ಈ ಮೂರು ಪದಾರ್ಥ ಅಡುಗೆಯಲ್ಲಿ ಬಳಸಿದರೆ ಗ್ಯಾಸ್ಟ್ರಿಕ್ ಸಮಸ್ಯೆ ಬರಲ್ಲ
ಸಾಮಾನ್ಯವಾಗಿ ಕೆಲವರಿಗೆ ಜೀರ್ಣಶಕ್ತಿಯ ಕೊರತೆ ಇರುತ್ತದೆ. ಅಂತವರಿಗೆ ಎಲ್ಲಾ ರೀತಿಯ ಆಹಾರಗಳನ್ನು ತಿನ್ನುವುದಕ್ಕೆ ಇಷ್ಟವಿದ್ದರೂ ತಿನ್ನಲು ಸಾಧ್ಯವಾಗುವುದಿಲ್ಲ. ಆದರೆ ಗ್ಯಾಸ್ಟ್ರಿಕ್, ಅಜೀರ್ಣತೆಯನ್ನು ತಡೆಯಲು ನಮ್ಮ ಅಡುಗೆ ಮನೆಗಳಲ್ಲಿಯೇ ಔಷಧವಿದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು. ಕೇವಲ ಮೂರು ಪದಾರ್ಥಗಳನ್ನು ಬಳಕೆ ಮಾಡುವ ಮೂಲಕ ಇಂತಹ ಸಮಸ್ಯೆಗೆ ಮುಕ್ತಿ ನೀಡಬಹುದು. ಹಾಗಾದರೆ ಆ ಮೂರು ಪದಾರ್ಥಗಳು ಯಾವವು ಎಂಬುದನ್ನು ತಿಳಿದುಕೊಳ್ಳಿ.

ಖರೀದ ಆಹಾರ ಯಾರಿಗೆ ತಾನೇ ಇಷ್ಟ ಇರುವುದಿಲ್ಲ ಹೇಳಿ? ಆದರೆ ಅದನ್ನು ತಿಂದ ಬಳಿಕ ಕಂಡುಬರುವಂತಹ ಸಮಸ್ಯೆ ಸಾಕಷ್ಟಿದೆ. ಹಾಗಾದರೆ ಅದನ್ನು ತಿನ್ನುವುದನ್ನು ಬಿಡಬೇಕೇ ಎಂಬ ಗೊಂದಲ ಆರಂಭವಾಗಬಹುದು. ಈ ರೀತಿ ಸಮಸ್ಯೆಗಳಾಗುತ್ತಿದ್ದಾಗ ನಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಕೆಲವರಿಗೆ ಜೀರ್ಣಶಕ್ತಿಯ ಕೊರತೆ (Indigestion), ಗ್ಯಾಸ್ಟ್ರಿಕ್ ಸಮಸ್ಯೆ ಇರುತ್ತದೆ ಅಂತವರು ಯಾವುದೇ ರೀತಿಯ ಖರೀದ ಆಹಾರ, ಬಟಾಟೆ, ಬಟಾಣಿ, ಬದನೇಕಾಯಿ ಈ ರೀತಿ ಕೆಲವು ಆಹಾರ ತಿಂದಾಗ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಇನ್ನು ಕೆಲವರಿಗೆ ಕೆಲವು ವಿಟಮಿನ್ ಕೊರತೆಯಿಂದಾಗಿ ಆಹಾರ ತಿಂದಾಗ ಅಲ್ಲಲ್ಲಿ ಹಿಡಿದ ಅನುಭವ ಆಗುತ್ತದೆ ಇದನ್ನು ಆಡು ಭಾಷೆಯಲ್ಲಿ ಕಸು ಎನ್ನುತ್ತಾರೆ. ಈ ರೀತಿ ಆರೋಗ್ಯ ಸಮಸ್ಯೆಗಳಾಗುವುದು ಕೆಲವು ತರಕಾರಿ ಅಥವಾ ಎಣ್ಣೆಯಲ್ಲಿ ಖರೀದ ಆಹಾರಗಳಿಂದಾಗಿದೆ. ಇಂತಹ ಸಮಸ್ಯೆಯನ್ನು ತಡೆಯಲು ಆಹಾರದಲ್ಲಿ ಬೆಳ್ಳುಳ್ಳಿ, ಜೀರಿಗೆ, ಕರಿಮೆಣಸನ್ನು ಸೇರಿಸಿಕೊಳ್ಳಿ. ಈ ರೀತಿ ಮಾಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ (gastric issues) ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.
ಬೆಳ್ಳುಳ್ಳಿ, ಜೀರಿಗೆ, ಕರಿಮೆಣಸಿನಲ್ಲಿದೆ ಆರೋಗ್ಯದ ಗುಟ್ಟು
ಬಟಾಟೆ ಸಾಂಬಾರ್ ಮಾಡಿ ತಿನ್ನಬೇಕು ಅನಿಸುತ್ತಾ? ಬಟಾಣಿ ಪಲ್ಯ ಮಾಡಬೇಕು ಅನಿಸುತ್ತಾ? ಇವೆಲ್ಲಾ ತಿಂದರೆ ಗ್ಯಾಸ್ಟ್ರಿಕ್ ಆಗುತ್ತೆ ಅಂತ ಭಯ ಇದ್ಯಾ? ಚಿಂತೆ ಬೇಡ. ನಿಮ್ಮ ಆಹಾರದಲ್ಲಿ ಬೆಳ್ಳುಳ್ಳಿ, ಜೀರಿಗೆ, ಕರಿಮೆಣಸನ್ನು ಸೇರಿಸಿಕೊಳ್ಳಿ. ಇವುಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಚೆನ್ನಾಗಿ ಜಜ್ಜಿ ಆ ಬಳಿಕ ನೀವು ಸೇವನೆ ಮಾಡುವ ಆಹಾರದಲ್ಲಿ ಬಳಕೆ ಮಾಡಿ ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಬರುವುದಿಲ್ಲ. ಈ ಮೂರರಲ್ಲಿಯೂ ಜೀರ್ಣಶಕ್ತಿಯನ್ನು ಹೆಚ್ಚಿಸುವ ಶಕ್ತಿ ಇದ್ದು, ನೀವು ತಿಂದ ಆಹಾರ ಸರಿಯಾಗಿ ಜೀರ್ಣವಾಗಲು ಇದು ಸಹಾಯ ಮಾಡುತ್ತದೆ. ಜೊತೆಗೆ ಹೊಟ್ಟೆ ಉಬ್ಬರ, ಅಜೀರ್ಣತೆ, ವಾಕರಿಕೆ, ಸಣ್ಣ ಸಣ್ಣ ನೋವುಗಳನ್ನು ಕೂಡ ಶಮನ ಮಾಡುವಂತಹ ಶಕ್ತಿಯನ್ನು ಹೊಂದಿದೆ.
ಇದನ್ನೂ ಓದಿ: ಐವಿಎಫ್ ನಲ್ಲಿ ಎಐ ಕೈಚಳಕ! ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
ಇಂಗು ಒಳ್ಳೆಯದಲ್ಲವೇ?
ಆಹಾರದ ರುಚಿಯನ್ನು ಹೆಚ್ಚಿಸಲು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ, ಅಜೀರ್ಣತೆಯನ್ನು ತಡೆಯಲು ಇಂಗನ್ನು ಬಳಕೆ ಮಾಡಲಾಗುತ್ತದೆ. ಆದರೆ ಕೆಲವರಿಗೆ ಇಂಗು ಆಗಿಬರುವುದಿಲ್ಲ. ಕಿಡ್ನಿಯಲ್ಲಿ ಕಲ್ಲುಗಳಾಗಿದ್ದರೆ ಅಂತವರಿಗೆ ಇಂಗಿನ ಸೇವನೆ ಮಾಡಬಾರದು ಎಂದು ನಾಟಿ ವೈದ್ಯರು ಹೇಳುತ್ತಾರೆ. ಹಾಗಾಗಿ ಇಂಗು ಎಲ್ಲಾ ಸಮಯದಲ್ಲಿಯೂ ಒಳ್ಳೆಯದಲ್ಲ. ಆದರೆ ಬೆಳ್ಳುಳ್ಳಿ, ಜೀರಿಗೆ, ಕರಿಮೆಣಸು ಹಾಗಲ್ಲ ಇದನ್ನು ಚಿಕ್ಕವರಿಂದ, ವಯಸ್ಸಾದವರ ವರೆಗೆ ಯಾರೂ ಬೇಕಾದರೂ ಸೇವನೆ ಮಾಡಬಹುದು. ಬೆಳ್ಳುಳ್ಳಿ ಸೇವನೆ ಮಾಡದವರು ಶುಂಠಿ ಮತ್ತು ಸ್ವಲ್ಪ ಅರಿಶಿನ ಸೇರಿಸಿ ಅಡುಗೆಯಲ್ಲಿ ಬಳಕೆ ಮಾಡಬಹುದು. ಇದರಿಂದ ಮಲಬದ್ಧತೆಯ ಸಮಸ್ಯೆ, ಅಜೀರ್ಣತೆ ಸೇರಿದಂತೆ ಹೊಟ್ಟೆಗೆ ಸಂಬಂಧಿಸಿದ ಖಾಯಿಲೆಗಳು ನಿವಾರಣೆಯಾಗುತ್ತದೆ. ಮನೆಯಲ್ಲಿ ಸಿಗುವ ಇಂತಹ ಪದಾರ್ಥಗಳು ನಮ್ಮ ಆರೋಗ್ಯ ಕಾಪಾಡಬಹುದು ಹಾಗಾಗಿ ಸಣ್ಣ ಸಣ್ಣದಕ್ಕೂ ಮಾತ್ರೆಗಳ ಮೊರೆ ಹೋಗುವ ಬದಲು ಆಹಾರದಲ್ಲಿಯೇ ಕೆಲವು ಬದಲಾವಣೆ ಮಾಡುವ ಮೂಲಕ ಪದೇ ಪದೇ ಕಾಡುವ ಅನಾರೋಗ್ಯ ಸಮಸ್ಯೆಗಳಿಂದ ದೂರವಿರಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:39 pm, Mon, 14 April 25