ಬೆಂಗಳೂರು: ಕೊರೊನಾ ಸಂಕಷ್ಟ ಕಾಲದಲ್ಲಿ ನೆಲಕಚ್ಚಿದ್ದ ರೈತರ ಬದುಕಿಗೆ ಆಸರೆಯಾಗುವುದಾಗಿ ಭರವಸೆ ನೀಡಿದ್ದ ಸಿಎಂ ಯಡಿಯೂರಪ್ಪ ತಮ್ಮ ಮಾತು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಆನ್ಲೈನ್ ಮೂಲಕ ರೈತರಿಗೆ ಪರಿಹಾರ ನೀಡುವ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದಾರೆ.
ಈ ವೇಳೆ, ಮೆಕ್ಕೆಜೋಳ ಮತ್ತು ಹೂವು ಬೆಳೆದ ರೈತರಿಗೆ ಆನ್ ಮೂಲಕ ನೇರವಾಗಿ ಅವರವರ ಅಕೌಂಟ್ ಗೆ ಪರಿಹಾರ ಮೊತ್ತ ಸಂದಾಯ ಮಾಡಿದ್ದಾರೆ. ಇದರಿಂದ ಏಕಕಾಲದಲ್ಲಿ 666 ಕೋಟಿ ರೂ.ಗಳ ಪರಿಹಾರ ಮೊತ್ತವನ್ನು ರೈತರ ಖಾತೆಗೆ ಆನ್ಲೈನ್ ಮೂಲಕ ಸಿಎಂ ಬಿಡುಗಡೆ ಮಾಡಿದ್ರು. ನಂತರ ರೈತರಿಗೆ ಕರೆ ಮಾಡಿ ಹಣ ವರ್ಗಾವಣೆ ಆಗಿರುವುದನ್ನು ಯಡಿಯೂರಪ್ಪ ಖಾತರಿಪಡಿಸಿಕೊಂಡರು.
ಇದೇ ಸಂದರ್ಭದಲ್ಲಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ 100 ದಿನಗಳ ಪ್ರಗತಿಯ ವರದಿಯನ್ನು ಬಿಡುಗಡೆ ಮಾಡಿದರು. ಈ ವೇಳೆ ಕೃಷಿ ಸಚಿವ ಬಿ.ಸಿ.ಪಾಟೀಲ್, ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ಕೆ.ನಾರಾಯಣ ಸ್ವಾಮಿ, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ ಉಪಸ್ಥಿತರಿದ್ದರು.
ರೈತರ ಸಂಪೂರ್ಣ ಮಾಹಿತಿ ಇದೆ, ಎಲ್ಲ ರೈತರಿಗೆ ಹಣ ತಲುಪಿಸಲಾಗುತ್ತೆ
ಮೆಕ್ಕೆ ಜೋಳ ಬೆಳೆದ 10 ಲಕ್ಷ ರೈತರಿಗೆ ಇಂದು ಪರಿಹಾರ ನೀಡೋ ಕೆಲಸ ಆರಂಭವಾಗಿದೆ. ಇಂದು ಏಕಕಾಲದಲ್ಲಿ 943 ರೈತರಿಗೆ ಆನ್ ಲೈನ್ ಮೂಲಕ ಹಣ ತಲುಪಿದೆ. ಮುಂದಿನ 15 ದಿನಗಳಲ್ಲಿ ಎಲ್ಲಾ ಮೆಕ್ಕೆಜೋಳ ಬೆಳೆದ ರೈತರಿಗೆ ಹಣ ತಲುಪಿಸಲಾಗುತ್ತೆ. ನಮ್ಮ ಬಳಿ ರೈತರ ಸಂಪೂರ್ಣ ಮಾಹಿತಿ ಇದೆ. ಮೆಕ್ಕೆಜೋಳ ರೈತರಿಗೆ 500 ಕೋಟಿ ಪರಿಹಾರ ಹಾಗೂ 160 ಕೋಟಿ ಹೂ, ಹಣ್ಣು ಮತ್ತು ತರಕಾರಿ ರೈತರಿಗೆ ನೀಡಲಾಗುತ್ತೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಇದೇ ವೇಳೆ ತಿಳಿಸಿದರು.
ರೇಷ್ಮೆ ಬೆಳೆಗಾರರಿಗೆ 50 ಕೋಟಿ:
ರೇಷ್ಮೆ ಬೆಳೆಗಾರರಿಗೆ 50 ಕೋಟಿ ರೂ. ಪರಿಹಾರ ನೀಡಲಾಗಿದೆ. ಇವತ್ತು ರೈತರ ಖಾತೆಗೆ ಹಣ ಹಾಕಲಾಗಿದೆ ಎಂದು ರೇಷ್ಮೆ ಸಚಿವ ನಾರಾಯಣಗೌಡ ತಿಳಿಸಿದರು
Published On - 1:54 pm, Tue, 2 June 20