ಕೊವಿನ್​ಗೆ ಪರ್ಯಾಯವಾಗಿ ಕರ್ನಾಟಕ ಸರ್ಕಾರದಿಂದ ಹೊಸ ಪೋರ್ಟಲ್; ಇನ್ನುಮುಂದೆ ಬೇಕೆಂದಲ್ಲಿ ಲಸಿಕೆ ಕಾಯ್ದಿರಿಸುವಂತಿಲ್ಲ

CoWin Portal: ಕೊವಿನ್​ ಪೋರ್ಟಲ್​ನಲ್ಲಿ ಕೆಲ ಅಡೆತಡೆಗಳಿದ್ದವು. ಜನರಿಗೆ ಲಸಿಕೆ ಪಡೆಯಲು ಕೇಂದ್ರಗಳನ್ನು ಆರಿಸಲು ತೊಂದರೆಯಾಗುತ್ತಿತ್ತು. ಹೀಗಾಗಿ ಇದಕ್ಕೆ ಪರಿಹಾರವಾಗಿ ರಾಜ್ಯ ಸರ್ಕಾರ ಹೊಸ ಪೋರ್ಟಲ್ ತಯಾರಿಸುತ್ತಿದೆ.

ಕೊವಿನ್​ಗೆ ಪರ್ಯಾಯವಾಗಿ ಕರ್ನಾಟಕ ಸರ್ಕಾರದಿಂದ ಹೊಸ ಪೋರ್ಟಲ್; ಇನ್ನುಮುಂದೆ ಬೇಕೆಂದಲ್ಲಿ ಲಸಿಕೆ ಕಾಯ್ದಿರಿಸುವಂತಿಲ್ಲ
ಬಿ.ಎಸ್.ಯಡಿಯೂರಪ್ಪ
Skanda

|

May 15, 2021 | 1:36 PM

ಬೆಂಗಳೂರು: ಕೊರೊನಾ ಲಸಿಕೆ ವಿತರಣೆಗೆ ನಾಗರೀಕರು ಹೆಸರು ನೋಂದಾಯಿಸಿಕೊಳ್ಳಲು ಅನುವಾಗುವಂತೆ ಭಾರತ ಸರ್ಕಾರ ಬಿಡುಗಡೆಮಾಡಿರುವ ಕೊವಿನ್​ ಪೋರ್ಟಲ್​ನಲ್ಲಿ ಮೇಲಿಂದ ಮೇಲೆ ಸಮಸ್ಯೆಗಳು ತಲೆದೋರುತ್ತಿರುವ ಕಾರಣ ಕರ್ನಾಟಕದಲ್ಲಿ ಪ್ರತ್ಯೇಕ ಪೋರ್ಟಲ್ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೊವಿನ್​ ಪೋರ್ಟಲ್​ನಲ್ಲಿ ಲಸಿಕೆ ಪಡೆಯಲು ಕೇಂದ್ರಗಳನ್ನು ಆರಿಸಿಕೊಳ್ಳುವಾಗ ಸಮಸ್ಯೆ ಆಗುತ್ತಿರುವುದರ ಜತೆಗೆ ಇನ್ನೂ ಕೆಲ ಸಣ್ಣಪುಟ್ಟ ದೋಷಗಳು ಕಂಡುಬಂದಿರುವ ಕಾರಣ ಕರ್ನಾಟಕದಲ್ಲಿ ಲಸಿಕೆ ವಿತರಣೆಗಾಗಿ ಪ್ರತ್ಯೇಕ ಪೋರ್ಟಲ್​ ತಯಾರಿಸಲು ನಿರ್ಧರಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯದಲ್ಲಿ ನೂತನ ಪೋರ್ಟಲ್ ಜಾರಿಗೊಳಿಸಲು ಸಿದ್ಧತೆ ನಡೆಯುತ್ತಿದೆ. ಆದರೆ, 18ರಿಂದ 44 ವರ್ಷ ವಯಸ್ಸಿನವರಿಗೆ ಲಸಿಕೆ ವಿತರಣೆ ಆರಂಭಿಸಿದ ನಂತರವೇ ಅದನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದ್ದಾರೆ. ಮೇ 1ರಿಂದಲೇ 18-44 ವರ್ಷದವರಿಗೆ ಲಸಿಕೆ ನೀಡುವುದಾಗಿ ಭಾರತ ಸರ್ಕಾರ ಘೋಷಿಸಿದೆಯಾದರೂ ಸದ್ಯ ರಾಜ್ಯದಲ್ಲಿ ಲಸಿಕೆ ಅಭಾವ ತಲೆದೋರಿದ ಕಾರಣ ವಿತರಣೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.

ಕೊವಿನ್​ ಪೋರ್ಟಲ್​ ಬಗ್ಗೆ ಮಾತನಾಡಿದ ಬಿ.ಎಸ್​.ಯಡಿಯೂರಪ್ಪ, ಅದರಲ್ಲಿ ಕೆಲ ಅಡೆತಡೆಗಳಿದ್ದವು. ಜನರಿಗೆ ಲಸಿಕೆ ಪಡೆಯಲು ಕೇಂದ್ರಗಳನ್ನು ಆರಿಸಲು ತೊಂದರೆಯಾಗುತ್ತಿತ್ತು. ಹೀಗಾಗಿ ಇದಕ್ಕೆ ಪರಿಹಾರವಾಗಿ ರಾಜ್ಯ ಸರ್ಕಾರ ಹೊಸ ಪೋರ್ಟಲ್ ತಯಾರಿಸುತ್ತಿದೆ ಎಂದು ವಿವರಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಮಾಹಿತಿ ನೀಡಿದ ಹಿರಿಯ ಅಧಿಕಾರಿಗಳು ರಾಜ್ಯದಲ್ಲಿ ಜಾರಿಗೆ ತರುವ ಹೊಸ ಪೋರ್ಟಲ್​ನಲ್ಲಿ ಒಂದು ಪ್ರದೇಶದ ಜನರು ಇನ್ನೊಂದೆಡೆ ಲಸಿಕೆ ಕಾಯ್ದಿರಿಸುವುದನ್ನು ತಡೆಹಿಡಿಯಲಾಗುವುದು. ಅಲ್ಲದೇ ಕೊವಿನ್​ನಲ್ಲಿ ಒಟಿಪಿ ಸಮಸ್ಯೆ ಎದುರಾಗುತ್ತಿದ್ದ ಕಾರಣ ಅವೆಲ್ಲವನ್ನೂ ಪರಿಹಾರಗೊಳಿಸಲು ಹೊಸ ಪೋರ್ಟಲ್​ ತರಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಆರಂಭಿಕ ಹಂತದಲ್ಲಿ ಕೊರೊನಾ ಲಸಿಕೆ ಅಭಾವ ಕಂಡುಬಂದ ತಕ್ಷಣ ಅಲ್ಲಿನ ಜನರು ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ ಹಾಗೂ ತುಮಕೂರು ಭಾಗದಲ್ಲಿ ಲಸಿಕೆ ಕಾಯ್ದಿರಿಸಿ ಲಸಿಕೆಗಾಗಿ 50ರಿಂದ 70 ಕಿಲೋ ಮೀಟರ್ ದೂರ ಕ್ರಮಿಸುತ್ತಿರುವುದು ಬೆಳಕಿಗೆ ಬಂದಿತ್ತು. ಇದೀಗ ನೂತನ ವ್ಯವಸ್ಥೆ ಜಾರಿಯಾದಲ್ಲಿ ಇದಕ್ಕೆ ತಡೆಬೀಳಲಿದೆ.

(Karnataka Government to launch new portal as alternative for CoWin after facing glitches while booking corona vaccine)

ಇದನ್ನೂ ಓದಿ: ನಮಗೆ ಕೊವಿನ್ ಆ್ಯಪ್​ ಬೇಡ.. ಪ್ರತ್ಯೇಕ ಆ್ಯಪ್​ ಬಳಕೆಗೆ ಅನುಮತಿ ನೀಡಿ’-ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮನವಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada