AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ: ಮನೆ ಮಗನಂತೆ ಸಾಕಿರುವ ಎತ್ತಿಗೆ ಹುಟ್ಟುಹಬ್ಬ; 8 ಕೆಜಿ ಕೆಕ್ ಕತ್ತರಿಸಿ ಸಂಭ್ರಮಿಸಿದ ರೈತ ಕುಟುಂಬ

ಹುಟ್ಟುಹಬ್ಬದ ದಿನ ಬೆಳಿಗ್ಗೆ ಮೈಲಾರಿಯ ಮೈ ತೊಳೆದು, ಬಳಿಕ ಮನೆಯ ಮುಂದೆ ಪೆಂಡಾಲ್ ಹಾಕಿಸಿ, ಸಂಜೆ ಹೊತ್ತಿಗೆ ಇಡೀ ಊರಿನ ಜನರರನ್ನು ಸೇರಿಸಿ ಕೆಕ್​ ಕತ್ತರಿಸಲಾಗುತ್ತದೆ. ಅಂತೆಯೇ ಈ ಬಾರಿ ಕೂಡ ನಾಗಪ್ಪನ ಮನೆ ಎದುರು 8 ಕೆಜಿಯ ಕೇಕ್ ತಂದು ಕತ್ತರಿಸಲಾಗಿದೆ.

ಧಾರವಾಡ: ಮನೆ ಮಗನಂತೆ ಸಾಕಿರುವ ಎತ್ತಿಗೆ ಹುಟ್ಟುಹಬ್ಬ; 8 ಕೆಜಿ ಕೆಕ್ ಕತ್ತರಿಸಿ ಸಂಭ್ರಮಿಸಿದ ರೈತ ಕುಟುಂಬ
ಮನೆ ಮಗನಂತೆ ಸಾಕಿರುವ ಎತ್ತಿಗೆ ಹುಟ್ಟುಹಬ್ಬ
TV9 Web
| Edited By: |

Updated on: Jul 04, 2021 | 12:38 PM

Share

ಧಾರವಾಡ: ರೈತರ ಜೀವಾಳವೆಂದರೆ ಜಾನುವಾರುಗಳು. ಆಧುನಿಕತೆ ಎಷ್ಟೇ ಮುಂದುವರಿದರೂ ರೈತರು ಕೃಷಿಗೆ ಅವಲಂಬಿಸುವುದು ಜಾನುವಾರುಗಳನ್ನೆ. ಕೃಷಿ ಚಟುವಟಿಕೆಯಲ್ಲಿ ಎತ್ತುಗಳು ಪ್ರಮುಖವಾಗಿ ಸಹಾಯಕ್ಕೆ ಬರುತ್ತವೆ. ಇದೇ ಕಾರಣಕ್ಕೆ ಎತ್ತುಗಳನ್ನು ಅನೇಕರು ಸಾಕುತ್ತಾರೆ. ಹೀಗೆ ಸಲಹುವ ರೈತರು ಮನೆಯ ಸದಸ್ಯರಂತೆ ಅವುಗಳನ್ನು ಕಾಣುತ್ತಾರೆ. ಆದರೆ ಇಷ್ಟೆಲ್ಲ ಪ್ರೀತಿ ತೋರಿಸಿದರೂ ಕೆಲವು ಸಂದರ್ಭದಲ್ಲಿ ಉಂಟಾಗುವ ಆರ್ಥಿಕ ಸಂಕಷ್ಟದಿಂದಾಗಿ ಕೃಷಿಯ ಮೂಲ ಆಧಾರವಾಗಿರುವ ಎತ್ತುಗಳನ್ನೇ ಮಾರಾಟ ಮಾಡುವ ಅನಿವಾರ್ಯತೆಯೂ ಬರುತ್ತದೆ. ಇದೇ ರೀತಿ ಮನೆಯಲ್ಲಿಯೇ ಜನಿಸಿದ ಎತ್ತೊಂದನ್ನು ಮಾರಿದ ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದ ರೈತ ಮತ್ತೆ ಅದನ್ನು ಮರಳಿ ಪಡೆದ ಕಥೆ ನಿಜಕ್ಕೂ ಮನ ಕಲಕುವಂಥದ್ದು.

ಬರದ ಹಿನ್ನೆಲೆಯಲ್ಲಿ ಮೈಲಾರಿ ಮಾರಾಟ ಗ್ರಾಮದ ನಾಗಪ್ಪ ಓಮಗಣ್ಣವರ್ ಎನ್ನುವ ರೈತನ ಕುಟುಂಬದ ಮೂಲ ಕಸುಬು ಕೃಷಿ. ಇಂಥ ಕೃಷಿ ಕುಟುಂಬದ ಮನೆಯಲ್ಲಿ ಹುಟ್ಟಿದ್ದ ಬಿಳಿ ಬಣ್ಣದ ಗಂಡು ಕರುವಿಗೆ ಮೈಲಾರಿ ಎಂದು ಹೆಸರಿಡಲಾಗಿತ್ತು. ಒಂದೆರಡು ವರ್ಷಗಳಲ್ಲಿಯೇ ಎತ್ತರಕ್ಕೆ ಬೆಳೆದು ನಾಗಪ್ಪನ ಕೃಷಿ ಕೆಲಸಕ್ಕೆ ಮೈಲಾರಿ ಹೆಗಲು ನೀಡಲು ಶುರು ಮಾಡಿತ್ತು. ಇದರ ಕೆಲಸ ಮಾಡುವ ಶಕ್ತಿಯನ್ನು ನೋಡಿ ಇಡೀ ಊರೇ ಅಚ್ಚರಿ ಪಡುತ್ತಿತ್ತು. ಎಷ್ಟೇ ಕೆಲಸ ಮಾಡಿದರೂ ದಣಿವರಿಯದ ಮೈಲಾರಿ ಕೆಲವೇ ವರ್ಷಗಳಲ್ಲಿ ಮನೆಯವರಿಗಷ್ಟೇ ಅಲ್ಲ, ಊರಿನ ಜನರ ಪ್ರೀತಿಯನ್ನೂ ಗಳಿಸಿತ್ತು. ಆದರೆ ಕೆಲ ವರ್ಷಗಳ ಹಿಂದೆ ಬಂದ ಬರದಿಂದಾಗಿ ಮೈಲಾರಿಯನ್ನು ಸಾಕಲಾಗದೇ ನಾಗಪ್ಪ ಧಾರವಾಡದ ಕೆಲಗೇರಿ ಬಡಾವಣೆಯ ರೈತರೊಬ್ಬರಿಗೆ 25 ಸಾವಿರ ರೂಪಾಯಿಗೆ ಮಾರಾಟ ಮಾಡಿದರು. ಈ ಮೈಲಾರಿಯನ್ನು ಖರೀದಿಸಿದಲು ಮುಂದೆ ಬಂದವರು ರೈತ ಕುಟುಂಬದವರೆನ್ನುವ ಕಾರಣಕ್ಕೆ ನಾಗಪ್ಪ ಅವರಿಗೆ ಮಾರಾಟ ಮಾಡಿದ್ದರು.

ಸಾವಿನ ದವಡೆಯಿಂದ ಮತ್ತೆ ಮನೆಯತ್ತ ಎತ್ತು ಎರಡು ವರ್ಷಗಳ ಹಿಂದೆ ನಾಗಪ್ಪ ಧಾರವಾಡದ ಕಸಾಯಿಖಾನೆ ಬಳಿಯಿಂದ ಸಾಗುತ್ತಿದ್ದರು. ಈ ವೇಳೆ ನಾಗಪ್ಪನನ್ನು ಗುರುತಿಸಿದ ಮೈಲಾರಿ ಜೋರಾಗಿ ಕೂಗಿದೆ. ಕೂಗಿನ ದನಿಯನ್ನು ಗಮನಿಸಿ ನಾಗಪ್ಪ ಹೋಗಿ ನೋಡಿದರೆ, ಅದು ತನ್ನದೇ ನೆಚ್ಚಿನ ಮೈಲಾರಿ. ಕಣ್ಣಲ್ಲಿ ನೀರು ಕೂಡ ಜಿನುಗುತ್ತಿತ್ತು. ಅದನ್ನು ನೋಡಿದ ನಾಗಪ್ಪನಿಗೆ ಕರಳು ಕಿತ್ತು ಬಂದಂತಾಗಿತ್ತು. ಕೂಡಲೇ ಕಸಾಯಿಖಾನೆಯ ಮಾಲಿಕನ ಬಳಿ ಹೋಗಿ ಆ ಎತ್ತನ್ನು ತನಗೆ ನೀಡುವಂತೆ ಕೇಳಿಕೊಂಡರು. ಆದರೆ ಆ ಎತ್ತಿಗೆ ಕಸಾಯಿಖಾನೆ ಮಾಲಿಕ 52 ಸಾವಿರ ರೂಪಾಯಿ ಎಂದು ಹೇಳಿದ್ದರು. ಕೂಡಲೇ ನಾಗಪ್ಪ ತನ್ನ ಕುಟುಂಬದವರೊಂದಿಗೆ ಮಾತನಾಡಿ, ಅಷ್ಟೂ ಹಣವನ್ನು ಹೊಂದಿಸಿ, ಕಸಾಯಿಖಾನೆಯ ಮಾಲಿಕನಿಗೆ ನೀಡಿ, ಮೈಲಾರಿಯನ್ನು ಮನೆಗೆ ಕರೆ ತಂದರು. ಮೈಲಾರಿ ಮನೆಗೆ ಬಂದ್ದಿದ್ದನ್ನು ನೋಡಿದ ಕುಟುಂಬಸ್ಥರೆಲ್ಲಾ ಸ್ವಂತ ಮನೆ ಮಗನೇ ಮನೆಗೆ ಮರಳಿ ಬಂದಷ್ಟು ಖುಷಿಪಟ್ಟಿದ್ದಾರೆ.

ಕಳೆದ ವರ್ಷದಿಂದ ಮೈಲಾರಿ ಹುಟ್ಟಿದ ಹಬ್ಬ ಆಚರಣೆ ಮೈಲಾರಿ ಮನೆಯಲ್ಲಿಯೇ ಹುಟ್ಟಿದ್ದರಿಂದ ಅದರ ಹುಟ್ಟಿದ ದಿನ ಎಲ್ಲರಿಗೂ ಗೊತ್ತಿತ್ತು. ಹೀಗಾಗಿ ಮತ್ತೆ ಮರಳಿ ಮನೆಗೆ ಆಗಮಿಸಿದ ಮೈಲಾರಿಯ ಹುಟ್ಟುಹಬ್ಬವನ್ನು ಅದ್ಧೂರಿಯಿಂದ ಆಚರಿಸಲು ಮನೆಯವರು ನಿರ್ಧರಿಸಿದರು. ಈ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ಮೈಲಾರಿ ಹುಟ್ಟುಹಬ್ಬ ನಡೆಯುತ್ತಿದೆ. ಹುಟ್ಟುಹಬ್ಬದ ದಿನ ಬೆಳಿಗ್ಗೆ ಮೈಲಾರಿಯ ಮೈ ತೊಳೆದು, ಬಳಿಕ ಮನೆಯ ಮುಂದೆ ಪೆಂಡಾಲ್ ಹಾಕಿಸಿ, ಸಂಜೆ ಹೊತ್ತಿಗೆ ಇಡೀ ಊರಿನ ಜನರರನ್ನು ಸೇರಿಸಿ ಕೆಕ್​ ಕತ್ತರಿಸಲಾಗುತ್ತದೆ. ಅಂತೆಯೇ ಈ ಬಾರಿ ಕೂಡ ನಾಗಪ್ಪನ ಮನೆ ಎದುರು 8 ಕೆಜಿಯ ಕೇಕ್ ತಂದು ಕತ್ತರಿಸಲಾಗಿದೆ.

ಗ್ರಾಮ ದೇವರಿಗೆ ಮೈಲಾರಿ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಿ, ಪೂಜೆಯ ಬಳಿಕ ಮೆರವಣಿಗೆ ಮೂಲಕ ಮನೆಗೆ ಕರೆ ತಂದ ನಂತರ ಮಹಿಳೆಯರು ಸೋಬಾನೆ ಪದ ಹಾಡಿ ಎತ್ತನ್ನು ಸ್ವಾಗತಿಸಿದ್ದಾರೆ. ಇನ್ನು ಕೆಲ ಮಹಿಳೆಯರು ಮೈಲಾರಿಗೆ ಆರತಿ ಬೆಳಗಿದ್ದಾರೆ. ಬಳಿಕ ಯುವಕರು ಕೇಕ್ ಕತ್ತರಿಸಿ, ಮೈಲಾರಿಗೆ ತಿನ್ನಿಸಿ ಸಂಭ್ರಮಿಸಿದ್ದಾರೆ. ಈ ರೀತಿ ವಿಭಿನ್ನವಾಗಿ ಹುಟ್ಟು ಹಬ್ಬವನ್ನು ಆಚರಿಸುವ ಮೂಲಕ ನಾಗಪ್ಪನ ಕುಟುಂಬಸ್ಥರು ಮೈಲಾರಿ ಮೇಲೆ ತಮಗಿರುವ ಪ್ರೀತಿಯನ್ನು ಇಡೀ ಗ್ರಾಮಕ್ಕೆ ತೋರಿಸಿಕೊಟ್ಟಿದ್ದಾರೆ.

16 ವರ್ಷವಾದರೂ ದಣಿವರಿಯದ ಮೈಲಾರಿ ಮೈಲಾರಿಗೆ ಇದೀಗ 16 ವರ್ಷ. ಆದರೂ ಮೊದಲಿನಂತೆಯೇ ಅದು ಹೊಲದಲ್ಲಿ ಕೆಲಸ ಮಾಡುತ್ತದೆ. ಅಲ್ಲದೇ ಯಾರೇ ಬಂದರೂ ಅವರಿಗೆ ತನ್ನ ಪ್ರೀತಿಯನ್ನು ತೋರಿಸುತ್ತದೆ. ಇಂಥ ಎತ್ತನ್ನು ಸಾಕಲಾಗದೇ ಮಾರಿದ ಬಗ್ಗೆ ನಾಗಪ್ಪನ ಕುಟುಂಬದವರು ಇಂದಿಗೂ ಪಶ್ಚಾತ್ತಾಪ ಪಡುತ್ತಿದ್ದಾರೆ.

ಇದನ್ನೂ ಓದಿ: ಪ್ರೀತಿಯ ಶ್ವಾನಕ್ಕೆ ಇಡೀ ಕುಟುಂಬ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿ ಸಂಭ್ರಮಿಸಿದೆ

ದೇಸಿ ಗೋತಳಿ ಹೆಚ್ಚಿಸಲು ವೀರ ಮರಣ ಹೊಂದಿದ ಯೋಧರ ಪತ್ನಿಯರಿಗೆ, ದೇವದಾಸಿಯರಿಗೆ, ಶವಸಂಸ್ಕಾರ ಕಾರ್ಮಿಕರಿಗೆ ಹಾಗೂ ವಿಧವೆಯರಿಗೆ ಹೆಣ್ಣುಕರು ವಿತರಣೆ