ಬೀದರ್: ತಮ್ಮ ಮಕ್ಕಳು ವೈದ್ಯರೋ, ಎಂಜಿನಿಯರ್ ಆಗಬೇಕು ಎಂದು ಕನಸು ಕಾಣುವ ಎಷ್ಟೋ ತಂದೆ ತಾಯಿಗಳು ನಮ್ಮ ನಡುವೆ ಇದ್ದಾರೆ. ಹಾಗೇಯೇ ಇಲ್ಲೊಬ್ಬ ವ್ಯಕ್ತಿಯೂ ಕೂಡ ನನ್ನ ಮಗ ಡಾಕ್ಟರ್ ಆಗಬೇಕೆಂದು ಮಗನನ್ನ ಓದಿಸಿದ್ದರು. ವೃತ್ತಿ ಆರಂಭ ಮಾಡುವ ಮೊದಲೇ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು.
ಇದ್ದ ಒಬ್ಬ ಮಗನನ್ನೇ ಸರ್ವಸ್ವ ಎಂದು ತಿಳಿದುಕೊಂಡಿದ್ದ ಅಪ್ಪ ಮಾರುತಿ ಇದೀಗ ಮಗ ಡಾ.ವಿಶ್ವಾಸ್ ಸ್ಮರಣಾರ್ಥವಾಗಿ ಉದ್ಯಾನವನ ನಿರ್ಮಿಸಿದ್ದಾರೆ. ಈ ಉದ್ಯಾನವನ ಇಡೀ ಬೀದರ್ ನಗರದ ಜನರ ಮನಸ್ಸಿಗೆ ಈಗ ಉಲ್ಲಾಸ ತಂದಿದ್ದು, ಮಕ್ಕಳಿಗೆ ಆಟವಾಡಲು ಹಾಗೂ ಒಂದಷ್ಟು ಸಮಯವನ್ನು ಯಾವುದೇ ಅಡೆತಡೆಗಳಿಲ್ಲದೆ ಕಳೆಯುವ ತಾಣವಾಗಿದೆ.
ಸುಸಜ್ಜಿತ ಆಡಳಿತ ಯಂತ್ರ ಹೊಂದಿರುವ ಬೀದರ್ ನಗರಸಭೆಗೆ ಇಂದಿಗೂ ಒಂದು ಸುಂದರವಾದ ಉದ್ಯಾನವನ್ನು ನಿರ್ಮಿಸಲು ಸಾಧ್ಯವಾಗಿಲ್ಲ. ಜಿಲ್ಲಾಡಳಿತ ವಹಿಸಿಕೊಂಡಿರುವ ಒಂದರೆಡು ಉದ್ಯಾನಗಳಿದ್ದರೂ ಅವುಗಳ ನಿರ್ವಹಣೆ ಅಷ್ಟಕಷ್ಟೇ. ಆದರೆ, ಖಾಸಗಿ ವ್ಯಕ್ತಿಯೊಬ್ಬರು ಸ್ವಂತ ಖರ್ಚಿನಲ್ಲೇ 3 ಎಕರೆ ಪ್ರದೇಶದಲ್ಲಿ ಸುಂದರ ಉದ್ಯಾನವನ ನಿರ್ಮಿಸಿ ಸಾರ್ವಜನಿಕರ ಗಮನ ಸೆಳೆಯುತ್ತಿದ್ದಾರೆ.
ಮಾರುತಿ ಕಾಂಪೌಂಡರ್ ಎಂದೇ ಗುರುತಿಸಿಕೊಂಡಿರುವ ಬೀದರ್ ನಗರದ ಮಾರುತಿ ಗುಂಡಪ್ಪ ಚಂದನಹಳ್ಳಿಕರ್ ತಮ್ಮ ನಿವೃತ್ತಿ ವೇತನ ಹಾಗೂ ದಾನಿಗಳ ನೆರವು ಪಡೆದು ನಗರದ ಹೊರ ವಲಯದಲ್ಲಿ ಬೀದರ್ ಹುಮನಾಬಾದ್ ರಸ್ತೆ ಸಮೀಪ 3 ಎಕರೆ ಪ್ರದೇಶದಲ್ಲಿ ‘ಡಾ.ಸಿ.ವಿಶ್ವಾಸ್ ಮೆಮೊರಿಯಲ್ ಪಾರ್ಕ್’ ನಿರ್ಮಿಸಿದ್ದಾರೆ. ಶ್ರಮ ಸಂಸ್ಕೃತಿ ಮೈಗೂಡಿಸಿಕೊಂಡಿರುವ ಅವರಿಗೆ ಹೂವು-ಗಿಡಗಳ ಆರೈಕೆ, ನೀರುಣಿಸುವುದೇ ನಿತ್ಯದ ಕಾಯಕವಾಗಿದೆ.
ಹಲವು ಬಗೆಯ ಹೂವಿನ ಗಿಡ ಹಾಗೂ ಔಷಧೀಯ ಸಸ್ಯಗಳನ್ನು ಬೆಳೆಸಿದ್ದಾರೆ. ಮಾರುತಿ ಅವರ ಪರಿಶ್ರಮದ ಫಲವಾಗಿ ಉದ್ಯಾನದಲ್ಲಿ ಹಸಿರು ಕಂಗೊಳಿಸುತ್ತಿದೆ. ಔಷಧೀಯ ಸಸ್ಯಗಳನ್ನು ನೆಡಲಾಗಿದ್ದು, ಅಪರೂಪದ ಹಾಗೂ ಅಮೂಲ್ಯ ಸಸ್ಯಗಳು ಈ ಉದ್ಯಾನದಲ್ಲಿವೆ.
ಉದ್ಯಾನದ ತುಂಬ ಅರಳಿರುವ ಹೂಗಳು, ಆಲಂಕಾರಿಕ ಸಸ್ಯಗಳು ಉದ್ಯಾನದ ಅಂದವನ್ನು ಇನ್ನಷ್ಟು ಹೆಚ್ಚಿಸಿವೆ. ಉದ್ಯಾನಕ್ಕೆ ಹೊಂದಿಕೊಂಡಿರುವ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಆಟಪಾಠ ಸಹ ಉದ್ಯಾನದಲ್ಲೇ ನಡೆಯುತ್ತದೆ. ಜೊತೆಗೆ ನಗರದ ಜನರು ಪ್ರತಿನಿತ್ಯ ಇಲ್ಲಿಗೆ ಬಂದು ಕಾಲಕಳೆಯುತ್ತಾರೆ. ಈ ಉದ್ಯಾನವನ ಮುಗ್ಧ ಮನಸ್ಸಿನ ಮಕ್ಕಳಿಗೂ ಮುದ ನೀಡುತ್ತಿದೆ.
ಈ ಉದ್ಯಾನ ನಿರ್ಮಾಣಕ್ಕೆ ಒಂದು ಕಾರಣವಿದೆ. ಕಾಂಪೌಂಡರ್ ಆಗಿದ್ದ ಮಾರುತಿ ತನ್ನ ಮಗ ವಿಶ್ವಾಸ್ ಅವರನ್ನು ಒಳ್ಳೆಯ ವೈದ್ಯನನ್ನಾಗಿ ಮಾಡಬೇಕೆಂದು ಕನಸು ಕಂಡಿದ್ದರು. ಅದಕ್ಕಾಗಿ ಮಗನಿಗೆ ವೈದ್ಯಕೀಯ ಶಿಕ್ಷಣವನ್ನೂ ಕೊಡಿಸಿದ್ದರು. ಎಂಬಿಬಿಎಸ್ ಉತ್ತೀರ್ಣರಾಗಿ ಹೌಸ್‌ಮನ್‌ಷಿಪ್ ಸಹ ಪೂರ್ಣಗೊಳಿಸಿ ಸ್ವಂತ ಆಸ್ಪತ್ರೆ ಆರಂಭಿಸುವ ಸಿದ್ಧತೆ ಕೂಡ ನಡೆಸಿದ್ದರು. ಈ ಅವಧಿಯಲ್ಲೇ ಹೃದಯಾಘಾತದಿಂದ ಮಗ ಸಾವಿಗೀಡಾದರು.
ಮಗನ ನೆನಪಿಗಾಗಿ ಸಮಾಧಿ ಸ್ಥಳದಲ್ಲೇ ಉದ್ಯಾನ ನಿರ್ಮಾಣ ಮಾಡಿದ್ದಾರೆ. ಇದು ಈಗ ನಗರದ ಉದ್ಯಾನಗಳಲ್ಲೇ ಸುಂದರ ಉದ್ಯಾನವಾಗಿದೆ. ವಯಸ್ಸಾದ ತಂದೆ-ತಾಯಿಗಳನ್ನ ಅನಾಥ ಆಶ್ರಮಕ್ಕೊ ಬೀದಿಗೋ ತಳ್ಳುವ ಮಕ್ಕಳ ಮಧ್ಯೆ ಇದ್ದೊಬ್ಬ ಮಗ ಸಾವಿನ ಮನೆಯ ಕದ ತಟ್ಟಿದ್ದರು ಆತನ ಜೊತೆ ಕಟ್ಟಿಕೊಂಡಿದ್ದ ಕನಸುಗಳನ್ನ ನನಸು ಮಾಡಲು ಇಂದಿಗೂ ಹರಸಾಹಸ ಪಡುತ್ತಿದ್ದಾರೆ.
ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿ ಅವರಲ್ಲಿ ತಮ್ಮ ದಿವಂಗತ ವೈದ್ಯ ಮಗನನ್ನ ಕಾಣಲು ಮಾರುತಿ ಯತ್ನಿಸುತ್ತಿದ್ದಾರೆ. ಜೊತೆಗೆ ಮಗನ ಸಮಾಧಿ ಬಳಿ ತನ್ನ ಸಮಾಧಿಯನ್ನ ನಿರ್ಮಾಣ ಮಾಡಿಕೊಂಡು ಸಾವಿಗಾಗಿ ಕಾದು ಕುಳಿತಿದ್ದಾರೆ.
ನೊಂದವರು ಹಾಗೂ ದುಖಿತರಿಗೆ ಈ ಉದ್ಯಾನವನದಲ್ಲಿ ಸ್ವಲ್ಪಮಟ್ಟಿಗಾದರೂ ನೆಮ್ಮದಿ ಸಿಗಲಿ ಎಂಬ ಉದ್ದೇಶದಿಂದ ಈ ಉದ್ಯಾನವನವನ್ನು ಮಾಡಿದ್ದೇನೆ. ಈ ಉದ್ಯಾನವನಕ್ಕೆ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದೇನೆ. ಸ್ವಂತ ದುಡ್ಡಿನಿಂದ ಈ ಕಾರ್ಯ ಮಾಡಿದ್ದೇನೆ ಯಾವುದೇ ಸರ್ಕಾರಿ ಹಣವನ್ನು ಪಡೆದುಕೊಂಡಿಲ್ಲ ಎಂದು ಮಾರುತಿ ಗುಂಡಪ್ಪ ಚಂದನಹಳ್ಳಿಕರ್ ತಿಳಿಸಿದ್ದಾರೆ.
ಕೊರೊನಾದಿಂದ ಬೇಸತ್ತ ಜನರಿಗೆ ಸಿಕ್ಕಾಪಟ್ಟೆ ಥ್ರಿಲ್ ನೀಡ್ತಿದೆ ಬಂಡೀಪುರ ಸಫಾರಿ!
Published On - 7:27 pm, Fri, 5 February 21