ಬೆಂಗಳೂರು: ಈ ಸಾಲಿನ (2021-22) ಶೈಕ್ಷಣಿಕ ವರ್ಷವನ್ನು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಶೈಕ್ಷಣಿಕ ವರ್ಷವನ್ನು ನಿಗದಿ ಮಾಡಿ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ಅದರಂತೆ ಮೊದಲ ಅವಧಿ ಜುಲೈ 1ರಿಂದ ಅಕ್ಟೋಬರ್ 10, 2021ರ ವರೆಗೆ ಇರಲಿದೆ. ಶೈಕ್ಷಣಿಕ ವರ್ಷದ 2ನೇ ಅವಧಿ ಅಕ್ಟೋಬರ್ 21, 2021ರಿಂದ ಏಪ್ರಿಲ್ 31, 2022ರ ವರೆಗೆ ಇರಲಿದೆ. ಈ ಮಧ್ಯೆ, ಅಕ್ಟೋಬರ್ 10ರಿಂದ 20ರವರೆಗೆ ದಸರಾ ರಜೆಗಳು ಇರಲಿವೆ ಎಂದು ಸೂಚಿಸಲಾಗಿದೆ.
ಮೇ 1, 2022ರಿಂದ ಮೇ 28, 2022ರವರೆಗೆ ಬೇಸಿಗೆ ರಜೆ ನಿಗದಿಪಡಿಸಲಾಗಿದೆ. ಮಕ್ಕಳ ದಾಖಲಾತಿ ಪ್ರಕ್ರಿಯೆಯು ಜೂನ್ 31ರ ಒಳಗೆ ಮುಕ್ತಾಯವಾಗಬೇಕು ಎಂದು ತಿಳಿಸಲಾಗಿದೆ. ಕೊವಿಡ್‌ನಿಂದ ಭೌತಿಕವಾಗಿ ಶಾಲೆ ನಡೆಸಲು ಆಗದಿದ್ದರೆ, ಆನ್‌ಲೈನ್, ದೂರದರ್ಶನ ಮೂಲಕ ಮಕ್ಕಳಿಗೆ ಪಾಠ ಮಾಡುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಂದ ಸುತ್ತೋಲೆ ಹೊರಡಿಸಲಾಗಿದೆ.
ಈ ಮೊದಲು, ಜೂನ್ 15, 2021ರಿಂದ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಆರಂಭಿಸಲು ಸೂಚಿಸಲಾಗಿತ್ತು. ಆದರೆ, ಕೊವಿಡ್-19 ಸೋಂಕು ವ್ಯಾಪಕವಾದ ಹಿನ್ನೆಲೆ ಜೂನ್ 14ರ ವರೆಗೆ ಲಾಕ್ಡೌನ್ ವಿಸ್ತರಿಸಲಾಗಿದೆ. ಅದರಂತೆ, ಜೂನ್ 14, 2021ರ ವರೆಗೆ ಶಾಲೆಗಳು ಓಪನ್ ಮಾಡುವ ಹಾಗಿಲ್ಲ. ಈ ಕಾರಣದಿಂದ ಶಿಕ್ಷಣ ಇಲಾಖೆ ಹೊಸದಾಗಿ ಶೈಕ್ಷಣಿಕ ವರ್ಷ ನಿಗದಿ ಮಾಡಿದೆ.
ಶಾಲಾ ಕರ್ತವ್ಯದ ದಿನಗಳ ವಿವರ ಹೀಗಿದೆ:
ಮೊದಲನೇ ಅವಧಿ: 01/07/2021 ರಿಂದ 9/10/2021 ರವರೆಗೆ
ಎರಡನೇ ಅವಧಿ : 21/10/2021 ರಿಂದ 30/04/22 ರವರೆಗೆ
ರಜಾ ದಿನಗಳ ವಿವರ ಇಲ್ಲಿದೆ:
ದಸರಾ ರಜೆ: 10/10/2021 ರಿಂದ 20/10/2021 ರವರೆಗೆ
ಬೇಸಿಗೆ ರಜೆ: 01/05/2022 ರಿಂದ 28/05/2022 ರವರೆಗೆ
ಕೊವಿಡ್ ಹಿನ್ನೆಲೆ ತರಗತಿಗಳನ್ನು ಭೌತಿಕವಾಗಿ ನಡೆಸಲು ಸಾಧ್ಯವಾಗದೆ ಇದ್ದರೆ ಪರ್ಯಾಯವಾಗಿ ಆನ್ ಲೈನ್, ದೂರದರ್ಶನ, ಅಂತರ್ಜಾಲ ಕಲಿಕೆಯನ್ನು ಅನುಸರಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಂದ ಬಿಡುಗಡೆ ಮಾಡಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
Published On - 4:50 pm, Fri, 4 June 21