ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದ ಹಿನ್ನೆಲೆ; ಮಂಗಳೂರಿನ ವೈದ್ಯ ಡಾ. ಶ್ರೀನಿವಾಸ ಕಕ್ಕಿಲಾಯ ವಿರುದ್ಧ ಪ್ರಕರಣ ದಾಖಲು
ಡಾ. ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರಿನ ಮಳಿಗೆಯೊಂದರಲ್ಲಿ ಮಾಸ್ಕ್ ಧರಿಸದೇ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಗಳೂರು: ಮಾಸ್ಕ್ ಧರಿಸದ ಕಾರಣ ಮಂಗಳೂರಿನ ವೈದ್ಯ ಡಾ. ಶ್ರೀನಿವಾಸ ಕಕ್ಕಿಲಾಯ ವಿರುದ್ಧ ಪ್ರಕರಣ ದಾಖಲಾಗಿದೆ. ಮಾಸ್ಕ್ ಹಾಕದೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರಣ ವೈದ್ಯ ಡಾ. ಶ್ರೀನಿವಾಸ ಕಕ್ಕಿಲಾಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟುವ ಕಾಯ್ದೆ 2020 ರ ಅಡಿಯಲ್ಲಿ ದೂರು ದಾಖಲಾಗಿದೆ.
ಡಾ. ಶ್ರೀನಿವಾಸ ಕಕ್ಕಿಲಾಯ ಮಂಗಳೂರಿನ ಮಳಿಗೆಯೊಂದರಲ್ಲಿ ಮಾಸ್ಕ್ ಧರಿಸದೇ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಳಿಗೆ ಸಿಬ್ಬಂದಿ ಮಾಸ್ಕ್ ಧರಿಸುವಂತೆ ಶ್ರೀನಿವಾಸ ಕಕ್ಕಿಲಾಯರನ್ನು ಒತ್ತಾಯಿಸಿರುವುದು ಕಂಡುಬಂದಿದೆ. ವೈದ್ಯ ಶ್ರೀನಿವಾಸ ಕಕ್ಕಿಲಾಯ ಅದಕ್ಕೆ ಪ್ರತಿಯಾಗಿ ವಾದ ನಡೆಸಿದ್ದಾರೆ. ಈ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
I didn’t know that even doctors will be #Covidiots too. Dr. Kakkilaya in Mangaluru enters Jimmy’s supermarket without mask and when question by the staff, he argues that #COVID19 is just like any other fever, hence he’ll not wear mask. Will @compolmlr initiate action against him? pic.twitter.com/5kuMGaqzVu
— Chiru Bhat | ಚಿರು ಭಟ್ (@mechirubhat) May 19, 2021
ವಿಚಾರಣೆಗೆ ಹಾಜರಾದ ಶ್ರೀನಿವಾಸ್ ಕಕ್ಕಿಲಾಯ ಪೊಲೀಸರಿಂದ ನೋಟಿಸ್ ಜಾರಿ ಬೆನ್ನಲ್ಲೇ ಡಾ. ಶ್ರೀನಿವಾಸ್ ಕಕ್ಕಿಲಾಯ ವಿಚಾರಣೆಗೆ ಹಾಜರಾಗಿದ್ದಾರೆ. ಡಾ.ಶ್ರೀನಿವಾಸ ಕಕ್ಕಿಲಾಯಗೆ ಪೊಲೀಸರು ನೋಟಿಸ್ ನೀಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಕದ್ರಿ ಠಾಣೆಗೆ ಕಕ್ಕಿಲಾಯ ಹಾಜರಾಗಿದ್ದಾರೆ. ಸೂಪರ್ ಮಾರ್ಕೆಟ್ನಲ್ಲಿ ಮಾಸ್ಕ್ ಧರಿಸದೇ ವೈದ್ಯ ಆಕ್ರೋಶ ವ್ಯಕ್ತಪಡಿಸಿದ್ದರು. ಸೂಪರ್ ಮಾರ್ಕೆಟ್ ಮಾಲೀಕರ ದೂರಿನಡಿ ಕೇಸ್ ದಾಖಲಾಗಿತ್ತು. ಕರ್ನಾಟಕ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಮಂಗಳೂರಿನ ಸೂಪರ್ ಮಾರ್ಕೆಟ್ನಲ್ಲಿ ಘಟನೆ ನಡೆದಿತ್ತು.
ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯ ಕೊರೊನಾ ಎರಡನೇ ಅಲೆ ಬಿಗಡಾಯಿಸುತ್ತಿದ್ದಂತೆ ಭಾರತದಲ್ಲಿ ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರದ ಬಗ್ಗೆ ಎಚ್ಚರಿಕೆಯ ಮಾತುಗಳು ಕೇಳಿಬರಲಾರಂಭಿಸಿದವು. ಅದರರ್ಥ ಕೊರೊನಾ ದೇಶದಲ್ಲಿ ಸಂಪೂರ್ಣ ಕಡಿಮೆ ಆಗುವ ಮುನ್ನವೇ ಜನ ಮುನ್ನೆಚ್ಚರಿಕಾ ಕ್ರಮಗಳನ್ನು ಮರೆತುಬಿಟ್ಟಿದ್ದು, ಎರಡನೇ ಅಲೆ ಶುರುವಾದಾಗ ಮತ್ತೆ ನೆನಪಿಸಬೇಕಾದ ಅನಿವಾರ್ಯತೆ ಎದುರಾಯಿತು. ಇದರ ನಡುವೆಯೇ ಲಸಿಕೆ ತೆಗೆದುಕೊಂಡರೆ ಕೊರೊನಾದಿಂದ ತಕ್ಕಮಟ್ಟಿಗೆ ಬಚಾವಾಗಬಹುದು ಎಂದು ತಜ್ಞರು ಭರವಸೆ ನೀಡಿರುವರಾದರೂ ಅದು ಕೊರೊನಾ ಬಾರದಂತೆ ರಕ್ಷಾ ಕವಚ ಅಲ್ಲ ಎಂಬುದನ್ನೂ ಒತ್ತಿ ಹೇಳಿದ್ದರು.
ಈ ಬಗ್ಗೆ ಎಚ್ಚರಿಕೆಯ ಮಾತುಗಳನ್ನಾಡಿರುವ ಏಮ್ಸ್ ನಿರ್ದೇಶಕ ಡಾ.ರಣ್ದೀಪ್ ಗುಲೇರಿಯಾ, ಕೊರೊನಾ ವೈರಾಣು ನಿಯಮಿತವಾಗಿ ರೂಪಾಂತರಗೊಳ್ಳುತ್ತಿದೆ. ಈಗ ನೀಡಲಾಗುತ್ತಿರುವ ಲಸಿಕೆ ಮುಂಬರುವ ರೂಪಾಂತರಿಯನ್ನು ಮಣಿಸಲು ಎಷ್ಟು ಸಶಕ್ತ ಎಂಬುದರ ಬಗ್ಗೆ ಇನ್ನೂ ಖಚಿತತೆ ಇಲ್ಲ. ಹೀಗಾಗಿ ಲಸಿಕೆ ತೆಗೆದುಕೊಂಡರೂ ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದ್ದರು.
ಎರಡು ಡೋಸ್ ಕೊರೊನಾ ಲಸಿಕೆ ಪಡೆದ ಕೂಡಲೇ ವೈರಾಣುವಿನಿಂದ ಸಂಪೂರ್ಣ ಸುರಕ್ಷತೆ ಹೊಂದಿದ್ದೇವೆ ಎಂದು ಭಾವಿಸುವುದು ಬೇಡ. ಕೊರೊನಾ ರೂಪಾಂತರವಾಗುತ್ತಿರುವುದನ್ನು ನೋಡಿದರೆ ಮುಂದಿನ ಮಾದರಿಗಳು ಯಾವ ರೀತಿ ವರ್ತಿಸಲಿವೆ ಎಂದು ಹೇಳಲಾಗದು. ಹೀಗಾಗಿ ಯಾವುದೇ ಕಾರಣಕ್ಕೂ ಮೈಮರೆಯುವಂತಿಲ್ಲ. ಇನ್ನೂ ದೊಡ್ಡ ಗಂಡಾಂತರ ಎದುರಾಗಬಾರದೆಂದರೆ ಎಚ್ಚರಿಕೆಯಿಂದ ಇರಲೇಬೇಕು ಎಂದು ತಜ್ಞರು ಹೇಳಿದ್ದರು.
ಇದನ್ನೂ ಓದಿ: ಎರಡು ಡೋಸ್ ಲಸಿಕೆ ಪಡೆದರೂ ಮಾಸ್ಕ್ ಕಡ್ಡಾಯ, ಭಾರತದಲ್ಲಿ ಸದ್ಯಕ್ಕಿಲ್ಲ ವಿನಾಯಿತಿ: ಡಾ. ರಣ್ದೀಪ್ ಗುಲೇರಿಯಾ
2 ರಿಂದ 18 ವರ್ಷದ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಿಕೆ; 10 ದಿನದಲ್ಲಿ ಪ್ರಯೋಗ ಆರಂಭ: ನೀತಿ ಆಯೋಗ ಸದಸ್ಯ
Published On - 3:43 pm, Wed, 19 May 21