ಹಾವೇರಿ : ಒಂದೇ ಬೆಳೆ ಬೆಳೆದು ಭರ್ಜರಿ ಬೆಳೆ ತೆಗೆಯುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಕಡಿಮೆ ಆಗುತ್ತಿದೆ. ಅದರಲ್ಲೂ ಅನೇಕರು ಕೃಷಿ ಕ್ಷೇತ್ರದಿಂದಲೇ ವಿಮುಖರಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ಕಬ್ಬಿನ ಗದ್ದೆಯಲ್ಲಿ ಮಿಶ್ರ ಬೆಳೆಯಾಗಿ ಕಲ್ಲಂಗಡಿ ಬೆಳೆದು ಹಾವೇರಿ ಜಿಲ್ಲೆಯ ಇಬ್ಬರು ರೈತರು ಭರ್ಜರಿ ಫಸಲು ತೆಗೆದಿದ್ದಾರೆ.
ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಡಂಬರಮತ್ತೂರು ಗ್ರಾಮದ ರೈತ ನಾಗನಗೌಡ ಹಿರೇಗೌಡ್ರ ಮತ್ತು ಚಿಕ್ಕಮರಳಿಹಳ್ಳಿ ಗ್ರಾಮದ ಬಸಣ್ಣ ಕಲಗುಡಿಮಠ ಎಂಬ ಇಬ್ಬರು ರೈತರು ತಮ್ಮ ಕಬ್ಬಿನ ಗದ್ದೆಯಲ್ಲಿ ಮಿಶ್ರ ಬೆಳೆಯಾಗಿ ಐಸ್ ಬಾಕ್ಸ್ ಕರಿ ಕಲ್ಲಂಗಡಿ ಹಾಕಿದ್ದರು. ಕಬ್ಬಿನ ಗದ್ದೆಯಲ್ಲಿ ಹಾಕಿದ್ದ ಕಲ್ಲಂಗಡಿ ನಿರೀಕ್ಷೆಗೂ ಮೀರಿ ಭರಪೂರ ಫಸಲು ಬಂದಿದೆ.
ಬಸಣ್ಣ ಕಲಗುಡಿಮಠ ಮತ್ತು ನಾಗನಗೌಡ ಹಿರೇಗೌಡ್ರ ತಮ್ಮ ಕಬ್ಬಿನ ಗದ್ದೆಯಲ್ಲಿ ತಲಾ ಎರಡು ಎಕರೆಯಲ್ಲಿ ಐಸ್ ಬಾಕ್ಸ್ ಕರಿ ಕಲ್ಲಂಗಡಿ ಹಾಕಿದ್ದರು. ಸಾಮಾನ್ಯವಾಗಿ ಒಂದೇ ಬೆಳೆಯಾಗಿ ಕಲ್ಲಂಗಡಿ ಬೆಳೆದರೆ ಎಕರೆಗೆ ನಾಲ್ಕೈದು ಕ್ವಿಂಟಲ್ ಕಲ್ಲಂಗಡಿ ಬರುತ್ತದೆ. ಆದರೆ ಕಬ್ಬಿನ ಗದ್ದೆಯಲ್ಲಿ ಇಬ್ಬರು ರೈತರು ಬೆಳೆದ ಕಲ್ಲಂಗಡಿ ಹೆಚ್ಚು ಫಸಲು ತಂದುಕೊಟ್ಟಿದೆ. ಎಕರೆಗೆ ಐದರಿಂದ ಆರು ಕ್ವಿಂಟಲ್ ಕಲ್ಲಂಗಡಿ ಫಸಲು ಬಂದಿದ್ದು, ಮೊದಲು ಕ್ವಿಂಟಲ್ಗೆ ಮೂರ್ನಾಲ್ಕು ಸಾವಿರ ರೂಪಾಯಿ ಬೆಲೆ ಇತ್ತು. ಈಗ ಕ್ವಿಂಟಲ್ಗೆ ಒಂಬತ್ತು ಸಾವಿರ ರೂಪಾಯಿ ಬೆಲೆ ಬಂದಿದೆ.
ಸಿಹಿಯಾದ ಕಲ್ಲಂಗಡಿ :
ದೀರ್ಘಾವಧಿ ಬೆಳೆಯಾದ ಕಬ್ಬಿನ ಬೆಳೆಗೆ ಔಷಧೋಪಚಾರ ಅದು ಇದು ಎಂದು ಸಾಕಷ್ಟು ಖರ್ಚಾಗುತ್ತಿತ್ತು. ಮಿಶ್ರ ಬೆಳೆ ಬೆಳೆಯುವ ಮೂಲಕ ಖರ್ಚು ವೆಚ್ಚವನ್ನು ಸರಿದೂಗಿಸಲು ನಿರ್ಧರಿಸಿದ ಇಬ್ಬರು ರೈತರು ಕಬ್ಬಿನ ಗದ್ದೆಯಲ್ಲಿ ಐಸ್ ಬಾಕ್ಸ್ ಕರಿ ಕಲ್ಲಂಗಡಿ ಬೆಳೆಯುವ ಮನಸ್ಸು ಮಾಡಿದರು. ಅದರಂತೆ ಕಬ್ಬಿನ ಗದ್ದೆಯಲ್ಲಿ ಕರಿ ಕಲ್ಲಂಗಡಿ ಬೆಳೆದರು. ಬೆಳೆ ಬಂಪರ್ ಆಗಿ ಬರುವುದರ ಜೊತೆಗೆ ಉತ್ತಮ ಬೆಲೆಯೂ ಸಿಕ್ಕಿದೆ. ಇದರಿಂದ ಕಬ್ಬು, ಕಲ್ಲಂಗಡಿ ಬೆಳೆಯಲು ಮಾಡಿದ ಖರ್ಚು ವೆಚ್ಚದ ನಿಭಾಯಿಸುವುದರ ಜೊತೆಗೆ ಖರ್ಚಿಗೆ ಕೈಗೆ ಹಣವೂ ಬಂದಿದೆ. ಇದು ಇಬ್ಬರು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.
ಅಧಿಕ ತಾಪಮಾನದ ಈ ಸಮಯದಲ್ಲಿ ಒಂದೇ ಬೆಳೆ ಬೆಳೆಯಲು ಅದೆಷ್ಟೋ ರೈತರಿಗೆ ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಮಿಶ್ರ ಬೆಳೆಯಾಗಿ ಕಬ್ಬಿನ ಗದ್ದೆಯಲ್ಲಿ ಕರಿ ಕಲ್ಲಂಗಡಿ ಬೆಳೆದು ಉತ್ತಮ ಫಸಲಿನೊಂದಿಗೆ ಬಂಪರ್ ಆದಾಯ ಪಡೆದಿರುವುದು ವಿಶೇಷ. ಇದೇ ರೀತಿ ರೈತರು ಹಣ್ಣು, ತರಕಾರಿ, ಏಕದಳ ಮತ್ತು ದ್ವಿದಳ ಧಾನ್ಯಗಳನ್ನು ಮಿಶ್ರ ಬೆಳೆಯಾಗಿ ಬೆಳೆಯುವ ಮೂಲಕ ಭೂಮಿಯ ಫಲವತ್ತತೆ ಕಾಯ್ದುಕೊಂಡು ಅಧಿಕ ಇಳುವರಿ ತೆಗೆಯಲು ಮುಂದಾಗಬೇಕು. ಈ ಇಬ್ಬರು ರೈತರು ಮಾಡಿರುವ ಕೆಲಸ ಇತರ ರೈತರಿಗೂ ಮಾದರಿಯಾಗಲಿ ಎಂದು ಕೃಷಿ ಸಲಹೆಗಾರ ಗಂಗಯ್ಯ ಕುಲಕರ್ಣಿ ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಕಬ್ಬು ಬೆಳೆಯುತ್ತಿದ್ದೇವೆ. ಆದರೆ ಈಗ ಕಬ್ಬಿನ ಗದ್ದೆಯಲ್ಲಿ ಮಿಶ್ರ ಬೆಳೆಯಾಗಿ ಐಸ್ ಬಾಕ್ಸ್ ಕರಿ ಕಲ್ಲಂಗಡಿ ಹಾಕಿದ್ದೆವು. ಇದು ಹೊಸ ಪದ್ಧತಿಯಾದರೂ ಉತ್ತಮ ಫಸಲು ಮತ್ತು ಉತ್ತಮ ಬೆಲೆ ದೊರೆತಿದೆ. ಇದೊಂದು ಸಂತಸದ ವಿಚಾರ ಎಂದು ಕಬ್ಬಿನ ಗದ್ದೆಯಲ್ಲಿ ಕಲ್ಲಂಗಡಿ ಬೆಳೆದ ರೈತ ಬಸಣ್ಣ ಕಲಗುಡಿಮಠ ಸಂತಸ ವ್ಯಕ್ತಪಡಿಸಿದ್ದಾರೆ.
(ಪ್ರಭುಗೌಡ.ಎನ್.ಪಾಟೀಲ: 9980914107)
ಇದನ್ನೂ ಓದಿ:
ಕೋಲಾರದಿಂದ ವಿದೇಶಕ್ಕೆ ಸುವಾಸೆನೆಯ ದ್ರವ್ಯ ರಫ್ತು; ಧವನ ಬೆಳೆದು ಲಾಭ ಗಳಿಸುತ್ತಿರುವ ರೈತರು
ಕಠಿಣ ಕೊರೊನಾ ಮಾರ್ಗಸೂಚಿ ವಿರುದ್ಧ ಆರೋಗ್ಯ ಸಚಿವ ಸುಧಾಕರ್ ಕ್ಷೇತ್ರದಲ್ಲಿ ಹೂಬೆಳೆಗಾರರ ತೀವ್ರ ಆಕ್ರೋಶ
(Farmers who made profits by growing watermelon in a place of sugar cane in Havri)