ರಾಜ್ಯ ಸರ್ಕಾರ ಕೇವಲ ಬೆಂಗಳೂರು ನಗರದಲ್ಲಿ ಮಾತ್ರವೇ ಅಲ್ಲ.. ಬೆಂಗಳೂರು ಹೊರತು 6 ಜಿಲ್ಲೆಗಳ ಏಳು ನಗರಗಳಲ್ಲಿ ಕೊರೊನಾ ಕರ್ಫ್ಯೂ ವಿಧಿಸಿದೆ. ಇದ್ರಲ್ಲಿ ಮೈಸೂರು, ತುಮಕೂರು, ಕಲಬುರಗಿ, ಮಂಗಳೂರು, ಉಡುಪಿ, ಮಣಿಪಾಲದಲ್ಲಿ ಕೊರೊನಾ ಕರ್ಫ್ಯೂ ಸ್ಟ್ರಿಕ್ಟ್ ಆಗಿ ಜಾರಿಗೆ ಬಂದಿದೆ. ಆದ್ರೆ, ಬೀದರ್ನಲ್ಲಿ ಮಾತ್ರ ಹೆಸರಿಗಷ್ಟೇ ಕರ್ಫ್ಯೂ ಅನ್ನೋ ರೀತಿ ಜಿಲ್ಲಾಡಳಿತವೇ ನಡೆದುಕೊಂಡಿದೆ. ಈ ಮೂಲಕ ಕರ್ಫ್ಯೂ ಜಾರಿ ಮಾಡುವಲ್ಲಿ ಎಡವಟ್ಟು ಮಾಡಿದ್ದು ಕೊರೊನಾ ಸೋಂಕು ರಾಕೆಟ್ ಸ್ಪೀಡ್ನಲ್ಲಿ ಹಬ್ಬುತ್ತಿದ್ರೂ ಕೇರ್ಲೆಸ್ ಆಗಿ ವರ್ತಿಸಿದೆ.
ಸರ್ಕಾರದ ಆದೇಶಕ್ಕೆ ಸೊಪ್ಪು ಹಾಕಲಿಲ್ವಾ ಬೀದರ್ ಜಿಲ್ಲಾಡಳಿತ?
ಇಂತಹುದೊಂದು ಪ್ರಶ್ನೆ ಈಗ ಎದ್ದಿದೆ. ರಾಜ್ಯ ಸರ್ಕಾರ ಅದ್ರಲ್ಲೂ ಸ್ವತಃ ಮುಖ್ಯಮಂತ್ರಿಗಳೇ ಕೊರೊನಾ ಕರ್ಫ್ಯೂ ಘೋಷಣೆ ಮಾಡೋ ವೇಳೆ, ಬೀದರ್ ನಗರದಲ್ಲೂ ಸಹ ಕರ್ಫ್ಯೂ ಇರುತ್ತೆ ಅಂತಾ ಘೋಷಿಸಿದ್ರು. ಇದಾಗಿ ಎರಡು ದಿನದ ಬಳಿಕ ಕೊರೊನಾ ಕರ್ಫ್ಯೂ ಜಾರಿಯಾಗಿದೆ. ಆದ್ರೆ, ಬೀದರ್ ನಗರದಲ್ಲಿ ಕೊರೊನಾ ಕರ್ಫ್ಯೂ ಜಾರಿಗೆ ತರಲು ಜಿಲ್ಲಾಡಳಿತ ಬೇಜವಾಬ್ದಾರಿತನ ಮೆರೆದಿದೆ. ಬೀದರ್ ನಗರದಲ್ಲಿ ರಾತ್ರಿ 10 ಗಂಟೆ ಬಳಿಕವೂ ಅಂಗಡಿ-ಮುಂಗಟ್ಟುಗಳು ಓಪನ್ ಆಗಿದ್ವು. ಹೆಸರಿಗೆ ಅನ್ನೋ ರೀತಿ ಬಂದ ಪಿಎಸ್ಐ ಇದ್ದ ವಾಹನವೊಂದು ಎಲ್ಲ ಅಂಗಡಿ ಕ್ಲೋಸ್ ಮಾಡಿ ಅಂತಾ ಕೂಗಿತು. ಆಗ, ಅಂಗಡಿ ಕ್ಲೋಸ್ ಮಾಡಿದ್ರು. ಜೀಪ್ ಹೋಗ್ತಿದ್ದಂತೆ ಮತ್ತೆ ವ್ಯಾಪಾರ-ವಹಿವಾಟು ಶುರುವಾಯ್ತು.
ಮೈಸೂರಲ್ಲಿ ಭರ್ಜರಿ ರೌಂಡ್ಸ್ ಹಾಕಿದ ಅಶ್ವಾರೋಹಿ ದಳ
ಸರ್ಕಾರದ ಆದೇಶವನ್ನ ಗಂಭೀರವಾಗಿ ತೆಗೆದುಕೊಂಡಿರೋ ಮೈಸೂರು ಜಿಲ್ಲಾಡಳಿತ, ಮೈಸೂರು ನಗರದಲ್ಲಿ ಕೊರೊನಾ ಕರ್ಫ್ಯೂ ಯಶಸ್ವಿಯಾಗಲು ಸೂಕ್ತ ಕ್ರಮಗಳನ್ನ ತೆಗೆದುಕೊಂಡಿದೆ. ಕೊರೊನಾ ಕರ್ಫ್ಯೂ ವೇಳೆ ಯಾರು ಹೊರಬರಂದತೆ ನೋಡಿಕೊಳ್ಳಲು ಪೊಲೀಸರ ನಿಯೋಜಿಸಲಾಗಿತ್ತು. ಈ ಪೊಲೀಸರು ಹೇಗೆ ಕಾರ್ಯ ನಿರ್ವಹಿಸ್ತಿದ್ದಾರೆ ಅನ್ನೋದನ್ನ ತಪಾಸಣೆ ಮಾಡಲು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಅಶ್ವಾರೋಹಿ ಪಡೆಯೊಂದಿಗೆ ಮೈಸೂರು ರೌಂಡ್ಸ್ ಹಾಕಿದ್ರು.
ಮಂಗಳೂರು, ತುಮಕೂರಿನಲ್ಲೂ ಕೊರೊನಾ ಕರ್ಫ್ಯೂ ಸಕ್ಸಸ್
ಇನ್ನೂ ರಾಜ್ಯದಲ್ಲಿ ಕೊರೊನಾ ಹೆಚ್ಚಿರೋ ಮತ್ತೆರಡು ನಗರಗಳಾದ ಮಂಗಳೂರು, ತುಮಕೂರಿನಲ್ಲೂ ಕೊರೊನಾ ಕರ್ಫ್ಯೂ ಯಶಸ್ವಿಯಾಗಿದೆ. ಮಂಗಳೂರಿನಲ್ಲಿ ಸಾರ್ವಜನಿಕರ ಜೊತೆ ಸೌಜನ್ಯದಿಂದ ವರ್ತಿಸುವಂತೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಸೂಚಿಸಿದ್ರು. ಪೊಲೀಸರು ಸೌಜನ್ಯದಿಂದ ವರ್ತಿಸಿದ್ರೂ.. ಪೊಲೀಸರ ಜೀಪ್ ಮೇಲೆಯೇ ದುಷ್ಕರ್ಮಿಯೊಬ್ಬ ಕಲ್ಲೆಸೆದಿದ್ದಾನೆ. ತಕ್ಷಣ ಅಲ್ಲಿದ್ದ ಸಾರ್ವಜನಿಕರು ಕಲ್ಲೆಸದವನಿಗೆ ಹಿಗ್ಗಾಮುಗ್ತಾ ಥಳಿಸಿದ್ದಾರೆ. ಬಳಿಕ ಪೊಲೀಸರು ಆ ವ್ಯಕ್ತಿಯನ್ನ ಕರೆದೊಯ್ದು ವಿಚಾರಣೆ ನಡೆಸಿದ್ರು. ತುಮಕೂರಿನಲ್ಲಿ ಕಟ್ಟು ನಿಟ್ಟಾಗಿ ಕೊರೊನಾ ಕರ್ಫ್ಯೂ ಜಾರಿಯಾಗಿತ್ತು. ಬೆಂಗಳೂರಿನಿಂದ ಆಗಮಿಸ್ತಿದ್ದ ಎಲ್ಲ ವಾಹನಳ ನಂಬರ್ ಬರೆದುಕೊಳ್ತಿದ್ದ ಪೊಲೀಸರು, ಮೊದಲ ದಿನವಾಗಿದ್ದರಿಂದ ತಿಳಿ ಹೇಳಿ ಕಳಿಸಿದ್ರು.
ಕಲಬುರಗಿಯಲ್ಲಿ ಬೇಕಾಬಿಟ್ಟಿ ತಿರುಗ್ತಿದ್ದವರಿಗೆ ಲಾಠಿ ರುಚಿ
ಕಲಬುರಗಿಯಲ್ಲಿ ಕಟ್ಟುನಿಟ್ಟಾಗಿ ಕೊರೊನಾ ಕರ್ಫ್ಯೂ ಜಾರಿ ಮಾಡಲಾಗಿತ್ತು. ಕರ್ಫ್ಯೂಗೆ ಸೂಕ್ತ ತಯಾರಿ ಮಾಡಿಕೊಂಡಿದ್ದ ಪೊಲೀಸರು, ರಾತ್ರಿ 10ರ ಬಳಿಕ ಯಾರೂ ಹೊರ ಬರದಂತೆ ಸೂಚಿಸಿದ್ರು. ಇಷ್ಟಾದ್ರೂ.. ಬೇಕಾಬಿಟ್ಟಿ ತಿರುಗುತ್ತಿದ್ದವರಿಗೆ ಲಾಠಿ ರುಚಿ ತೋರಿಸಿದ್ದಾರೆ. ಕಲಬುರಗಿಯ ಹುಮ್ನಾಬಾದ್ ಬೇಸ್ ಬಳಿ ಬ್ಯಾರಿಕೇಡ್ ಅಳವಡಿಸಿದ್ದ ಪೊಲೀಸರು.. ಎಲ್ಲರನ್ನ ಪರಿಶೀಲನೆ ಮಾಡ್ತಿದ್ರು. ಈ ವೇಳೆ ಅನಗತ್ಯವಾಗಿ ರಸ್ತೆಗೆ ಬಂದಿದ್ದವರಿಗೆ ಬೆತ್ತದ ರುಚಿ ತೋರಿಸಿದ್ರು. ಆದ್ರೆ, ಶಾಸಕ ಜಮೀರ್ ಅಹ್ಮದ್ ಖಾನ್ ನಗರದಲ್ಲಿ ಓಡಾಡ್ತಿದ್ರೂ ಪೊಲೀಸರು ಸುಮ್ಮನಿದ್ರು. ಹೀಗಾಗಿ ಸಾಮಾನ್ಯರಿಗೊಂದು ನ್ಯಾಯ.. ಉಳ್ಳವರಿಗೊಂದು ನ್ಯಾಯ ಅನುಸರಿಸ್ತಿದ್ರಾ ಅನ್ನೋ ಪ್ರಶ್ನೆಯನ್ನ ಜನ ಈಗ ಎತ್ತುತ್ತಿದ್ದಾರೆ.
ಉಡುಪಿ, ಮಣಿಪಾಲದಲ್ಲಿ ಉಡುಪಿ ಡಿಸಿ ಜಗದೀಶ್ ರೌಂಡ್ಸ್
ಉಡುಪಿ ಮತ್ತು ಮಣಿಪಾಲದಲ್ಲಿಯೂ ಕೊರೊನಾ ಕರ್ಫ್ಯೂ ವಿಧಿಸಲಾಗಿದೆ. ಹೀಗಾಗಿ ಕರ್ಫ್ಯೂ ಹೇಗೆ ಜಾರಿಯಾಗಿದೆ ಅಂತಾ ತಿಳಿದುಕೊಳ್ಳಲು ಉಡುಪಿ ಜಿಲ್ಲಾಧಿಕಾರಿ ಎರಡು ನಗರಗಳಲ್ಲಿ ತಿರುಗಾಡಿದ್ರು. ಈ ವೇಳೆ ರಸ್ತೆಯಲ್ಲಿ ಅನಗತ್ಯವಾಗಿ ತಿರುಗುತ್ತಿದ್ದವರಿಗೆ ಕ್ಲಾಸ್ ತೆಗೆದುಕೊಂಡ್ರು. ಅಲ್ದೆ, ನಾಳೆಯಿಂದ ರಸ್ತೆಯಲ್ಲಿ ಕಾಣಿಸಿಕೊಂಡ್ರೆ, ವಾಹನಗಳನ್ನ ಸೀಜ್ ಮಾಡೋದಾಗಿ ಎಚ್ಚರಿಕೆ ನೀಡಿದ್ರು.
ಬೀದರ್ ಹೊರತುಪಡಿಸಿ ಉಳಿದೆಡೆ ಕೊರೊನಾ ಕರ್ಫ್ಯೂ ಯಶಸ್ವಿಯಾಗಿದೆ. ಇನ್ನಾದ್ರೂ ಬೀದರ್ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಮುಂದಿನ 9 ದಿನಗಳು ಕಠಿಣವಾಗಿ ಕೊರೊನಾ ಕರ್ಫ್ಯೂ ಜಾರಿ ಮಾಡುತ್ತಾ ಅಂತಾ ಕಾದು ನೋಡಬೇಕಿದೆ.
ಇದನ್ನೂ ಓದಿ: Bengaluru Night Curfew: ನೈಟ್ ಕರ್ಫ್ಯೂ ಶುರು: ಬೆಂಗಳೂರಿನ ರಸ್ತೆಗಳು ಬಂದ್; ರಸ್ತೆ ರಸ್ತೆಗಳಲ್ಲೂ ಖಾಕಿ ಕಾವಲು
(First Day Night Corona Curfew Round Up Ground Report)