ಬೆಂಗಳೂರು, ನವೆಂಬರ್ 29: ‘ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು’ ಎಂಬ ಹೇಳಿಕೆ ನೀಡಿರುವ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ. ಬಿಎನ್ಎಸ್ ಸೆಕ್ಷನ್ 299 ರ ಅಡಿಯಲ್ಲಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಸ್ವಾಮೀಜಿಯ ಹೇಳಿಕೆಗಳು ಪ್ರಚೋದನಕಾರಿಯಾಗಿದ್ದು, ಕೋಮು ಸೌಹಾರ್ದತೆಗೆ ಧಕ್ಕೆ ತರಬಹುದು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ನವೆಂಬರ್ 26 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ವತಿಯಿಂದ ವಕ್ಫ್ ಬೋರ್ಡ್ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ್ದ ಸ್ವಾಮೀಜಿ, ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪ್ರಸ್ತುತ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಮುಂದಿನ ಕಾನೂನು ಕ್ರಮಗಳನ್ನು ಅನುಸರಿಸುವ ನಿರೀಕ್ಷೆಯಿದೆ.
‘‘ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು. ಆಗ ಭಾರತೀಯರೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ. ಅಷ್ಟು ಪ್ರೀತಿ ಇದ್ದರೆ ನಿಮ್ಮ ಮನೆ, ಸೈಟ್ ಬರೆದುಕೊಡಿ’’ ಎಂದು ಚಂದ್ರಶೇಖರನಾಥ ಸ್ವಾಮೀಜಿ ಹೇಳಿದ್ದರು.
ಸ್ವಾಮೀಜಿ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಮತದಾನ ಮೂಲಭೂತ ಹಕ್ಕು, ಸಂವಿಧಾನದಲ್ಲಿ ಎಲ್ಲರಿಗೂ ಈ ಹಕ್ಕಿದೆ. ದೇಶದ ಎಲ್ಲ ನಾಗರಿಕರಿಗೆ ಮತದಾನ ಹಕ್ಕು ಇದೆ. ಯಾರಾದರೂ ಹಾಗೆ ಹೇಳಿದರೆ ಅದು ತಪ್ಪು ಎಂದು ಸಚಿವ ಮಹದೇವಪ್ಪ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು.
ವಿವಾದಾತ್ಮಕ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಆ ಬಗ್ಗೆ ಸ್ಪಷ್ಟನೆ ನೀಡಿದ್ದ ಚಂದ್ರಶೇಖರನಾಥ ಸ್ವಾಮೀಜಿ, ‘‘ಬಾಯಿ ತಪ್ಪಿ ಆ ಹೇಳಿಕೆ ನೀಡಿದೆ. ಅದಕ್ಕೆ ವಿಷಾದಿಸುತ್ತೇನೆ. ಮುಸ್ಲಿಮರೂ ಭಾರತೀಯರೆ. ಆದರೆ, ರೈತರಿಗೆ ಒಳ್ಳೆಯದಾಗಬೇಕು ಅಷ್ಟೇ’’ ಎಂದು ಹೇಳಿದ್ದರು.
ಇದನ್ನೂ ಓದಿ: ಮುಸ್ಲಿಮರಿಗೆ ಮತದಾನದ ಹಕ್ಕು: ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆಗೆ ಸಚಿವ ಮಹದೇವಪ್ಪ ಗರಂ
ಕರ್ನಾಟಕದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ರೈತರಿಗೆ, ಮಠ-ಮಂದಿರಗಳಿಗೆ, ದೇಗುಲಗಳಿಗೆ ವಕ್ಫ್ ನೋಟಿಸ್ ಬಂದ ಬೆನ್ನಲ್ಲೇ ಪ್ರತಿಭಟನೆ ತೀವ್ರಗೊಂಡಿದೆ. ಅದರಂತೆ ಸ್ವಾಮೀಜಿಗಳು ಕೂಡ ಪ್ರತಿಭಟನೆಗೆ ಧುಮುಕಿದ್ದರು. ಅದರಂತೆ, ಚಂದ್ರಶೇಖರನಾಥ ಸ್ವಾಮೀಜಿ ಕೂಡ ಪ್ರತಿಭಟನೆಯಲ್ಲಿನ ಭಾಗವಹಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ