ರಾಜ್ಯ ರಾಜಕಾರಣದಲ್ಲಿ ಸಿಡಿ ಪುರಾಣ ಹೊಸದಲ್ಲ; ಹಿಂದಿನಿಂದಲೂ ಆಗಾಗ ಹೊರಬೀಳುತ್ತಿವೆ ಕಾಮಕಾಂಡದ ದೃಶ್ಯಾವಳಿಗಳು

ಅಷ್ಟಕ್ಕೂ ಸಿಡಿಯಲ್ಲಿ ಸಿಕ್ಕಿಬಿದ್ದ ಮೊದಲ ಪ್ರಭಾವಿ ರಾಜಕಾರಣಿ ಯಾರು? ಇಂಥದ್ದೊಂದು ಸಿಡಿ ಪ್ರಯೋಗ ಶುರುವಾಗಿದ್ದಾದರೂ ಯಾವಾಗಿಂದ ಎಂಬುದನ್ನು ನೋಡಿದರೆ 2006ರಿಂದ ಘಟನೆಯನ್ನು ಮೆಲುಕುಹಾಕುತ್ತ ಬರಬೇಕು.

  • TV9 Web Team
  • Published On - 19:44 PM, 3 Mar 2021
ರಾಜ್ಯ ರಾಜಕಾರಣದಲ್ಲಿ ಸಿಡಿ ಪುರಾಣ ಹೊಸದಲ್ಲ; ಹಿಂದಿನಿಂದಲೂ ಆಗಾಗ ಹೊರಬೀಳುತ್ತಿವೆ ಕಾಮಕಾಂಡದ ದೃಶ್ಯಾವಳಿಗಳು
ಪ್ರಾತಿನಿಧಿಕ ಚಿತ್ರ

ರಾಜ್ಯ ರಾಜಕಾರಣದಲ್ಲಿ ‘ಸಿಡಿ’ ಪ್ರಯೋಗ ಹೊಸದಾ? ರಮೇಶ್​ ಜಾರಕಿಹೊಳಿಯವರ ವಿಡಿಯೋವೇ ಮೊದಲಾ? ಇಲ್ಲವೇ ಇಲ್ಲ. ಕಳೆದ ಮೂರು ವಿಧಾನಸಭೆಗಳ ಅವಧಿ, ಅಂದರೆ ಸರಿಸುಮಾರು 2006ರಿಂದ ಇಂಥದ್ದೊಂದು ಪರಿಪಾಠ ಶುರುವಾಗಿದೆ. ಬರೀ ಸೆಕ್ಸ್​ ಸಿಡಿಗಳೇ ಆಗಬೇಕಿಲ್ಲ.. ಬೇರೆ ತರಹದ ಭ್ರಷ್ಟಾಚಾರದ ಸಿಡಿಗಳೂ ಆಗಾಗ ಸದ್ದುಮಾಡುತ್ತಲೇ ಇವೆ. ಇನ್ನು ರಾಸಲೀಲೆ ವಿಡಿಯೋಕ್ಕೆ ಬಂದರೆ ಹೀಗೆ ಬೆತ್ತಲಾಗಿದ್ದು ರಮೇಶ್​ ಜಾರಕಿಹೊಳಿಯವರೇ ಮೊದಲಲ್ಲ. ಇವರ ಹಿಂದೆ ಕೂಡ ಹಲವು ರಾಜಕಾರಣಿಗಳ ದೌರ್ಬಲ್ಯ ಹೊರಬಿದ್ದಿದೆ.

ಪ್ರಸ್ತುತ ರಮೇಶ್​ ಜಾರಕಿಹೊಳಿಯವರ ಪ್ರಕರಣವನ್ನೇ ತೆಗೆದುಕೊಂಡರೆ ಮುಂದೇನಾಗಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ. ಸದ್ಯ ರಾಜೀನಾಮೆಯನ್ನಂತೂ ಕೊಟ್ಟಿದ್ದಾರೆ. ಆದರೆ ತಾನು ನಿರ್ದೋಷಿ ಎಂದೇ ಖಡಾಖಂಡಿತವಾಗಿ ಹೇಳಿದ್ದಾರೆ. ಅಷ್ಟಕ್ಕೂ ಈ ಹಿಂದೆ ಇಂಥ ಸಿಡಿಗಳಲ್ಲಿ ಕಾಣಿಸಿಕೊಂಡ ರಾಜಕೀಯ ನಾಯಕರು ಈಗೇನಾಗಿದ್ದಾರೆ? ಎಲ್ಲಿದ್ದಾರೆ? ಎಂದು ನೋಡಿ.. ಅವರೆಲ್ಲ ಚೆನ್ನಾಗೇ ಇದ್ದಾರೆ. ರಾಜಕಾರಣದಲ್ಲಿ ಸಕ್ರಿಯವಾಗಿಯೇ ಇದ್ದಾರೆ. ನೂರರಲ್ಲಿ ಮತ್ತೊಂದು ಎಂದು ಈಗ ರಮೇಶ್​ ಜಾರಕಿಹೊಳಿಯವರ ಸಿಡಿ ಪುರಾಣವೂ ಹಾಗೇ ಆಗಬಹುದು ಅಷ್ಟೇ !

ಅಷ್ಟಕ್ಕೂ ಸಿಡಿಯಲ್ಲಿ ಸಿಕ್ಕಿಬಿದ್ದ ಮೊದಲ ಪ್ರಭಾವಿ ರಾಜಕಾರಣಿ ಯಾರು? ಇಂಥದ್ದೊಂದು ಸಿಡಿ ಪ್ರಯೋಗ ಶುರುವಾಗಿದ್ದಾದರೂ ಯಾವಾಗಿಂದ ಎಂಬುದನ್ನು ನೋಡಿದರೆ 2006ರಿಂದ ಇಂಥ ಘಟನೆಗಳನ್ನು ಮೆಲುಕುಹಾಕುತ್ತ ಬರಬೇಕು. ಆಗ ಅದು ಸೆಕ್ಸ್​ ಸಿಡಿ ಆಗಿರಲಿಲ್ಲ ಬದಲಿಗೆ ಜಂತ್​ಕಲ್​ ಗಣಿಗಾರಿಕೆಯಲ್ಲಿ ಎಚ್​. ಡಿ.ಕುಮಾರಸ್ವಾಮಿ ಭ್ರಷ್ಟಾಚಾರ ಮಾಡಿದ್ದಾರೆ, ಗಣಿ ಉದ್ಯಮಿಗಳಿಂದ 150 ಕೋಟಿ ರೂ.ಕಪ್ಪ ಪಡೆದಿದ್ದಾರೆ ಎಂದು ಆರೋಪಿಸಿದ್ದ ಜನಾರ್ದನ ರೆಡ್ಡಿ, ಅದಕ್ಕೆ ಸಂಬಂಧಿಸಿದ ಒಂದು ಸಿಡಿಯನ್ನು ಎಸ್​ಐಟಿಗೆ ಸಲ್ಲಿಸಿದ್ದರು. ಅಲ್ಲಿಯವರೆಗೂ ಅಷ್ಟೆಲ್ಲ ಬಳಕೆಯಲ್ಲಿ ಇಲ್ಲದ ಸಿಡಿ ಪ್ರಯೋಗ ನಂತರದ ದಿನಗಳಲ್ಲಿ ಆಗಾಗ ಮುನ್ನೆಲೆಗೆ ಬರತೊಡಗಿತು.

ಮೊದಲು ಸಿಕ್ಕಿಬಿದ್ದಿದ್ದು ಹರತಾಳು ಹಾಲಪ್ಪ
ಇನ್ನು ಸೆಕ್ಸ್​ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಪಟ್ಟಂತೆ ಸಿಡಿಗಳು ಬಿಡುಗಡೆಯಾಗಲು ಶುರುವಾಗಿದ್ದು 2009ರಿಂದ. ಇದರಲ್ಲಿ ಮೊದಲು ಸಿಕ್ಕಿಬಿದ್ದ ರಾಜಕಾರಣಿ ಶಿವಮೊಗ್ಗದ ಹರತಾಳು ಹಾಲಪ್ಪ. 2009ರಲ್ಲಿ ಸ್ನೇಹಿತನ ಪತ್ನಿ ಚಂದ್ರಾವತಿ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಹಾಲಪ್ಪನವರ ವಿರುದ್ಧ 2010ರಲ್ಲಿ ಕೇಳಿಬಂದಿತ್ತು. ಅದಕ್ಕೆ ಸಂಬಂಧಪಟ್ಟ ಸಿಡಿ ಕೂಡ ಬಿಡುಗಡೆಯಾಗಿತ್ತು. ಆಗ ಸಚಿವರಾಗಿದ್ದ ಹಾಲಪ್ಪನವರಿಗೆ ಇದೇ ಮುಳ್ಳಾಯಿತು. ಅನಿವಾರ್ಯವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂತು. ಸತತ ಏಳುವರ್ಷ ಕಾನೂನು ಹೋರಾಟ ನಡೆಸಿದ ಹಾಲಪ್ಪನವರು ಅಂತೂ 2017ರಲ್ಲಿ ಅತ್ಯಾಚಾರ ಆರೋಪ ಮುಕ್ತರಾಗಿದ್ದಾರೆ.

ಹಾಲಪ್ಪನವರ ಪ್ರಕರಣ ಮುಗಿಯುತ್ತಿದ್ದಂತೆ ಬಿಜೆಪಿಗೆ ಕಂಟಕವಾಗಿದ್ದು ರೇಣುಕಾಚಾರ್ಯ ಮತ್ತು ನರ್ಸ್​ ಜಯಲಕ್ಷ್ಮೀ ಅವರ ಅಶ್ಲೀಲ ಫೋಟೋಗಳು. 2010ರಲ್ಲಿ ಯಡಿಯೂರಪ್ಪನವರ ಕ್ಯಾಬಿನೇಟ್​ನಲ್ಲಿ ಅಬಕಾರಿ ಸಚಿವರಾಗಿದ್ದ ಎಂ.ಪಿ.ರೇಣುಕಾಚಾರ್ಯ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ನರ್ಸ್ ಜಯಲಕ್ಷ್ಮೀ ಫೋಟೋವೊಂದನ್ನು ಬಿಡುಗಡೆ ಮಾಡಿದ್ದರು. ಹಾಗೇ ಆತ್ಮಹತ್ಯೆ ಯತ್ನವನ್ನೂ ಮಾಡಿದ್ದರು. ಈ ಫೋಟೋದಲ್ಲಿ ಜಯಲಕ್ಷ್ಮೀ ತುಟಿಗೆ ರೇಣುಕಾಚಾರ್ಯ ಮುತ್ತಿಟ್ಟಿದ್ದು ಕಾಣುತ್ತಿತ್ತು. ಈ ಫೋಟೋ ಸೋಷಿಯಲ್ ಮೀಡಿಯಾಗಳಲ್ಲೂ ಭರ್ಜರಿ ಸದ್ದು ಮಾಡಿತ್ತು. ಹೀಗಾಗಿ ರೇಣುಕಾಚಾರ್ಯರಿಂದ ಸಚಿವ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಪಡೆದಿದ್ದರು. ಈ ಪ್ರಕರಣವೂ ಕೋರ್ಟ್​ ಮೆಟ್ಟಿಲೇರಿತ್ತು. ನಂತರ ರೇಣುಕಾಚಾರ್ಯ-ಜಯಲಕ್ಷ್ಮೀ ರಾಜಿ ಆಗುವ ಮೂಲಕ ಕೇಸ್​ ಮುಗಿದಿತ್ತು.

ರಘುಪತಿ ಭಟ್ ಸಲ್ಲಾಪದ​ ಸಿಡಿ
2013ರಲ್ಲಿ ಮತ್ತೆ ಸಿಡಿ ಕಂಟಕವಾಗಿ ಕಾಡಿದ್ದು ಉಡುಪಿಯ ಬಿಜೆಪಿ ಶಾಸಕ ರಘುಪತಿ ಭಟ್​ ಅವರಿಗೆ. ಶಾಸಕ ರಘುಪತಿ ಭಟ್​ ಅವರು ಯುವತಿಯೊಬ್ಬಳೊಂದಿಗೆ ಸರಸ-ಸಲ್ಲಾಪದಲ್ಲಿ ತೊಡಗಿದ್ದಾರೆ ಎನ್ನಲಾದ ವಿಡಿಯೋ 2013ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹರಿದಾಡಿ ಬೆಂಗಳೂರನ್ನೂ ತಲುಪಿತ್ತು. ಆದರೆ ರಘುಪತಿ ಭಟ್​ ಈ ಆರೋಪವನ್ನು ನಿರಾಕರಿಸಿದ್ದರು. ವಿಡಿಯೋದಲ್ಲಿ ಇರುವವನು ನಾನು ಅಲ್ಲವೇ ಅಲ್ಲ ಎಂದೂ ಹೇಳಿದ್ದರು. ಆದರೆ 2013ರ ಚುನಾವಣೆಯಲ್ಲಿ ರಘುಪತಿ ಭಟ್​ಗೆ ಟಿಕೆಟ್​ ಸಿಕ್ಕಿರಲಿಲ್ಲ. ನಂತರ 2018ರಲ್ಲಿ ಚುನಾವಣೆಯಲ್ಲಿ ಗೆದ್ದಿದ್ದು, ಪ್ರಸ್ತುತ ಉಡುಪಿ ಶಾಸಕರಾಗಿದ್ದಾರೆ.

ರಾಮದಾಸ್​ಗೂ ಕಂಟಕ ತಪ್ಪಿರಲಿಲ್ಲ
2010ರಲ್ಲಿ ಯಡಿಯೂರಪ್ಪ ಕ್ಯಾಬಿನೆಟ್​ನಲ್ಲಿ ಸಂಪುಟದಲ್ಲಿ ಸಚಿವರಾಗಿದ್ದ ರಾಮ್​ದಾಸ್ ಅವರನ್ನೂ ಸಿಡಿ ಬಿಟ್ಟಿಲ್ಲ. 2014ರಲ್ಲಿ ಪ್ರೇಮಾಕುಮಾರಿ ಎಂಬಾಕೆ ರಾಮ್​ದಾಸ್​ ತನ್ನನ್ನು ವಿವಾಹವಾಗುವುದಾಗಿ ಹೇಳಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇವರಿಬ್ಬರ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ಸಿಡಿ ಕೂಡ ಬಿಡುಗಡೆಯಾಗಿತ್ತು. ಅದು ರಾಮ್​ದಾಸ್​ ಮತ್ತು ಪ್ರೇಮಾಕುಮಾರಿ ನಡುವೆಯೇ ನಡೆದ ಸಂಭಾಷಣೆ ಎಂದು ವಿಧಿವಿಜ್ಞಾನ ಪ್ರಯೋಗಾಲಯವೂ ದೃಢಪಡಿಸಿತ್ತು. ಇದರ ಬೆನ್ನಲ್ಲೇ ಪ್ರೇಮಾಕುಮಾರಿ ಮತ್ತೊಂದು ಬಾಂಬ್​ ಸಿಡಿಸಿದ್ದರು. ರಾಮ್​ದಾಸ್ ತನ್ನನ್ನು ಮದುವೆಯಾಗಿ, ಪತ್ನಿಯೆಂದು ಸ್ವೀಕರಿಸಬೇಕು ಎಂದೂ ಒತ್ತಾಯಿಸಿದ್ದರು. ಈ ಪ್ರಕರಣವೂ ಕೋರ್ಟ್​ ಮೆಟ್ಟಿಲೇರಿದ್ದು, ಇತ್ತೀಚೆಗಷ್ಟೇ ಮೈಸೂರು ಜನಪ್ರತಿನಿಧಿಗಳ ನ್ಯಾಯಾಲಯ ರಾಮ್​ದಾಸ್​ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದೆ.

ಎಚ್​.ವೈ.ಮೇಟಿ ಸೆಕ್ಸ್​ ಸಿಡಿ ಬಾಂಬ್
ಇದಾದ ಬಳಿಕ ಸಿಡಿ ಭೂತದಂತೆ ಕಾಡಿದ್ದು ಎಚ್​.ವೈ. ಮೇಟಿ ಅವರಿಗೆ. 2016ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಮೇಟಿ ಅಬಕಾರಿ ಸಚಿವರಾಗಿದ್ದರು. ಅವರು ಮಹಿಳೆಯೊಂದಿಗೆ ಸೆಕ್ಸ್​ನಲ್ಲಿ ತೊಡಗಿಕೊಂಡಿದ್ದಾರೆನ್ನಲಾದ ಸಿಡಿಯೊಂದು ಬಿಡುಗಡೆಯಾಗಿ ಕೋಲಾಹಲ ಸೃಷ್ಟಿಯಾಗಿತ್ತು. ನಂತರ ಸಿದ್ದರಾಮಯ್ಯನವರು ಮೇಟಿಯವರಿಂದ ರಾಜೀನಾಮೆ ಪಡೆದಿದ್ದರು. ಆದರೆ ಅಲ್ಲಿಂದ ಮೇಟಿಯವರಿಗೆ ರಾಜಕೀಯ ಭವಿಷ್ಯವೇ ಇಲ್ಲದಂತಾಗಿದೆ. ಮೇಟಿಯವರೂ ಸಹ ತಮ್ಮ ವಿರುದ್ಧದ ಆರೋಪವನ್ನು ಅಲ್ಲಗಳೆದಿದ್ದರು. ಇದೊಂದು ನಕಲಿ ಸಿಡಿ ಎಂದೂ ಹೇಳಿದ್ದರು. ಸಿಐಡಿ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು. ಈ ವಿಡಿಯೋದಲ್ಲಿ ಇದ್ದಾಕೆಯ ಹೆಸರು ವಿಜಯಲಕ್ಷ್ಮೀ ಎಂದು ಹೇಳಲಾಗಿತ್ತು. ಆದರೆ ಆಕೆ ಅದನ್ನು ಅಲ್ಲಗಳೆದಿದ್ದರು. ನನಗೂ, ಮೇಟಿಗೂ ತಂದೆ-ಮಗಳ ಸಂಬಂಧ ಎಂದು ಕಣ್ಣಲ್ಲಿ ನೀರು ಹಾಕಿದ್ದರು. ಇನ್ನು ಮೇಟಿ ಪ್ರಕರಣ ಮುಕ್ತಾಯವಾಗಿದ್ದರೂ ಅವರ ರಾಜಕೀಯ ಭವಿಷ್ಯ ಮಗುಚಿದೆ. 2018ರಲ್ಲೂ ಹೀನಾಯವಾಗಿ ಸೋಲು ಕಂಡಿದ್ದಾರೆ.

ಅರವಿಂದ್ ಲಿಂಬಾವಳಿ
ಅರವಿಂದ್​ ಲಿಂಬಾವಳಿಯವರಿಗೂ ಸಿಡಿ ತುಸು ಜಾಸ್ತಿಯೇ ಕಂಟಕ ತಂದಿತು ಎಂದು ಹೇಳಬಹುದು. ಅರವಿಂದ್​ ಲಿಂಬಾವಳಿಯವರದ್ದು ಎಂದು ಹೇಳಲಾದ ಸಲಿಂಗಕಾಮದ ವಿಡಿಯೋವೊಂದು 2019ರಲ್ಲಿ ಹೊರಬಿದ್ದಿತ್ತು. ಇದು ನಕಲಿ ಎಂದು ಖಡಾಖಂಡಿತವಾಗಿ ಹೇಳಿದ್ದ ಅರವಿಂದ್ ಲಿಂಬಾವಳಿ, ಇದು ನಮ್ಮದೇ ಪಕ್ಷದ ಕೆಲವರು, ವಿಪಕ್ಷಗಳ ಜತೆ ಸೇರಿ ಮಾಡಿದ ಹುನ್ನಾರ. ಸದ್ಯದಲ್ಲೇ ಬಯಲಿಗೆ ಎಳೆಯುತ್ತೇನೆ ಎಂದೂ ಹೇಳಿದ್ದರು. ಇದೇ ವಿಚಾರಕ್ಕೆ ಸದನದಲ್ಲಿ ಕಣ್ಣೀರಿಟ್ಟಿದ್ದರು. ನಕಲಿ ವಿಡಿಯೋ ಹರಿಬಿಟ್ಟು ನನ್ನ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಎಚ್​ಎಲ್​ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಈ ಅಶ್ಲೀಲ ವಿಡಿಯೊ ನಕಲಿ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ಕೂಡ ದೃಢೀಕರಿಸಿತ್ತು. ಆದರೆ ಅಷ್ಟರಲ್ಲಾಗಲೇ ಅರವಿಂದ್ ಲಿಂಬಾವಳಿಗೆ ಸಚಿವ ಸ್ಥಾನ ಕೈತಪ್ಪಿತ್ತು. ಇದೀಗ ಮತ್ತೆ ಅವರು ಸಚಿವರಾಗಿದ್ದಾರೆ.

ಇವಿಷ್ಟು ಒಂದು ಕಡೆ ಆದರೆ 2012ರಲ್ಲಿ ಬಿಜೆಪಿಯ ಲಕ್ಷ್ಮಣ್​ ಸವದಿ, ಸಿಸಿ ಪಾಟೀಲ್​, ಕೃಷ್ಣ ಪಾಲೇಮಾರ್ ಅವರು ಸದನದಲ್ಲೇ ನೀಲಿಚಿತ್ರ ನೋಡಿ ಸಿಕ್ಕಿಬಿದ್ದಿದ್ದರು. ನಂತರ ಮೂವರೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂತು. ಹಾಗಂತ ರಾಜಕೀಯದಲ್ಲೇನೂ ಅವರು ಮೂಲೆಗುಂಪಾಗಲಿಲ್ಲ. ಇದೀಗ ಲಕ್ಷ್ಮಣ್​ ಸವದಿ ಉಪಮುಖ್ಯಮಂತ್ರಿಯಾದರೆ ಸಿ.ಸಿ.ಪಾಟೀಲ್ ಸಚಿವರಾಗಿದ್ದಾರೆ. ಇದನ್ನು ಹೊರತುಪಡಿಸಿ ಹಾಲಿ ಶಾಸಕರೋರ್ವರು ತಮ್ಮ ವಿರುದ್ಧ ಹನಿಟ್ರ್ಯಾಪ್​ ಮಾಡಲಾಗಿದೆ ಎಂದು ದೂರು ಸಹ ನೀಡಿದ್ದಾರೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ ವಜುಭಾಯಿ ವಾಲಾ

ರಾಜಕೀಯ ವಿಶ್ಲೇಷಣೆ | ರಮೇಶ್ ಜಾರಕಿಹೊಳಿ ಮುಂದಿರುವ ಮೂರು ಆಯ್ಕೆಗಳು