ಅಪಾರ ಶಿಷ್ಯ ಕೋಟಿಯನ್ನು ಕಣ್ಣೀರಲ್ಲಿ ಮುಳುಗಿಸಿ ಕೊರೊನಾಗೆ ಶರಣಾದ ಡಾ. ಎಂ.ಎಸ್. ಬಿರಾದಾರ ಕೈಗುಣ ಎಂಥದ್ದು ಗೊತ್ತಾ?
Dr MS Biradar: ಡಾ. ಎಂ.ಎಸ್. ಬಿರಾದಾರ - ಗ್ರಾಮೀಣ ಪ್ರದೇಶದಿಂದ ಬಂದವರು, ಶ್ರೇಷ್ಠ ವೈದ್ಯರಾಗಿದ್ದರೂ, ತಮ್ಮ ಮೂಲ ಕೃಷಿ ಕಾಯಕದ ಕುರಿತು ಅಪಾರ ಪ್ರೀತಿ ಹೊಂದಿದ್ದರು. ರೋಗಿಗಳನ್ನು ಗುಣಪಡಿಸುವ ಮಾಂತ್ರಿಕ ಶಕ್ತಿ ಹೊಂದಿದ್ದ ಇವರು ಆ ಗುಣದಿಂದಲೇ ರಾಜ್ಯದಾದ್ಯಂತ ಅನೇಕ ಅಭಿಮಾನಿಗಳನ್ನು ಹೊಂದಿದ್ದರು. ಇವರ ಕೈಕೆಳಗೆ ಕಲಿತ ಸಾವಿರಾರು ವೈದ್ಯರು ಇಂದು ಜಗತ್ತಿನಾದ್ಯಂತ ಶ್ರೇಷ್ಠ ವೈದ್ಯರಾಗಿ ಹೆಸರು ಮಾಡಿದ್ದಾರೆ.
ವಿಜಯಪುರ ನಗರದ ಹೆಸರಾಂತ ವೈದ್ಯ ಹಾಗೂ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಉಪಕುಲಪತಿ ಡಾ. ಮಲ್ಲನಗೌಡ ಎಸ್. ಬಿರಾದಾರ ಉಕ್ಕಲಿ (65) ಅವರು ಮೊನ್ನೆ ಬುಧವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊವಿಡ್ ಸೋಂಕಿನಿಂದಾಗಿ ಅಸುನೀಗಿದ್ದಾರೆ. ಕೊರೊನಾ ರೋಗಿಗಳ ಸೇವೆ ಮಾಡುತ್ತಲೇ ಕೊರೊನಾ ಸೋಂಕಿಗೆ ತುತ್ತಾದರೂ, ಗುಣಮುಖರಾಗಿದ್ದ ಡಾ. ಎಂ.ಎಸ್. ಬಿರಾದಾರ ಅವರು ವಿಜಯಪುರದ ಮನೆಯಲ್ಲಿ ಹೋಂ ಕ್ವಾರೆಂಟೈನ್ ಆಗಿದ್ದರು. ನಂತರ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಸೋಲ್ಲಾಪುರದಿಂದ ಏರ್ ಆ್ಯಂಬುಲೇನ್ಸ್ ಮೂಲಕ ಬೆಂಗಳೂರಿಗೆ ಕಳುಹಿಸಿಕೊಡಲಾಗಿತ್ತು. ಆಸ್ಪತ್ರೆಗೆ ದಾಖಲಾಗುವ ಮುನ್ನವೆ ಮಾರ್ಗ ಮಧ್ಯೆ ಮತ್ತೊಮ್ಮೆ ತೀವ್ರ ಹೃದಯಾಘಾತಕ್ಕೆ ಒಳಗಾದ ಅವರಿಗೆ ವೈದ್ಯರು ಹೆಚ್ಚಿನ ಚಿಕಿತ್ಸೆ ಮುಂದುವರೆಸಿದ್ದರೂ ಅದು ಫಲಕಾರಿಯಾಗದೇ ನಿಧನ ಹೊಂದಿದರು.
ಡಾ. ಮಲ್ಲನಗೌಡ ಶಿವನಗೌಡ ಬಿರಾದಾರ ಅವರು ಮೂಲತಃ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದವರು. ಗ್ರಾಮೀಣ ರೈತಾಪಿ ಕುಟುಂಬದಿಂದ ಬಂದ ಇವರು ಉಕ್ಕಲಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಬಿ.ಎಲ್.ಡಿ.ಇ ನ್ಯೂ ಇಂಗ್ಲಿಷ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪಡೆದು, ನಂತರ ವಿಜಯಪುರದ ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪಿಯು ವ್ಯಾಸಂಗ ಮಾಡಿ, ಸರ್ಕಾರಿ ಕೋಟಾದಲ್ಲಿ ಹುಬ್ಬಳಿಯ ಕರ್ನಾಟಕ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿನ್ನದ ಪದಕದೊಂದಿಗೆ ಎಂ.ಬಿ.ಬಿ.ಎಸ್ ಪದವಿಯನ್ನು ಪೂರ್ಣಗೊಳಿಸಿದರು. ನಂತರ ಬಳ್ಳಾರಿಯಲ್ಲಿ ಎಂ.ಡಿ ಪದವಿಯನ್ನು ಗಳಿಸಿ, ಅದೇ ಜಿಲ್ಲೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದರು. 1984ರಿಂದ 1991ರವರೆಗೆ ವಿಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಾ, ಆ ಪ್ರದೇಶದಲ್ಲಿ ಜನಾನುರಾಗಿಯಾದರು.
1991ರಿಂದ ಬಿ.ಎಂ. ಪಾಟೀಲ್ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಆರಂಭಿಸಿದ ಇವರು ಸುಧೀರ್ಘ 30 ವರ್ಷಗಳ ಕಾಲ ಕಾಲೇಜಿನ, ಬಿ.ಎಲ್.ಡಿ.ಇ ಸಂಸ್ಥೆಯ ಏಳಿಗೆಗಾಗಿ ಶ್ರಮಿಸಿದ್ದಾರೆ. ವೈದ್ಯಕೀಯ ಕಾಲೇಜಿನಲ್ಲಿ 7 ವರ್ಷಗಳ ಕಾಲ ಉಪಪ್ರಾಚಾರ್ಯರಾಗಿ, 4 ವರ್ಷಗಳ ಕಾಲ ಪ್ರಾಚಾರ್ಯರಾಗಿ ನಂತರ 2016ರಿಂದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಉಪ ಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮೃತರು ಪತ್ನಿ ಗೋದಾವರಿ, ಪುತ್ರಿ ಡಾ. ಅರುಣಾ ಹಾಗೂ ಅಶ್ವಿನಿ, ಅಳಿಯಂದಿರು, ಇಬ್ಬರು ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದು, ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮುಖ್ಯವಾಗಿ ತಮ್ಮ ಅಪಾರ ಶಿಷ್ಯ ಕೋಟಿಯನ್ನು ಅಗಲಿದ್ದಾರೆ.
ಬಿ.ಎಲ್.ಡಿ.ಇ ಅಧ್ಯಕ್ಷ ಡಾ. ಎಂ.ಬಿ. ಪಾಟೀಲ್ ಸಂತಾಪ:
ಶ್ರೇಷ್ಠ ವೈದ್ಯರಾಗಿ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುರುಗಳಾಗಿ ಮತ್ತು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಅಪರೂಪದ ಮಾನವೀಯ ಮೌಲ್ಯಗಳನ್ನು, ಅಂತಃಕರಣ ಹೊಂದಿದ್ದ ಡಾ. ಎಂ.ಎಸ್. ಬಿರಾದಾರ ಅಗಲಿಕೆ ವೈಯಕ್ತಿಕವಾಗಿ ನನಗೆ ಅತೀವ ನೋವು ತಂದಿದೆ ಎಂದು ಮಾಜಿ ಸಚಿವ, ಬಿ.ಎಲ್.ಡಿ.ಇ ಅಧ್ಯಕ್ಷ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದ ಹಿನ್ನೆಲೆಯಿಂದ ಬಂದಿರುವ ಇವರು ಶ್ರೇಷ್ಠ ವೈದ್ಯರಾಗಿದ್ದರೂ, ತಮ್ಮ ಮೂಲ ಕೃಷಿ ಕಾಯಕದ ಕುರಿತು ಅಪಾರ ಪ್ರೀತಿ ಹೊಂದಿದ್ದರು. ರೋಗಿಗಳನ್ನು ಗುಣಪಡಿಸುವ ಮಾಂತ್ರಿಕ ಶಕ್ತಿ ಹೊಂದಿದ್ದ ಇವರು ಆ ಗುಣದಿಂದಲೇ ಇಡೀ ರಾಜ್ಯದಾದ್ಯಂತ ಅನೇಕ ಅಭಿಮಾನಿಗಳನ್ನು ಹೊಂದಿದ್ದರು. ಇವರ ಕೈಕೆಳಗೆ ಕಲಿತ ಸಾವಿರಾರು ವೈದ್ಯರು ಇಂದು ಜಗತ್ತಿನಾದ್ಯಂತ ಶ್ರೇಷ್ಠ ವೈದ್ಯರಾಗಿ ಹೆಸರು ಮಾಡಿದ್ದಾರೆ. ಡಾ. ಎಂ.ಎಸ್. ಬಿರಾದಾರ ಅವರನ್ನು ಕಳೆದುಕೊಂಡು ವೈದ್ಯಕೀಯ ಕ್ಷೇತ್ರ ಹಾಗೂ ಬಿ.ಎಲ್.ಡಿ.ಇ ಸಂಸ್ಥೆ ಬಹುದೊಡ್ಡ ಸಂಕಷ್ಟಕ್ಕೆ ಇಡಾಗಿದೆ ಎಂದು ಎಂ.ಬಿ. ಪಾಟೀಲ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
Published On - 1:23 pm, Sat, 15 May 21