Tv9 Digital Live | ಜಾರಕಿಹೊಳಿ ಸಿಡಿ: ಮುನ್ನೆಲೆಗೆ ಬಂದ ಕಾನೂನು ಮತ್ತು ನೈತಿಕ ಪ್ರಶ್ನೆಗಳು

| Updated By: shruti hegde

Updated on: Mar 04, 2021 | 4:43 PM

‘ಮೇಲ್ನೋಟಕ್ಕೆ ಇದೊಂದು ರೀತಿಯಾ ಟ್ರ್ಯಾಪ್ ಎನಿಸುತ್ತದೆ. ಸಾರ್ವಜನಿಕ ವಲಯದಲ್ಲಿ ಇರುವವರು ನೈತಿಕವಾಗಿ ಗಟ್ಟಿಯಾಗಿರಬೇಕು. ಇಲ್ಲದಿದ್ದರೆ ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆ’.

Tv9 Digital Live | ಜಾರಕಿಹೊಳಿ ಸಿಡಿ: ಮುನ್ನೆಲೆಗೆ ಬಂದ ಕಾನೂನು ಮತ್ತು ನೈತಿಕ ಪ್ರಶ್ನೆಗಳು
ಹಿರಿಯ ವಕೀಲ ಪಿ.ಪಿ ಹೆಗಡೆ, ಆ್ಯಂಕರ್ ಹರಿಪ್ರಸಾದ್​ ಹಾಗೂ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್
Follow us on

ಜಲಸಂಪನ್ಮೂಲ ಖಾತೆ ಸಚಿವ, ಬೆಳಗಾವಿಯ ಪ್ರಭಾವಿ ನಾಯಕ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಹಗರಣದಲ್ಲಿ ಹಲವು ನಾಟಕೀಯ ಬೆಳವಣಿಗೆಗಳು ಕ್ಷಿಪ್ರಗತಿಯಲ್ಲಿ ನಡೆದವು. ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅತ್ತ ಗೋಕಾಕ ಪಟ್ಟಣದಲ್ಲಿ ತಮ್ಮ ನಾಯಕನ ಪರವಾಗಿ ಬೆಂಬಲಿಗರು ಬೀದಿಗಳಿದು ಪ್ರತಿಭಟಿಸುತ್ತಿದ್ದಾರೆ. ಸಿಡಿ ಹಗರಣ, ರಮೇಶ್ ಜಾರಕಿಹೊಳಿ ರಾಜೀನಾಮೆ, ಈ ಪ್ರಕರಣದ ಕಾನೂನು ಮತ್ತು ನೈತಿಕ ಪ್ರಶ್ನೆಗಳ ಕುರಿತು ‘ಟಿವಿ9 ಡಿಜಿಟಲ್ ಲೈವ್​’ ಸಂವಾದದಲ್ಲಿ ಚರ್ಚಿಸಲಾಯಿತು. ಹಿರಿಯ ವಕೀಲರಾದ ಪಿ.ಪಿ.ಹೆಗಡೆ, ಗೋಕಾಕ ನಗರ ಬಿಜೆಪಿ ಘಟಕದ ಅಧ್ಯಕ್ಷ ಭೀಮಶಿ ಭರಮಣ್ಣವರ್, ಕೆಪಿಸಿಸಿ ವಕ್ತಾರರಾಗಿರುವ ಎಂ. ಲಕ್ಷ್ಮಣ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಆ್ಯಂಕರ್ ಹರಿಪ್ರಸಾದ್​ ಈ ಚರ್ಚೆ ನಡೆಸಿಕೊಟ್ಟರು.

ಬಿಜೆಪಿ ಗೋಕಾಕ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮಣ್ಣನವರ್ ಮಾತನಾಡಿ, ತನಿಖೆ ಆಗದೆ ರಾಜೀನಾಮೆ ನೀಡಿರುವುದು ಸರಿ ಅಲ್ಲ. ನಮ್ಮ ನಾಯಕರಾದ ರಮೇಶ್ ಜಾರಕಿಹೊಳಿ ಬಗ್ಗೆ ನಮಗೆ ಗೊತ್ತು. ಇದರ ಹಿಂದೆ ಯಾರದೋ ಷಡ್ಯಂತ್ರ ಇದೆ. ವಿರೋಧ ಪಕ್ಷದವರ ಕೈವಾಡ ಇದರಲ್ಲಿ ಇದೆ. ಬಲವಂತವಾಗಿ ಗೋಕಾಕ್​ನಲ್ಲಿ ಬಂದ್ ಮಾಡಿಸಿಲ್ಲ. ಸ್ವಯಂ ಘೋಷಿತವಾಗಿ ಇಲ್ಲಿನ ಜನ ಬಂದ್ ಮಾಡಿದ್ದಾರೆ. ವಿರೋಧ ಪಕ್ಷದವರು ಒಂದು ಹೆಂಗಸನ್ನು ಇಟ್ಟುಕೊಂಡು ಈ ರೀತಿಯ ಷಡ್ಯಂತ್ರವನ್ನು ಮಾಡಿದ್ದಾರೆ ಈ ರೀತಿ ಮಾಡಬಾರದು. ನೂರಕ್ಕೆ ನೂರು ಇದು ನಕಲಿ ಸಿಡಿ ಎಂದರು.

ನೊಂದವರು ದೂರು ಕೊಡಬೇಕು ಮೂರನೇ ವ್ಯಕ್ತಿ ದೂರು ನೀಡಿದರೆ ಆಗುವುದಿಲ್ಲ. ಒಬ್ಬ ತಾಲೂಕು ಮಟ್ಟದ ನಾಯಕ ರಾಜ್ಯಮಟ್ಟದಲ್ಲಿ ಬೆಳೆಯುತ್ತಾನೆ ಎಂದರೆ ವಿರೋಧಿಗಳು ಸಹಿಸುವುದಿಲ್ಲ ಹೀಗಾಗಿ ಈ ರೀತಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಗೋಕಾಕದಲ್ಲಿ ಬಲವಂತವಾಗಿ ಬಂದ್ ಮಾಡುತ್ತಿದ್ದಾರೆ. ಕೆಲವರಿಗೆ ರಮೇಶ್ ಜಾರಕಿಹೊಳಿ ದೇವರು ಇರಬಹುದು. ಆದರೆ ಈ ಪ್ರಕರಣ ಇಷ್ಟು ಗಂಭೀರವಾಗಿರುವಾಗ ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಗೋಕಾಕ್​ನಲ್ಲಿನ ಕೇಲವು ಜನ ಈ ವಿಷಯಕ್ಕೆ ಸಂಬಂಧಪಟ್ಟಂತೆ ಹುಚ್ಚಿನ ಪರಮಾವಧಿ ಪ್ರದರ್ಶನ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದ ಮಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುವ ಕೆಲಸ ನಡೆಯುತ್ತಿದೆ. ಒಂದು ಲೆಕ್ಕದಲ್ಲಿ ನಾನು ಬಿಜೆಪಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕಾರಣ ರಾಜೀನಾಮೆಯನ್ನು ರಮೇಶ್ ನೀಡಿದ್ದಾರೆ. ಆದರೆ ಇದು ರಾಜೀನಾಮೆಗೆ ಮಾತ್ರ ಸೀಮಿತವಾಗಬಾರದು. ಪ್ರಕರಣ ದಾಖಲಾಗಬೇಕು. ಸಂತ್ರಸ್ತೆಯೇ ಬಂದು ಕೇಸ್ ದಾಖಲಿಸಬೇಕು. ಇಲ್ಲದಿದ್ದರೆ ಸಾರ್ವಜನಿಕ ಬದುಕಿನಲ್ಲಿರುವ ರಮೇಶ್ ವಿರುದ್ಧ ಯಾರು ಬೇಕಾದರೂ ದೂರು ದಾಖಲಿಸಬಹುದು ಎಂದು ಕೆಪಿಸಿಸಿ ವಕ್ತಾರರಾಗಿರುವ ಎಂ. ಲಕ್ಷ್ಮಣ್ ಹೇಳಿದ್ದಾರೆ.

ಆಡಿಯೋ ಮತ್ತು ವಿಡಿಯೋ ಆಧರಿಸಿ ಪೊಲೀಸರು ಕೇಸ್ ದಾಖಲಿಸಬಹುದು. ಕಳ್ಳನೊಬ್ಬ ಎಂದಿಗೂ ತಾನು ಕಳ್ಳತನ ಮಾಡಿದ್ದೇನೆ ಎಂದು ಒಪ್ಪುವುದಿಲ್ಲ. ಹೀಗಾಗಿ ಪೊಲೀಸರು ರಮೇಶ್ ವಿರುದ್ಧ ದೂರು ದಾಖಲಿಸಬೇಕು. ಇಲ್ಲಿನವರೆಗೆ ಸಿಡಿ ಪ್ರಕರಣದಲ್ಲಿ ಯಾರು ಕೂಡ ನನ್ನದೇ ಸಿಡಿ ಎಂದು ಒಪ್ಪಿಕೊಂಡಿಲ್ಲ. ರಮೇಶ್ ಜಾರಕಿಹೊಳಿ ಸರಿ ಇದ್ದಿದ್ದರೆ ಈ ಹೊತ್ತಿಗೆ ಅವರೇ ದೂರು ದಾಖಲಿಸಬೇಕಿತ್ತು. ಎಲ್ಲಾ ನಾಯಕರು ಜವಾಬ್ದಾರಿ ಸ್ಥಾನಕ್ಕೆ ಬಂದ ಮೇಲೆ ಅವರದ್ದೇ ಆದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕೆಪಿಸಿಸಿ ವಕ್ತಾರರಾಗಿರುವ ಎಂ. ಲಕ್ಷ್ಮಣ್ ತಿಳಿಸಿದ್ದಾರೆ.

ಕಾನೂನಿನ ಒಳಸುಳಿಗಳು
ಹಿರಿಯ ವಕೀಲರಾದ ಪಿ.ಪಿ.ಹೆಗಡೆ ಮಾತನಾಡಿ, ಪೊಲೀಸರು ದೂರು ದಾಖಲಿಸಿಕೊಳ್ಳಬೇಕಾದರೆ ಮೇಲ್ನೋಟಕ್ಕೆ ಇದು ಅಪರಾಧ ಎಂದು ಕಾಣಿಸಬೇಕು. ಆಗ ಪೊಲೀಸರಿಗೆ ಎರಡು ಅವಕಾಶ ಇದೆ. ದೂರು ಕೊಟ್ಟವನಿಗೆ ವೈಯಕ್ತಿಕ ಜ್ಞಾನ ಇದೆಯೋ ಇಲ್ಲವೋ ಪರಿಶೀಲಿಸಬೇಕು. ಅವನಿಗೆ ವೈಯಕ್ತಿಕ ಜ್ಞಾನ ಇಲ್ಲ ಎಂದಾದರೆ ನೊಂದವರನ್ನು ಕರೆಸಿ ಆ ವ್ಯಕ್ತಿಯ ಹೇಳಿಕೆ ಪಡೆದು ಸತ್ಯ ನೋಡಬೇಕು. ಈ ಪ್ರಕ್ರಿಯೆಗಳು ನಡೆಯದಿದ್ದರೆ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಂತೆ ಆಗುವುದಿಲ್ಲ. ನೊಂದ ವ್ಯಕ್ತಿ ಯಾರು? ಅವರ ಹೇಳಿಕೆ ಏನು ಎನ್ನುವುದು ಸಹ ಮುಖ್ಯವಾಗುತ್ತದೆ. ಕಣ್ಣಾರೆ ಇದನ್ನು ನೋಡಿದವರು ಸಾಕ್ಷಿ ಆಗಬೇಕು. ಈ ಕೇಸ್​ನಲ್ಲಿ ಕಣ್ಣಾರೆ ನೋಡಿದ ವ್ಯಕ್ತಿ ಇಲ್ಲ. ಹಾಗಾಗಿ ಇದು ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುವುದು ಕಷ್ಟ ಎಂದು ಅಭಿಪ್ರಾಯಪಟ್ಟರು.

ಪ್ರಕರಣದಲ್ಲಿ ನೊಂದ ವ್ಯಕ್ತಿ ಬಂದು ನಾನು ಸಂತ್ರಸ್ತೆ ಅಲ್ಲ. ನನ್ನ ಖುಷಿಯಿಂದ ನಾನು ಹೀಗೆ ಮಾಡಿದ್ದೇನೆ. ನಾನು ಕೂಡ ಮೇಜರ್ ಇದ್ದೇನೆ ಎಂದರೆ ಕೇಸ್ ದಾಖಲಿಸಲು ಸಾಧ್ಯವಿಲ್ಲ. ಆಗ ಅದು ಅವಳ ಸ್ವಾತಂತ್ರ್ಯವಾಗುತ್ತದೆ. ಹೀಗಾಗಿ ಪೊಲೀಸರು ಅಪರಾಧ ಆಗಿದೆಯೋ ಇಲ್ಲವೋ, ಎಂದು ನಿರ್ಣಯಿಸುವಾಗ ನೊಂದ ವ್ಯಕ್ತಿಯನ್ನು ಪರಿಗಣಿಸುವುದು ಮುಖ್ಯ. ಯಾವುದೇ ಪ್ರಕರಣದಲ್ಲಿ ರಾಜಕೀಯ ನಡೆಯುವುದು ಬೇರೆ, ಕಾನೂನಿನಲ್ಲಿ ಏನು ಇದೆ ಎನ್ನುವುದನ್ನು ಗಮನಿಸಿಯೇ ನಾವು ಮುಂದುವರಿಯಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಇಂಥ ಆರೋಪಗಳು ಕೇಳಿಬಂದಾಗ ರಾಜೀನಾಮೆ ಕೋಡಿ ಎಂದು ಸಂವಿಧಾನದಲ್ಲಿ ಹೇಳಿಲ್ಲ. ಆದರೆ ದಂಡ ಸಂಹಿತೆಯ ಕಾನೂನು ಮತ್ತು ನೈತಿಕ ಕಾನೂನು ಬೇರೆ. ಈ ರೀತಿಯಾದ ಗುರುತರವಾದ ನೈತಿಕ ಅಪರಾಧಗಳು ಬಂದಾಗ ಅಂಥ ವ್ಯಕ್ತಿ ರಾಜೀನಾಮೆ ನೀಡುವುದು ಅವರಿಗೆ ಶೋಭೆ. ರಾಜೀನಾಮೆ ಮಾಡದೇ ಇದ್ದರೆ ಯಾಕಾಗಿ ನೀಡಿಲ್ಲ ಎನ್ನುವ ಅನುಮಾನ ಮೂಡುತ್ತದೆ. ಹೀಗಾಗಿ ಪ್ರಜಾಪ್ರಭುತ್ವದ ನಾಯಕರಾಗಿರುವ ವ್ಯಕ್ತಿ ಎಲ್ಲರಿಗೂ ಆದರ್ಶವಾಗಿರಬೇಕು. ಈ ರೀತಿಯಾದ ಕೃತ್ಯದಲ್ಲಿ ಮಂತ್ರಿಯಾದವರು ತೊಡಗಿಕೊಳ್ಳಬಾರದು. ನಕಲಿ ಸಿಡಿಯನ್ನು ತಯಾರಿಸಿದ್ದರೆ ನೊಂದ ವ್ಯಕ್ತಿ ತಕ್ಷಣವೇ ದೂರು ಸಲ್ಲಿಸಬೇಕು. ಆದರೆ ನನಗೆ ತಿಳಿದ ಮಟ್ಟಿಗೆ ಯುವತಿ ಒಪ್ಪಿಗೆಯಿಂದಲೇ ಇದೆಲ್ಲಾ ನಡೆದಿದೆ. ಇದೊಂದು ರೀತಿಯಾ ಟ್ರ್ಯಾಪ್ ಆಗಿದ್ದು, ಸಚಿವ ರಮೇಶ್ ಜಾರಕಿಹೊಳಿ ಈ ವಿಚಾರದಲ್ಲಿ ಟ್ರ್ಯಾಪ್ ಆಗಿದ್ದಾರೆ. ಸಾರ್ವಜನಿಕ ವಲಯದಲ್ಲಿ ಇರುವವರು ನೈತಿಕವಾಗಿ ಗಟ್ಟಿಯಾಗಿರಬೇಕು ಎಂದು ತಿಳಿಸಿದರು.

ಇದನ್ನೂ ಓದಿ: ರಾಜಕೀಯ ವಿಶ್ಲೇಷಣೆ | ರಮೇಶ್ ಜಾರಕಿಹೊಳಿ ಮುಂದಿರುವ ಮೂರು ಆಯ್ಕೆಗಳು

Published On - 8:23 pm, Wed, 3 March 21