ದೀಪಾವಳಿಯಂದೇ ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: ರೋಗಿಗಳು ಶಿಫ್ಟ್‌

| Updated By: ಗಂಗಾಧರ​ ಬ. ಸಾಬೋಜಿ

Updated on: Nov 01, 2024 | 9:40 PM

ಚಿಕ್ಕಮಗಳೂರಿನ ಸ್ಪಂದನಾ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು, ರೋಗಿಗಳು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಬೆಂಗಳೂರಿನಲ್ಲಿ ಟ್ರಾನ್ಸ್‌ಫಾರ್ಮರ್ ಸ್ಫೋಟದಿಂದ ಬನಾರಸ್ ಸೀರೆಗಳನ್ನು ಒಳಗೊಂಡ ಮನೆಗೆ ಬೆಂಕಿ ಹತ್ತಿಕೊಂಡಿದ್ದು, ಸೀರೆಗಳು ಸುಟ್ಟು ಭಸ್ಮವಾಗಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ದೀಪಾವಳಿಯಂದೇ ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: ರೋಗಿಗಳು ಶಿಫ್ಟ್‌
ದೀಪಾವಳಿಯಂದೇ ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: ರೋಗಿಗಳು ಶಿಫ್ಟ್‌
Follow us on

ಚಿಕ್ಕಮಗಳೂರು, ನವೆಂಬರ್ 01: ದೀಪಾವಳಿಯಂದೇ ನಗರದ ಸೇಂಟ್ ಜೋಸೆಫ್ ಶಾಲಾ ಮುಂಭಾಗವಿರುವ ಸ್ಪಂದನಾ ಆಸ್ಪತ್ರೆಯಲ್ಲಿ ಅಗ್ನಿ ಅವಘಡ (fire accident) ಸಂಭವಿಸಿದ್ದು,  ಅದೃಷ್ಟವಶಾತ್‌ ಸ್ವಲ್ಪದರಲ್ಲೇ ಭಾರಿ ಅನಾಹುತ ತಪ್ಪಿರುವಂತಹ ಘಟನೆ ನಡೆದಿದೆ. ಕಟ್ಟಡದ ಕೆಳಮಹಡಿಯಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಅವಘಡ ಶಂಕೆ ವ್ಯಕ್ತವಾಗಿದೆ.

ಸದ್ಯ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ರೋಗಿಗಳು, ಸಿಬ್ಬಂದಿಗಳು ಹೊರಬಂದಿದ್ದಾರೆ. ಮುಂಜಾಗ್ರತಾ ಕ್ರಮವಾಗಿ 10ಕ್ಕೂ ಹೆಚ್ಚು ರೋಗಿಗಳನ್ನು ಸರ್ಕಾರಿ ಮಲ್ಲೇಗೌಡ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ. ಸ್ಪಂದನ ಆಸ್ಪತ್ರೆ ಆಡಳಿತ ಮಂಡಳಿ ಆಸ್ಪತ್ರೆಯನ್ನು ಸಂಪೂರ್ಣ ಬಂದ್ ಮಾಡಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ವೈದ್ಯ ಸಂತೋಷ ಹೇಳಿದ್ದಿಷ್ಟು

ಟಿವಿ9 ಜೊತೆಗೆ ಆಸ್ಪತ್ರೆ ವೈದ್ಯ ಸಂತೋಷ ಪ್ರತಿಕ್ರಿಯಿಸಿದ್ದು, ಕೆಳ ಮಹಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದೆ. ತಕ್ಷಣ ನಮ್ಮ‌ ಆಸ್ಪತ್ರೆ ಸಿಬ್ಬಂದಿ ಮೈನ್ ಕರೆಂಟ್ ಲೈನ್ ಕಟ್ ಮಾಡಿದ್ದಾರೆ. ಇದರಿಂದ ಅತಿ ದೊಡ್ಡ ದುರಂತ ತಪ್ಪಿದೆ. ಐಸಿಯು ಸೇರಿದಂತೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳನ್ನ‌ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದೇವೆ. ರೋಗಿಗಳ ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ಎರಡು ದಿನಗಳ ಕಾಲ ಆಸ್ಪತ್ರೆಯನ್ನ ಬಂದ್ ಮಾಡಿದ್ದೇವೆ ಎಂದಿದ್ದಾರೆ.

ಟ್ರಾನ್ಸ್‌ಫಾರ್ಮಾರ್‌ ಸ್ಫೋಟ: ನೂರಾರು ಬನಾರಸ್ ಸೀರೆ ಭಸ್ಮ

ಬೆಂಗಳೂರು: ಟ್ರಾನ್ಸ್‌ಫಾರ್ಮಾರ್‌ ಸ್ಫೋಟದಿಂದ ಮನೆಗೆ ಬೆಂಕಿ ಹೊತ್ತಿರುವಂತಹ ಘಟನೆ ಹೊಸಗುಡ್ಡದಹಳ್ಳಿಯಲ್ಲಿ ಸಂಭವಿಸಿದೆ. ಬನಾರಸ್ ಸೀರೆ ವ್ಯಾಪಾರಿಗೆ ಸೇರಿದ ಮನೆ ಮೊದಲ ಮಹಡಿಯ ಮನೆಯಲ್ಲಿದ್ದ ನೂರಾರು ಬನಾರಸ್ ಸೀರೆ ಭಸ್ಮವಾಗಿವೆ. ಹೀಗಾಗಿ ಸಾಕಷ್ಟು ರೂ. ನಷ್ಟ ಉಂಟಾಗಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ನೋಡ ನೋಡ್ತಿದ್ದಂತೆ ಹೊತ್ತಿ ಉರಿದ ಕಾರು

ದೇವನಹಳ್ಳಿ: ಸಾಲು ಸಾಲು ರಜೆ ಹಿನ್ನೆಲೆ ಕುಟುಂಬ ಸಮೇತ ಊರಿಗೆ ತೆರಳುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪರಿಣಾಮ ಕಾರು ಸಂಪೂರ್ಣ ಸುಟ್ಟು ಕರಕಲಾಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಹೊರವಲಯದ ಬೆಂಗಳೂರು ಹೈದರಾಬಾದ್ ರಾಷ್ಟ್ರಿಯಾ ಹೆದ್ದಾರಿಯಲ್ಲಿ ನಡೆದಿದೆ.

ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣ ಕಾರು ಸುಟ್ಟು ಹೋಗಿದೆ. ತಡರಾತ್ರಿ ಬೆಂಗಳೂರಿನಿಂದ ಸಾಧಿಲ್ ಎಂಬುವವರು ಕುಟುಂಬ ಸಮೇತ ಚಿಕ್ಕಬಳ್ಳಾಫುರದ ಕಡೆ ಹೊರಟಿದ್ದು, ಪೆಟ್ರೋಲ್ ಬಂಕ್ ಬಳಿ ಕಾರು ನಿಲ್ಲಿಸಿ ನಂತರ ಆನ್ ಮಾಡಿದ್ದಾರೆ. ಆದರೆ ಆನ್ ಮಾಡ್ತಿದ್ದಂತೆ ಬ್ಯಾನೆಟ್​ನಲ್ಲಿ ಹೊಗೆ ಕಾಣಿಸಿಕೊಂಡಿದ್ದು ಕೂಡಲೇ ಕಾರಿನಲ್ಲಿದ್ದ ಕುಟುಂಬಸ್ಥರು ಕೆಳಗಡೆ ಇಳಿದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪಟಾಕಿ ಹೊಡೆಯುವವರಿಗಿಂತ..ನಿಂತು ನೋಡಿದವರಿಗೆ ಹೆಚ್ಚು ಗಾಯ..!

ಇನ್ನೂ ಹೊಗೆ ಕಾಣಿಸಿಕೊಂಡ ಕೆಲ ನಿಮಿಷದಲ್ಲೇ ಕಾರು ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ನಿರ್ಜನ ಪ್ರದೇಶದಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಅನಾಹುತವೊಂದು ತಪ್ಪಿದಂತಾಗಿದೆ. ಇನ್ನೂ ಊರಿಗೆ ಹೋಗೋಣ ಅಂತ ಕಾರಿನಲ್ಲಿ ಬಂದ ಕುಟುಂಬಸ್ಥರಿಗೆ ಕಾರು ಬೆಂಕಿಗೆ ಆಹುತಿಯಾಗಿರುವುದು ಶಾಕ್ ನೀಡಿದ್ದು ಬಾಡಿಗೆ ಕಾರು ಹಿಡಿದು ಊರಿನತ್ತ ತೆರಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:28 pm, Fri, 1 November 24