ಸರ್ಕಾರಿ ಭೂಮಿ ಬಗ್ಗೆ ಮಾಹಿತಿ ಪಡೆದು ಒತ್ತುವರಿ ತೆರವಿಗೆ ಕ್ರಮ: ಕೃಷ್ಣ ಬೈರೇಗೌಡ
ಒತ್ತುವರಿ ತೆರವುಗೊಳಿಸಿ ಸರ್ಕಾರಿ ಭೂಮಿ ವಶಕ್ಕೆ ಪಡೆಯುವ ವಿಚಾರವಾಗಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಎಲ್ಲಿ, ಎಷ್ಟು ಜಮೀನಿದೆ ಎಂಬ ಮಾಹಿತಿಯಿಲ್ಲ. ಆ್ಯಪ್ ಅಭಿವೃದ್ಧಿ ಮಾಡಿ ಮಾಹಿತಿ ಕಲೆಹಾಕಿದ ನಂತರ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದ್ದಾರೆ. ಅಲ್ಲದೆ, ಬೆಂಗಳೂರು ಸುತ್ತಮುತ್ತ 33 ಸಾವಿರ ಎಕರೆ ಸರ್ಕಾರಿ ಭೂಮಿ ಇದ್ದು, 18 ಸಾವಿರ ಎಕರೆ ಭೂಮಿ ಒತ್ತುವರಿ ತೆರವು ಮಾಡಿದ್ದಾಗಿ ತಿಳಿಸಿದರು.
ಬೆಂಗಳೂರು, ಸೆ.19: ಎಲ್ಲೆಲ್ಲಿ ಎಷ್ಟೆಷ್ಟು ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂಬುದನ್ನು ತಿಳಿದ ನಂತರ ಒತ್ತವರಿ ತೆರವುಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಹೇಳಿದರು. ಒತ್ತುವರಿ ತೆರವುಗೊಳಿಸಿ ಸರ್ಕಾರಿ ಭೂಮಿ ವಶಕ್ಕೆ ಪಡೆಯುವ ವಿಚಾರವಾಗಿ ನಗರದಲ್ಲಿ ಅವರು ಮಾತನಾಡಿರು.
ಸರ್ಕಾರಿ ಆಸ್ತಿಗಳ ಸಮಗ್ರ ಮಾಹಿತಿ ನಮ್ಮ ಬಳಿ ಇರಬೇಕು. ಅದಕ್ಕೆ ಒಂದು ಆ್ಯಪ್ ಅಭಿವೃದ್ಧಿಪಡಿಸಿದ್ದೇವೆ. ಗ್ರಾಮ ಮಟ್ಟದಲ್ಲಿ ಸರ್ಕಾರಿ ಭೂಮಿ ಅಪ್ಲೋಡ್ ಆಗಲಿದೆ. ಯಾವ ಊರು, ತಾಲೂಕಿನಲ್ಲಿ ಇದೆ ಎಂಬ ಮಾಹಿತಿ ಸಿಗಲಿದೆ. ಅದರ ಮೇಲೆ ನಾವು ಕ್ರಮ ಕೈಗೊಳ್ಳಬಹುದು. ಮೂರು ತಿಂಗಳಿಗೊಮ್ಮೆ ಸರ್ಕಾರಿ ಭೂಮಿ ಪರಿಶೀಲನೆಯಾಗಲಿದೆ. ಭೂಮಿ ಒತ್ತುವರಿಯಾದರೆ ಗೊತ್ತಾಗಲಿದೆ, ಆಗ ತೆರವು ಮಾಡಬಹುದು ಎಂದರು.
18 ಸಾವಿರ ಎಕರೆ ಭೂಮಿ ಒತ್ತುವರಿ ತೆರವು
ಬೆಂಗಳೂರು ಸುತ್ತಮುತ್ತ 33 ಸಾವಿರ ಎಕರೆ ಸರ್ಕಾರಿ ಭೂಮಿ ಇದೆ. 18 ಸಾವಿರ ಎಕರೆ ಭೂಮಿ ಒತ್ತುವರಿ ತೆರವು ಮಾಡಿದ್ದಾಗಿ ಅಧಿಕಾರಿಗಳು ಹೇಳಿದ್ದಾಗಿ ಕೃಷ್ಣ ಬೈರೇಗೌಡ ತಿಳಿಸಿದರು. ನಾವು ಕಾನೂನು ಪ್ರಕ್ರಿಯೆ ಶುರು ಮಾಡಿದ್ದೇವೆ. ಸರ್ಕಾರಿ ಭೂಮಿ ಒತ್ತುವರಿಯಲ್ಲಿ ಕೆಲವೆಡೆ ಎಸಿಗಳು ಶಾಮೀಲಾಗಿದ್ದಾರೆ. ಇಬ್ಬರು ಎಸಿಗಳ ಮೇಲೆ ಕೇಸ್ ದಾಖಲಿಸಿದ್ದೇವೆ ಎಂದರು.
ಬಾಗಲೂರು ಬಳಿ 6 ಎಕರೆ 7 ಗುಂಟೆ ಭೂಮಿ ಒತ್ತುವರಿ ಮಾಡಿದ್ದರು. 1 ಎಕರೆ ಭೂಮಿಯ ಬೆಲೆ 5 ಕೋಟಿ ರೂ.ಗೆ ಮಾರಾಟ ಆಗಲಿದೆ. ಹೀಗಾಗಿ ಪ್ರಕರಣ ದಾಖಲಿಸಿ ಸರ್ಕಾರಿ ಭೂಮಿ ಒತ್ತುವರಿ ವಾಪಸ್ ಪಡೆದಿದ್ದೇವೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ