ಚಿಕ್ಕಮಗಳೂರು: ಹಣ್ಣಿನ ಅರಣ್ಯಕ್ಕೆ ಡಾ.ಡಿ ವೀರೇಂದ್ರ ಹೆಗ್ಗಡೆ ಅವರಿಂದ ಚಾಲನೆ

| Updated By: preethi shettigar

Updated on: Jul 04, 2021 | 2:52 PM

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಮತ್ತಿಗಟ್ಟೆಯಲ್ಲಿ ಅಕೇಶಿಯಾ, ನೀಲಗಿರಿ ಮರಗಳನ್ನು ಕಟಾವು ಮಾಡಿ 2800 ಹಣ್ಣಿನ ಗಿಡಗಳನ್ನು ನೆಡಲಾಗಿದೆ. ಚಿಕ್ಕಮಗಳೂರು ಅರಣ್ಯ ಇಲಾಖೆಯ ಈ ಮಹತ್ವಕಾಂಕ್ಷೆ ಯೋಜನೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ನೀರೆಯುವ ಮೂಲಕ ಫ್ರೂಟ್ ಫಾರೆಸ್ಟ್​ಗೆ ಹಸಿರು ನಿಶಾನೆ ತೋರಿಸಿದ್ದಾರೆ.

ಚಿಕ್ಕಮಗಳೂರು: ಹಣ್ಣಿನ ಅರಣ್ಯಕ್ಕೆ ಡಾ.ಡಿ ವೀರೇಂದ್ರ ಹೆಗ್ಗಡೆ ಅವರಿಂದ ಚಾಲನೆ
ಹಣ್ಣಿನ ಅರಣ್ಯಕ್ಕೆ ಡಾ.ಡಿ ವೀರೇಂದ್ರ ಹೆಗ್ಗಡೆ ಅವರಿಂದ ಚಾಲನೆ
Follow us on

ಚಿಕ್ಕಮಗಳೂರು: ಕಾಡು ಬೆಳೆಸಿ, ನಾಡು ಉಳಿಸಿ ಎನ್ನುವ ಮಾತು ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವೇನೋ ಎನ್ನುವಷ್ಟರ ಮಟ್ಟಿಗೆ ಇತ್ತೀಚಿನ ದಿನಗಳಲ್ಲಿ ಕೆಲವೊಂದಿಷ್ಟು ಬದಲಾವಣೆಗಳಾಗಿದ್ದು, ಕಳವಳ ಹುಟ್ಟಿಸುತ್ತಿದೆ. ಈ ಮಧ್ಯೆ ಮಲೆನಾಡಿನ ಕಾಡಿನಲ್ಲಿ ಕೇವಲ ಅಕೇಶಿಯಾ, ನೀಲಗಿರಿ ಮರಗಳು ಕಾಣಿಸುತ್ತಿದ್ದು, ಇವುಗಳು ಪ್ರಾಣಿ-ಪಕ್ಷಿಗಳಿಗೆ ಆಹಾರವನ್ನು ನೀಡುವುದಕ್ಕಾಗಲಿ, ಅವುಗಳ ನೆರವಿಗಾಗಲಿ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಮಲೆನಾಡಿನ ಅರಣ್ಯ ಭಾಗದಲ್ಲಿ ಹಣ್ಣಿನ ಗಿಡಗಳನ್ನು ನೆಡಬೇಕು ಎನ್ನುವ ಕೂಗು ಕೇಳಿಬಂದಿತು. ಮಹತ್ವಕಾಂಕ್ಷೆಯ ಆ ಕಾರ್ಯಕ್ಕೆ ಸದ್ಯ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದ್ದು, ಅರಣ್ಯದಲ್ಲಿ ಹಣ್ಣಿನ ಗಿಡ ನೆಡುವ ಕಾರ್ಯ ಆರಂಭವಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಮತ್ತಿಗಟ್ಟೆಯಲ್ಲಿ ಅಕೇಶಿಯಾ, ನೀಲಗಿರಿ ಮರಗಳನ್ನು ಕಟಾವು ಮಾಡಿ 2800 ಹಣ್ಣಿನ ಗಿಡಗಳನ್ನು ನೆಡಲಾಗಿದೆ. ಚಿಕ್ಕಮಗಳೂರು ಅರಣ್ಯ ಇಲಾಖೆಯ ಈ ಮಹತ್ವಕಾಂಕ್ಷೆ ಯೋಜನೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ನೀರೆಯುವ ಮೂಲಕ ಫ್ರೂಟ್ ಫಾರೆಸ್ಟ್​ಗೆ ಹಸಿರು ನಿಶಾನೆ ತೋರಿಸಿದ್ದಾರೆ. ಹಲಸು, ನೆರಳೆ, ಹೆಬ್ಬಾಲಸು, ಮಾವು ಸೇರಿದಂತೆ ಕೆಲ ಕಾಡು ಜಾತಿಯ ಹಣ್ಣಿನ ಗಿಡಗಳನ್ನು ಇಲ್ಲಿ ನೆಡಲಾಗಿದ್ದು, ಅರಣ್ಯ ಇಲಾಖೆ ಜತೆಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದ 150ಕ್ಕೂ ಹೆಚ್ಚು ಸದಸ್ಯರು ಸಾಥ್ ನೀಡಿದ್ದಾರೆ.

ಅನೇಕ ಕಾರಣಗಳಿಂದ ಕಾಡಿನ ನಾಶ ಆಗುತ್ತಿದೆ. ನಾಡಿಗಾಗಿ ಕಾಡನ್ನು ನಾಶಮಾಡುತ್ತಿದ್ದೇವೆ. ಸಾಧು ಪ್ರಾಣಿಗಳಿಗೆ ಕಾಡಲ್ಲಿ ಆಹಾರ ಸಿಗದೇ ಸಾಯುತ್ತಿವೆ. ನಾಡು-ಕಾಡು ಇಬ್ಬರು ಬದುಕಬೇಕು ಎನ್ನುವ ಕಾರಣಕ್ಕಾಗಿ ಹಣ್ಣಿನ ಗಿಡಗಳನ್ನು ಅರಣ್ಯದಲ್ಲಿ ನೆಡುವ ಮೂಲಕ ಪರಿಸರ ಸಂರಕ್ಷಣೆ ಕಾರ್ಯಕ್ರಮ ಮಾಡುತ್ತಿರುವುದು ಸಂತಸ ತಂದಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ.

ನೀಲಗಿರಿ, ಅಕೇಶಿಯಾದಂತಹ ಮರಗಳಿಂದ ಪ್ರಾಣಿ-ಪಕ್ಷಿಗಳಿಗೆ ಆಹಾರ ಸಿಗುವುದು ಇರಲಿ, ಒಂದು ಗುಬ್ಬಚ್ಚಿ ಗೂಡು ಕಟ್ಟುವುದಕ್ಕೂ ಕೂಡ ಸಾಧ್ಯವಾಗಲ್ಲ. ಹೀಗಾಗಿ ಆ ಮರಗಳ ಬದಲಿಗೆ ಹಣ್ಣಿನ ಮರಗಳನ್ನು ನೆಡಬೇಕು ಎನ್ನುವ ಹೋರಾಟದ ಕೂಗು ಕೆಲ ವರ್ಷಗಳಿಂದ ಮಲೆನಾಡಿನಲ್ಲಿ ಕೇಳಿಬರುತ್ತಿತ್ತು. ಹೀಗಾಗಿ ಕಟಾವು ಮಾಡಿದ 6 ಹೆಕ್ಟೇರ್ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ನೆಡಲು ಅರಣ್ಯ ಇಲಾಖೆ ಮುಂದಾಗಿದೆ ಎಂದು ಡಿಎಫ್ಒ ಜಗನ್ನಾಥ್ ಹೇಳಿದ್ದಾರೆ.

ಮಲೆನಾಡು ಭಾಗದಲ್ಲಿ ಹೆಚ್ಚಿನ ಅರಣ್ಯ ಪ್ರದೇಶವಿದ್ದರೂ ಅಕೇಶಿಯಾ, ನೀಲಗಿರಿಯಂತಹ ಗಿಡಗಳೇ ತುಂಬಿಕೊಂಡಿವೆ. ಹೀಗಾಗಿ ಕಾಡಾನೆ ಸೇರಿದಂತೆ ಕೆಲ ಪ್ರಾಣಿಗಳಿಗೆ ಆಹಾರದ ಕೊರತೆ ಉಂಟಾದಾಗ ನಾಡಿನ ಕಡೆ ಮುಖ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಈ ವೇಳೆ ಅಪಾರ ಪ್ರಮಾಣದ ಬೆಳೆಹಾನಿ ಜತೆಗೆ ಜೀವಹಾನಿಯಾದಂತಹ ಅನೇಕ ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಜೊತೆ ಹಣ್ಣಿನ ಗಿಡಗಳನ್ನು ನೆಡಲು ಶೌರ್ಯ ತಂಡವೂ ಸಾಥ್ ನೀಡಿದ್ದು, ಈ ತಂಡದ ಸದಸ್ಯರ ಕಾರ್ಯಕ್ಕೆ ಜನಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಸದಸ್ಯರು ಅರಣ್ಯ ಇಲಾಖೆ ಜೊತೆಗೆ ಕೈ ಜೋಡಿಸಿದ್ದು, ಹಣ್ಣಿನ ಗಿಡಗಳನ್ನು ನೆಡುವಲ್ಲಿ ಸಹಕಾರ ನೀಡುತ್ತಿದ್ದಾರೆ. ಜತೆಗೆ ಮುಂದಿನ ದಿನಗಳಲ್ಲೂ ಅಕೇಶಿಯಾ, ನೀಲಗಿರಿ ಮರಗಳು ಕಟಾವು ಆದ ಸ್ಥಳದಲ್ಲಿ ಹಣ್ಣಿನ ಗಿಡಗಳನ್ನೇ ನೆಟ್ಟು ಫ್ರೂಟ್ ಫಾರೆಸ್ಟ್ ಮಾಡಲು ಅರಣ್ಯ ಇಲಾಖೆ ತೀರ್ಮಾನಿಸಿದೆ. ಇನ್ನೂ ಅಕೇಶಿಯಾ, ನೀಲಗಿರಿಯಂತಹ ಮರಗಳಿಂದ ಮಲೆನಾಡಿನಲ್ಲಿ ಭೂ ಕುಸಿತ, ಗುಡ್ಡ ಕುಸಿತ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ ಎನ್ನುವ ಕೂಗು ಕೇಳಿಬಂದಿತ್ತು. ಅದೇನೆ ಇರಲಿ, ಸದ್ಯ ಅರಣ್ಯ ಇಲಾಖೆಯ ಮಹತ್ವಕಾಂಕ್ಷೆಯ ಯೋಜನೆಗೆ ಡಾ.ಡಿ ವೀರೇಂದ್ರ ಹೆಗ್ಗಡೆಯವರು ನೀರೆರಿದ್ದು, ಮುಂದಿನ ದಿನಗಳಲ್ಲಿ ಪ್ರಾಣಿ-ಪಕ್ಷಿಗಳಿಗೆ ಈ ಕಾಡು ಸ್ವರ್ಗವಾಗಿ ಪರಿಣಮಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ:
ದಾವಣಗೆರೆ: ಲಸಿಕೆ ಹಾಕಿಸಿಕೊಳ್ಳಿ ಗಿಡಗಳನ್ನು ಉಚಿತವಾಗಿ ಪಡೆಯಿರಿ ಕಾರ್ಯಕ್ರಮಕ್ಕೆ ಚಾಲನೆ

ಕೋಲಾರದಲ್ಲಿ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್

Published On - 9:45 am, Sun, 4 July 21