ಬೆಳಗಾವಿಗೆ ತೆರಳುತ್ತಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರನ್ನು ತಪಾಸಣೆ ಮಾಡಿದ ಚುನಾವಣಾ ಸಿಬ್ಬಂದಿ
ಏಪ್ರಿಲ್ 17ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು, ಚುನಾವಣಾ ಪ್ರಚಾರಕ್ಕೆ ಬೆಳಗಾವಿ ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾರನ್ನು ಚುನಾವಣಾ ಸಿಬ್ಬಂದಿ ತಪಾಸಣೆ ಮಾಡಿದ ಘಟನೆ ನಿನ್ನೆ ಸಂಜೆ ನಡೆದಿದೆ.
ಬೆಳಗಾವಿ: ಕೊರೊನಾ ಎರಡನೇ ಅಲೆ ಆತಂಕದ ನಡುವೆಯೂ ರಾಜ್ಯದಲ್ಲಿ ಉಪಚುನಾವಣೆ ಪ್ರಚಾರ ಕಾರ್ಯ ಬಿರುಸಿನಿಂದ ಸಾಗಿದೆ. ಏಪ್ರಿಲ್ 17ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು, ಚುನಾವಣಾ ಪ್ರಚಾರಕ್ಕೆ ಬೆಳಗಾವಿ ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾರನ್ನು ಚುನಾವಣಾ ಸಿಬ್ಬಂದಿ ತಪಾಸಣೆ ಮಾಡಿದ ಘಟನೆ ನಿನ್ನೆ ಸಂಜೆ ನಡೆದಿದೆ. ತಪಾಸಣೆಗೆ ಸಂಬಂಧಿಸಿದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಹಿರೇಬಾಗೇವಾಡಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಿರ್ಮಿಸಿರುವ ಚೆಕ್‌ಪೋಸ್ಟ್‌ನಲ್ಲಿ ಮುಖ್ಯಮಂತ್ರಿಗಳ ವಾಹನವನ್ನು ತಪಾಸಣೆ ಮಾಡಲಾಗಿದ್ದು, ಕರ್ತವ್ಯ ನಿರತ ಚುನಾವಣಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ನಿನ್ನೆ ಚುನಾವಣೆಗೆ ಸಂಬಂಧಿಸಿದಂತೆ ಬೆಳಗಾವಿಯತ್ತ ತೆರಳಿದ್ದ ಮುಖ್ಯಮಂತ್ರಿಗಳು ಮುತ್ನಾಳ ಗ್ರಾಮದ ಮಠಕ್ಕೆ ಭೇಟಿ ನೀಡಿ ನಂತರ ಹಲಗಾ ಗ್ರಾಮಕ್ಕೆ ತೆರಳಿದ್ದರು.
ತಡರಾತ್ರಿ ತನಕವೂ ಪಕ್ಷದ ಮುಖಂಡರೊಟ್ಟಿಗೆ ಸಭೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿಯಲ್ಲಿ ಉಪಚುನಾವಣೆ ಹಿನ್ನೆಲೆ ನಿನ್ನೆ ತಡರಾತ್ರಿ ತನಕವೂ ಪಕ್ಷದ ಮುಖಂಡರೊಟ್ಟಿಗೆ ಸಭೆ ನಡೆಸಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವ ಉಮೇಶ್ ಕತ್ತಿ, ಮಾಜಿ ಸಂಸದ ರಮೇಶ್ ಕತ್ತಿ, ಶಾಸಕರಾದ ಅನಿಲ್.ಬಿ, ಅಭಯ್ ಪಾಟೀಲ್ ಮುಂತಾದವರೊಂದಿಗೆ ಸಭೆ ನಡೆಸಿದ್ದಾರೆ.
ಉಪಚುನಾವಣೆ ಮೇಲೆ ಮುಷ್ಕರ ಪರಿಣಾಮ ಬೀರಲ್ಲ: ಬಿ.ವೈ.ವಿಜಯೇಂದ್ರ ಸಾರಿಗೆ ನೌಕರರ ಮುಷ್ಕರದ ಬಗ್ಗೆ ಉಪಚುನಾವಣೆ ಉಸ್ತುವಾರಿ ವಹಿಸಿರುವ ಬಿ.ವೈ.ವಿಜಯೇಂದ್ರ ಮಾತನಾಡಿ, ಇದು ಉಪಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ. ಕಾಂಗ್ರೆಸ್‌ನವರು ಇದನ್ನೇ ಮುಂದಿಟ್ಟು ಟೀಕೆ ಮಾಡ್ತಿದ್ದಾರೆ. ಆದರೆ, ಇದರಿಂದ ಬಿಜೆಪಿಗೆ ಏನೂ ಆಗುವುದಿಲ್ಲ. ಬಸ್ ಸಂಚಾರ ಸ್ಥಗಿತದಿಂದ ಪ್ರಯಾಣಿಕರಿಗೆ ಕಷ್ಟವಾಗುತ್ತದೆ. ಆದ್ದರಿಂದ ಸಾರಿಗೆ ನೌಕರರು ಪರಿಸ್ಥಿತಿ ಅರ್ಥ ಮಾಡಿಕೊಂಡು ಮುಷ್ಕರ ಹಿಂಪಡೆಯಬೇಕು ಎಂದು ರಾಯಚೂರಿನಲ್ಲಿ ಮನವಿ ಮಾಡಿದ್ದಾರೆ.