ಅರಳಿ ನಿಂತ ಚೆಂಡು ಹೂ ಗಿಡಗಳ ಮೇಲೆ ಟ್ರ್ಯಾಕ್ಟರ್ ಪ್ರಹಾರ; ಬೆಳೆಸಿದವನ ಕೈಯಿಂದಲೇ ಮಣ್ಣುಪಾಲಾದ ಸುಂದರ ಹೂವುಗಳು

ದೀಪಾವಳಿ, ತುಳಸಿ ಮದುವೆ ಮುಗಿದ ಮೇಲೆ ಅದ್ದೂರಿ ಜಾತ್ರೆ, ಉತ್ಸವ ಅದೂ-ಇದು ಎನ್ನುತ್ತ ಹೇಗೂ ಹೂವಿಗೆ ಬೇಡಿಕೆ ಇದ್ದೇ ಇರುತ್ತದೆ ಎಂದು ರೈತ ವೀರಪ್ಪ ತನ್ನ 30 ಗುಂಟೆ ಜಮೀನಿನಲ್ಲಿ ಹಳದಿ, ಕೇಸರಿ ಬಣ್ಣದ ಚೆಂಡು ಹೂವುಗಳನ್ನು ಬೆಳೆದಿದ್ದರು.

ಅರಳಿ ನಿಂತ ಚೆಂಡು ಹೂ ಗಿಡಗಳ ಮೇಲೆ ಟ್ರ್ಯಾಕ್ಟರ್ ಪ್ರಹಾರ; ಬೆಳೆಸಿದವನ ಕೈಯಿಂದಲೇ ಮಣ್ಣುಪಾಲಾದ ಸುಂದರ ಹೂವುಗಳು
ಚೆಂಡು ಹೂವುಗಳನ್ನು ನಾಶಪಡಿಸಿದ ಬೆಳೆಗಾರ ವೀರಪ್ಪ
Follow us
Lakshmi Hegde
| Updated By: ಸಾಧು ಶ್ರೀನಾಥ್​

Updated on:Dec 11, 2020 | 10:35 AM

ಹಾವೇರಿ: ಬೇಡಿಕೆ ಕಡಿಮೆಯಾಗಿದ್ದಕ್ಕೆ ಬೇಸತ್ತ ಬೆಳೆಗಾರ ತಾವು ಬೆಳೆದ ಚೆಂಡು ಹೂವನ್ನೇ ನಾಶ ಮಾಡಿದ ಘಟನೆ ಹಾನಗಲ್​ ತಾಲೂಕಿನ ಆಡೂರು ಗ್ರಾಮದಲ್ಲಿ ನಡೆದಿದೆ. ತಾನೇ ಬೆಳೆದ ಹೂವಿನ ಗಿಡಗಳನ್ನು ನಾಶ ಮಾಡಿದ್ದು, ವೀರಪ್ಪ ಎಂಬ ರೈತ.

ದೀಪಾವಳಿ, ತುಳಸಿ ಮದುವೆ ಮುಗಿದ ಮೇಲೆ ಅದ್ದೂರಿ ಜಾತ್ರೆ, ಉತ್ಸವ ಅದೂ-ಇದು ಎನ್ನುತ್ತ ಹೇಗೂ ಹೂವಿಗೆ ಬೇಡಿಕೆ ಇದ್ದೇ ಇರುತ್ತದೆ ಎಂದು ರೈತ ವೀರಪ್ಪ ತನ್ನ 30 ಗುಂಟೆ ಜಮೀನಿನಲ್ಲಿ ಹಳದಿ, ಕೇಸರಿ ಬಣ್ಣದ ಚೆಂಡು ಹೂವುಗಳನ್ನು ಬೆಳೆದಿದ್ದರು. ಆದರೆ ಈ ಬಾರಿ ಕೊರೊನಾ ಕಾಟದಿಂದ ಜಾತ್ರೆ, ಉತ್ಸವಗಳೆಲ್ಲ ಸರಳವಾಗಿ ನಡೆಯುತ್ತಿವೆ. ಹೂವಿಗೂ ಬೇಡಿಕೆ ಕಡಿಮೆ ಆಯಿತು. ಹಾಗಾಗಿ ಗಿಡಗಳನ್ನೇ ನಾಶ ಮಾಡಿದ್ದಾರೆ.

3 ವರ್ಷಗಳಿಂದ ನಷ್ಟ ಚೆಂಡು ಹೂ ಬೆಳಗಾರನಾದ ರೈತ ವೀರಪ್ಪ, ಕಳೆದ ಮೂರು ವರ್ಷಗಳಿಂದಲೂ ನಷ್ಟದಲ್ಲೇ ಇದ್ದರು. ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಹೂವು ಬೆಳೆಯಲು ಹಾಕಿದ ಬಂಡವಾಳವೂ ಕೈ ಸೇರದಂತೆ ಆಗಿತ್ತು. ಈ ಬಾರಿ ದೀಪಾವಳಿ, ತುಳಸಿ ಮದುವೆ ಸಮಯದಲ್ಲಿ ಚೆಂಡು ಹೂವಿಗೆ ಬೇಡಿಕೆ ಬಂದು ಸ್ವಲ್ಪ ಮಟ್ಟಿನ ಲಾಭ ಕಂಡಿತ್ತಾದರೂ, ಕಡೆಗೆ ಕುಗ್ಗಿತ್ತು. ಇನ್ನೂ ಒಂದೊಂದು ಗಿಡಗಳಲ್ಲಿ 60-70 ಹೂವುಗಳು ಇದ್ದವು. ಯಾವುದೇ ಜಾತ್ರೆ, ಉತ್ಸವಗಳು ಇಲ್ಲದ ಕಾರಣ, ರೈತ ವೀರಪ್ಪ ಟ್ರ್ಯಾಕ್ಟರ್​ನಿಂದ ರೋಟರ್​ ಹೊಡೆಸಿ, ಚೆಂಡು ಹೂವುಗಳನ್ನು ನಾಶ ಮಾಡಿದ್ದಾರೆ.

ನೆರವಿಗೆ ಬರಲಿಲ್ಲ ಸಹಾಯಧನ ಕೊರೊನಾ ಲಾಕ್​ಡೌನ್ ಸಮಯದಲ್ಲಿ ಹೂವು ಬೆಳೆದು ನಷ್ಟ ಅನುಭವಿಸಿದವರಿಗೆ ಸಹಾಯಧನ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ ರೈತ ವೀರಪ್ಪ, ಮೂರು ವರ್ಷಗಳಿಂದ ಚೆಂಡು ಹೂವು ಬೆಳೆಯುತ್ತಿದ್ದರೂ ಸರ್ಕಾರ ಕೊರೊನಾ ಲಾಕ್​ಡೌನ್​ ಸಮಯದಲ್ಲಿ ಘೋಷಿಸಿದ ಸಹಾಯಧನ ರೈತನ ಕೈ ಸೇರಿಲ್ಲ. ಅರಳಿ ನಿಂತ ಹೂವುಗಳನ್ನು ನಾಶ ಮಾಡಲು ಸಂಕಟವಾದರೂ, ಬೇರೆ ಬೆಳೆ ಬೆಳೆಯಬಹುದಲ್ಲಾ ಎಂಬ ಆಸೆಯಿಂದ ನಾಶ ಮಾಡಿದ್ದಾಗಿ ವೀರಪ್ಪ ಹೇಳಿದ್ದಾರೆ.

Published On - 9:40 pm, Thu, 10 December 20