ಬೇಸಿಗೆಯಲ್ಲಿ ನೀರಿಗಿಳಿಯುವಾಗ ಈ ವಿಷಯಗಳ ಪಾಲನೆ ಮಾಡುವುದನ್ನು ಮರೆಯಬೇಡಿ
ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಈಜಾಡುವುದು ಒಳ್ಳೆಯ ಅಭ್ಯಾಸ. ಇದು ಆರೋಗ್ಯಕ್ಕೂ ಉಪಯುಕ್ತವಾಗಿದೆ. ಪ್ರತಿನಿತ್ಯ ಈಜುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದಾಗಿದೆ. ಇದು ನಿದ್ರಾಹೀನತೆ, ಒತ್ತಡ ಮತ್ತು ಅಧಿಕ ತೂಕದಂತಹ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರವಾಗಿದೆ. ಆದರೆ ಬೇಸಿಗೆಯಲ್ಲಿ ಈಜಲು ಹೋಗುವವರು ಕೆಲವು ಸಲಹೆಗಳನ್ನು ಅನುಸರಿಸಬೇಕಾಗುತ್ತದೆ. ಇಲ್ಲವಾದಲ್ಲಿ ಇದು ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಬೇಸಿಗೆಯ ಶಾಖ (Summer heat) ಯಾರನ್ನೇ ಆಗಲಿ ಹೈರಾಣ ಮಾಡಿಸಿ ಬಿಡುತ್ತದೆ. ಇದರಿಂದ ಮುಕ್ತಿ ಪಡೆಯಲು ಜನ ನಾನಾ ರೀತಿಯ ಮಾರ್ಗಗಳನ್ನು ಹುಡುಕುತ್ತಾರೆ. ಅದರಲ್ಲಿ ಈಜುವುದು ಒಂದಾಗಿದೆ. ಸಾಮಾನ್ಯವಾಗಿ ಬಿಸಿಲಿನ ಝಳದಿಂದ ಪಾರಾಗುವುದರ ಜೊತೆಗೆ ದೇಹವನ್ನು ತಂಪಾಗಿಟ್ಟುಕೊಳ್ಳಲು ಜನರು ಈಜುತ್ತಾರೆ. ಇದು ಕೇವಲ ಬೇಸಿಗೆಯ ಶಾಖದಿಂದ ಮುಕ್ತಿ ನೀಡುವ ದಾರಿಯಲ್ಲ ಬದಲಾಗಿ ಇದೊಂದು ರೀತಿಯ ಆರೋಗ್ಯಕರ ಅಭ್ಯಾಸವಾಗಿದೆ. ಇದು ನಮ್ಮ ದೇಹಕ್ಕೆ ತುಂಬಾ ಒಳ್ಳೆಯ ವ್ಯಾಯಾಮವಾಗಿದೆ. ಆದರೆ ಬೇಸಿಗೆ ಸಮಯದಲ್ಲಿ ನೀರಿಗೆ ಇಳಿಯುವವರು ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಂಡಿರಬೇಕಾಗುತ್ತದೆ. ಏನದು? ಇಲ್ಲಿದೆ ಮಾಹಿತಿ.
ಬೇಸಿಗೆಯಲ್ಲಿ ಸೂರ್ಯನಿಂದ ಬರುವ ಶಾಖ ತೀವ್ರಗೊಂಡಾಗ ನಮ್ಮ ದೇಹವನ್ನು ತಂಪಾಗಿಸಲು ಈಜು ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ನೀವು ನೀರಿನಲ್ಲಿ ಸ್ವಲ್ಪ ಸಮಯ ಕಳೆಯುವುದರಿಂದ ಬಿಸಿಲಿನ ಕಾವು ಕಡಿಮೆಯಾಗುತ್ತದೆ. ಇದು ನಿಮಗೆ ಬಿಸಿಲ ಧಗೆಯಿಂದ ಪಾರಾಗಲು ತಕ್ಷಣದ ಪರಿಹಾರವಾಗಿದೆ. ಇದು ಕೇವಲ ದೇಹಕ್ಕೆ ತಂಪು ನೀಡುವುದು ಮಾತ್ರವಲ್ಲ ಬದಲಾಗಿ ಅಸ್ತಮಾ ಮತ್ತು ನಿರ್ಜಲೀಕರಣದಂತಹ ಸಮಸ್ಯೆಗಳಿಂದಲೂ ಮುಕ್ತಿ ನೀಡುತ್ತದೆ. ಹಾಗಾಗಿ ಈಜುವುದನ್ನು ಸಮಗ್ರ ದೇಹಕ್ಕೆ ನೀಡುವ ವ್ಯಾಯಾಮವೆಂದು ಪರಿಗಣಿಸಲಾಗುತ್ತದೆ. ಈಜುವಾಗ, ಕೈಗಳು, ಕಾಲುಗಳು ಮತ್ತು ಕುತ್ತಿಗೆಯ ಪ್ರತಿಯೊಂದು ಭಾಗವು ಚಲಿಸುತ್ತದೆ. ಇದು ಸ್ನಾಯುಗಳ ಬಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೃದಯ ಮತ್ತು ಶ್ವಾಸಕೋಶಗಳ ಆರೋಗ್ಯವೂ ಚೆನ್ನಾಗಿರುತ್ತದೆ.
ಇದನ್ನೂ ಓದಿ: ಗರ್ಭದಲ್ಲಿರುವ ಮಗು ಸ್ಮಾರ್ಟ್ ಆಗಲು ಏನು ಮಾಡಬೇಕು ಗೊತ್ತಾ?
ಆಯಾಸ, ಆತಂಕವನ್ನು ಕಡಿಮೆ ಮಾಡುತ್ತದೆ:
ನಿರಂತರ ಕೆಲಸದ ಒತ್ತಡದಿಂದ ಬಳಲುತ್ತಿರುವವರಿಗೆ ಈಜು ಉತ್ತಮ ಚಿಕಿತ್ಸೆಯಾಗಿದೆ. ನೀರಿನಲ್ಲಿ ಕಳೆಯುವ ಸಮಯವು ಮನಸ್ಸನ್ನು ಹಗುರವಾಗಿಸುತ್ತದೆ. ಇದು ಆಯಾಸ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಕೆಲಸ ಮಾಡಿ ದಣಿದವರಿಗೆ ಇದು ಉತ್ತಮ ಪರಿಹಾರವಾಗಿದೆ.
ತೆಳ್ಳಗಾಗಲು ಸಹಾಯ ಮಾಡುತ್ತದೆ:
ತೂಕ ಇಳಿಸಿಕೊಳ್ಳಲು ಬಯಸುವವರು ಈಜನ್ನು ಆಯ್ಕೆ ಮಾಡಬಹುದು. ಏಕೆಂದರೆ ಈಜು ಕ್ಯಾಲೊರಿಗಳನ್ನು ಬೇಗ ಸುಡುತ್ತದೆ. ಜೊತೆಗೆ ಇದು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಹಾಗಾಗಿ ಈ ರೀತಿಯ ಅಭ್ಯಾಸ ದೇಹದ ಆಕಾರವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ನಿದ್ರಾಹೀನತೆ ಸಮಸ್ಯೆಗೆ ಉತ್ತಮ ಮದ್ದು:
ಬೇಸಿಗೆಯಲ್ಲಿ, ಹೆಚ್ಚಿನವರಿಗೆ ನಿದ್ರೆ ಚೆನ್ನಾಗಿ ಮಾಡಲು ಸಾಧ್ಯವಾಗುವುದಿಲ್ಲ. ಅಂತವರು ಪ್ರತಿದಿನ ಸಂಜೆ ಸಮಯದಲ್ಲಿ ನೀರಿನಲ್ಲಿ ಈಜಾಡುವುದರಿಂದ, ದೇಹ ದಣಿಯುತ್ತದೆ. ಹಾಗಾಗಿ ರಾತ್ರಿ ನಿದ್ರೆ ಚೆನ್ನಾಗಿ ಬರುವುದರಿಂದ ನಿದ್ರಾಹೀನತೆಗೆ ನೈಸರ್ಗಿಕ ಚಿಕಿತ್ಸೆಯಾಗಿದೆ.
ಆತ್ಮವಿಶ್ವಾಸ ಹೆಚ್ಚಾಗುತ್ತದೆ:
ಈಜುವುದು ನಮ್ಮ ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತದೆ. ನೀರಿನಲ್ಲಿ ಈಜುವುದು ನಮ್ಮ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡುತ್ತದೆ. ಈ ಅಭ್ಯಾಸ ವಿಶೇಷವಾಗಿ ಮಕ್ಕಳು ಮತ್ತು ಯುವಕರಿಗೆ ಬಹಳ ಉಪಯುಕ್ತವಾಗಿದೆ.
ಈಜುವಾಗ ಯಾವ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?
ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಬಹಳ ತೀವ್ರವಾಗಿರುವ ಬಿಸಿಲಿರುತ್ತದೆ. ಈ ಸಮಯದಲ್ಲಿ ನೀವು ಈಜಲು ಹೋಗುತ್ತಿದ್ದರೆ ನೀವು ಸನ್ಸ್ಕ್ರೀನ್ ಬಳಸಬೇಕು. ಇದು ಹಾನಿಕಾರಕ ನೇರಳಾತೀತ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಜೊತೆಗೆ ನೀವು ಈಜುವ ಕೊಳವು ಸ್ವಚ್ಛವಾಗಿರಬೇಕು. ನೀರಿನಲ್ಲಿ ಸರಿಯಾದ ಪ್ರಮಾಣದ ಕ್ಲೋರಿನ್ ಇಲ್ಲದಿದ್ದರೆ ಚರ್ಮದ ಸಮಸ್ಯೆಗಳು ಉಂಟಾಗಬಹುದು. ಚರ್ಮದ ಮೇಲೆ ದದ್ದುಗಳು ಮತ್ತು ಅಲರ್ಜಿಗಳು ಉಂಟಾಗಬಹುದು. ಅದಕ್ಕಾಗಿ ಸ್ವಚ್ಛವಾಗಿರುವ ಕೊಳಗಳನ್ನು ಆಯ್ಕೆ ಮಾಡಬೇಕು. ಇದೆಲ್ಲದರ ಜೊತೆಗೆ ಈಜುವುದಕ್ಕೆ ಹೋಗುವಾಗ ಸರಿಯಾಗಿ ನೀರು ಕುಡಿಯುವುದನ್ನು ಮರೆಯಬೇಡಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ