2nd PUC Exam 2021: ದ್ವಿತೀಯ ಪಿಯುಸಿ ಪರೀಕ್ಷೆ ರದ್ದು, ಎಸ್ಎಸ್ಎಲ್​ಸಿಗೆ 2 ಪೇಪರ್​ ಪರೀಕ್ಷೆ- ಸಚಿವ ಸುರೇಶ್ ಕುಮಾರ್

2nd PUC Exam 2021: ದ್ವಿತೀಯ ಪಿಯುಸಿ ಪರೀಕ್ಷೆ ರದ್ದು, ಎಸ್ಎಸ್ಎಲ್​ಸಿಗೆ 2 ಪೇಪರ್​ ಪರೀಕ್ಷೆ- ಸಚಿವ ಸುರೇಶ್ ಕುಮಾರ್
SSLC exam 2021: ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಕಡ್ಡಾಯ - ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಸ್ಪಷ್ಟನೆ

Suresh Kumar Press Meet : ಕೊರೊನಾ ಕೇಕೆಯ ಮಧ್ಯೆ, ಪರೀಕ್ಷೆ ರದ್ದು ಮಾಡುವಂತೆ ಶಿಕ್ಷಣ ತಜ್ಞರು ಸೇರಿದಂತೆ ಎಲ್ಲ ಕಡೆಗಳಿಂದಲೂ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಅಲರ್ಟ್ ಆದ ಸಚಿವ ಸುರೇಶ್ ಕುಮಾರ್ ಅವರು ಅಳೆದು ತೂಗಿ Karnataka PUC Exam 2021 ಪರೀಕ್ಷೆ ನಡೆಸುವುದು ಬೇಡವೆಂದೂ SSLC Exam 2021 ಎರಡು ಪೇಪರ್​ ಪರೀಕ್ಷೆ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ.

TV9kannada Web Team

| Edited By: Apurva Kumar Balegere

Jun 04, 2021 | 1:43 PM

ಬೆಂಗಳೂರು: ಕರ್ನಾಟಕದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಸ್ಎಸ್ಎಲ್​ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ನಿಟ್ಟಿನಲ್ಲಿ ಶಿಕ್ಷಣ ಸಚಿವ ಎಸ್​ ಸುರೇಶ್ ಕುಮಾರ್ ಅವರು ಇದೀಗತಾನೆ ಸುದ್ದಿಗೋಷ್ಠಿ ನಡೆಸಿದ್ದು, 2021ನೇ ಸಾಲಿನ  ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡುವ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ. ಇದೇ ವೇಳೆ ಎಸ್ಎಸ್ಎಲ್​ಸಿ ವಿದ್ಯಾರ್ಥಿಗಳಿಗೆ ಎರಡು ಪೇಪರ್​ ಪರೀಕ್ಷೆ ಕಡ್ಡಾಯವಾಗಿ ನಡೆಯಲಿದೆ ಎಂದು ಘೋಷಿಸಿದ್ದಾರೆ. 

ಕೇಂದ್ರ ಸರ್ಕಾರವೇ ಸಿಬಿಎಸ್ಇ, ಐಸಿಎಸ್ಇ ಎಕ್ಸಾಂ ರದ್ದು ಮಾಡಿದೆ. ಇದಕ್ಕೆ ಸುಪ್ರೀಂಕೋರ್ಟ್​ ಅನುಮೋದನೆಯೂ ದೊರೆತಿದೆ. ಆದರೆ ಯಾವುದಕ್ಕೂ ಜಗ್ಗದೆ ಕೊರೊನಾ ಮಹಾಮಾರಿ ಮಾತ್ರ ತಾನು ನುಗ್ಗಿದ್ದೇ ದಾರಿ ಎಂಬಂತಾಗಿದೆ. ಅದು ಪರೀಕ್ಷಾ ಕೇಂದ್ರಗಳಿಗೂ ಎಡತಾಕಿ, ಮಕ್ಕಳ ಜೀವಕ್ಕೆ ಎರವಾದರೆ ಹೇಗೆ ಎಂಬ ಚಿಂತೆಯಲ್ಲಿ ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಎಕ್ಸಾಂ ನಡೆಸುವುದಿಲ್ಲ ಆದರೆ ಈ ಬಾರಿ SSLC ಗೆ ಎರಡು ಪೇಪರ್​ ಪರೀಕ್ಷೆಗಳನ್ನು ನಡೆಸುವುದಾಗಿ ಹೇಳಿದ್ದಾರೆ.  ಕೊರೊನಾ ಕೇಕೆಯ ಮಧ್ಯೆ, ಪರೀಕ್ಷೆ ರದ್ದು ಮಾಡುವಂತೆ ಶಿಕ್ಷಣ ತಜ್ಞರು ಸೇರಿದಂತೆ ಎಲ್ಲ ಕಡೆಗಳಿಂದಲೂ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಅಲರ್ಟ್ ಆದ ಸಚಿವ ಸುರೇಶ್ ಕುಮಾರ್ ಅವರು ಅಳೆದು ತೂಗಿ ಪಿಯುಸಿ ಪರೀಕ್ಷೆ ನಡೆಸುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. SSLC ವಿದ್ಯಾರ್ಥಿಗಳಿಗೆ ಜುಲೈ 3ನೇ ವಾರದಲ್ಲಿ ಪರೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದೆ.

ಇನ್ನು SSLC ಪರೀಕ್ಷೆ ನಡೆಸುವುದೇ ಅಂತಿಮ ತೀರ್ಮಾನವಲ್ಲ. ಪರೀಕ್ಷೆ ನಡೆಸುವ ಸಮಯದಲ್ಲಿ ಕೊರೊನಾ 3ನೇ ಅಲೆ ಬಂದರೆ ಆಗಲೂ ಆ ತಕ್ಷಣಕ್ಕೆ ನಿರ್ಧಾರ ಮರುಪರಿಶೀಲಿಸುತ್ತೇವೆ. ಪರೀಕ್ಷೆ ನಡೆಸಬೇಕಾ, ಬೇಡವಾ ಎಂದು ನಿರ್ಧರಿಸುತ್ತೇವೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಅದರೆ ಬೇಕು ಅಂದ್ರೆ ಪರೀಕ್ಷೆ ಬರೆಯಬಹುದು

ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಲಾಗಿದ್ದು, ಪ್ರಥಮ ಪಿಯುಸಿ ಫಲಿತಾಂಶ ಆಧರಿಸಿ ಗ್ರೇಡಿಂಗ್ ನೀಡಲಾಗುವುದು. ಫಲಿತಾಂಶ ಸಮಾಧಾನವಿಲ್ಲದಿದ್ದರೆ ಪರೀಕ್ಷೆ ಬರೆಯಬಹುದು. ಕೊರೊನಾ ಕಡಿಮೆಯಾದ ನಂತರ ಅಂತಹ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡುತ್ತೇವೆ. ಸದ್ಯ ದ್ವಿತೀಯ ಪಿಯುಸಿಯ ಎಲ್ಲ ವಿದ್ಯಾರ್ಥಿಗಳು ಪಾಸ್. ಈ ಪಿಯುಸಿ ವಿದ್ಯಾರ್ಥಿಗಳು ಸಿಇಟಿ ಸೇರಿದಂತೆ ನಿಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಸಲಹೆ ನೀಡಿದ್ದಾರೆ.

ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಗ್ರೇಡಿಂಗ್ ನೀಡಲು ಕಷ್ಟ. ಪರೀಕ್ಷೆ ನಡೆಸದೆ ಗ್ರೇಡಿಂಗ್ ಕೊಡುವುದಕ್ಕೆ ಕಷ್ಟವಾಗುತ್ತದೆ. ಈ ವಿದ್ಯಾರ್ಥಿಗಳು 9ನೇ ತರಗತಿ ಪರೀಕ್ಷೆಯನ್ನೂ ಬರೆದಿಲ್ಲ. ಯಾವ ಆಧಾರದಲ್ಲಿ ಫಲಿತಾಂಶ ನೀಡಬೇಕೆಂದೂ ಗೊತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ SSLC ಪರೀಕ್ಷೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿ ವಿವರ ಹೀಗಿದೆ:

SSLC ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡೋದು ಕಷ್ಟ. ಕಳೆದ ವರ್ಷ 9ನೇ ತರಗತಿ ಮಕ್ಕಳಿಗೆ ಪರೀಕ್ಷೆ ನಡೆಸಿಲ್ಲ. ರಾಜ್ಯದಲ್ಲಿ SSLC ವಿದ್ಯಾರ್ಥಿಗಳಿಗೆ 2 ಪೇಪರ್ ಪರೀಕ್ಷೆ ಇರುತ್ತದೆ. ಗಣಿತ, ವಿಜ್ಞಾನ, ಸಮಾಜ ವಿಜ್ಞಾನಕ್ಕೆ ಪರೀಕ್ಷೆ ನಡೆಯುತ್ತದೆ. ಈ ಮೂರೂ ವಿಷಯಕ್ಕೆ ಸೇರಿಸಿ 1 ಪರೀಕ್ಷೆ ಮಾಡಲಾಗುವುದು. 120 ಅಂಕಗಳಿಗೆ ಮಲ್ಟಿಪಲ್ ಚಾಯ್ಸ್ ಪ್ರಶ್ನೆಪತ್ರಿಕೆ ಇರುತ್ತದೆ. ಪ್ರತಿ ವಿಷಯಕ್ಕೆ 40 ಅಂಕಗಳನ್ನು ನಿಗದಿ ಮಾಡುತ್ತೇವೆ. ಐಚ್ಛಿಕ ಭಾಷೆಗೆ ಒಂದು ಪೇಪರ್ ಸಿದ್ಧಪಡಿಸಿ ಪರೀಕ್ಷೆ ನಡೆಸುತ್ತೇವೆ. A+, A ಗ್ರೇಡ್ ಮಾದರಿಯಲ್ಲಿ ಫಲಿತಾಂಶ ನೀಡ್ತೇವೆ. ಜುಲೈ 3ನೇ ವಾರದಲ್ಲಿ ಪರೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದೆ.

20 ದಿನ ಮುಂಚಿತವಾಗಿ ಪರೀಕ್ಷೆ ದಿನಾಂಕ ಘೋಷಣೆಯಾಗಲಿದೆ. ಕೊವಿಡ್ ಕಾರಣದಿಂದ ಪರೀಕ್ಷೆ ಬರೆಯಲು ಆಗದಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಅವಕಾಶವಿದೆ. ಹೊಸ ಅಭ್ಯರ್ಥಿಗಳಾಗಿ ಪರೀಕ್ಷೆ ಬರೆಯಲು ಅವರಿಗೆ ಅವಕಾಶ ನೀಡಲಾಗುವುದು. 6 ಸಾವಿರ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುವುದು. ಈ ಬಾರಿ ದುಪ್ಪಟ್ಟು ಕೇಂದ್ರಗಳಲ್ಲಿ ಪರೀಕ್ಷೆ ಮಾಡುತ್ತೇವೆ. ಒಂದು ಕೊಠಡಿಯಲ್ಲಿ 10-12 ವಿದ್ಯಾರ್ಥಿಗಳನ್ನು ಮಾತ್ರ ಕೂರಿಸಿ ಪರೀಕ್ಷೆ ನಡೆಸುತ್ತೇವೆ. ಒಂದು ಡೆಸ್ಕ್‌ಗೆ ಒಬ್ಬ ವಿದ್ಯಾರ್ಥಿಯನ್ನು ಕೂರಿಸುತ್ತೇವೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡುತ್ತೇವೆ. ಎಲ್ಲರಿಗೂ N95 ಮಾಸ್ಕ್ ನೀಡುವುದಕ್ಕೆ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಸುರೇಶ್​ ಕುಮಾರ್ ತಿಳಿಸಿದ್ದಾರೆ.

ಮಾದರಿ ಪ್ರಶ್ನೆಪತ್ರಿಕೆ ಶಾಲೆಗಳಿಗೆ ಕಳಿಸಲು ವ್ಯವಸ್ಥೆ ಮಾಡಾಗುವುದು, ವೆಬ್‌ಸೈಟ್‌ನಲ್ಲೂ ಮಾದರಿ ಪ್ರಶ್ನೆಪತ್ರಿಕೆ ಹಾಕಲಾಗುವುದು. SSLCಯಲ್ಲಿ ಯಾರನ್ನೂ ಫೇಲ್ ಮಾಡುವುದಿಲ್ಲ. ಎಲ್ಲರಿಗೂ ಗ್ರೇಡಿಂಗ್ ನೀಡಿ ಪಾಸ್ ಮಾಡಲಾಗುವುದು. 120 ಅಂಕಗಳಿಗೆ ಮಲ್ಟಿಪಲ್ ಚಾಯ್ಸ್ ಪ್ರಶ್ನೆಪತ್ರಿಕೆ ಇರುತ್ತದೆ. ಪ್ರತಿ ವಿಷಯಕ್ಕೆ 40 ಅಂಕಗಳು ಇರುತ್ತದೆ. ಸರಳ, ನೇರವಾಗಿ ಪ್ರಶ್ನೆಪತ್ರಿಕೆ ಇರುತ್ತದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದ್ದಾರೆ.

(Suresh Kumar PC karnataka PUC exam 2021 cancelled  but sslc exam to be conducted declares education minister s suresh kumar in press meet)

ಇದನ್ನೂ ಓದಿ:

Suresh Kumar PC LIVE: ಎಸ್​ಎಸ್​​ಎಲ್​ಸಿ, ದ್ವಿತೀಯ ಪಿಯುಸಿ ಪರೀಕ್ಷೆ ರದ್ದತಿ ಬಗ್ಗೆ ಶಿಕ್ಷಣ ಸಚಿವ ಸುರೇಶ್​ ಕುಮಾರ್ ಸುದ್ದಿಗೋಷ್ಠಿ

Follow us on

Most Read Stories

Click on your DTH Provider to Add TV9 Kannada