ಹೊಲಗಳ ಸುತ್ತ ಹಳೆಯ ಸೀರೆ ಸುತ್ತಿ.. ಅಮೂಲ್ಯ ಬೆಳೆ ರಕ್ಷಿಸಿಕೊಳ್ಳಲು ರೈತರಿಂದ ವಿನೂತನ ಪ್ರಯೋಗ!

| Updated By: ಸಾಧು ಶ್ರೀನಾಥ್​

Updated on: Jan 20, 2021 | 12:34 PM

ಸೀರೆಯನ್ನು ಕಟ್ಟಿದರು ಕೆಲ ಹಂದಿಗಳು ಜಮೀನಿಗೆ ನುಗ್ಗಿ ಬೆಳೆ ತಿಂದಿರುವ ಉದಾಹರಣೆಗಳು ಕೂಡ ಇವೆಯಂತೆ. ಆದರೆ ಹೆಚ್ಚಿನ ಕಾಡು ಹಂದಿಗಳು ಸೀರೆಗಳನ್ನು ಕಂಡೋಡನೆ, ಬಲೆಎಂದು ಬಾವಿಸಿ, ಬೆಳೆಯ ಸಮೀಪ ಬರದೇ ಹಿಂದಿರುಗುತ್ತವೆ.

ಹೊಲಗಳ ಸುತ್ತ ಹಳೆಯ ಸೀರೆ ಸುತ್ತಿ.. ಅಮೂಲ್ಯ ಬೆಳೆ ರಕ್ಷಿಸಿಕೊಳ್ಳಲು ರೈತರಿಂದ ವಿನೂತನ ಪ್ರಯೋಗ!
ಹೊಲದ ಸುತ್ತ ಸೀರೆ ಕಟ್ಟಿರುವ ದೃಶ್ಯ
Follow us on

ಕಲಬುರಗಿ: ತಿಂಗಳುಗಟ್ಟಲೆ ಕಷ್ಟಪಟ್ಟು ಉತ್ತಿ ಬಿತ್ತಿ ಬೆಳೆದ ಬೆಳೆ ಕೈ ಸೇರುವವರೆಗೂ ಹತ್ತಾರು ರೀತಿಯ ಸಂಕಷ್ಟಗಳನ್ನು ರೈತರು ಅನುಭವಿಸುತ್ತಾರೆ. ರೈತರು ಬೆಳೆದ ಬೆಳೆ ಮಾರುಕಟ್ಟೆ ಸೇರಿ ಮಾರಾಟ ಆಗುವವರೆಗೂ ಅದರ ಬಗ್ಗೆ ಯಾವುದೇ ಭರವಸೆ ರೈತರಿಗೆ ಇರುವುದಿಲ್ಲ. ಇಂತಹ ಸಂಕಷ್ಟದಲ್ಲಿ ದೇಶದ ಅನ್ನದಾತರು, ತಮ್ಮ ಬೆಳೆಯನ್ನು ಉಳಿಸಿಕೊಳ್ಳುವುದಕ್ಕೆ ತಾವೇ ಹತ್ತಾರು ರೀತಿಯ ಪ್ರಯೋಗಗಳನ್ನು ಮಾಡಿ, ಸದ್ಯ ಅದರಲ್ಲಿ ಯಶಸ್ವಿ ಕೂಡ ಆಗುತ್ತಿದ್ದಾರೆ.

ಹೌದು ಕಲಬುರಗಿ ಜಿಲ್ಲೆಯಲ್ಲಿ ರೈತರು ಕಾಡು ಹಂದಿಗಳಿಂದ ತಮ್ಮ ಬೆಳೆಯನ್ನು ರಕ್ಷಿಸಲು ಸೀರೆಗಳ ಮೊರೆ ಹೋಗಿದ್ದಾರೆ. ಸೀರೆಗಳಿಂದ ಬೆಳೆಯನ್ನು ಹೇಗೆ ರಕ್ಷಿಸುತ್ತಾರೆ..? ಎನ್ನುವ ಅಚ್ಚರಿ ಎಲ್ಲರನ್ನು ಕಾಡುವುದು ಸಹಜ. ಆದರೆ ಜಿಲ್ಲೆಯ ರೈತರು ಬಳಸದೆ ಬಿಡುವ ಹಳೆಯ ಸೀರೆಗಳನ್ನು ಬಳಸಿ ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳುತ್ತಿರುವುದು ಮಾತ್ರ ನಿಜ.

ಬೆಳೆ ರಕ್ಷಣೆಗೆ ಸೀರೆಗಳ ಮೊರೆಹೋದ ರೈತರು:
ಹೌದು ಕಲಬುರಗಿ ಜಿಲ್ಲೆಯ ಚಿಂಚೋಳಿ, ಆಳಂದ, ಕಮಲಾಪುರ, ಸೇಡಂ ತಾಲೂಕಿನ ಅನೇಕ ಗ್ರಾಮಗಳ ಜನರು ತಮ್ಮ ಬೆಳೆಯ ಸುತ್ತಮುತ್ತ ಸೀರೆಗಳನ್ನು ಕಟ್ಟುತ್ತಾರೆ. ಹಾಗಂತ ಅವುಗಳನ್ನು ಅಲಂಕಾರಕ್ಕಾಗಿ ಕಟ್ಟುವುದಿಲ್ಲ. ಬದಲಾಗಿ ತಾವು ಉತ್ತಿ ಬಿತ್ತಿ ಬೆಳೆದ ಬೆಳೆಯ ರಕ್ಷಣೆಗೆ ರೈತರು ಹಳೆಯ ಸೀರೆಗಳ ಮೊರೆಹೋಗಿದ್ದು, ಜಮೀನಿನ ಸುತ್ತಮುತ್ತ ಸೀರೆಗಳನ್ನು ಕಟ್ಟಿ, ಅವುಗಳಿಂದ ಬೆಳೆಯನ್ನು ಸಂರಕ್ಷಿಸಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ.

ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಲು ಸೀರೆ ಅಳವಡಿಕೆ.

ತಾವು ಬೆಳೆಯುವ ಕಡಲೆ, ತೊಗರಿ, ಜೋಳದ ಬೆಳೆಯ ಸುತ್ತ ಸೀರೆಗಳನ್ನು ಕಟ್ಟುತ್ತಾರೆ. ಹೀಗಾಗಿ ಅನೇಕ ಗ್ರಾಮಗಳ ಕೃಷಿ ಜಮೀನುಗಳಲ್ಲಿ ಬೆಳೆಯ ಜೊತೆ ಸೀರೆಯಿಂದ ಭೂಮಿ ಕಂಗೋಳಿಸುವ ದೃಶ್ಯಗಳು ಸಾಮಾನ್ಯವಾಗಿ ಗೋಚರಿಸುತ್ತಿದೆ. ಒಂದೆಡೆ ಹಸಿರುಹೊದ್ದ ಬೆಳೆ. ಮತ್ತೊಂದಡೆ ಭಿನ್ನ ವಿಭಿನ್ನ ಡಿಸೈನ್ ಡಿಸೈನ್ ಸೀರೆಗಳು ಕಣ್ಣುಗಳನ್ನು ಸೆಳೆಯುತ್ತವೆ.

ಹೊಲದ ಸುತ್ತ ಸೀರೆ ಬೇಲಿ

ಕಾಡು ಹಂದಿ ಕಾಟಕ್ಕೆ ಸೀರೆ ರಕ್ಷಣೆ:
ಜಿಲ್ಲೆಯ ರೈತರು ಸಾವಿರಾರು ರೂಪಾಯಿ ಹಣವನ್ನು ಬೆಳೆ ಬೆಳೆಯಲು ಖರ್ಚು ಮಾಡುತ್ತಾರೆ. ತಾವು ಬೆಳೆದ ಬೆಳೆಗೆ ಗೊಬ್ಬರ, ಕ್ರಿಮಿನಾಶಕ ಸಿಂಪಡಣೆ ಮಾಡಿದರೂ ಈ ಭಾಗದ ರೈತರಿಗೆ ಬೆಳೆ ಕೈ ಸೇರುವ ಭರವಸೆಯಿಲ್ಲಾ. ಮಳೆ ಚೆನ್ನಾಗಿ ಬಂದರು ಕೂಡಾ ಬೆಳೆ ಬರುತ್ತದೆ, ನಾವು ಮಾಡಿದ ಸಾಲವನ್ನು ತೀರಿಸಬಹುದು ಎನ್ನುವ ಗ್ಯಾರಂಟಿ ಇಲ್ಲ.

ಸೀರೆ ಹೊದ್ದ ಹೊಲ

ಇದಕ್ಕೆ ಕಾರಣ ಕಾಡುಹಂದಿಗಳ ಉಪಟಳ. ಹೌದು ಜಿಲ್ಲೆಯ ಕೆಲವಡೆ ಗುಡ್ಡಗಾಡು ಪ್ರದೇಶವಿದೆ. ಇದೇ ಗುಡ್ಡಗಾಡುವಿನಲ್ಲಿ ಕಾಡುಹಂದಿಗಳು ಹೆಚ್ಚಾಗಿವೆ. ರಾತ್ರಿ ಸಮಯದಲ್ಲಿ ಕೃಷಿ ಜಮೀನಿಗೆ ಹಿಂಡು ಹಿಂಡಾಗಿ ನುಗ್ಗುವ ಕಾಡು ಹಂದಿಗಳು, ರೈತರು ಅನೇಕ ದಿನಗಳ ಕಾಲ ಕಷ್ಟಪಟ್ಟು ಬೆಳದಿದ್ದ ಬೆಳೆಯನ್ನು ತಿಂದು ಹೋಗುತ್ತವೆ. ಹೀಗಾಗಿ ಬಹುತೇಕ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದೇ, ಅದು ಕಾಡು ಹಂದಿಗಳ ಪಾಲಾಗುತ್ತಿದೆ. ಹೀಗಾಗಿ ಕಾಡು ಹಂದಿಗಳ ಉಪಟಳದಿಂದ ಬೆಳೆಯನ್ನು ರಕ್ಷಿಸಲು ರೈತರು ಸೀರೆಗಳ ಮೊರೆ ಹೋಗಿದ್ದಾರೆ.

ಬೆಳೆ ರಕ್ಷಣೆಗೆ ರೈತರ ಹೊಸ ಪ್ರಯೋಗ

ಇನ್ನು ಕೃಷಿ ಜಮೀನಿನ ಸುತ್ತಮುತ್ತ ಸೀರೆಗಳನ್ನು ಕಟ್ಟುವುದರಿಂದ ಕಾಡು ಹಂದಿಗಳು ಜಮೀನಿನತ್ತ ಬರುವುದಿಲ್ಲವಂತೆ. ಇದು ರೈತರೇ ಅನೇಕ ರೀತಿಯ ಪ್ರಯೋಗಳನ್ನು ಮಾಡಿ, ಕಂಡುಕೊಂಡಿರುವ ಸತ್ಯ. ಹೌದು ಕೃಷಿ ಜಮೀನಿನಲ್ಲಿ ತಾವು ಬೆಳೆದ ಬೆಳೆಯ ಸುತ್ತ ಸೀರೆಗಳನ್ನು ಕಟ್ಟುವುದರಿಂದ ಸೀರೆಗಳನ್ನು ಬಲೆ ಎಂದು ತಿಳಿದುಕೊಂಡು, ಅದಕ್ಕೆ ಹೆದರುವ ಕಾಡು ಹಂದಿಗಳು ಬೆಳೆಯತ್ತ ಬರುವುದಿಲ್ಲವಂತೆ.

ಸೀರೆಯನ್ನು ಕಟ್ಟಿದರು ಕೆಲ ಹಂದಿಗಳು ಜಮೀನಿಗೆ ನುಗ್ಗಿ ಬೆಳೆ ತಿಂದಿರುವ ಉದಾಹರಣೆಗಳು ಕೂಡ ಇವೆಯಂತೆ. ಆದರೆ ಹೆಚ್ಚಿನ ಕಾಡು ಹಂದಿಗಳು ಸೀರೆಗಳನ್ನು ಕಂಡೋಡನೆ, ಬಲೆಎಂದು ಬಾವಿಸಿ, ಬೆಳೆಯ ಸಮೀಪ ಬರದೇ ಹಿಂದಿರುಗುತ್ತವೆ. ಹೀಗಾಗಿ ಹೆಚ್ಚಿನ ರೈತರು, ತಮ್ಮ ಬೆಳೆಗಳ ಸುತ್ತಮುತ್ತ ಸೀರೆಗಳನ್ನು ಕಟ್ಟುವ ರೂಢಿಯನ್ನು ಹಾಕಿಕೊಂಡಿದ್ದಾರೆ.

ಬಣ್ಣ ಬಣ್ಣದ ಸೀರೆಗಳಿಂದ ಬೇಲಿ ನಿರ್ಮಾಣ

ಮಾರುಕಟ್ಟೆಯಿಂದ ಹಳೆ ಸೀರೆ ಖರೀದಿಸುವ ರೈತರು!
ಇನ್ನು ತಾವು ಬೆಳೆದ ಬೆಳೆಯ ಸುತ್ತ ಸೀರೆಗಳನ್ನು ಕಟ್ಟುವುದರಿಂದ ರೈತರಿಗೆ 40ರಿಂದ 100 ಸೀರೆಗಳು ಬೇಕಾಗುತ್ತವೆ. ಹೀಗಾಗಿ ಕೆಲವು ರೈತರು ತಮ್ಮ ಮನೆಯಲ್ಲಿ ಬಳಸದೇ ಇರುವ ಸೀರೆಗಳನ್ನು ಬಳಸುತ್ತಾರೆ. ಅವು ಸಾಲದೇ ಇದ್ದಾಗ, ಕಲಬುರಗಿ ನಗರದಲ್ಲಿ ಹಣ ಕೊಟ್ಟು ಹಳೆಯ ಸೀರೆಗಳನ್ನು ಖರೀದಿಸಿ, ತಮ್ಮ ಜಮೀನಿನ ಸುತ್ತಮುತ್ತ ಕಟ್ಟುತ್ತಾರೆ. ಮಾರುಕಟ್ಟೆಯಲ್ಲಿ ಹಳೆ ಸೀರೆಗಳು 30 ರಿಂದ 50 ರೂಪಾಯಿಗೆ ಸಿಗುತ್ತವೆ.

ಹೀಗಾಗಿ ರೈತರು ತಮಗೆ ಅವಶ್ಯವಿರುವಷ್ಟು ಹಳೆಯ ಸೀರೆಗಳನ್ನು ಖರೀದಿಸಿ, ಅವುಗಳನ್ನು ಬೆಳೆಗಳ ಸುತ್ತಮುತ್ತ ಕಟ್ಟಿ, ತಮ್ಮ ಬೆಳೆಯನ್ನು ಉಳಿಸಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ. ಬೀಜ, ಗೊಬ್ಬರ, ಕ್ರಿಮಿನಾಶಕಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡುವ ರೈತರು, ಸೀರೆ ಖರೀದಿಗಾಗಿ ಕೂಡ ಹಣ ಖರ್ಚು ಮಾಡುವ ಸ್ಥಿತಿಯಿದೆ. ಸೀರೆ ಕಟ್ಟದಿದ್ದರೆ, ಬೆಳೆಗ ಹಾಕಿದ ಖರ್ಚು ಕೂಡ ಬರದೇ ಇರುವುದರಿಂದ, ರೈತರು ಅನಿವಾರ್ಯವಾಗಿ ಸೀರೆಗಳನ್ನು ಹಣಕೊಟ್ಟು ಖರೀದಿಸಿ, ತಮ್ಮ ಬೆಳೆಯ ಸುತ್ತಮುತ್ತ ಕಟ್ಟುತ್ತಿದ್ದಾರೆ.

ಕಾಡು ಪ್ರಾಣಿಗಳಿಂದ ಬೆಳೆಯ ರಕ್ಷಣೆ

ಜಿಲ್ಲೆಯ ಅನೇಕ ಕಡೆ ಕಾಡು ಹಂದಿಗಳ ಕಾಟ ಹೆಚ್ಚಾಗಿದೆ. ತಾವು ಬೆಳೆದ ಬೆಳೆಯ ಸುತ್ತಮುತ್ತ ಸೀರೆ ಕಟ್ಟದಿದ್ದರೆ, ಒಂದೇ ರಾತ್ರಿಯಲ್ಲಿ ಬೆಳೆ ಹಂದಿಗಳ ಪಾಲಾಗುತ್ತದೆ. ರಾತ್ರಿ ಹಿಂಡು ಹಿಂಡಾಗಿ ನುಗ್ಗುವ ಕಾಡು ಹಂದಿಗಳು ಬೆಳೆಯನ್ನು ತಿಂದು ಮುಗಿಸುತ್ತವೆ. ಹೀಗಾಗಿ ಅನಿವಾರ್ಯವಾಗಿ ರೈತರು ಬೆಳೆಯನ್ನು ರಕ್ಷಿಸಿಕೊಳ್ಳಲು ಸೀರೆಗಳನ್ನು ಕಟ್ಟುತ್ತಾರೆ. ಸೀರೆಗಳನ್ನು ನೋಡಿ ಕಾಡು ಹಂದಿಗಳು ಜಮೀನಿನತ್ತ ಬರೋದಿಲ್ಲಾ. ಇದರಿಂದ ಬೆಳೆ ಉಳಿಯುತ್ತದೆ ಎಂದು ಪ್ರಗತಿಪರ ರೈತರಾದ ಆದಿನಾಥ್ ಹೀರಾ ಹೇಳಿದರು.

ಕೊಚ್ಚಿ ಹೋಯ್ತು ಕಾಫಿ.. ಕರಗಿ ಹೋಗ್ತಿದೆ ಭತ್ತ: ವರ್ಷದ ಕೂಳನ್ನೇ ಕಿತ್ತುಕೊಂಡ ಅಕಾಲಿಕ ಮಳೆ