AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೂಸ್ವಾಧೀನ ಕೋರ್ಟ್ ಪ್ರಕರಣಗಳ ಕರ್ತವ್ಯ ಲೋಪ ತನಿಖೆಗೆ ಎಸ್ಐಟಿ: ಡಿ.ಕೆ. ಶಿವಕುಮಾರ್​

ಕರ್ನಾಟಕದಲ್ಲಿ ಭೂಸ್ವಾಧೀನ ಕೋರ್ಟ್ ಪ್ರಕರಣಗಳ ಕರ್ತವ್ಯಲೋಪ ತನಿಖೆಗೆ ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ನೀರಾವರಿ ಇಲಾಖೆ ಪ್ರಕರಣಗಳ ವಾದ ಮಂಡಿಸಲು 219 ವಕೀಲರಿದ್ದಾರೆ. ಇವುಗಳಲ್ಲಿ ಯಾರು ಹೊಣೆಗಾರರಿಲ್ಲ, ಅವರೆಲ್ಲರನ್ನು ಕಿತ್ತೊಗೆದು ಬೇರೆ ವಕೀಲರನ್ನು ನೇಮಿಸಲಾಗುವುದು. ನಮ್ಮ ಇಲಾಖೆಯ ಗೌರವ ಉಳಿಸಲು ರಾಜ್ಯದಲ್ಲೇ ಐತಿಹಾಸಿಕ ತೀರ್ಮಾನಕ್ಕೆ ಬರಲಾಗಿದೆ ಎಂದಿದ್ದಾರೆ.

ಭೂಸ್ವಾಧೀನ ಕೋರ್ಟ್ ಪ್ರಕರಣಗಳ ಕರ್ತವ್ಯ ಲೋಪ ತನಿಖೆಗೆ ಎಸ್ಐಟಿ: ಡಿ.ಕೆ. ಶಿವಕುಮಾರ್​
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​​
ಪ್ರಸನ್ನ ಹೆಗಡೆ
|

Updated on: Nov 23, 2025 | 8:49 AM

Share

ಬೆಂಗಳೂರು, ನವೆಂಬರ್​ 23: ನೀರಾವರಿ ಇಲಾಖೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಭೂಸ್ವಾಧೀನ ಕೋರ್ಟ್ ಪ್ರಕರಣಗಳ ಕರ್ತವ್ಯ ಲೋಪಗಳ ಬಗ್ಗೆ ತನಿಖೆಗೆ ಎಸ್ಐಟಿ ರಚಿಸಲಾಗುವುದು. ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಿ, ವಕೀಲರನ್ನು ವಜಾಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​​ ಹೇಳಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್​​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನೀರಾವರಿ ಇಲಾಖೆ ಹಾಗೂ ಬಿಡಿಎ ವ್ಯಾಪ್ತಿಯಲ್ಲಿನ ಭೂಸ್ವಾಧೀನ ಪ್ರಕ್ರಿಯೆ ವಿಚಾರವಾಗಿ ನ್ಯಾಯಾಲಯ ಪ್ರಕರಣಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಇಲಾಖೆಗಳಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಎಷ್ಟು ಪ್ರಕರಣಗಳಿವೆ, ಯಾವ ಕಾರಣಕ್ಕೆ ಇವೆ, ಯಾಕೆ ಇವು ಇತ್ಯರ್ಥವಾಗಿಲ್ಲ ಎಂಬ ವಿಚಾರವಾಗಿ ನಾನು ಇಲಾಖೆಯಲ್ಲಿ ತನಿಖೆ ಮಾಡಿಸಿದ್ದೇನೆ. ಮಾಹಿತಿ ಪ್ರಕಾರ ಈ ಪ್ರಕರಣಗಳಿಂದ ಸರ್ಕಾರಕ್ಕೆ ಬಹಳ ಹೊರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡರು, ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರು ಹಾಗೂ ದೆಹಲಿಯ ವಕೀಲರ ತಂಡ ಒಟ್ಟಾಗಿ ಚರ್ಚೆ ನಡೆಸಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ:  ಮೆಕ್ಕೆಜೋಳ, ಹೆಸರುಕಾಳು ಬೆಲೆ ಕುಸಿತ; ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

ನೀರಾವರಿ ಇಲಾಖೆಯ 61,843 ಪ್ರಕರಣ ಬಾಕಿ

ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಕೃಷ್ಣ ಭಾಗ್ಯ ಜಲ ನಿಗಮದಲ್ಲಿ ಒಪ್ಪಿತ ಭೂಸ್ವಾಧೀನಕ್ಕೆ ಪರಿಹಾರದ ಮೊತ್ತ ಹೆಚ್ಚಿಸುವ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದೇವೆ. ಇದಕ್ಕೆ ಸುಮಾರು 75 ಸಾವಿರ ಕೋಟಿ ರೂ. ಮೀಸಲಿರಿಸಲಾಗುವುದು. ವಿವಿಧ ನೀರಾವರಿ ನಿಗಮಗಳ ವ್ಯಾಪ್ತಿಯಲ್ಲಿ 61,843 ಪ್ರಕರಣಗಳಿವೆ. ಕೆಎನ್ಎನ್ಎಲ್​​ನಲ್ಲಿ 25,356, ವಿಜೆಎನ್ಎಲ್​​ನಲ್ಲಿ 2,856, ಸಿಎನ್ಎನ್ಎಲ್​​ನಲ್ಲಿ 4455, ಯುಕೆಪಿ, ಆರ್ ಆ್ಯಂಡ್ ಆರ್ ಹಾಗೂ ಕೆಬಿಜೆಎನ್ಎಲ್​​ನಲ್ಲಿ 29,176 ಪ್ರಕರಣಗಳು ಬಾಕಿ ಉಳಿದಿವೆ.

ಕಂದಾಯ ಇಲಾಖೆಯವರು ಬೆಂಗಳೂರು ವ್ಯಾಪ್ತಿಯಲ್ಲಿ ತನಿಖೆ ಮಾಡಲು ಆದೇಶ ಮಾಡಿದ್ದು, ಅಧಿಕಾರಿಗಳು, ಕಾನೂನು ತಂಡದವರು ಸೇರಿ ಸರಿಯಾದ ಸಮಯದಲ್ಲಿ ಅರ್ಜಿ ಹಾಕದೇ ಕಾಲಹರಣ ಮಾಡಿರುವುದು ಕಂಡುಬಂದಿದೆ. ಈ ವಿಚಾರವಾಗಿ ವರದಿ ಸಲ್ಲಿಸುವಂತೆ ಸೂಚಿಸಿದ್ದೇವೆ. ಕೆಲವು ಪ್ರಮುಖ ಪ್ರಕರಣಗಳು ನ.10ರಂದು ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯಲಿದ್ದು, ಅಷ್ಟರೊಳಗೆ ನಮ್ಮಲ್ಲಿ ಆಗಿರುವ ನ್ಯೂನ್ಯತೆ ಗಮನಕ್ಕೆ ತರಬೇಕಾಗಿದೆ. ಇದರ ಜೊತೆಗೆ ಎಸ್ಐಟಿ ರಚಿಸಿ ಎಲ್ಲೆಲ್ಲಿ ಯಾವ ರೀತಿ ಪಿತೂರಿ ನಡೆದಿದೆ ಎಂದು ವಿಚಾರಣೆ ನಡೆಸಲಾಗುವುದು. ಕರ್ತವ್ಯ ಲೋಪ ಮಾಡಿರುವ ಅಧಿಕಾರಿಗಳ ವಿರುದ್ಧ ಇಲಾಖೆವಾರು ತನಿಖೆಗೆ ಆದೇಶಿಸಿ ಎಲ್ಲರನ್ನು ಅಮಾನತುಗೊಳಿಸಲು ನಿರ್ಧರಿಸಲಾಗಿದೆ. ಇನ್ನು ವಕೀಲರುಗಳ ಪೈಕಿ ಯಾರು ಸಮಯಕ್ಕೆ ಸರಿಯಾಗಿ ನ್ಯಾಯಾಲಯದಲ್ಲಿ ಅರ್ಜಿಯನ್ನು ಕಾನೂನುಬದ್ಧವಾಗಿ ಸಲ್ಲಿಸದೇ ಕರ್ತವ್ಯ ಲೋಪ ಎಸಗಿದ್ದಾರೋ ಅವರನ್ನು ವಜಾಗೊಳಿಸಲು ತೀರ್ಮಾನಿಸಲಾಗಿದೆ. ಅಧಿಕಾರಿಗಳು, ವಕೀಲರು ಎಲ್ಲರನ್ನು ಹೊಣೆಗಾರರನ್ನಾಗಿ ಮಾಡಲು ನಿರ್ಧರಿಸಿದ್ದೇವೆ. ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ. ನೀರಾವರಿ ಇಲಾಖೆ ಪ್ರಕರಣಗಳ ವಾದ ಮಂಡಿಸಲು 219 ವಕೀಲರಿದ್ದಾರೆ. ಇವುಗಳಲ್ಲಿ ಯಾರು ಹೊಣೆಗಾರರಿಲ್ಲ, ಅವರೆಲ್ಲರನ್ನು ಕಿತ್ತೊಗೆದು ಬೇರೆ ವಕೀಲರನ್ನು ನೇಮಿಸಲಾಗುವುದು. ನಮ್ಮ ಇಲಾಖೆಯ ಗೌರವ ಉಳಿಸಲು ರಾಜ್ಯದಲ್ಲೇ ಐತಿಹಾಸಿಕ ತೀರ್ಮಾನಕ್ಕೆ ಬರಲಾಗಿದೆ ಎಂದು ಡಿಕೆಶಿ ತಿಳಿಸಿದ್ದಾರೆ.

ನೂತನ ಕಾಯ್ದೆ ಪ್ರಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಾಧಿಕಾರ ರಚನೆಗೆ ಅವಕಾಶವಿದೆ. ಆ ಮೂಲಕ ನ್ಯಾಯಾಲಯದ ಮೆಟ್ಟಿಲೇರದೆ ಇಲ್ಲೇ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲಾಗುವುದು. ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಹಾಗೂ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಈ ಪ್ರಾಧಿಕಾರವನ್ನು ಯಾವ ರೀತಿ ರಚಿಸಬೇಕು ಎಂದು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು. ವಿಳಂಬ ಪ್ರಕ್ರಿಯೆ ತಡೆಯಲು ಸುಪ್ರೀಂ ಕೋರ್ಟಿನ ವಕೀಲರ ಸಲಹೆ ಪಡೆದು ಮುಂದಿನ ಅಧಿವೇಶನದಲ್ಲಿ ಕಾನೂನಿಗೆ ತಿದ್ದುಪಡಿ ತರಲು ಮುಂದಾಗಿದ್ದೇವೆ. ದೆಹಲಿಯಲ್ಲಿ ಹಾಗೂ ಬೆಂಗಳೂರಿನಲ್ಲಿ ಇಂತಹ ಕಾನೂನು ಪ್ರಕರಣಗಳ ಪರಿಶೀಲನೆಗೆ ಕಾನೂನು ಘಟಕ ಸ್ಥಾಪಿಸಲು ತೀರ್ಮಾನಿಸಿದ್ದೇವೆ. ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಲಯಗಳಲ್ಲಿ ನಮ್ಮ ಪರ ವಕೀಲರು ಮಂಡಿಸುವ ವಾದವನ್ನು ದಾಖಲಾತಿ ಮಾಡಲು ಘಟಕ ಆರಂಭಿಸಲು ತೀರ್ಮಾನಿಸಿದ್ದೇವೆ ಎಂದು ಉಪಮುಖ್ಯಮಂತ್ರಿಗಳು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.