ಚಿತ್ರದುರ್ಗದಲ್ಲಿ ಹಳ್ಳ ಹಿಡಿದ ಗಂಗಾ ಕಲ್ಯಾಣ ಯೋಜನೆ; ಹೋರಾಟದ ಎಚ್ಚರಿಕೆ ನೀಡಿದ ರೈತರು
ಈಗಾಗಲೇ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಮಾತ್ರವಲ್ಲದೇ ಹೊಳಲ್ಕೆರೆ ತಾಲೂಕಿನ ಸಿರಿಗೆರೆ ಗ್ರಾಮದ ತರಳಬಾಳು ಮಠಕ್ಕೆ ತೆರಳಿ ಸಾಣೇಹಳ್ಳಿ ಶಾಖಾಮಠದ ಡಾ.ಪಂಡಿತಾರಾಧ್ಯ ಸ್ವಾಮೀಜಿ ಅವರಿಗೂ ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ.
ಚಿತ್ರದುರ್ಗ: ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಪ್ರತಿನಿಧಿಸುವ ಜಿಲ್ಲೆಯಲ್ಲೇ ರೈತರಿಗೆ ಗಂಗಾ ಕಲ್ಯಾಣ ಯೋಜನೆ ಫಲ ಸಿಗುತ್ತಿಲ್ಲ. ರೈತರಿಗೆ ಸಹಾಯ ನೀಡುವಲ್ಲಿಯೂ ಸಹ ಶಾಸಕರು ರಾಜಕಾರಣ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದು, ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ನೂರು ವರ್ಷಗಳಲ್ಲಿ ಸುಮಾರು 70 ವರ್ಷ ಕಾಲ ಬರ ಎದುರಿಸಿದ ಜಿಲ್ಲೆ ಚಿತ್ರದುರ್ಗ. ಮಳೆ ಆಧಾರಿತ ಕೃಷಿ ಮಾಡುವ ಇಲ್ಲಿನ ರೈತರು ಅನೇಕ ಸಲ ಕೈ ಸುಟ್ಟುಕೊಂಡಿದ್ದಾರೆ. ಹೀಗಾಗಿ ಸಮಾಜ ಕಲ್ಯಾಣ ಇಲಾಖೆಯ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆ ಬಾವಿ ಪಡೆದು ಕೃಷಿ ಕಾಯಕದ ಆಸೆ ಹೊತ್ತವರಿಗೆ ಶಾಸಕರೇ ವಿಲನ್ ಆಗಿದ್ದಾರಂತೆ.
ಕೊಳವೆ ಬಾವಿ ಕೊರೆಸುವುದನ್ನು ಬಿಜೆಪಿ ಶಾಸಕ ಎಂ.ಚಂದ್ರಪ್ಪ ತಡೆ ಹಿಡಿದಿದ್ದಾರೆ: ರೈತರ ಆಕ್ರೋಶ 2016-17, 2017-18ರಲ್ಲೇ 660 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಆದರೆ ಈವರೆಗೆ 236 ಜನ ರೈತರ ಜಮೀನಿನಲ್ಲಿ ಮಾತ್ರ ಕೊಳವೆ ಬಾವಿ ಕೊರೆಸಲಾಗಿದೆ. ಇನ್ನುಳಿದ 424 ರೈತರಿಗೆ ಕೊಳವೆ ಬಾವಿ ಕೊರೆಸುವುದನ್ನು ಬಿಜೆಪಿ ಶಾಸಕ ಎಂ.ಚಂದ್ರಪ್ಪ ತಡೆ ಹಿಡಿದಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಹೊಳಲ್ಕೆರೆಯ ಕಾಂಗ್ರೆಸ್ ಹೆಚ್.ಆಂಜನೇಯ ಕಾಲದಲ್ಲಿ ಆಗಿದ್ದ ಆಯ್ಕೆ ಪಟ್ಟಿ ಎಂಬ ಕಾರಣಕ್ಕೆ ತಡೆಹಿಡಿದು ರಾಜಕಾರಣ ಮಾಡುತ್ತಿದ್ದಾರೆ. ಮಾರ್ಚ್ ತಿಂಗಳು ಮುಗಿದರೆ ಸರ್ಕಾರದ ಅನುದಾನ ವಾಪಸ್ ಹೋಗುತ್ತದೆ. ಅದಕ್ಕೆ ಯಾರು ಹೊಣೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೋರಾಟದ ಎಚ್ಚರಿಕೆ ಈಗಾಗಲೇ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಮಾತ್ರವಲ್ಲದೇ ಹೊಳಲ್ಕೆರೆ ತಾಲೂಕಿನ ಸಿರಿಗೆರೆ ಗ್ರಾಮದ ತರಳಬಾಳು ಮಠಕ್ಕೆ ತೆರಳಿ ಸಾಣೇಹಳ್ಳಿ ಶಾಖಾಮಠದ ಡಾ.ಪಂಡಿತಾರಾಧ್ಯ ಸ್ವಾಮೀಜಿ ಅವರಿಗೂ ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಶಾಸಕರಿಗೆ ಈ ಬಗ್ಗೆ ತಿಳಿಸಿ ರೈತರಿಗೆ ಕೊಳವೆ ಬಾವಿ ಕೊರೆಸಿಕೊಡಬೇಕೆಂದು ಮನವಿ ಮಾಡಿದ್ದಾರೆ. ಅಂತೆಯೇ ಶಾಸಕರು ರೈತರಿಗೆ ಕೊಳವೆ ಬಾವಿ ನೀಡುವಲ್ಲಿ ರಾಜಕಾರಣ ಮಾಡುತ್ತಿದ್ದು, ರೈತರನ್ನು ಕಡೆಗಣೆಸುತ್ತಿದ್ದಾರೆಂದು ಸಿಎಂ ಬಿ.ಎಸ್.ಯಡಿಯೂರಪ್ಪಗೆ ದೂರು ರವಾನಿಸಿ, ಕೂಡಲೇ ಶಾಸಕರಿಗೆ ಈ ಬಗ್ಗೆ ಸೂಚನೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಅಂತೆಯೇ ಇದೇ ರೀತಿ ಮುಂದುವರೆದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ
ಬಾಗಲಕೋಟೆಯಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ; ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರ ಒತ್ತಾಯ