ಇನ್ನೂ ಎರಡು ವಾರ ಲಾಕ್‌ಡೌನ್ ಮುಂದುವರಿಸಲು ಕಾಂಗ್ರೆಸ್ ನಾಯಕ ಜಿ.ಪರಮೇಶ್ವರ್ ಆಗ್ರಹ
ಒಂದು ಪರೀಕ್ಷೆಯನ್ನು ರದ್ದು ಮಾಡಿ, ಮತ್ತೊಂದು ಪರೀಕ್ಷೆ ಮಾಡ್ತೀವಿ ಎನ್ನುವುದೇ ವಿಪರ್ಯಾಸ. ಎರಡೂ ಪರೀಕ್ಷೆಗಳನ್ನು ಈ ವರ್ಷ ನಡೆಸುವುದು ಬೇಡ. ವಿದ್ಯಾರ್ಥಿಗಳನ್ನು ನೇರವಾಗಿ ಪಾಸ್ ಮಾಡಿ ಎಂದು ಸಲಹೆ ಮಾಡಿದರು.
ತುಮಕೂರು: ಕರ್ನಾಟಕದಲ್ಲಿ ಇನ್ನೂ 2 ವಾರ ಲಾಕ್‌ಡೌನ್ ಮುಂದುವರಿಸಬೇಕು ಎಂದು ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಲಾಕ್‌ಡೌನ್ ಮಾಡಿದರೆ ಕೊರೊನಾ ಚೈನ್ ಬ್ರೇಕ್ ಆಗುತ್ತೆ. ಹೀಗಾಗಿ ಲಾಕ್‌ಡೌನ್ ಮುಂದುವರಿಸಬೇಕು ಎಂದು ಅವರು ಆಗ್ರಹಿಸಿದರು. ರಾಜ್ಯ ಸರ್ಕಾರ ಶ್ರಮಿಕ ವರ್ಗಕ್ಕೆ ಪ್ಯಾಕೇಜ್ ಘೋಷಿಸಿದೆ. ಈ ಪರಿಹಾರದ ಹಣ ಶೀಘ್ರ ಫಲಾನುಭವಿಗಳ ಕೈ ಸೇರಬೇಕು ಎಂದು ಸಲಹೆ ಮಾಡಿದರು.
ಪಿಯುಸಿ ಪರೀಕ್ಷೆ ರದ್ದು ಮತ್ತು ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಂದು ಪರೀಕ್ಷೆಯನ್ನು ರದ್ದು ಮಾಡಿ, ಮತ್ತೊಂದು ಪರೀಕ್ಷೆ ಮಾಡ್ತೀವಿ ಎನ್ನುವುದೇ ವಿಪರ್ಯಾಸ. ಎರಡೂ ಪರೀಕ್ಷೆಗಳನ್ನು ಈ ವರ್ಷ ನಡೆಸುವುದು ಬೇಡ. ವಿದ್ಯಾರ್ಥಿಗಳನ್ನು ನೇರವಾಗಿ ಪಾಸ್ ಮಾಡಿ ಎಂದು ಸಲಹೆ ಮಾಡಿದರು.
ಕೇಂದ್ರ ಸರ್ಕಾರವು ಸಿಬಿಎಸ್ಸಿ ಹಾಗೂ ಐಸಿಎಸ್ಸಿ ಪರೀಕ್ಷೆಗಳನ್ನು ನಡೆಸುವುದಿಲ್ಲ ಎಂದು ನಿರ್ಧರಿಸುವುದನ್ನು ಗಮನಿಸಿ. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರವು ಮುಂದಿನ ಹೆಜ್ಜೆ ಇಡಬೇಕು ಎಂದರು. ಎಸ್ಎಸ್ಎಲ್ಸಿ ವಿದ್ಯಾರ್ಥಿಗಳನ್ನೂ ನೇರವಾಗಿ ಪಾಸ್ ಮಾಡಿದರೆ ಒಳ್ಳೆಯದು ಎಂದರು.
ಮೈಸೂರಿನಲ್ಲಿ ಐಎಎಸ್ ಅಧಿಕಾರಿಗಳ ಕಿತ್ತಾಟದ ಬಗ್ಗೆ ಪ್ರಸ್ತಾಪಿಸಿದ ಅವರು, ಅಧಿಕಾರಿಗಳು ನಿಯಮಗಳ ಪ್ರಕಾರವೇ ಆಡಳಿತ ನಡೆಡುವಂತೆ ಸರ್ಕಾರ ನಡೆಸುವವರು ನೋಡಿಕೊಳ್ಳಬೇಕು. ಇದಕ್ಕಾಗಿಯೇ ಡಿಪಿಎಆರ್ ಎಂಬ ಒಂದು ಇಲಾಖೆಯೇ ಇದೆ. ಇಬ್ಬರು ಐಎಎಸ್ ಅಧಿಕಾರಿಗಳು ಕಿತ್ತಾಡುತ್ತಾರೆ ಅಂದರೆ ಯಾಕೆ ಕಿತ್ತಾಡುತ್ತಾರೆ. ಜಿಲ್ಲಾಧಿಕಾರಿ ಅವರ ಮನೆಗೆ ಸ್ವಿಮಿಂಗ್ ಪೂಲ್ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಇದಕ್ಕೆ ಪರ್ಮಿಷನ್ ಯಾರು ಕೊಡೊದು? ಕಾರ್ಪೋರೇಷನ್ ಕೋಡಬೇಕು. ಕಾರ್ಪೋರೇಷನ್ ಮುಖ್ಯಸ್ಥರು ಕೋಡಬೇಕು. ಅಲ್ಲಿ ಸಮನ್ವಯ ಇಲ್ಲದಿದ್ದರೆ ಕಷ್ಟ ಅನುಭವಿಸುವವರು ಯಾರು? ಆಡಳಿತ ಹಿಂದೆ ಬೀಳುತ್ತದೆ. ಜನಗಳು ಕಷ್ಟ ಅನುಭವಿಸುತ್ತಾರೆ ಎಂದು ವಿಶ್ಲೇಷಿಸಿದರು.
ಇಬ್ಬರೂ ಅಧಿಕಾರಿಗಳಿಗೆ ಆಡಳಿತದ ಚುಕ್ಕಾಣಿ ಹಿಡಿದವರು ಎಚ್ಚರಿಕೆ ನೀಡಬೇಕು. ಈ ಕುರಿತು ಮುಖ್ಯಕಾರ್ಯದರ್ಶಿ ಎಚ್ಚರಿಕೆ ನೀಡಬೇಕು. ಇಬ್ಬರಿಗೂ ಸರಿಯಾಗಿ ಕೆಲಸ ಮಾಡಿ ಎಂದು ಸೂಚಿಸಬೇಕು. ಸರ್ಕಾರದ ನಿಯಮದಂತೆ ಅಧಿಕಾರಿಗಳು ನಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.
(Congress Leader G Parameshwara Suggest to Continue Lockdown for another 2 weeks)
ಇದನ್ನೂ ಓದಿ: 2nd PUC Exam 2021: ದ್ವಿತೀಯ ಪಿಯುಸಿ ಪರೀಕ್ಷೆ ರದ್ದು, ಎಸ್ಎಸ್ಎಲ್ಸಿಗೆ 2 ಪೇಪರ್ ಪರೀಕ್ಷೆ- ಸಚಿವ ಸುರೇಶ್ ಕುಮಾರ್
Published On - 4:15 pm, Fri, 4 June 21