ಬೆಂಗಳೂರು, (ಮಾರ್ಚ್ 13): ಜಯದೇವ ಹೃದ್ರೋಗ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ (Dr CN Manjunath) ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಈ ಸಂಬಂಧ ಮಂಜುನಾಥ್ ಅವರು ಕೆಲ ಬಿಜೆಪಿ ನಾಯಕರನ್ನು ಭೇಟಿಯಾಗುವ ಮೂಲಕ ಚುನಾವಣಾ ತಯಾರಿ ನಡೆಸಿದ್ದಾರೆ. ಅದರಂತೆ ಇಂದು (ಮಾರ್ಚ್ 13) ಸಂಜೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಬಳಿಕ ನಾಳೆ ಅಂದರೆ ಮಾರ್ಚ್ 14ರಂದು ಮಂಜುನಾಥ್ ಅವರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಈ ಮೂಲಕ ಮಂಜುನಾಥ್ ಅವರು ಬಿಜೆಪಿ ಸೇರುವ ಮೂಲಕ ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ.
ಗುರುವಾರ ಬೆಳಗ್ಗೆ ಬೆಂಗಳೂರಿನಲ್ಲಿ ಮಲ್ಲೇಶ್ವರಂ ಕಚೇರಿಯಲ್ಲಿ ನಡೆಯಲಿರುವ ಪಕ್ಷ ಸೇರ್ಪಡೆ ಕಾರ್ಯಕ್ರಮದದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರ್ವಾಲ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭಾ ಪ್ರತಿಪಕ್ಷ ನಾಯಕ ಅಶೋಕ್ ಸೇರಿದಂತೆ ಪ್ರಮುಖ ನಾಯಕರ ಸಮ್ಮುಖದಲ್ಲಿ ಮಂಜುನಾಥ್ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ.
ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ ಬಿರುಸಿನ ತಯಾರಿ ಮಾಡಿಕೊಳ್ಳುತ್ತಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕವು ಬಿಜೆಪಿ ಪಾಲಿಗೆ ಅತಿ ದೊಡ್ಡ ರಾಜ್ಯವಾಗಿದೆ. ಅಲ್ಲದೆ, ಇಲ್ಲಿ ಬಿಜೆಪಿ ಪರವಾದ ಅಲೆ ಇದೆ. ಜತೆಗೆ ಇಲ್ಲಿನ ಮತದಾರ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ ನೋಡುತ್ತಾನೆ ಎಂಬ ವಿಷಯವು ಹಲವು ಎಲೆಕ್ಷನ್‌ಗಳ ಮೂಲಕ ಸಾಬೀತಾಗಿದೆ. ಹೀಗಾಗಿ ಕಳೆದ ಬಾರಿ 25 + 1 ಸೀಟನ್ನು ಗೆದ್ದುಕೊಂಡಿದ್ದ ಬಿಜೆಪಿ ಈ ಬಾರಿ 28ಕ್ಕೆ 28 ಕ್ಷೇತ್ರವನ್ನೂ ಪಡೆದು ಕ್ಲೀನ್ ಸ್ವೀಪ್ ಮಾಡುವ ಬಗ್ಗೆ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಈಗ ಬಿಜೆಪಿ –ಜೆಡಿಎಸ್ ಮೈತ್ರಿ ಪಕ್ಷಕ್ಕೆ ಕಬ್ಬಿಣದ ಕಡಲೆ ಎಂದೇ ಭಾವಿಸಲಾಗಿರುವ ಕ್ಷೇತ್ರವಾಗಿರುವ ಬೆಂಗಳೂರು ಗ್ರಾಮಾಂತರಕ್ಕೆ ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಅವರನ್ನು ಕಣಕ್ಕೆ ಇಳಿಸಲು ತೀರ್ಮಾನಿಸಿದೆ.
ಡಾ. ಸಿ.ಎನ್. ಮಂಜುನಾಥ್ ಅವರು ಇನ್ನೂ ಬಿಜೆಪಿ ಸೇರಿಲ್ಲ. ಆದ್ರೆ, ಟಿಕೆಟ್ ಖಚಿತವಾಗಿದೆ. ಆದರೂ ಸಹ ಬಿಜೆಪಿಯಿಂದ ಇನ್ನೂ ಅಧಿಕೃತವಾಗಿ ಟಿಕೆಟ್ ಘೋಷಣೆ ಆಗಿಲ್ಲ. ಆದರೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮೊನ್ನೆ ಶಿವರಾತ್ರಿ ದಿನದಂದು ಮತ್ತೀಕೆರೆಯ ಜೆಪಿ ಪಾರ್ಕ್ನಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಂಜುನಾಥ್ ಅವರು ವೇದಿಕ ಮೇಲೆ ಕಾಣಿಸಿಕೊಂಡಿದ್ದರು. ಅಲ್ಲದೇ ಇಂದು ಸಂಜೆ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ 5 ಗಂಟೆಗೆ ಬಿಜೆಪಿ ನಾಯಕರು ಅಲ್ಲಿ ಚುನಾವಣಾ ಸಿದ್ಧತಾ ಸಭೆಯನ್ನು ನಡೆಸಲಿದ್ದು, ಡಾ. ಸಿ.ಎನ್. ಮಂಜುನಾಥ್, ಶಾಸಕರಾದ ಮುನಿರತ್ನ, ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಇತರರು ಭಾಗಿಯಾಗಲಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ