ಐವಿಎಫ್ ನಲ್ಲಿ ಎಐ ಕೈಚಳಕ! ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
ಎಐ ಬಂದು ಮಾನವನ ಕೆಲಸಗಳನ್ನು ಸುಲಭ ಮತ್ತು ಸರಳವಾಗಿಸಿದ್ದು ಸುಳ್ಳಲ್ಲ. ಆದರೆ ಈಗ ಇದೆ ಎಐ ವೈದ್ಯಕೀಯ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದ್ದು ಐವಿಎಫ್ ವ್ಯವಸ್ಥೆಯನ್ನು ಬಳಸಿಕೊಳ್ಳುವ ಮೂಲಕ, ಎಐ ಸಹಾಯದಿಂದ ಮಗುವೊಂದು ಜನಿಸಿದೆ. ಮಾನವ ಹಸ್ತಕ್ಷೇಪವಿಲ್ಲದೆಯೇ ರಿಮೋಟ್ ಡಿಜಿಟಲ್ ಕಂಟ್ರೋಲ್ (ICSI) ಮೂಲಕವೇ ಎಲ್ಲಾ ಹಂತಗಳನ್ನು ಪೂರೈಸಿದ್ದು 40 ವರ್ಷದ ತಾಯಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಎಐ (AI) ಅಥವಾ ಕೃತಕ ಬುದ್ಧಿಮತ್ತೆ ಬಂದ ಮೇಲೆ ಮನುಷ್ಯನ ಹಲವು ಕೆಲಸಗಳು ಬಹಳ ಸುಲಭವಾಗಿ ಬಿಟ್ಟಿದೆ. ಈಗ ಇದು ವೈದ್ಯಕೀಯ ಕ್ಷೇತ್ರವನ್ನು ಬಿಟ್ಟಿಲ್ಲ ಎಂದರೆ ನಂಬುತ್ತೀರಾ? ಹೌದು. ನೀವು ಐವಿಎಫ್ (IVF) ಬಗ್ಗೆ ಕೇಳಿರಬಹುದು. ಇತ್ತೀಚಿನ ದಿನಗಳಲ್ಲಿ ಐವಿಎಫ್ ಮಾಡಿಸಿಕೊಳ್ಳುವವರ ಸಂಖ್ಯೆ ಬಹಳ ಹೆಚ್ಚಾಗಿರುವುದರಿಂದ ಈ ಹೆಸರನ್ನು ಸಾಮಾನ್ಯವಾಗಿ ಕೇಳಿರುತ್ತಾರೆ. ಆದರೆ ಮೊಟ್ಟ ಮೊದಲ ಬಾರಿಗೆ ಈ ಐವಿಎಫ್ ವ್ಯವಸ್ಥೆಯನ್ನು ಬಳಸಿಕೊಳ್ಳುವ ಮೂಲಕ, ಎಐ ಸಹಾಯ ಪಡೆದುಕೊಂಡು ಮಗುವೊಂದು ಜನಿಸಿದೆ. ಇದನ್ನು ಕೇಳಿದಾಗ ಕೆಲವರಿಗೆ ಬಹಳ ಆಶ್ಚರ್ಯವಾಗಬಹುದು. ಇದೆಲ್ಲಾ ಹೇಗೆ ಸಾಧ್ಯ? ಎಐ ಬಳಸಿಕೊಂಡು ಮಗುವಿಗೆ ಜನ್ಮ ನೀಡಲು ಹೇಗೆ ಸಾಧ್ಯ? ಹೀಗೆ ನಾನಾ ರೀತಿಯ ಪ್ರಶ್ನೆಗಳು ಸಾಮಾನ್ಯವಾಗಿ ಹುಟ್ಟುಕೊಂಡಿರಬಹುದು. ಇಂತಹ ಗೊಂದಲಗಳಿಗೆ ಉತ್ತರ ಇಲ್ಲಿದೆ.
ಐವಿಎಫ್ ನಲ್ಲಿ ಎಐ ಹೇಗೆ ಸಹಾಯ ಮಾಡಿತ್ತು;
ಸಾಮಾನ್ಯವಾಗಿ ಐವಿಎಫ್ ನಲ್ಲಿ ಐಸಿಎಸ್ಐ ಎಂಬ ಸಾಂಪ್ರದಾಯಿಕ ಹಸ್ತಚಾಲಿತ ವಿಧಾನವನ್ನು ಬಳಕೆ ಮಾಡಲಾಗುತ್ತದೆ. ಇದನ್ನು 1990 ರ ದಶಕದಿಂದಲೂ ಮಾಡಲಾಗುತ್ತಿದೆ. ಆದರೆ ಈ ಐವಿಎಫ್ ವಿಧಾನದಲ್ಲಿ ಎಐ ಬಳಕೆ ಮಾಡಿದಾಗ ಯಾವುದೇ ರೀತಿಯಲ್ಲಿಯೂ ಮಾನವ ಹಸ್ತಕ್ಷೇಪ ಮಾಡುವ ಅಗತ್ಯವಿರುವುದಿಲ್ಲ ಅಂದರೆ ಇಂಟ್ರಾಸೈಟೋಪ್ಲಾಸ್ಮಿಕ್ ವೀರ್ಯ ಇಂಜೆಕ್ಷನ್ (ಐಸಿಎಸ್ಐ), ವೀರ್ಯ ಆಯ್ಕೆ, ನಿಶ್ಚಲತೆ ಸೇರಿದಂತೆ ಎಲ್ಲಾ 23 ಹಂತಗಳನ್ನು ಕೂಡ ರಿಮೋಟ್ ಡಿಜಿಟಲ್ ಕಂಟ್ರೋಲ್ (ICSI) ಮೂಲಕವೇ ಪೂರ್ಣಗೊಳಿಸಿದ್ದು 40 ವರ್ಷದ ತಾಯಿಗೆ ಐವಿಎಫ್ ನಲ್ಲಿ ಎಐ ಬಳಕೆ ಮಾಡಿದ, ನ್ಯೂಯಾರ್ಕ್ ಮತ್ತು ಮೆಕ್ಸಿಕೊದ ಕನ್ಸೀವಬಲ್ ಲೈಫ್ ಸೈನ್ಸಸ್ನ ವೈದ್ಯಕೀಯ ತಂಡ ಯಶಸ್ವಿಯಾಗಿದೆ. ಈ ರೀತಿಯಾಗಿ ಗ್ವಾಡಲಜಾರಾದ ಹೋಪ್ ಐವಿಎಫ್ ಮೆಕ್ಸಿಕೊದಲ್ಲಿ ಎಐ ಸಹಾಯದಿಂದ ಗಂಡು ಮಗು ಜನಿಸಿದೆ.
ಇದನ್ನೂ ಓದಿ: ಈ ಕಾರಣಕ್ಕೆ ನಿಮಗೆ ಮಕ್ಕಳಾಗುತ್ತಿಲ್ಲ, ಇದನ್ನು ಸಂಪೂರ್ಣ ಬಿಟ್ಟುಬಿಡಿ
ಸಾಮಾನ್ಯವಾಗಿ ಐವಿಎಫ್ ನಲ್ಲಿ ಬಹು ಭ್ರೂಣಗಳನ್ನು ಸಂಗ್ರಹಿಸಿ ಇಡಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಅವುಗಳಲ್ಲಿ ಆರೋಗ್ಯಕರ ಮತ್ತು ಯಶಸ್ವಿ ಗರ್ಭಧಾರಣೆಗೆ ಸೂಕ್ತವಾಗಿರುವಂತಹ ಭ್ರೂಣವನ್ನು ಆಯ್ಕೆ ಮಾಡುವುದು ಸುಲಭವಲ್ಲ. ಆದರೆ ಎಐ ಸಹಾಯದಿಂದ ಇದು ಸುಲಭವಾಗಿದೆ. ಹೇಗೆಂದರೆ ಎಐ ಅಲ್ಗಾರಿದಮ್ ಸೂಕ್ಷ್ಮದರ್ಶಕ ಚಿತ್ರಗಳನ್ನು ವಿಶ್ಲೇಷಿಸುವ ಮೂಲಕ ಫಲವತ್ತಾದ ವೀರ್ಯವನ್ನು ಆಯ್ಕೆ ಮಾಡಿ ಬಳಿಕ ಅದನ್ನು ದಾನಿಯ ಎಗ್ ಗೆ ಇಂಜೆಕ್ಟ್ ಮಾಡುತ್ತದೆ. ಈ ರೀತಿ ಮಾಡುವುದರಿಂದ ಆರೋಗ್ಯಕರ ಭ್ರೂಣ ಸಿಗುತ್ತದೆ. ಈ ಪ್ರಕರಣದಲ್ಲಿಯೂ ಎಐ ಫಲವತ್ತಾದ ವೀರ್ಯವನ್ನು ಆಯ್ಕೆ ಮಾಡುವ ಮೂಲಕ ಭ್ರೂಣ ವರ್ಗಾವಣೆ ನಡೆದಿದ್ದು, ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಹಾಗಾಗಿ ಐವಿಎಫ್ ಕ್ಷೇತ್ರಕ್ಕೆ ಎಐ ಲಗ್ಗೆ ಇಟ್ಟಿರುವುದರಿಂದ ಮುಂದಿನ ದಿನಗಳಲ್ಲಿ ಯಾವ ರೀತಿಯ ಆವಿಷ್ಕಾರಗಳು ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಜೊತೆಗೆ ಈ ವಿಷಯವಾಗಿಯೂ ಹಲವು ಅಧ್ಯಯನಗಳು ನಡೆಯಬೇಕಾಗಿದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ