ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಬೆಂಬಲಿಸಿ ಹಾವೇರಿ ಮತ್ತು ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಬಂದ್ ಆಚರಿಸಲು ರೈತ ಸಂಘಗಳು ಕರೆ ನೀಡಿವೆ. ಓಲಾ, ಊಬರ್ ಕಾರ್ಮಿಕರ ಸಂಘಟನೆ ಬಂದ್ಗೆ ನೈತಿಕ ಬೆಂಬಲ ಸೂಚಿಸಿದೆ.
ಹಾವೇರಿಯಲ್ಲಿ ಮಾಧ್ಯಮ ಗೋಷ್ಠಿ ನಡೆಸಿದ ಕರ್ನಾಟಕ ರಾಜ್ಯ ರೈತಸಂಘದ ಪ್ರಧಾನ ಕಾರ್ಯದರ್ಶಿ ಮಾಲತೇಶ ಪೂಜಾರ, ರೈತರಿಗೆ ಮಾರಕ ಆಗುವ ಮೂರು ಕಾನೂನುಗಳನ್ನ ವಿರೋಧಿಸಿ ದೆಹಲಿಯಲ್ಲಿ ರೈತರು ನಿರಂತರ ಧರಣಿ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತ್ ಬಂದ್ಗೆ ಜಿಲ್ಲೆಯ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ರಾಜ್ಯದಲ್ಲಿನ ರೈತರ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ ದೆಹಲಿ ಮಾದರಿ ಹೋರಾಟ ನಡೆಸಬೇಕಾಗಬಹುದು ಎಂದು ಎಚ್ಚರಿಸಿದರು.
ಹಾವೇರಿ ಜಿಲ್ಲೆಯಲ್ಲಿ ಹಾದು ಹೋಗಿರುವ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ದೆಹಲಿ ಮಾದರಿಯಲ್ಲಿ ಚಳವಳಿ ಆರಂಭಿಸುವ ಬಗ್ಗೆ ಕೆಲವು ದಿನಗಳ ಹಿಂದೆ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಜಿಲ್ಲೆಯವರೇ ಮುಖ್ಯಮಂತ್ರಿಯಾಗಿರುವುದರಿಂದ ಇಲ್ಲಿಂದಲೇ ಪ್ರತಿಭಟನೆ ಆರಂಭಿಸಿದರೆ ರೈತರ ಸಮಸ್ಯೆಗೆ ಸ್ಪಂದನೆ ಸಿಗಬಹುದು ಎಂಬ ಉದ್ದೇಶದಿಂದ ಈ ಸ್ಥಳ ಆಯ್ಕೆ ಮಾಡಿಕೊಂಡಿದ್ದೇವೆ ಎಂದರು.
ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ ಮಾಡುವುದು ಸೇರಿದಂತೆ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನೀಡುವುದು ಸೇರಿದಂತೆ ರೈತರ ಸಮಸ್ಯೆಗೆ ಸರಕಾರದಿಂದ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿಯೇ ದೆಹಲಿ ಮಾದರಿ ಹೋರಾಟಕ್ಕೆ ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿ ದೆಹಲಿ ಮಾದರಿ ಹೋರಾಟ ಆರಂಭಿಸುವ ದಿನಾಂಕವನ್ನೂ ಶೀಘ್ರ ಪ್ರಕಟಿಸಲಾಗುವುದು ಎಂದರು.
ದಾವಣಗೆರೆಯಲ್ಲಿಯೂ ಬಂದ್ಗೆ ಬೆಂಬಲ
ಸೆ.27ರಂದು ಭಾರತ್ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿಯೂ ಪೂರ್ಣ ಪ್ರಮಾಣದ ಬಂದ್ ನಡೆಸಲು ಕಬ್ಬು ಬೆಳೆಗಾರರ ಸಂಘ ಹಾಗೂ ರಾಜ್ಯ ರೈತ ಸಂಘ ನಿರ್ಧರಿಸಿದೆ. ವಿದ್ಯುತ್ ಮಸೂದೆ, ತಪ್ಪು ಆರ್ಥಿಕ ನೀತಿಗಳು, ಪೆಟ್ರೋಲ್, ಡಿಸೇಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಒತ್ತಾಯಿಸಿ ಭಾರತ್ ಬಂದ್ಗೆ ಕರೆ ನೀಡಲಾಗಿದೆ. ಬಂದ್ಗೆ ವರ್ತಕರು ಮತ್ತು ಗ್ರಾಹಕರು ಸಹಕರಿಸಬೇಕೆಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತ್ ಕುಮಾರ್, ಉಪಾಧ್ಯಕ್ಷ ತೇಜಸ್ವಿ ಪಟೇಲ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕದ್ದುಮುಚ್ಚಿ ಪಾಕಿಸ್ತಾನಕ್ಕೆ ಹೋಗಿ ಬರುತ್ತಾರೆ. ಆದರೆ ಇಲ್ಲಿನ ರೈತರ ಹೋರಾಟವನ್ನು ಪಾಕಿಸ್ತಾನ ಪ್ರಾಯೋಜಿತ ಎಂದು ಕರೆಯುತ್ತಾರೆ ಎಂದು ಕಿಡಿಕಾರಿದರು.
ಬಂದ್ಗೆ ಓಲಾ, ಊಬರ್ ಸಂಘಟನೆಯಿಂದ ಬೆಂಬಲ
ಓಲಾ, ಊಬರ್ ಸಂಘಟನೆಗಳು ಭಾರತ್ ಬಂದ್ಗೆ ನೈತಿಕ ಬೆಂಬಲ ನೀಡಿವೆ. ಕೊರೊನಾದಿಂದಾಗಿ ಚಾಲಕರು ನಷ್ಟ ಅನುಭವಿಸುತ್ತಿದ್ದಾರೆ. ವಾಹನಗಳನ್ನು ಸ್ಥಗಿತಗೊಳಿಸಿದರೆ ಗ್ರಾಹಕರಿಗೆ ಮತ್ತು ಚಾಲಕರಿಗೆ ಸಮಸ್ಯೆಯಾಗುತ್ತದೆ. ಹೀಗಾಗಿ ಬಂದ್ಗೆ ನೈತಿಕ ಬೆಂಬಲ ಸೂಚಿಸುತ್ತಿದ್ದೇವೆ ಎಂದು ಓಲಾ ಊಬರ್ ಅಸೋಸಿಯೇಷನ್ ಮುಖಂಡ ತನ್ವೀರ್ ಪಾಷಾ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Bharat bandh ಸೆ. 27 ರಂದು ಭಾರತ್ ಬಂದ್; ರೈತರಿಗೆ ಬೆಂಬಲ ಘೋಷಿಸಿ ಎಸ್‌ಕೆಎಂ ಕರೆ ನೀಡಿದ ಬಂದ್ಗೆ 100 ಸಂಘಟನೆಗಳಿಂದ ಬೆಂಬಲ
ಇದನ್ನೂ ಓದಿ: Farmers Protest: ಸಪ್ಟೆಂಬರ್ 25ರಂದು ಭಾರತ್ ಬಂದ್ಗೆ ಕರೆ ನೀಡಿದ ಸಂಯುಕ್ತ ಕಿಸಾನ್ ಮೋರ್ಚಾ
(Farmer Associations Ola Uber Unions to Support Bharat Bandh)