ್ರಕಟವಾಗಿವೆ ಎಂದ ಕಕ್ಕಿಲಾಯ ತಮ್ಮ ದೂರಿನಲ್ಲಿ ಹೇಳಿದ್ದಾರೆ.

‘ಸಿಸಿಟಿವಿಯಲ್ಲಿನ ಆಯ್ದಭಾಗ, ಆಡಿಯೋ ರೆಕಾರ್ಡಿಂಗ್ ಮತ್ತು ಕಾನೂನುಬಾಹಿರ ಸೋರಿಕೆಯು ನನ್ನ ಘನತೆ ಗೌರವಳಿಗೆ ಮಸಿ ಬಳಿಯಲು ಮತ್ತು ನನಗೆ ತೀವ್ರ ಸ್ವರೂಪದ ಹಾನಿಯನ್ನುಂಟು ಮಾಡಲು ಉದ್ದೇಶಪೂರ್ವಕವಾಗಿ ಮಾಡಿದಂತಿದೆ,’ ಎಂದು ವೈದ್ಯರು ದೂರಿನಲ್ಲಿ ದಾಖಲಿಸಿದ್ದಾರೆ.

ಈ ವಿಡಿಯೊದೊಂದಿಗೆ ಪೈ ಎಂಬ ಹೆಸರಿನ ವ್ಯಕ್ತಿ ಮತ್ತು ಸದರಿ ವೈದ್ಯರ ನೆರೆಹೊರೆಯವರೆಂದು ಹೇಳಲಾಗುತ್ತಿರುವ ಇನ್ನೊಬ್ಬ ವ್ಯಕ್ತಿ ಸೂಪರ್ ಮಾರ್ಕೆಟ್​ ಮಾಲೀಕನೊಂದಿಗೆ ಮಾತಾಡಿರುವ ಆಡಿಯೋ ಕ್ಲಿಪ್ಪಿಂಗ್ ಸಹ ಕಳೆದ ಮೂರು ದಿನಗಳಲ್ಲಿ ವೈರಲ್ ಆಗಿದೆ. ಇದು ತನ್ನ ವಿರುದ್ಧ ನಡೆದಿರುವ ಯೋಜಿತ ಕೃತ್ಯವಾಗಿದೆ ಎಂದು ಕಕ್ಕಿಲಾಯ ಹೇಳಿದ್ದಾರೆ.

ಪೈ ಅನ್ನುವವರು ತಾವು ಮಾತಾಡುತ್ತಿದ್ದ ವ್ಯಕ್ತಿಗೆ ತನ್ನ ವಿರುದ್ಧ ಸುಳ್ಳು ದೂರು ಸಲ್ಲಿಸುವಂತೆ ಹೇಳುತ್ತಿರುವುದು ಆಡಿಯೋ ಕ್ಲಿಪ್ಪಿಂಗ್​ನಲ್ಲಿ ರೆಕಾರ್ಡ್​ ಅಗಿದೆಯೆಂದು ಕಕ್ಕಿಲಾಯ ತಮ್ಮ ದೂರಿನಲ್ಲಿ ಹೇಳಿದ್ದಾರೆ

‘ಈ ಇಬ್ಬರು ವ್ಯಕ್ತಿಗಳು ನನ್ನನ್ನು ಮತ್ತು ನನ್ನ ಕುಟುಂಬವನ್ನು ಹಿಂಬಾಲಿಸುತ್ತಿದ್ದು ಭಯ ಹುಟ್ಟಿಸುವ, ನನ್ನ ಜೀವಕ್ಕೆ ಬೆದರಿಕೆಯೊಡ್ಡುವ ಮತ್ತು ನನ್ನ ಹೆಸರಿಗೆ ಕಳಂಕ ತರುವ ಕೃತ್ಯ ನಡೆಸಲು ಕುತಂತ್ರ ನಡೆಸಿದ್ದಾರೆ,’ ಎಂದು ಕಕ್ಕಿಲಾಯ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.

ಐದು ದಿನಗಳ ಹಿಂದೆ ಮಂಗಳೂರಿನಲ್ಲಿ ವೈದ್ಯ ಮತ್ತು ಸಾರ್ವಜನಿಕ ಆರೋಗ್ಯ ವಿಷಯದಲ್ಲಿ ತಜ್ಞರೂ ಆಗಿರುವ ಡಾ ಕಕ್ಕಿಲಾಯ ಅವರು ನಗರದ ಸೂಪರ್ ಮಾರ್ಕೆಟ್​ ಒಂದಕ್ಕೆ ಮಾಸ್ಕ್​ ಧರಿಸದೆ ಹೊಗಿದ್ದೂ ಅಲ್ಲದೆ ಮಾಸ್ಕ್ ಧರಿಸಿ ಎಂದು ಹೇಳಿದ ಮಾರ್ಕೆಟ್​ನ ಸಿಬ್ಬಂದಿಯೊಂದಿಗೆ ವಾದಕ್ಕಿಳಿದದ್ದು ಅಲ್ಲಿನ ಸಿಸಿಟಿವಿ ಫುಟೇಜ್​ನಲ್ಲಿ ರೆಕಾರ್ಡ್ ಆಗಿ ವೈರಲ್ ಅದ ನಂತರ ಡಾಕ್ಟರ್ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಅಡಿಯಲ್ಲಿ ಕೇಸ್​ ದಾಖಲಿಸಿಕೊಳ್ಳಲಾಗಿತ್ತು. ಅವರ ವರ್ತನೆಯು ಸಾಮಾಜಿ ಜಾಲತಾಣಗಳಲ್ಲಿ ವ್ಯಾಪಕ ಖಂಡನೆಗೊಳಗಾಗಿತ್ತು.

ಸರ್ಕಾರದ ಹಲವಾರು ನೀತಿಗಳನ್ನು ಅದರಲ್ಲೂ ವಿಶೇಷವಾಗಿ ಕೊವಿಡ್-19 ವಿರುದ್ಧ ಜಾರಿಗೊಳಿಸಿರುವ ನಿಯಮಾವಳಿಗಳನ್ನು ನಖಶಿಖಾಂತ ಟೀಕಿಸುವ ಕಕ್ಕಿಲಾಯ ಅವರು ಕಳೆದ ಮಂಗಳವಾರದಂದು ಮಂಗಳೂರು ನಗರದ ಕದ್ರಿಯಲ್ಲಿರುವ ಜಿಮ್ಮಿ ಸೂಪರ್ ಮಾರ್ಕೆಟ್​ಗೆ ಹೋಗಿದ್ದರು. ಅವರು ಕ್ಯಾಶ್ ಕೌಂಟರ್ ಬಳಿ ಹೋದಾಗ ಮಾರ್ಕೆಟ್​ನ ಪಾಲುದಾರರಲ್ಲಿ ಒಬ್ಬರಾಗಿರುವ ರಿಯಾನ್ ರೊಸಾರಿಯೋ, ವೈದ್ಯರಿಗೆ ಮಾಸ್ಕ್​ ಧರಿಸುವಂತೆ ಹೇಳಿದರು. ಆದರೆ ಕಕ್ಕಿಲಾಯ ಮಾಸ್ಕ್ ಧರಿಸುವುದನ್ನು ನಿರಾಕರಿಸಿದರಲ್ಲದೆ, ರಿಯಾನ್ ಜೊತೆ ಬೇರೆ ಗ್ರಾಹಕರೆದುರು ವಾದಕ್ಕಿಳಿದರು

ವಿಡಿಯೋ ಫುಟೇಜ್​ನಲ್ಲಿ ರಿಯಾನ್ ಅವರು ವೈದ್ಯರಿಗೆ ಸರ್ಕಾರದ ನಿಯಾಮವಳಿಗಳನ್ನು ವಿವರಿಸುತ್ತಿರುವುದು ಮತ್ತು ಅವರು ಮಾಸ್ಕ್ ತಂದಿಲ್ಲವಾದರೆ ತಾನೇ ಒಂದನ್ನು ಕೊಡುವುದಾಗಿ ಹೇಳುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತದೆ. ಆದರೂ, ಕಕ್ಕಿಲಾಯ ಅವರು ಮಾಸ್ಕ್​ ಧರಿಸಲು ನಿರಾಕರಿಸಿದ್ದಾರೆ. ಇಡೀ ಘಟನೆಯು ಮಾರ್ಕೆಟ್​ನಲ್ಲಿರುವ ಸಿಸಿಟಿವಿಯಲ್ಲಿ ರೆಕಾರ್ಡ್​ ಆಗಿ ಬುಧವಾರದಂದು ಸೋಶಿಯಲ್ ಮಿಡಿಯಾದಲ್ಲಿ ಸರ್ಕ್ಯುಲೇಟ್​ ಆದ ನಂತರ ವೈದ್ಯರ ವರ್ತನೆ ತೀವ್ರವಾಗಿ ಖಂಡಿಸಲ್ಪಟ್ಟಿದೆ. ಕೆಲವರಂತೂ ಕಕ್ಕಿಲಾಯ ಅವರನ್ನು ಬಂಧಿಸಬೇಕೆಂದು ಹೇಳಿದ್ದಾರೆ.

ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದ ಹಿನ್ನೆಲೆ; ಮಂಗಳೂರಿನ ವೈದ್ಯ ಡಾ. ಶ್ರೀನಿವಾಸ ಕಕ್ಕಿಲಾಯ ವಿರುದ್ಧ ಪ್ರಕರಣ ದಾಖಲು