ಅಧಿವೇಶನ ಇಲ್ಲದಿರುವಾಗಲೂ ರಾಹುಲ್-ಸೋನಿಯಾ ಗಾಂಧಿ ಇ.ಡಿ. ತನಿಖೆಗೆ ಸಹಕರಿಸಿಲ್ಲ – ಖರ್ಗೆಗೆ ತಿರುಗೇಟು ನೀಡಿದ ಪ್ರಲ್ಹಾದ್ ಜೋಶಿ

| Updated By: ರಶ್ಮಿ ಕಲ್ಲಕಟ್ಟ

Updated on: Aug 05, 2022 | 4:17 PM

ಇಂದು ದೇಶದ ಎಲ್ಲಾ ನ್ಯಾಯಾಲಯಗಳು ಕಾಂಗ್ರೆಸ್‌ನ ಮನವಿಯನ್ನು ತಿರಸ್ಕರಿಸಿದೆ. ಆದರೂ ಕಾಂಗ್ರೆಸ್ ನ್ಯಾಯಾಂಗ ವ್ಯವಸ್ಥೆಯನ್ನೇ ನಂಬುತ್ತಿಲ್ಲ. ಇದು ಪ್ರಜಾಪ್ರಭುತ್ವದ ವಿರೋಧಿ ಧೋರಣೆ ಅಲ್ಲವೇ..? ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.

ಅಧಿವೇಶನ ಇಲ್ಲದಿರುವಾಗಲೂ ರಾಹುಲ್-ಸೋನಿಯಾ ಗಾಂಧಿ ಇ.ಡಿ. ತನಿಖೆಗೆ ಸಹಕರಿಸಿಲ್ಲ - ಖರ್ಗೆಗೆ ತಿರುಗೇಟು ನೀಡಿದ ಪ್ರಲ್ಹಾದ್ ಜೋಶಿ
ಅಧಿವೇಶನ ಇಲ್ಲದಿರುವಾಗಲೂ ರಾಹುಲ್-ಸೋನಿಯಾ ಗಾಂಧಿ ಇ.ಡಿ. ತನಿಖೆಗೆ ಸಹಕರಿಸಿಲ್ಲ - ಖರ್ಗೆಗೆ ತಿರುಗೇಟು ನೀಡಿದ ಪ್ರಲ್ಜಾದ್ ಜೋಶಿ
Follow us on

ಅಧಿವೇಶನ ಸಂದರ್ಭದಲ್ಲಿ ಇ.ಡಿ. (ED) ವಿಚಾರಣೆಗೆ ಕರೆದರೆ, ನಾವು ಕಲಾಪಗಳಲ್ಲಿ ಹೇಗೆ ಪಾಲ್ಗೊಳ್ಳಬೇಕು ಎಂಬ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರ (Mallikarjun Kharge) ಆಕ್ಷೇಪಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ. ಅಧಿವೇಶನ ಇಲ್ಲದ ಸಂದರ್ಭದಲ್ಲಿ ರಾಹುಲ್ ಗಾಂಧಿ (Rahul Gandhi), ಸೋನಿಯಾ ಗಾಂಧಿ (Sonia Gandhi) ಅವರನ್ನ ಇ.ಡಿ ವಿಚಾರಣೆಗೆ ಕರೆದಾಗ ಕಾಂಗ್ರೆಸ್ ನಾಯಕರು ಸಹಕರಿಸಿದ್ದರಾ..? ಆಗಲು ಇವರು ಇ.ಡಿ ತನಿಖೆಗೆ ಸಹಕಾರ ನೀಡಿಲ್ಲ, ತನಿಖೆ ನಡೆಯಬಾರದು ಎಂಬುದು ಕಾಂಗ್ರೆಸ್ ನವರ ಉದ್ದೇಶವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಪ್ರತಿಕ್ರಿಯಿಸಿದ್ದಾರೆ.

ಜಾರಿ ನಿರ್ದೇಶನಾಲಯದ ತನಿಖೆಗೆ ತಡೆ ಕೋರಿ ರಾಹುಲ್, ಸೋನಿಯಾ ಗಾಂಧಿ ಅವರು ಹೈಕೋರ್ಟ್ ಸುಪ್ರೀಂ ಕೋರ್ಟ್, ಟ್ರಿಬುನಲ್ ಮುಂದೆಯೂ ಹೋಗಿದ್ದರು. ಆದರೆ ನ್ಯಾಯಾಲಯಗಳಲ್ಲಿ ಅವರಿಗೆ ತಡೆಯಾಜ್ಞೆ ಸಿಕ್ಕಿಲ್ಲ. ತನಿಖೆಯನ್ನ ತಡೆಯಲು ದೇಶದ ಸುಪ್ರೀಂ ಕೋರ್ಟ್ ನಿರಾಕರಿಸಿರುವಾಗ, ಇ.ಡಿ ತನಿಖೆಯನ್ನ ನಿಲ್ಲಿಸಲು ಸಾಧ್ಯವೇ..? ಎಂದು ಪ್ರಶ್ನಿಸಿದ್ದಾರೆ.

ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಯಂಗ್ ಇಂಡಿಯಾ ಕಂಪನಿಯ ಸಿ.ಇ.ಒ. ಆಗಿದ್ದಾರೆ. ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈ ಕಂಪನಿಯದ್ದು ಪ್ರಮುಖ ಪಾತ್ರ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನ ಇ.ಡಿ. ತನಿಖೆಗೆ ಒಳಪಡಿಸಿದೆ. ಸಾರ್ವಜನಿಕ ಜೀವನದಲ್ಲಿರುವ ಖರ್ಗೆ ಅವರು ತನಿಖೆಗೆ ಸಹಕರಿಸಬೇಕು.

ಅಧಿವೇಶನ ನಡೆಯುವಾಗ ಇ.ಡಿ. ಸಮನ್ ಮಾಡಿದರೆ ಹೇಗೆ ಎಂದು ಕೇಳುವ ಖರ್ಗೆ ಅವರು, ಸೆಷನ್ ಇಲ್ಲದಿದ್ದಾಗ ತನಿಖೆಗೆ ಎಷ್ಟು ಸಹಕಾರ ನೀಡಿದ್ದಾರೆ..? ಸೋನಿಯಾ, ರಾಹುಲ್ ಗಾಂಧಿ ಅವರಿಗೆ ಇ.ಡಿ. ಸಮನ್ಸ್ ನೀಡಿದಾಗ ಸದನದ ಕಲಾಪಕ್ಕೆ ಅಡ್ಡಿಪಡಿಸಿ, ಸದನ ನಡೆಯದಂತೆ ಮಾಡಿದವರು ಕಾಂಗ್ರೆಸ್ ನವರು. ಸದನದ ಕಲಾಪ ನಡೆಯಲು ಖರ್ಗೆ ಅವರು ಎಷ್ಟು ಸಹಕಾರ ಕೊಟ್ಟಿದ್ದಾರೆ ಹೇಳಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದವರಿಂದ ನಾವು ಪ್ರಜಾಪ್ರಭುತ್ವದ ಪಾಠ ಕಲಿಯಬೇಕಾಗಿಲ್ಲ. ಕಾಂಗ್ರೆಸ್ ತನ್ನ ಪಕ್ಷದ ರಚನೆಯಲ್ಲೇ ಪ್ರಜಾಪ್ರಭುತ್ವವನ್ನು ಅನುಸರಿಸಲಿಲ್ಲ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದೇಶದ ಪ್ರಜಾಪ್ರಭುತ್ವವನ್ನು ತಡೆ ಹಿಡಿದವರು ಯಾರು..?

ಇಂದು ದೇಶದ ಎಲ್ಲಾ ನ್ಯಾಯಾಲಯಗಳು ಕಾಂಗ್ರೆಸ್‌ನ ಮನವಿಯನ್ನು ತಿರಸ್ಕರಿಸಿದೆ. ಆದರೂ ಕಾಂಗ್ರೆಸ್ ನ್ಯಾಯಾಂಗ ವ್ಯವಸ್ಥೆಯನ್ನೇ ನಂಬುತ್ತಿಲ್ಲ. ಇದು ಪ್ರಜಾಪ್ರಭುತ್ವದ ವಿರೋಧಿ ಧೋರಣೆ ಅಲ್ಲವೇ..? ಎಂದು ಜೋಶಿ ಪ್ರಶ್ನಿಸಿದ್ದಾರೆ.

ಮತ್ತಷ್ಟು  ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:24 pm, Fri, 5 August 22