Fact Check: ಬೆಂಗಳೂರಿನಲ್ಲಿ ಇಬ್ಬರು ಹಿಂದೂ ಹುಡುಗಿಯರನ್ನು ಲಿಫ್ಟ್‌ನಲ್ಲಿ ಕಿಡ್ನಾಪ್ ಮಾಡಿದ ಸುದ್ದಿ ನಿಜವೇ?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಬ್ಬರು ಹಿಂದೂ ಹುಡುಗಿಯರನ್ನು ಲಿಫ್ಟ್ನಿಂದ ಕಿಡ್ನಾಪ್ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಕಳೆದ ಕೆಲವು ದಿನಗಳಿಂದ ಇದಕ್ಕೆ ಸಂಬಂಧಿಸಿದ ವೀಡಿಯೊ ವೈರಲ್ ಆಗುತ್ತಿದೆ. ಹಾಗಾದರೆ ಸಿಲಿಕಾನ್ ಸಿಟಿಯಲ್ಲಿ ಈ ರೀತಿಯ ಭಯಾನಕ ಕಿಡ್ನಾಪ್ ನಡೆದಿದೆಯೇ?. ನಿಜಾಂಶವನ್ನು ತಿಳಿಯಲು ಈ ಸ್ಟೋರಿ ಓದಿ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಇಬ್ಬರು ಹುಡುಗಿಯರನ್ನು ಲಿಫ್ಟ್‌ನಲ್ಲಿ ಅಪಹರಿಸುತ್ತಿರುವುದನ್ನು ಕಾಣಬಹುದು. ಸಾಮಾಜಿಕ ಮಾಧ್ಯಮ ಬಳಕೆದಾರರು ಬೆಂಗಳೂರಿನಲ್ಲಿ ಜಿಹಾದಿಗಳು ನಡೆಸಿದ ಅಪಹರಣದ ವೀಡಿಯೊ ಎಂದು ಹೇಳಿಕೊಂಡು ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಸಿಲಿಕಾನ್ ಸಿಟಿಯಲ್ಲಿ ಈ ರೀತಿಯ ಭಯಾನಕ ಕಿಡ್ನಾಪ್ ನಡೆದಿದೆಯೇ?. ನಿಜಾಂಶವನ್ನು ತಿಳಿಯಲು ಈ ಸ್ಟೋರಿ ಓದಿ.
ವೈರಲ್ ಆಗುತ್ತಿರುವುದೇನು?
ಫೇಸ್‌ಬುಕ್ ಬಳಕೆದಾರರೊಬ್ಬರು ಸೆಪ್ಟೆಂಬರ್ 28 ರಂದು ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. “ಜಿಹಾದಿ ರಕ್ತಪಿಶಾಚಿಗಳಿಂದ ಹಿಂದೂ ಹುಡುಗಿಯರು ಹೇಗೆ ಅಪಹರಣ, ಕಾಣೆಯಾಗಿದ್ದಾರೆಂದು ನಿಮ್ಮ ಸ್ವಂತ ಕಣ್ಣುಗಳಿಂದ ನೋಡಿ. ಲಿಫ್ಟ್‌ನಲ್ಲಿ ಪ್ರಜ್ಞೆ ತಪ್ಪಿದ ನಂತರ, ಅವರು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಕಾರಿನಲ್ಲಿ ಹುಡುಗಿಯರನ್ನು ಕರೆದೊಯ್ಯಿದರು. ನೀವು ನಿಮ್ಮ ಹುಡುಗಿಯರನ್ನು ಉಳಿಸಿ. ಈ ರಕ್ತಪಿಶಾಚಿಗಳ ಪೈಶಾಚಿಕ ಚಟುವಟಿಕೆಗಳ ಬಗ್ಗೆ ನಿಮ್ಮ ಹೆಣ್ಣುಮಕ್ಕಳಿಗೆ ಎಚ್ಚರಿಸಿ. ಕೇರಳದ ಜಿಹಾದಿಗಳು ಇದೇ ರೀತಿ 32,000 ಹಿಂದೂ ಹುಡುಗಿಯರನ್ನು ಕಣ್ಮರೆಗೊಳಿಸಿದ್ದಾರೆ.’’ ಎಂದು ಬರೆದುಕೊಂಡಿದ್ದಾರೆ.
Fact Check:
ಈ ಸುದ್ದಿಯ ನಿಜಾಂಶವನ್ನು ಟಿವಿ9 ಕನ್ನಡ ಕಂಡುಹಿಡಿದಿದ್ದು ಸುಳ್ಳು ಹೇಳಿಕೆಯೊಂದಿಗೆ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಹುಡುಗಿಯರ ಅಪಹರಣದ ವೈರಲ್ ವಿಡಿಯೋ ಬಗ್ಗೆ ಮಾಡಲಾಗುತ್ತಿರುವ ಆರೋಪ ಸುಳ್ಳಾಗಿದ್ದು, ಅಸಲಿಗೆ ಇದು ಭಾರತದ್ದೇ ಅಲ್ಲ, ಈ ವಿಡಿಯೋ ಈಜಿಪ್ಟ್‌ನದ್ದಾಗಿದೆ.
ನಾವು ಗೂಗಲ್ ಲೆನ್ಸ್‌ನಲ್ಲಿ ವೈರಲ್ ವಿಡಿಯೋದ ಕೀಫ್ರೇಮ್‌ಗಳನ್ನು ಹುಡುಕಿದ್ದೇವೆ. ಜೋರ್ಡಾನ್ ಮೂಲದ ನ್ಯೂಸ್ ಪೋರ್ಟಲ್ ಅಲ್ ಬವಾಬಾ ಡಿಸೆಂಬರ್ 20, 2023 ರ ಸುದ್ದಿಯಲ್ಲಿ ಈ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಸುದ್ದಿ ಪ್ರಕಾರ, ಈ ಪ್ರಕರಣವು ಈಜಿಪ್ಟ್ನಿಂದ ಬಂದಿದೆ. ಇಲ್ಲಿಂದ ಸುಳಿವನ್ನು ತೆಗೆದುಕೊಂಡು, ನಾವು ಗೂಗಲ್ನಲ್ಲಿ ಕೀವರ್ಡ್ ಸರ್ಚ್ ಮಾಡಿದಾಗ ಅನೇಕ ಸುದ್ದಿಗಳನ್ನು ಕಂಡುಕೊಂಡಿದ್ದೇವೆ.
ಡಿಸೆಂಬರ್ 21, 2023 ರಂದು ಈಜಿಪ್ಟ್ ನ್ಯೂಸ್ ಪೋರ್ಟಲ್ ಅಲ್-ಮಸ್ರಿ ಅಲ್-ಯೂಮ್‌ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಈಜಿಪ್ಟ್‌ನ ನಾಸ್ರ್ ನಗರದ ನಿವಾಸಿ, ಇಬ್ಬರು ಹೆಣ್ಣುಮಕ್ಕಳ ತಾಯಿ ತಮ್ಮ ದೂರಿನಲ್ಲಿ, ತನ್ನ ಮಾಜಿ ಪತಿ ಇತರ ಇಬ್ಬರು ಪುರುಷರೊಂದಿಗೆ ಸೇರಿಕೊಂಡು ಬಲವಂತವಾಗಿ ನನ್ನ ಮಕ್ಕಳನ್ನು ಅಪಹರಿಸಿದ್ದಾರೆ. ಮಗಳು ಪ್ರಾಣ ಉಳಿಸಿಕೊಳ್ಳಲು ಕಾರಿನಿಂದ ಜಿಗಿದಿದ್ದಳು. ಕೌಟುಂಬಿಕ ಕಲಹಗಳಿಂದಾಗಿ ನನ್ನ ಮಕ್ಕಳು 2022ರವರೆಗೆ ಅವರ ತಂದೆಯ ಬಳಿಯೇ ಇದ್ದರು. ಆದರೆ ಆ ನಂತರ ನಾನು ಇಬ್ಬರು ಹೆಣ್ಣುಮಕ್ಕಳನ್ನು ಕಾನೂನುಬದ್ಧವಾಗಿ ಪಡೆದುಕೊಂಡಿದ್ದೇನೆ ಎಂದು ಮಹಿಳೆ ನೀಡಿರುವ ಹೇಳಿಕೆ ಇದರಲ್ಲಿದೆ.
ಹಾಗೆಯೆ ಡಿಸೆಂಬರ್ 21, 2023 ರಂದು ಅಲ್ ಅರೇಬಿಯಾ ನ್ಯೂಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ವೀಡಿಯೊ ಅಪ್ಲೋಡ್ ಮಾಡಲಾಗಿದೆ. ಈಜಿಪ್ಟ್‌ನಲ್ಲಿ ವಿಷಕಾರಿ ಪದಾರ್ಥಗಳೊಂದಿಗೆ ಹುಡುಗಿಯರನ್ನು ಅಪಹರಿಸುತ್ತಿರುವ ವಿಡಿಯೋ. ತಂದೆಯೇ ಅಪಹರಣಕ್ಕೆ ಸಂಚು ರೂಪಿಸಿದ್ದರು ಎಂದು ವರದಿಯಲ್ಲಿದೆ.
ಇದಾದ ನಂತರ ಇಂತಹ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆಯೇ ಎಂದು ಕೀವರ್ಡ್ ಮೂಲಕ ಹುಡುಕಿದೆವು. ಅಂತಹ ಯಾವುದೇ ಸುದ್ದಿ ನಮಗೆ ಎಲ್ಲಿಯೂ ಸಿಕ್ಕಿಲ್ಲ. ದೃಢೀಕರಣಕ್ಕಾಗಿ, ನಾವು ನಮ್ಮ ವರದಿಗಾರರನ್ನು ಸಂಪರ್ಕಿಸಿದ್ದೇವೆ. ಈ ಘಟನೆ ಬೆಂಗಳೂರಿನದ್ದಲ್ಲ ಎಂದು ಅವರು ಖಚಿತಪಡಿಸಿದ್ದಾರೆ.
ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ಹುಡುಗಿಯರ ಅಪಹರಣದ ವೈರಲ್ ವಿಡಿಯೋ ಬೆಂಗಳೂರು ಅಥವಾ ಭಾರತದ್ದಲ್ಲ ಎಂಬುದು ಕಂಡುಹಿಡಿದಿದೆ. ಇದು ಈಜಿಪ್ಟ್‌ನಲ್ಲಿ ನಡೆದ ಘಟನೆ ಆಗಿದ್ದು, ತಂದೆ ತನ್ನ ಹೆಣ್ಣು ಮಕ್ಕಳನ್ನು ಅಪಹರಿಸುತ್ತಿರುವ ವಿಡಿಯೋ ಇದಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ