ಚಿತ್ರದುರ್ಗ: ಜೋಡೆತ್ತಿನ ಗಾಡಿ ಓಟದ ವೇಳೆ ಜನರತ್ತ ಬಂಡಿ ನುಗ್ಗಿ ಬಂದು ಅವಘಡ ಸಂಭವಿಸಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಸೊಂಡೇಕೆರೆಯಲ್ಲಿ ನಡೆದಿದೆ. ಘಟನೆಯಲ್ಲಿ ವೃದ್ಧೆ ಸೇರಿದಂತೆ ಐವರಿಗೆ ಗಾಯಗಳಾಗಿದೆ. ಸದ್ಯ, ವೃದ್ಧೆ ಅನಸೂಯಮ್ಮ ಮತ್ತು ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕೆಂಚಾಂಬ ರೈತ ಯುವಕರ ಸಂಘದಿಂದ ಸ್ಪರ್ಧೆ ಆಯೋಜಿಸಲಾಗಿತ್ತು. ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸಂಘವು ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ಸ್ಪರ್ಧೆಯ ಆಯೋಜನೆ ಮಾಡಿತ್ತು ಎಂದು ಹೇಳಲಾಗಿದೆ. ಹೀಗಾಗಿ, ಸಂಘದ ಸದಸ್ಯರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ.
ಇನ್ನು, ಈ ಕುರಿತು ಟಿವಿ9ನಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಜೋಡೆತ್ತಿನ ಓಟದ ಸ್ಪರ್ಧೆಗೆ ಬ್ರೇಕ್ ಹಾಕಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಪ್ರತಿಕ್ರಿಯಿಸಿದ್ದು ಅವಘಡದಲ್ಲಿ ವೃದ್ಧೆ ಅನಸೂಯಮ್ಮ ಸೇರಿ ಐವರಿಗೆ ಗಾಯಗಳಾಗಿದೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಂಚಾಂಬ ರೈತ ಯುವಕರ ಸಂಘ ಸ್ಪರ್ಧೆ ಆಯೋಜಿಸಿತ್ತು. ಆದರೆ, ಆಯೋಜಕರು ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದರು. ಜೊತೆಗೆ, ಪೊಲೀಸರು ಸೂಚಿಸಿದ ನಿಯಮಗಳನ್ನು ಆಯೋಜಕರು ಪಾಲಿಸಿಲ್ಲ. ಹಾಗಾಗಿ, ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಮೆಣಸು ಕೊಯ್ಲು ವೇಳೆ ವಿದ್ಯುತ್ ತಗುಲಿ ಕಾರ್ಮಿಕ ಸಾವು
ಮೆಣಸು ಕೊಯ್ಲು ಮಾಡುವ ವೇಳೆ ವಿದ್ಯುತ್ ತಗುಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದಲ್ಲಿ ನಡೆದಿದೆ. ವಿನೋದ್(21) ಮೃತ ಕಾರ್ಮಿಕ. ಉರ್ವಿನ್ ಖಾನ್ ಕಾಫಿ ಎಸ್ಟೇಟ್ನಲ್ಲಿ ಘಟನೆ ನಡೆದಿದೆ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮಾಡೆಲ್ ವಿದ್ಯಾರ್ಥಿನಿ ಪ್ರೇಕ್ಷಾ ನಿಗೂಢ ಸಾವು ಪ್ರಕರಣ: ಮೂವರು ಖಾಕಿ ವಶಕ್ಕೆ
ಇತ್ತ, ಮಾಡೆಲ್ ವಿದ್ಯಾರ್ಥಿನಿ ಪ್ರೇಕ್ಷಾ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರೇಕ್ಷಾ ಪ್ರಿಯಕರ ಯತಿರಾಜ್ ಸೇರಿದಂತೆ ಸೌರವ್ ಮತ್ತು ಭವಿತ್ರನ್ನು ವಶಕ್ಕೆ ಪಡೆಯಲಾಗಿದೆ.
ಉಳ್ಳಾಲ ಠಾಣೆಯ ಪೊಲೀಸರಿಂದ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ. ಮೂವರು ಬಂಧಿತರು ವಿದ್ಯಾರ್ಥಿನಿ ಪ್ರೇಕ್ಷಾ ಮನೆ ಬಳಿ ನಿನ್ನೆ ಹೋಗಿದ್ದರು ಎಂಬ ಮಾಹಿತಿ ದೊರೆತಿದೆ. ಪ್ರೇಕ್ಷಾ ಸಾವನ್ನಪ್ಪುವ ವೇಳೆ ಮಂಗಳೂರು ಹೊರವಲಯದಲ್ಲಿರುವ ಕುಂಪಲ ಆಶ್ರಯ ಕಾಲೋನಿಯಲ್ಲಿರುವ ಆಕೆಯ ಮನೆ ಬಳಿ ಯುವಕರು ಹೋಗಿದ್ದರು ಎಂಬ ಮಾಹಿತಿ ಸಿಕ್ಕಿದೆ. ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪ್ರೇಕ್ಷಾ ಶವ ಸಿಕ್ಕಿತ್ತು.
ಇದನ್ನೂ ಓದಿ: ವಿಜಯಪುರ ಜನರಿಗೆ ಶಾಪವಾಗಿ ಪರಿಣಮಿಸಿದ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ