ಮೊಟ್ಟೆ ದರ ಏರಿಕೆಯಿಂದ ಕಂಗೆಟ್ಟ ಸರ್ಕಾರಿ ಶಾಲೆ ಶಿಕ್ಷಕರು: ಹೆಚ್ಚುವರಿ ಹಣಕ್ಕೆ ಶಿಕ್ಷಕರ ಜೇಬಿಗೇ ಕತ್ತರಿ!
ರಾಜ್ಯದಲ್ಲಿ ಮೊಟ್ಟೆಯ ದರ ಹೆಚ್ಚಳವಾಗಿರುವುದು ಸರ್ಕಾರಿ ಶಾಲೆಯ ಶಿಕ್ಷಕರ ಸಂಕಷ್ಟಕ್ಕೆ ಕಾರಣವಾಗಿದೆ. ಯಾಕೆಂದರೆ ಪ್ರತಿಯೊಂದು ಮೊಟ್ಟೆಯ ಖರೀದಿಗೂ ಇಂತಿಷ್ಟೇ ದರ ಎಂದು ಸರ್ಕಾರ ನಿಗದಿಪಡಿಸಿದೆ. ಆದರೆ, ಹೆಚ್ಚಿನ ದರವನ್ನು ಶಾಲೆಯ ಮುಖ್ಯೋಪಾಧ್ಯಾಯರೇ ಭರಿಸಬೇಕಾದ ಸ್ಥಿತಿ ಬಂದೊದಗಿದೆ. ಹೀಗಾಗಿ ಸರ್ಕಾರದ ವಿರುದ್ಧ ಅಸಮಾಧಾನವೂ ವ್ಯಕ್ತವಾಗಿದೆ.
ಬೆಂಗಳೂರು, ಜನವರಿ 2: ಮೊಟ್ಟೆ ದರ ಏರಿಕೆಯಿಂದಾಗಿ ಕರ್ನಾಟಕದ ಸರ್ಕಾರಿ ಶಾಲೆ ಶಿಕ್ಷಕರು ಪರದಾಡುವಂತೆ ಆಗಿದೆ. ರಾಜ್ಯ ಸರ್ಕಾರದ ವತಿಯಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದ್ದು, ಇದಕ್ಕಾಗಿ ನಿರ್ದಿಷ್ಟ ದರ ನಿಗದಿಪಡಿಸಲಾಗಿದೆ. ಆದರೆ ಇದೀಗ ಮೊಟ್ಟೆ ದರ ಹೆಚ್ಚಾಗಿರುವುದರಿದ, ಆ ಹೆಚ್ಚುವರಿದರವನ್ನು ಶಿಕ್ಷಕರೇ ಭರಿಸಬೇಕಾದ ಪರಿಸ್ಥಿತಿ ಇದೆ. ಇದು ಸರ್ಕಾರಿ ಶಾಲೆ ಶಿಕ್ಷಕರ ಸಂಕಷ್ಟಕ್ಕೆ ಕಾರಣವಾಗಿದೆ.
ಈ ಹಿಂದೆ ಮೊಟ್ಟೆಯ ದರ 5.30 ರೂಪಾಯಿಯಷ್ಟಿದ್ದರೆ ಕಳೆದ ಮೂರು ನಾಲ್ಕು ತಿಂಗಳುಗಳಲ್ಲಿ 6 ರೂಪಾಯಿಯಿಂದ 6.80 ರೂಪಾಯಿ ವರೆಗೆ ಏರಿಕೆಯಾಗಿದೆ. ಆದರೆ ಶಾಲಾ ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗೆ ಪ್ರತಿ ಮೊಟ್ಟೆ ಖರೀದಿಗೆ 6 ರೂಪಾಯಿ ದರ ನಿಗದಿ ಮಾಡಿದೆ. ಹೀಗಾಗಿ ಇದಕ್ಕಿಂತ ಹೆಚ್ಚಿನ ಬೆಲೆ ತೆತ್ತು ಮೊಟ್ಟೆ ಖರೀದಿಸುವುದಾದಲ್ಲಿ ಆ ಹೆಚ್ಚುವರಿ ದರವನ್ನು ಶಾಲಾ ಮುಖ್ಯೋಪಾಧ್ಯಾಯರು ನೀಡಬೇಕಾಗುತ್ತದೆ.
ಮೊಟ್ಟೆ ಬೇಯಿಸಲು ಬೇಕಿದೆ ಹೆಚ್ಚುವರಿ ಹಣ
ಇಷ್ಟೇ ಅಲ್ಲದೆ, ಮೊಟ್ಟೆ ಬೇಯಿಸುವುದಕ್ಕೆ ಕೂಡ ಹೆಚ್ಚು ಹಣ ಖರ್ಚಾಗುತ್ತದೆ. ಹೀಗಾಗಿ ಮೊಟ್ಟೆ ಖರೀದಿಸಲಾಗದೆ ಸರ್ಕಾರಿ ಶಾಲೆ ಶಿಕ್ಷಕರು ಸಂಕಷ್ಟಕ್ಕೆ ಸಿಕ್ಕಿದ್ದಾರೆ. ಹಲವೆಡೆ ಮೊಟ್ಟೆ ಖರೀದಿಗಾಗಿ ಶಿಕ್ಷಕರು ದಾನಿಗಳ ಮೊರೆ ಹೋಗುತ್ತಿದ್ದಾರೆ.
ಶಾಲೆಗಳಿಗೆ ಮೊಟ್ಟೆ ಪೂರೈಕೆಯಲ್ಲಿಯೂ ಇದೆ ಸಮಸ್ಯೆ
ಈ ಹಿಂದೆ ಶಿಕ್ಷಣ ಇಲಾಖೆ ವಾರದಲ್ಲಿ ಎರಡು ದಿನಗಳು ಮಾತ್ರ ಮೊಟ್ಟೆ ವಿತರಣೆ ಮಾಡುತ್ತಿತ್ತು. ಆದರೆ ಇತ್ತೀಚೆಗೆ ಅಜೀಂ ಪ್ರೇಮ್ ಜಿ ಫೌಂಡೇಶನ್ ಜೊತೆ ಒಪ್ಪಂದ ಮಾಡಿಕೊಂಡು ವಾರದಲ್ಲಿ ಆರು ದಿನಗಳ ಕಾಲ ಮೊಟ್ಟೆ ನೀಡುತ್ತಿದೆ. ಅಜೀಂ ಪ್ರೇಮ್ ಜಿ ಫೌಂಡೇಶನ್ ನಿಂದ 1500 ಕೋಟಿ ರೂಪಾಯಿ ಅನುದಾನ ಪಡೆಯಲಾಗಿದೆ. ಇದರಿಂದಾಗಿ ಶಾಲೆಗಳಲ್ಲಿ ಮೊಟ್ಟೆಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಆದರೆ ಅದಕ್ಕೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ.
ಪೂರೈಕೆ ಸಮಸ್ಯೆ ಜೊತೆಗೆ ಇದೀಗ ಮೊಟ್ಟೆ ಬೆಲೆ ಕೂಡ ಏರಿಕೆ ಆಗಿರುವುದು ಶಿಕ್ಷಕರಿಗೆ ಆರ್ಥಿಕ ಸಂಕಷ್ಟ ತಂದು ಒಡ್ಡಿದೆ.
ಇದನ್ನೂ ಓದಿ: ಇನ್ಮುಂದೆ 5, 8ನೇ ಕ್ಲಾಸ್ ಮಕ್ಕಳನ್ನು ಫೇಲ್ ಮಾಡಬಹುದು; ಕೇಂದ್ರ ಸರ್ಕಾರದ ಹೊಸ ನಿರ್ಧಾರ
ಸರ್ಕಾರ ಒಂದೊಂದು ಹೊಸ ಯೋಜನೆಗಳನ್ನು ಜಾರಿಗೆ ತಂದು ಅದರ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಹೊತ್ತುಕೊಳ್ಳದೆ ಶಿಕ್ಷಕರ ಹಾಗೂ ಸಿಬ್ಬಂದಿ ಮೇಲೆ ಹೇರುವುದು ಎಷ್ಟು ಸರಿ ಎಂಬ ಅಭಿಪ್ರಾಯಗಳೂ ಕೇಳಿ ಬರುತ್ತಿವೆ. ಜೊತೆಗೆ, ಸರ್ಕಾರದ ವಿರುದ್ಧ ಆಕ್ರೋಶವೂ ವ್ಯಕ್ತವಾಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ