ಲೇಟ್​ ಡೌನಿ ಕಾಯಿಲೆಗೆ ನಲುಗಿದ ರೈತರು; ಬೆಳೆದ ದ್ರಾಕ್ಷಿ ತೋಟವನ್ನು ಕಟಾವು ಮಾಡಿ, ತಿಪ್ಪೆಗೆ ಸುರಿದ ಚಿಕ್ಕಬಳ್ಳಾಪುರ ರೈತರು

ಲೇಟ್​ ಡೌನಿ ಕಾಯಿಲೆಗೆ ನಲುಗಿದ ರೈತರು; ಬೆಳೆದ ದ್ರಾಕ್ಷಿ ತೋಟವನ್ನು ಕಟಾವು ಮಾಡಿ, ತಿಪ್ಪೆಗೆ ಸುರಿದ ಚಿಕ್ಕಬಳ್ಳಾಪುರ ರೈತರು
ಬೆಳೆದ ದ್ರಾಕ್ಷಿ ತೋಟವನ್ನು ಕಟಾವು ಮಾಡಿ, ತಿಪ್ಪೆಗೆ ಸುರಿದ ಚಿಕ್ಕಬಳ್ಳಾಪುರ ರೈತರು

ಚಿಕ್ಕಬಳ್ಳಾಪುರ ತಾಲೂಕೊಂದರಲ್ಲಿ ನೂರಾರು ಎಕರೆ ದ್ರಾಕ್ಷಿಗೆ ಲೇಟ್ ಡೌನಿ ರೋಗ ಅಂಟಿದೆ. ಇದು ದ್ರಾಕ್ಷಿ ಗೊಂಚಲು ಹಾಗೂ ಬಳ್ಳಿಯ ಮೇಲೆ ಪರಿಣಾಮ ಬೀರಿದ್ದು, ಇದರಿಂದಾಗಿ ದ್ರಾಕ್ಷಿ ಗೊಂಚಲುಗಳು ಬಳ್ಳಿಯಲ್ಲೆ ಬತ್ತಿಹೋಗಿ ನೆಲಕ್ಕೆ ಉದುರುತ್ತಿವೆ. ಚಿಕ್ಕಬಳ್ಳಾಪುರದ ವಾಪಸಂದ್ರ ನಿವಾಸಿ ರೈತ ಮುನಿಯಪ್ಪಗೆ ಸೇರಿದ ಎರಡು ಎಕರೆ ದ್ರಾಕ್ಷಿ ತೋಟ ರೋಗದಿಂದ ದ್ರಾಕ್ಷಿ ಹಣ್ಣಾಗುವುದಕ್ಕೂ ಮುನ್ನವೆ ಬತ್ತಿ ನೆಲಕ್ಕೆ ಉದುರುತ್ತಿದೆ.

TV9kannada Web Team

| Edited By: preethi shettigar

Jun 04, 2021 | 10:08 AM

ಚಿಕ್ಕಬಳ್ಳಾಪುರ: ಕೊರೊನಾ ಪ್ರಾರಂಭವಾದ ದಿನದಿಂದಲೂ ರೈತರು ತಮ್ಮ ಬೆಳೆಗೆ ಸರಿಯಾದ ಬೆಲೆ ಸಿಗದೆ ಪರದಾಡುತ್ತಿದ್ದಾರೆ. ಅದರಲ್ಲೂ ಈ ಬಾರಿ ಮತ್ತೆ ಕೊರೊನಾ ಎರಡನೇ ಅಲೆ ಹಬ್ಬಿದ್ದು, ಹೊದ ವರ್ಷದ ಸಂಕಷ್ಟದಿಂದ ಹೊರ ಬರಲಾರದೆ, ಈ ವರ್ಷದ ನಷ್ಟವನ್ನು ಭರಿಸಲಾಗದೆ ರೈತರು ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನದಿ ನಾಲೆ ಹಳ್ಳ ಕೊಳ್ಳ ಸೇರಿದಂತೆ ಶಾಶ್ವತವಾದ ನೀರಿನ ಮೂಲಗಳು ಇಲ್ಲ. ಆದರೂ ಇಲ್ಲಿಯ ರೈತರು ಎರಡು ಸಾವಿರ ಅಡಿ ಪಾತಾಳದಿಂದ ನೀರು ತೆಗೆದು ಹನಿ ನೀರಿನಲ್ಲೆ ದ್ರಾಕ್ಷಿ ಬೆಳೆಯುತ್ತಿದ್ದಾರೆ. ಇನ್ನು ಈ ಬಾರಿ ಉತ್ತಮ ಫಸಲು ಬಂದಿದೆ. ಆದರೆ ಲಾಕ್​ಡೌನ್​ ಜೊತೆಗೆ ದ್ರಾಕ್ಷಿ ಬೆಳೆಗೆ ಕಾಯಿಲೆ ಆವರಿಸಿದ್ದು, ರೈತರು ತಾವು ಬೆಳೆದ ದ್ರಾಕ್ಷಿಯನ್ನು ಕಟಾವು ಮಾಡಿ ತಿಪ್ಪೆಗೆ ಸುರಿಯುತ್ತಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿ ಬರೋಬ್ಬರಿ ಮೂರು ಸಾವಿರ ಹೆಕ್ಟರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ದ್ರಾಕ್ಷಿ ಬೆಳೆಗೆ ಈಗ ಅನ್ ಸಿಜನ್. ಆದರು ಚಿಕ್ಕಬಳ್ಳಾಪುರದ ಬುದ್ಧಿವಂತ ರೈತರು, ಅನ್ ಸಿಜನ್​ನಲ್ಲೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ, ತುಂಬ ಜಾಣ್ಮೆಯಿಂದ ದ್ರಾಕ್ಷಿ ಬೆಳೆದು ನಾಲ್ಕು ಕಾಸು ಸಂಪಾದಿಸುತ್ತಿದ್ದರು. ಆದರೆ ಈ ಬಾರಿ ಕೊರೊನಾ ಲಾಕ್​ಡೌನ್​ನಿಂದ ದ್ರಾಕ್ಷಿಗೆ ಉತ್ತಮ ಬೆಲೆಯಿಲ್ಲ. ಸರಿ ಬಂದಷ್ಟು ದುಡ್ಡು ಬರಲಿ ಎಂದು ದ್ರಾಕ್ಷಿ ಬೆಳೆದ ರೈತರು ಅಂದುಕೊಳ್ಳುವಷ್ಟರಲ್ಲಿ ದ್ರಾಕ್ಷಿ ತೋಟಕ್ಕೆ ಲೇಟ್ ಡೌನಿ ಎನ್ನುವ ರೋಗ ಬಂದಿದೆ.

ಚಿಕ್ಕಬಳ್ಳಾಪುರ ತಾಲೂಕೊಂದರಲ್ಲಿ ನೂರಾರು ಎಕರೆ ದ್ರಾಕ್ಷಿಗೆ ಲೇಟ್ ಡೌನಿ ರೋಗ ಅಂಟಿದೆ. ಇದು ದ್ರಾಕ್ಷಿ ಗೊಂಚಲು ಹಾಗೂ ಬಳ್ಳಿಯ ಮೇಲೆ ಪರಿಣಾಮ ಬೀರಿದ್ದು, ಇದರಿಂದಾಗಿ ದ್ರಾಕ್ಷಿ ಗೊಂಚಲುಗಳು ಬಳ್ಳಿಯಲ್ಲೆ ಬತ್ತಿಹೋಗಿ ನೆಲಕ್ಕೆ ಉದುರುತ್ತಿವೆ. ಚಿಕ್ಕಬಳ್ಳಾಪುರದ ವಾಪಸಂದ್ರ ನಿವಾಸಿ ರೈತ ಮುನಿಯಪ್ಪಗೆ ಸೇರಿದ ಎರಡು ಎಕರೆ ದ್ರಾಕ್ಷಿ ತೋಟ ರೋಗದಿಂದ ದ್ರಾಕ್ಷಿ ಹಣ್ಣಾಗುವುದಕ್ಕೂ ಮುನ್ನವೆ ಬತ್ತಿ ನೆಲಕ್ಕೆ ಉದುರುತ್ತಿದೆ. ನಮ್ಮ ಕಷ್ಟಕ್ಕೆ ದಯಮಾಡಿ ಸರ್ಕಾರ ಸಹಕರಿಸಬೇಕು ಎಂದು ರೈತ ಮುನಿಯಪ್ಪ ಅಳಲು ತೋಡಿಕೊಂಡಿದ್ದಾರೆ.

ಈ ಬಾರಿಯ ವಾತಾವರಣ ವೈಪರಿತ್ಯ ಇದಕ್ಕೆಲ್ಲಾ ಕಾರಣ. ದ್ರಾಕ್ಷಿ ಬಳ್ಳಿಗೆ ಔಷಧ ಸಿಂಪಡಿಸಿದಾಗ ಮಳೆ ಆಗಿರುವುದು ಒಂದು ಕಾರಣವಾದರೆ. ಇನ್ನೊಂದು ಕಾರಣ ಈ ಬಾರಿ ಬೇಸಿಗೆಯಲ್ಲೂ ಮಂಜು ಸುರಿದಿತ್ತು, ಇದರಿಂದಾಗಿ ದ್ರಾಕ್ಷಿ ಗಿಡಗಳಿಗೆ ಅಗತ್ಯಕ್ಕಿಂತ ಹೆಚ್ಚಿಗೆ ತಂಪು ಆದ ಕಾರಣ. ಈ ರೀತಿಯ ವಿಚಿತ್ರ ಕಾಯಿಲೆ ಬರುತ್ತದೆ, ಪ್ರಾರಂಭದಲ್ಲೆ ನೋಡಿ ಔಷಧ ಸಿಂಪಡಿಸಿದರೆ ಲೇಟ್ ಡೌನಿ ಕಾಯಿಲೆ ಸರಿಪಡಿಸಬಹುದಿತ್ತು. ಆದರೆ ಈ ಹಂತದಲ್ಲಿ ಏನು ಮಾಡಲು ಆಗಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರೈತರಿಗೆ ವರ್ಷ ದೊಣ್ಣೆಗೆ ನಿಮಿಷ ಎನ್ನುವ ಹಾಗೆ ಆಗಿದ್ದು, ವರ್ಷವಿಡಿ ಕಷ್ಟಪಟ್ಟು, ಅನ್ ಸಿಜನ್​ನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ದ್ರಾಕ್ಷಿ ಬೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ರೈತರು ತಮ್ಮ ಕೈಯಾರೆ ಬೆಳೆದಿದ್ದ ದ್ರಾಕ್ಷಿಯನ್ನು ಈಗ ಕಟಾವು ಮಾಡಿ ತಿಪ್ಪೆಗೆ ಸುರಿಯುತ್ತಿರುವುದು ವಿಪರ್ಯಾಸವೆ ಸರಿ.

ಇದನ್ನೂ ಓದಿ:

ಲಾಕ್​ಡೌನ್​ ಎಫೆಕ್ಟ್: ಐದು ಎಕರೆ ಹಸಿ ಮೆಣಸಿನಕಾಯಿ ಬೆಳೆಯನ್ನು ಹಾಳು ಮಾಡಿದ ಹಾವೇರಿ ರೈತ

ಬಂಗಾರದಂಥ ಬೆಳೆಗೆ ಮಜ್ಜಿಗೆ ರೋಗದ ಕಾಟ: ಬೇಸತ್ತ ರೈತರಿಂದ ಮೆಣಸಿನಕಾಯಿ ಬೆಳೆ ನಾಶ..!

Follow us on

Related Stories

Most Read Stories

Click on your DTH Provider to Add TV9 Kannada