ಬೆಂಗಳೂರಿನಲ್ಲಿ ಪಟಾಕಿ ಹೊಡೆಯುವವರಿಗಿಂತ..ನಿಂತು ನೋಡಿದವರಿಗೆ ಹೆಚ್ಚು ಗಾಯ..!
ದೀಪಾವಳಿ ಹಬ್ಬ ಅಂದ್ರೆ ಅಲ್ಲಿ ಪಟಾಕಿ ಇರ್ಲೇ ಬೇಕು. ಹಬ್ಬದ ಆಚರಣೆ ಅನ್ನೋ ರೀತಿಯೇ ಪಟಾಕಿ ಸಿಡಿಸೋದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದ್ರೆ ಈ ಬೆಳಕಿನ ಹಬ್ಬವೇ ಅನೇಕರ ಬದುಕಿನಲ್ಲಿ ಕತ್ತಲು ತರ್ತಿದೆ. ಬೆಂಗಳೂರಿನಲ್ಲಿ ಈ ವರ್ಷ ಪಟಾಕಿ ಸಿಡಿತದಿಂದ ಆಸ್ಪತ್ರೆಗೆ ಸೇರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಪಟಾಕಿ ಹೊಡೆಯುವವರಿಗಿಂತ ನಿಂತು ನೋಡುತ್ತಿದ್ದವರಿಗೆ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಬೆಂಗಳೂರು, (ನವೆಂಬರ್ 01): ದೀಪಾವಳಿ ಹಬ್ಬ ಆಚರಿಸೋ ಮೂರು ದಿನಗಳ ಕಾಲ ಮನೆಗಳಲ್ಲಿ ದೀಪಗಳನ್ನ ಹಚ್ಚಲಾಗುತ್ತದೆ. ಜೊತೆಗೆ ಸದ್ದು ಮಾಡುವ ಪಟಾಕಿ ಕೂಡಾ ಇರ್ಲೇ ಬೇಕು. ಚಿಕ್ಕಮಕ್ಕಳಿನಿಂದ ಹಿಡಿದು ದೊಡ್ಡವರು ಕೂಡಾ ಈ ಮೂರು ದಿನಗಳ ಕಾಲ ಪಟಾಕಿ ಸಿಡಿಸಿ ಹಬ್ಬವನ್ನ ಆಚರಿಸುತ್ತಾರೆ. ಆದ್ರೆ ಪಟಾಕಿ ಹೊಡೆಯೋ ಮುನ್ನಾ ವಹಿಸಬೇಕಾದ ಮುಂಜಾಗೃತ ಕ್ರಮವನ್ನ ಮಾತ್ರ ಯಾರು ಅನುಸರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ(ಅಕ್ಟೋಬರ್ 31) ಬೆಂಗಳೂರು ನಗರದಲ್ಲಿ ಪಟಾಕಿ ಸಿಡಿತದಿಂದ ಗಾಯಗೊಂಡಿರುವವರ ಪ್ರಕರಣಗಳು ಹೆಚ್ಚಾಗಿವೆ.
ಪಟಾಕಿ ಹೊಡೆಯುವವರಿಗಿಂತ , ನಿಂತು ನೋಡಿದವರಿಗೆ ಹೆಚ್ಚು ಗಾಯ..!
ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಒಂದೇ ದಿನಕ್ಕೆ ಸುಮಾರು 20 ಪ್ರಕರಣಗಳು ದಾಖಲಾಗಿವೆ. ಬಿಜಿಲಿ ಪಟಾಕಿ, ಲಕ್ಷ್ಮೀ ಬಾಂಬ್ ಸೇರಿದಂತೆ ವಿವಿಧ ಬಗೆಯ ಪಟಾಕಿಗಳಿಂದ ಕಣ್ಣಿಗೆ ಗಾಯ ಮಾಡಿಕೊಂಡವರು ಹೆಚ್ಚು. ಅದ್ರಲ್ಲೂ ಮಕ್ಕಳು ಹೆಚ್ಚು ಆಸ್ಪತ್ರೆಗೆ ದಾಖಲಾಗ್ತಿರೋದು ಮತ್ತಷ್ಟು ಆತಂಕಕ್ಕೆ ದಾರಿಮಾಡಿಕೊಟ್ಟಿದೆ. ಇದರಲ್ಲಿ ಒಬ್ಬರಿಗೆ ತೀವ್ರವಾಗಿ ಗಾಯಗೊಂಡಿದ್ದು, ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಲಾಗ್ತಿದೆ. ಇನ್ನುಳಿದವರಿಗೆ ಕಡಿಮೆ ಗಾಯವಾಗಿದ್ದು, ಮಿಂಟೋ ಪಟಾಕಿ ಸಿಡಿತ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಪಟಾಕಿ ಸಿಡಿಸುವವರಿಗೆ ಸಾಮಾನ್ಯವಾಗಿ ಗಾಯವಾಗುತ್ತೆ ಅನ್ನೋದು ಇತ್ತು. ಆದ್ರೆ ಈ ಬಾರಿ ರಸ್ತೆಯಲ್ಲಿ ಓಡಾಡೋರಿಗೆ ಹಾಗೂ ಪಟಾಕಿ ಹೊಡೆಯೋದನ್ನ ನಿಂತು ನೋಡುವವರಿಗೆ ಹೆಚ್ಚು ಗಾಯಗಳಾಗಿರೋದು ಕಂಡು ಬಂದಿದೆ. ಆಸ್ಪತ್ರೆಯಲ್ಲಿ ಪಟಾಕಿ ಸಿಡಿತಗೊಂಡವರನ್ನ ನೋಡಿದಾಗ ಶೇ. 70 ರಷ್ಟು ಪಟಾಕಿ ಸಿಡಿಸದವರಿಗೆ ಗಾಯಗಳಾಗಿದೆ.
ಇದನ್ನೂ ಓದಿ: ಪಟಾಕಿ ಸದ್ದು: ಒಂದೇ ದಿನದಲ್ಲಿ ಬೆಂಗಳೂರಿನಲ್ಲಿ ಕುಸಿದ ಗಾಳಿಯ ಗುಣಮಟ್ಟ ಸೂಚ್ಯಂಕ
ನಗರದ ನಾರಾಯಣ ನೇತ್ರಾಲಯದಲ್ಲಿ ಸುಮಾರು 14 ಪ್ರಕರಣಗಳು ದಾಖಲಾಗಿದ್ದು, 10 ಮಂದಿ ಮಕ್ಕಳೇ ಆಗಿದ್ದಾರೆ. ಜೊತೆಗೆ 30 ವರ್ಷದ ವ್ಯಕ್ತಿಗೆ ನಿಂತಿದ್ದಾಗ ಪಟಾಕಿ ಸಿಡಿದು, ಕಣ್ಣಿನ ಹೊರಭಾಗಕ್ಕಿಂತ, ಒಳಗಡೆ ಗಾಯವಾಗಿ ರೆಟಿನಾ ಹೊರ ಬಂದಿದೆ. ಜೊತೆಗೆ ಒಂದು ಮಗುವಿಗು ಕೂಡಾ ಪಟಾಕಿ ಹೊಡೆಯೋದನ್ನ ನೋಡೋಕೆ ಹೋದಾಗ ರೆಟಿನಾ ಸಮಸ್ಯೆಯಾಗಿದೆ. ಜೊತೆಗೆ ರಾಕೆಟ್‌ನಿಂದಲೂ ಮತ್ತೊಬ್ಬ ವ್ಯಕ್ತಿಗೆ ಗಾಯವಾಗಿದೆ. ಈ ಹಿನ್ನೆಲೆ ಇವರಿಗೆ ಮತ್ತೆ ದೃಷ್ಟಿ ಬರೋದು ಬಹಳ ಅನುಮಾನವಾಗಿದೆ. ಹೀಗಾಗಿ ರಸ್ತೆಯಲ್ಲಿ ಓಡಾಡುವಾಗ ಗ್ಲಾಸ್ ಹಾಕುವುದು, ಹಾಗೂ ಪಟಾಕಿ ಹೊಡೆಯುವ ಸಂದರ್ಭದಲ್ಲಿ ಮನೆಯಲ್ಲೇ ಇರುವಂತೆ ವೈದ್ಯರು ಸೂಚಿಸಿದ್ದಾರೆ.
ಒಟ್ಟಿನಲ್ಲಿ ಬೆಳಕಿನ ಹಬ್ಬ ದೀಪಾವಳಿ, ಕತ್ತಲನ್ನ ಕಳೆಯುವ ಬದಲು. ಅನೇಕರ ಬಾಳಿನಲ್ಲಿ ದೃಷ್ಟಿಯನ್ನೇ ತೆಗೆದುಬಿಟ್ಟಿದೆ. ಈ ಹಿನ್ನೆಲೆ ಪಟಾಕಿ ಸಿಡಿಸುವವರು ತಮ್ಮ ಅಕ್ಕಪಕ್ಕ ನೋಡಿ ಎಚ್ಚರಿಕೆಯಿಂದ ಪಟಾಕಿ ಹೊಡೆದರೆ ಒಳಿತು.
ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ