ಬೆಂಗಳೂರು ನ.02: ಫೇರ್‌ಪ್ರೈಸ್ ಷಾಪ್ ಡೀಲರ್ಸ್ ಅಸೋಸಿಯೇಷನ್ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನಿಟ್ಟು ನವೆಂಬರ್ 7 ರವರೆಗೆ ಪಡಿತರ ವಿತರಣೆ (Ration Distribution) ಮಾಡದಿರಲು ನಿರ್ಧರಿಸಿದೆ. ನವೆಂಬರ್ 7 ರಂದು ಬೆಂಗಳೂರಿನ (Bengaluru) ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನ್ಯಾಯಬೆಲೆ ಅಂಗಡಿಕಾರರು ನಿರ್ಧರಿಸಿದ್ದಾರೆ. ಸರಕಾರ ಫಲಾನುಭವಿಗಳಿಗೆ ಅಕ್ಕಿ ಬದಲು ಹಣ ನೀಡುವುದನ್ನು ನಿಲ್ಲಿಸಬೇಕು ಎಂಬುದು ನ್ಯಾಯಬೆಲೆ ಅಂಗಡಿ (Fair Price Shop) ನಡೆಸುವವರ ಪ್ರಮುಖ ಬೇಡಿಕೆಯಾಗಿದೆ.
ಇದನ್ನೂ ಓದಿ: ಅಕ್ಕಿ ಬದಲು ಹಣ ನೀಡುವುದರ ವಿರುದ್ಧ ಸಿಡಿದ ಪಡಿತರ ವಿತರಕರು
ಅಕ್ಕಿ ಬದಲು ಫಲಾನುಭವಿಗಳಿಗೆ ಹಣ ನೀಡುವುದನ್ನು ವಿರೋಧಿಸಿ ನ್ಯಾಯಬೆಲೆ ವಿತರಕರ ಸಂಘ ಅಕ್ಟೋಬರ್‌ನಲ್ಲಿ ಪ್ರತಿಭಟನೆಗೆ ಕರೆ ನೀಡಿತ್ತು. ರಾಜ್ಯಾದ್ಯಂತ 20,350 ನ್ಯಾಯಬೆಲೆ ಅಂಗಡಿಗಳು ಪ್ರತಿಭಟನೆಗೆ ಬೆಂಬಲ ನೀಡಿದ್ದವು. ಇದೀಗ ಮತ್ತೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ನಿರ್ಧರಿಸಿದೆ.
ರಾಜ್ಯದಲ್ಲಿ 4.30 ಕೋಟಿ ಫಲಾನುಭವಿಗಳು ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅರ್ಹರಾಗಿದ್ದಾರೆ. ವರದಿಗಳ ಪ್ರಕಾರ, ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿಯನ್ನು ವಿತರಿಸಲು ಸರ್ಕಾರಕ್ಕೆ ತಿಂಗಳಿಗೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅಗತ್ಯವಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಯೊಬ್ಬ ಅರ್ಹ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಪ್ರತಿ ಫಲಾನುಭವಿಗೆ 10 ಕೆಜಿ ನೀಡುವಷ್ಟು ಅಕ್ಕಿ ಸರ್ಕಾರಕ್ಕೆ ಸಿಗಲಿಲ್ಲ. ನೇರ ವರ್ಗಾವಣೆ (ಡಿಬಿಟಿ) ವಿಧಾನದ ಮೂಲಕ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಬದಲಿಗೆ 170 ರೂ.ಗಳನ್ನು ಸರ್ಕಾರ ನೀಡುತ್ತಿದೆ.
ಒಬ್ಬ ಫಲಾನುಭವಿಗೆ 1 ಕೆಜಿ ಅಕ್ಕಿಯನ್ನು ವಿತರಿಸಲು ಪಡಿತರ ವಿತರಕರು 1.24 ರೂ. ಕಮಿಷನ್ ಪಡೆಯುತ್ತಾರೆ. ಸರ್ಕಾರವು ಅಕ್ಕಿಯ ಬದಲು ಫಲಾನುಭವಿಗಳಿಗೆ ಹಣವನ್ನು ನೀಡಿದರೆ ಪಡಿತರ ವಿತರಕರು ಈ ಕಮಿಷನ್ ಪಡೆಯುವುದಿಲ್ಲ. ಡಿಬಿಟಿ ಮೂಲಕ ಫಲಾನುಭವಿಗಳಿಗೆ ಹಣವನ್ನು ವರ್ಗಾಯಿಸಲು ಸರ್ಕಾರಕ್ಕೆ 733 ಕೋಟಿ ರೂ. ಬೇಕಾಗುತ್ತದೆ. ಸರ್ಕಾರ ಜನರಿಗೆ ಅಕ್ಕಿ ನೀಡಿದರೆ, ಪಡಿತರ ವಿತರಕರಿಗೆ ತಿಂಗಳಿಗೆ 856 ಕೋಟಿ ರೂ. ಕಮಿಷನ್ ಹಣ ನೀಡಬೇಕು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:57 pm, Thu, 2 November 23