ರಣದೀಪ್ ಸುರ್ಜೇವಾಲ ವಿರುದ್ಧವೇ ಸಿಡಿದ ಸಚಿವರು: ರಾಹುಲ್ ಗಾಂಧಿಗೆ ದೂರು ನೀಡಲು ಚಿಂತನೆ

| Updated By: Ganapathi Sharma

Updated on: Jan 20, 2025 | 9:31 AM

ಕಾಂಗ್ರೆಸ್ ಭಿನ್ನಮತದ ಬಿಸಿ ಇದೀಗ ನೇರವಾಗಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೇ ತಟ್ಟುವ ಸಾಧ್ಯತೆ ಗೋಚರಿಸಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ, ಸುರ್ಜೇವಾಲ ವಿರುದ್ಧವೇ ರಾಹುಲ್ ಗಾಂಧಿಗೆ ದೂರು ನೀಡಲು ಮತ್ತು ರಾಜ್ಯ ಉಸ್ತುವಾರಿಯಿಂದ ಅವರನ್ನು ಬದಲಾಯಿಸುವಂತೆ ಒತ್ತಡ ಹೇರಲು ಕೆಲವು ಮಂದಿ ಸಚಿವರು ಸಿಎಂ ಸಿದ್ದರಾಮಯ್ಯರನ್ನು ಆಗ್ರಹಿಸಿದ್ದಾರೆ. ಇತ್ತೀಚಿನ ಬೆಳವಣಿಗೆಗಳ ವಿವರ ಇಲ್ಲಿದೆ.

ರಣದೀಪ್ ಸುರ್ಜೇವಾಲ ವಿರುದ್ಧವೇ ಸಿಡಿದ ಸಚಿವರು: ರಾಹುಲ್ ಗಾಂಧಿಗೆ ದೂರು ನೀಡಲು ಚಿಂತನೆ
ರಣದೀಪ್ ಸುರ್ಜೇವಾಲ & ಸಿಎಂ ಸಿದ್ದರಾಮಯ್ಯ
Follow us on

ಬೆಂಗಳೂರು, ಜನವರಿ 20: ಕರ್ನಾಟಕ ಕಾಂಗ್ರೆಸ್​ ಆಂತರಿಕ ಸಂಘರ್ಷ ತಾರಕಕ್ಕೇರುತ್ತಿದ್ದು, ಇದೀಗ ಕೆಲವು ಮಂದಿ ಸಚಿವರ ಆಕ್ರೋಶ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲರತ್ತ ತಿರುಗಿದೆ. ಸುರ್ಜೇವಾಲ ವಿರುದ್ಧ ಕೆಲವು ಮಂದಿ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಾಹುಲ್ ಗಾಂಧಿಗೆ ದೂರು ನೀಡಲು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಮ್ಮ ಹಿನ್ನಡೆಗೆ ಸುರ್ಜೇವಾಲ ಕಾರಣರಾಗುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಜತೆ ಚರ್ಚೆ ವೇಳೆ ಕೆಲವು ಮಂದಿ ಸಚಿವರು ಅಳಲುತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಸುರ್ಜೇವಾಲರನ್ನು ವಾಪಸ್ ಕರೆಸಿಕೊಳ್ಳಲು ಒತ್ತಡ?

ಸುರ್ಜೇವಾಲರನ್ನು ರಾಜ್ಯ ಉಸ್ತುವಾರಿಯಿಂದ ವಾಪಸ್ ಕರೆಸಿಕೊಳ್ಳಿ ಎಂದು ಹೈಕಮಾಂಡ್​ಗೆ ತಿಳಿಸಿ ಒತ್ತಡ ಹೇರಬೇಕು ಎಂದು ಸಿದ್ದರಾಮಯ್ಯಗೆ ಆಪ್ತ ಸಚಿವರು, ಶಾಸಕರು ಒತ್ತಡ ಹೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಆಪ್ತ ಸಚಿವರ ಸಿಟ್ಟೇನು?

ಹಾಸನದಲ್ಲಿ ನಡೆದಿದ್ದ ಸ್ವಾಭಿಮಾನ ಸಮಾವೇಶ ಹೆಸರು ಬದಲಾವಣೆ, ದಲಿತ ಸಚಿವರ ಔತಣಕೂಟಕ್ಕೆ ಬ್ರೇಕ್ ಹಾಕಿರುವುದು, ಬೆಳಗಾವಿಯಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಜತೆಗೆ ಪ್ರತ್ಯೇಕವಾಗಿ ಸಭೆ ನಡೆಸಿರುವುದು ಸುರ್ಜೇವಾಲ ವಿರುದ್ಧ ಸಚಿವರ ಸಿಟ್ಟಿಗೆ ಕಾರಣವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ನೇರವಾಗಿ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉಸ್ತುವಾರಿಯಾದವರು ಎರಡೂ ಬಣದವರ ಸಮಸ್ಯೆ ಆಲಿಸಬೇಕಿತ್ತು. ರಾಜ್ಯದ ಪ್ರಮುಖ ಹಿರಿಯ ನಾಯಕರ ಸಭೆ ನಡೆಸಬೇಕಿತ್ತು. ನೇರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಮನಕ್ಕೆ ಹೋಗಲು ಇವರೇ ಕಾರಣ. ಉಸ್ತುವಾರಿಯಾದವರೂ 2 ಬಣಗಳನ್ನು ಸಮಾನವಾಗಿ ಕಾಣಬೇಕಿತ್ತು. ಸುರ್ಜೇವಾಲ ಪಕ್ಷಪಾತಿ ಧೋರಣೆ ಅನುಸರಿಸಬಾರದು ಎಂದು ಸಿದ್ದರಾಮಯ್ಯ ಆಪ್ತ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಆಂತರಿಕ ಸಂಘರ್ಷ ಹಾಗೂ ಒಳಬೇಗುದಿಯ ಬಿಸಿ ಬೆಳಗಾವಿಯಲ್ಲಿ ಸುರ್ಜೇವಾಲಗೂ ತಟ್ಟಿತ್ತು. ಗಾಂಧಿ ಭಾರತ ಕಾರ್ಯಕ್ರಮದ ಪ್ರಯುಕ್ತ ಬೆಳಗಾವಿಯಲ್ಲಿ ಶುಕ್ರವಾರ ಸಭೆ ನಡೆಸಿದ್ದ ಸಂದರ್ಭದಲ್ಲಿ ಸಚಿವ ಸತೀಶ್ ಜಾರಕಿಹೊಳಿ‌ ಬೆಂಬಲಿಗರು ಮತ್ತು ಕಾಂಗ್ರೆಸ್​ ಕಾರ್ಯಕರ್ತರು ಗದ್ದಲ ಸೃಷ್ಟಿಸಿದ್ದರು. ಸುರ್ಜೇವಾಲರನ್ನೇ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ತರಾಟೆಗೆ ತೆಗೆದುಕೊಂಡಿದ್ದರು.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಕಡಿಮೆಯಾಗದ ಒಳಮುನಿಸು, ಬೆಳಗಾವಿಯಲ್ಲೇ ಇದ್ದರೂ ಡಿಕೆಶಿ ಭೇಟಿಯಾಗದ ಸತೀಶ್

ಸತೀಶ್ ಜಾರಕಿಹೊಳಿ‌ ನಮ್ಮ ಹೆಮ್ಮೆಯಾಗಿದ್ದು ಅವರ ಸಲುವಾಗಿ ಜೀವ ಕೊಡುತ್ತೇವೆ. ಇಷ್ಟೆಲ್ಲ ಜನರು ಅವರ ಸಲುವಾಗಿ ಬಂದಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ನೇರವಾಗಿ ಸುರ್ಜೇವಾಲಗೆ ಹೇಳಿದ್ದರು. ಇದು ಅವರನ್ನು ಮುಜುಗರಕ್ಕೀಡು ಮಾಡಿತ್ತು. ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಸಿಎಂ ಸಿದ್ದರಾಮಯ್ಯ ಬಳಿಯೂ ಆಪ್ತರು ಅಸಮಾಧಾನ ತೋಡಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ