ದೇವಮಾನವ ಎಂದು ನಂಬಿಸಿ ಲಕ್ಷಾಂತರ ಹಣ ಪೀಕಿದ ನಕಲಿ ಸಾಯಿ ಬಾಬಾ
ತಾನು ದೇವಮಾನವ ಎಂದು ನಂಬಿಸಿದ ನಕಲಿ ಸಾಯಿಬಾಬನೊಬ್ಬ ಜನರಿಂದ ಲಕ್ಷಾಂತರ ರೂಪಾಯಿ ಪೀಂಕಿಸಿದ ಪ್ರಕರಣವೊಂದು ರಾಯಚೂರಿನಲ್ಲಿ ಬೆಳಕಿಗೆ ಬಂದಿದ್ದು, ಒಟ್ಟು ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಮನಗರ: ತಾನು ದೇವಮಾನವ ಎಂದು ನಂಬಿಸಿದ ನಕಲಿ ಸಾಯಿಬಾಬನೊಬ್ಬ ಜನರಿಂದ ಲಕ್ಷಾಂತರ ರೂಪಾಯಿ ಪೀಕಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಕಲಿ ಸಾಯಿ ಬಾಬಾನ ವಂಚನೆಯ ಮುಖವಾಡ ಗಮನಿಸಿದ ಸಿಂಧೂ ಎಂಬ ಮಹಿಳೆಯು ಸಚಿನ್ ಆಕಾರಂ ಸರ್ ಗರ್ ಅಲಿಯಾಸ್ ಪ್ರೇಮ ಸಾಯಿ ಬಾಬಾ ಎಂಬಾತನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಚನ್ನಪಟ್ಟಣದ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇತರ ಐವರ ವಿರುದ್ಧವೂ ದೂರು ದಾಖಲಾಗಿದೆ.
ಪುಟ್ಟಭರ್ತಿ ಸಾಯಿ ಬಾಬಾ ಮರಣ ನಂತರ ಚನ್ನಪಟ್ಟಣದ ಮಳೂರು ಗ್ರಾಮದಲ್ಲಿ ಪ್ರೇಮಾ ಸಾಯಿ ಬಾಬಾ ಆಗಿ ಆವತರಿಸುತ್ತಾರೆ ಎಂಬ ಉಲ್ಲೇಖವನ್ನು ಸಚಿನ್ ಆಕಾರಂ ಸರ್ ಗರ್ ಬಂಡವಾಳವನ್ನಾಗಿ ಮಾಡಿಕೊಂಡಿದ್ದನು. ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಈತ ಕಳೆದ ಎಂಟು ತಿಂಗಳಿಂದ ಚನ್ನಪಟ್ಟಣದಲ್ಲಿ ಯಶೋಧಮ್ಮ ಎಂಬುವವರ ಮನೆಯಲ್ಲಿ ವಾಸವಾಗಿದ್ದನು. ಅಲ್ಲಿಯೇ ಪೂಜೆ ಮಾಡುತ್ತಿದ್ದನು. ತಾನು ದೇವಮಾನವ ಎಂದು ಸ್ವಯಂ ಘೋಷಣೆ ಮಾಡಿ ಜನರನ್ನು ಮರಳು ಮಾಡಿ ತನ್ನತ್ತ ಸೆಳೆದುಕೊಂಡು ಹಣ ವಸೂಲಿ ಮಾಡುತ್ತಿದ್ದನು.
ಚನ್ನಪಟ್ಟಣ ಮಂಗಳವಾರಪೇಟೆ ಬಳಿಯ ಸಿದ್ದೇಗೌಡ ಎಂಬುವವರ ತೋಟದ ಮನೆಯಲ್ಲಿ ಪ್ರತಿ ಗುರುವಾರ ಭಜನೆ ನಡೆಸಲಾಗುತ್ತಿತ್ತು. ಈ ವೇಳೆ ವಂಚಕ ಸಚಿನ್, ಸಿದ್ದೇಗೌಡ ಪತ್ನಿಗೆ ಯಾಮಾರಿಸಿ ಹಣ ವಸೂಲಿ ಮಾಡಿದ್ದಾನೆ. ಶ್ರೀ ಪ್ರೇಮ ಸ್ವರೂಪಿ ಸಾಯಿ ಸೇವಾ ಸಮಿತಿ ಟ್ರಸ್ಟ್ಗೆ ಹಣ ನೀಡುವಂತೆ ಒತ್ತಾಯಿಸಿ ಹಣ ವಸೂಲಿ ಮಾಡಿದ್ದಾನೆ. ಹೀಗೆ ಜನರಿಂದ ಒಂದಲ್ಲಾ ಒಂದು ರೀತಿಯಲ್ಲಿ ಹಣ ವಸೂಲಿ ಮಾಡುತ್ತಿದ್ದ ಪ್ರೇಮ ಸಾಯಿಬಾಬಾ, ಕಳೆದ ಒಂದು ತಿಂಗಳಿನಿಂದ ಜನರ ಕಣ್ಣಿಗೆ ಕಾಣಿಸದೆ ನಾಪತ್ತೆಯಾಗಿದ್ದಾನೆ.
ಅದರಂತೆ ಸಿಂಧೂ ಎಂಬ ಮಹಿಳೆ ಚನ್ನಪಟ್ಟಣದ ಪೂರ್ವ ಠಾಣೆಗೆ ತೆರಳಿ ದೂರು ನೀಡಿದ್ದು, ಸಚಿನ್ ಆಕಾರಂ ಸರ್ ಗರ್, ವಿನಾಯಕ ರಾಜ್, ಜಯಂತ್, ಯಶೋಧಮ್ಮ, ಉಮಾಶಂಕರ್, ಪ್ರಶಾಂತ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಗಳ ಬಂಧನಕ್ಕೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ