ಜನರ ಸೇಡಿಗೆ ಬಲಿಯಾದ್ವಾ 5 ಹುಲಿಗಳು? ವ್ಯಾಘ್ರಗಳು ಸಾವಿಗೂ ಮುನ್ನ ನಡೆದಿದ್ದೇನು?

ಮೃತ ಹಸುವಿನ ವಿಷ ಮಿಶ್ರಿತ ಮಾಂಸ ಸೇವಿಸಿ ತಾಯಿ ಹುಲಿ ಮತ್ತು ಅದರ ನಾಲ್ಕು ಮರಿ ಸೇರಿ ಐದು ಹುಲಿಗಳು ಒಂದೇ ದಿನ ಮೃತಪಟ್ಟಿವೆ. ಹುಲಿಗಳ ನಾಡೆಂದೇ ಪ್ರಖ್ಯಾತಿಯಾದ ಚಾಮರಾಜನಗರ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಮಿಣ್ಯಂ ಅರಣ್ಯದಲ್ಲಿ ಹುಲಿಗಳು ಮೃತಪಟ್ಟಿರುವುದು ಕಂಡುಬಂದಿದ್ದು, ಒಂದೇ ದಿನ ಐದು ಹುಲಿಗಳು ಸಾವನ್ನಪ್ಪಿರುವ ದುರಂತ ದೇಶದಲ್ಲೇ ಮೊದಲು. ಇನ್ನು ಈ ಹುಲಿಗಳ ಸಾವಿಗೆ ಈ ಹಿಂದೆ ನಡೆದ ಕೆಲ ದುರ್ಘಟನೆಗಳೇ ಕಾರವಾಯ್ತಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ. ಹಾಗಾದ್ರೆ, ಏನು ಆ ಅನುಮಾನ? ಹುಲಿಗಳ ಸಾವು ಹೇಗಾಯ್ತು ಎನ್ನುವ ಡಿಟೇಲ್ಸ್ ಇಲ್ಲಿದೆ.

ಜನರ ಸೇಡಿಗೆ ಬಲಿಯಾದ್ವಾ 5 ಹುಲಿಗಳು? ವ್ಯಾಘ್ರಗಳು ಸಾವಿಗೂ ಮುನ್ನ ನಡೆದಿದ್ದೇನು?
Tigers Death

Updated on: Jun 27, 2025 | 6:15 PM

ಬೆಂಗಳೂರು/ಚಾಮರಾಜನಗರ, (ಜೂನ್ 27): ಚಾಮರಾಜನಗ (Chamarajnagar) ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿ (Male mahadeshwara hills forest) ವಿಭಾಗದ ಹೂಗ್ಯಂ ವಲಯದಲ್ಲಿ ಐದು ಹುಲಿಗಳು (Tigers) ಸಾವನ್ನಪ್ಪಿದ್ದು, ವಿಷ ಪ್ರಾಷನದಿಂದ ಹುಲಿಗಳು ಸಾವನ್ನಪ್ಪಿವೆ ಎನ್ನಲಾಗುತ್ತಿದೆ. ಸದ್ಯ ಮೃತಪಟ್ಟಿರುವ 5 ಹುಲಿಗಳ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಸದ್ಯ ಅಂಗಾಂಗಳ ಪರೀಕ್ಷೆ ನಡೆಸಲು ಸ್ಯಾಂಪಲ್‌ಗಳನ್ನ ಲ್ಯಾಬ್‌ಗೆ ಕಳುಹಿಸಲಾಗಿದೆ. NTCA ನಿಯಮಾನುಸಾರ ಹುಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೂರು ಗುಂಪುಗಳಾಗಿ ಮಾದರಿ ಸಂಗ್ರಹಿಸಿರುವ ಪ್ರಾಣಿಶಾಸ್ತ್ರಜ್ಞರು ಮತ್ತು ಪಶು ವೈದ್ಯರು ಹುಲಿ ಸಾವಿಗೆ ಕಾರಣ ಪತ್ತೆ ಹಚ್ಚುತ್ತಿದ್ದಾರೆ. ಈ ನಡುವೆ ಹನೂರು ತಾಲೂಕಿನ ಗಾಜನೂರಿನ ನಾಲ್ವರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ. ಈ ಹುಲಿಗಳ ಸಾವಿಗೂ ಮುನ್ನ ಕೆಲ ದಿನಗಳ ಹಿಂದೆ ಸಂಭವಿಸಿದ ದುರ್ಘಟನೆಗಳೇ ಇದೀಗ ಹುಲಿ ಸಾವಿಗೆ ಕಾರಣವಾಯ್ತಾ ಎನ್ನುವ ಅನುಮಾನ ಉದ್ಭವಿಸಿದೆ.

ಜನರ ಸೇಡಿಗೆ ಬಲಿಯಾದ್ವಾ ಹುಲಿಗಳು?

ಹೌದು….ಹುಲಿಗಳು ಸಾವಿಗೂ ಮುನ್ನ ಒಂದೇ ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಇಬ್ಬರನ್ನು ಹುಲಿ ತಿಂದು ಹಾಕಿದೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು, ಹಸುವಿನ ಕಳೇಬರಕ್ಕೆ ವಿಷಹಾಕಿ ಹುಲಿಗಳನ್ನ ಕೊಂದಿರೋ ಶಂಕೆ ಇದೆ. ಯಳಂದೂರಿನ ಬಿಳಿಗಿರಿರಂಗನ ಬೆಟ್ಟ ವ್ಯಾಪ್ತಿಯ ರಾಮಯ್ಯನಪೋಡು ಬಳಿ ರಂಗಮ್ಮ ಎಂಬ ವೃದ್ಧೆಯನ್ನ ಹುಲಿ ಕೊಂದಿತ್ತು. ಇದರಿಂದ ಸ್ಥಳೀಯುರ ಬೆಚ್ಚಿಬಿದ್ದಿದ್ದರು. ಆ ಘಟನೆಯ ಕಹಿ ನೆನೆಪು ಮಾಸುವ ಮುನ್ನವೇ ಪುಟ್ಟಮ್ಮ ಹುಲಿ ದಾಳಿಗೆ ಸಾವನ್ನಪ್ಪಿದ್ದರು. ಇದೇ ಸೇಡಿಗೆ ಜನರು ಹುಲಿಗಳನ್ನ ಬಲಿಪಡೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: 5 ಹುಲಿಗಳ ಸಾವಿನ ಸುತ್ತ ಹಸು…ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್

ಗುಂಡ್ಲುಪೇಟೆ ದೇಶಿಪುರ ಗ್ರಾಮದಲ್ಲಿ ದನಗಳು ಹಾಗೂ ಕುರಿಗಳನ್ನು ಮೇಯಸುತ್ತಿದ್ದ ಮಹಿಳೆ ಹುಲಿ ದಾಳಿಗೆ ಬಲಿಯಾಗಿದ್ದರು. ಪುಟ್ಟಮ್ಮನನ್ನು ಕೊಂದ ಹುಲಿ, ನಂತರ ಸ್ವಲ್ಪ ದೂರ ಎಳೆದೊಯ್ದಿತ್ತು. ಹೊಟ್ಟೆ ಬಗೆದು ತಿನ್ನುತ್ತಿರುವಾಗಲೇ, ಜನ ನೋಡಿ ಬೆಚ್ಚಿದ್ದಿದ್ದಾರೆ. ನಾಲ್ಕೈದು ಮಂದಿ ಬೊಬ್ಬೆ ಹೊಡೆದಿದ್ದಾರೆ, ಚೀರಾಡಿದ್ದಾರೆ. ಆಗ ಹುಲಿ ಪುಟ್ಟಮ್ಮ ಮೃತದೇಹ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿತ್ತು. ಇನ್ನು ಬಿಳಿಗಿರಿರಂಗನ ಬೆಟ್ಟದ ರಾಮಯ್ಯನ ಪೋಡಿ ಎಂಬಲ್ಲಿ ಜೂನ್ 10 ರಂದು ಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರಗೆ ಬಂದಿದ್ದ ವ್ಯಕ್ತಿ ಮೇಲೆ ಹುಲಿ ದಾಳಿ ನಡೆದಿತ್ತು.

ಇದನ್ನೂ ಓದಿ
ಹುಲಿಗಳ ಅಸಹಜ ಸಾವು: ಐವರನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
ಚಾಮರಾಜನಗರದಲ್ಲಿ ವ್ಯಾಘ್ರ ಅಟ್ಟಹಾಸ: ತಿಂಗಳಲ್ಲಿ 2 ಜೀವ ಬಲಿ ಪಡೆದ ನರಭಕ್ಷಕ
ಚಾಮರಾಜನಗರ: ಮೂತ್ರ ವಿಸರ್ಜನೆಗೆಂದು ಹೊರ ಬಂದ ವ್ಯಕ್ತಿ ಮೇಲೆ ಹುಲಿ ದಾಳಿ

ಹೀಗೆ ಪದೇ ಪದೇ ಚಾಮರಾಜನಗರ ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಮಾನವ ಮತ್ತು ವನ್ಯಜೀವಿಗಳ ಮಧ್ಯೆ ಸಂಘರ್ಷ ಮುಂದುವರಿಯುತ್ತಿರುವ ಬಗ್ಗೆ ಸ್ಥಳೀಯರು ಸಹ ಸಾಕಷ್ಟು ಬಾರಿ ಅರಣ್ಯ ಇಲಾಖೆ ದೂರು ನೀಡಿದ್ದರೂ ಸಹ ಪ್ರಯೋಜನವಾಗಿಲ್ಲ. ಇದರಿಂದ ಜನರಿಗೆ ಹುಲಿಗಳ ಭೀತಿಯಲ್ಲೇ ದಿನ ಕಳೆಯುವಂತಾಗಿದ್ದು, ಇದೇ ಸೇಡಿಗೆ ಹುಲಿಗಳನ್ನ ಬಲೆಪಡೆದುಕೊಂಡ್ರಾ ಎನ್ನುವ ಅನುಮಾನವೂ ಸಹ ಹುಟ್ಟಿಕೊಂಡಿದೆ.

ಹುಲಿಗಳ ಕಳೇಬರದ ಬಳಿ ಬಿದ್ದಿರೋ ಹಸುವೊಂದರ ಕಳೇಬರ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹಸುವಿನ ಕಳೇಬರಕ್ಕೆ ವಿಷಹಾಕಿ ಹುಲಿಗಳನ್ನ ಕೊಂದಿರುವ ಶಂಕೆ ಇದೆ. ಜನರನ್ನು ಹಾಗೂ ಹಸುವನ್ನ ಕಾಡುಪ್ರಾಣಿ ಕೊಂದ ಸೇಡಿಗೆ ವಿಷ ಹಾಕಿರುವ ಸಾಧ್ಯತೆಯೂ ಇದೆ. ಹಾಗೆಯೇ ಹುಲಿ ಬೇಟೆಯಾಡಲು ಬೇಟೆಗಾರರು ಏನಾದ್ರೂ ವಿಷ ಹಾಕಿದ್ರ ಅನ್ನೋ ಶಂಕೆಯೂ ಇದೆ.

ಹೇಗಾಯ್ತು ಹುಲಿಗಳ ಸಾವು?

ಕಾಡಂಚಿನ ಜನರು ತಮ್ಮ ತಮ್ಮ ಹಸುಗಳನ್ನು ಮೇಯಲು ಅರಣ್ಯಕ್ಕೆ ಬಿಡುತ್ತಾರೆ. ಆ ವೇಳೆ ಹಸುವೊಂದು ಹುಲಿ ದಾಳಿ ಬಲಿಯಾಗಿದೆ. ಇದರಿಂದ ಕೆರಳಿದ ಹಸು ಸಾಕಣೆದಾರರು ಹುಲಿ ತಿಂದು ಬಿಟ್ಟು ಹೋದ ಹಸುವಿನ ಮಾಂಸಕ್ಕೆ ವಿಷ ಬೆರೆಸಿರುವ ಸಾಧ್ಯತೆಗಳಿದ್ದು, ವಿಷ ಬೆರೆಸಿದ ಹಸುವಿನ ಮಾಂಸವನ್ನು ಹುಲಿ ತನ್ನ ನಾಲ್ಕು ಮರಿಗಳೊಂದಿಗೆ ಭಕ್ಷಿಸಿದಾಗ ಸಾವೀಗಿಡಾಗಿರುವ ಸಾಧ್ಯತೆಗಳಿವೆ. ಇದಲ್ಲದೇ ಬೇರೆ ಇನ್ಯಾವ ರೀತಿಯಲ್ಲಿ ಹುಲಿಗಳು ಸಾವಾಗಿದೆ ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದ್ದು, ಸದ್ಯ ಹನೂರು ತಾಲೂಕಿನ ಗಾಜನೂರಿನ ನಾಲ್ವರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

ಅರಣ್ಯ ಇಲಾಖೆಯ ನಿರ್ಲಕ್ಷ್ಯವೂ ಕಾರಣವಾಯ್ತಾ?

ಇನ್ನೊಂದೆಡೆ ಇಡೀ ಘಟನೆಗೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ದೂರಲಾಗುತ್ತಿದೆ. ಪ್ರತ್ಯೇಕ ಚೆಕ್ ಪೋಸ್ಟ್ ತೆರೆಯಲು ಅನಮತಿ ಕೋರಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿರಲಿಲ್ಲ. ಒಂದೂವರೆ ತಿಂಗಳ ಹಿಂದೆಯೇ ಈ ಬಗ್ಗೆ ಚಾಮರಾಜನಗರ ಎಸ್‌ಪಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರು ಎನ್ನುವುದು ಗೊತ್ತಾಗಿದೆ

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದ ಚಾಮರಾಜನಗರ ಎಸ್‌ಪಿ, ಗೋಪಿನಾಥಮ್ ಮತ್ತು ಪಾಲಾರ್ ಕೂಡುವ ಪ್ರದೇಶದಲ್ಲಿ ಪ್ರತ್ಯೇಕ ಚೆಕ್‌ಪೋಸ್ಟ್ ಗೆ ಮನವಿ ಮಾಡಿದ್ದರು. 15×15 ಅಡಿ ಅಳತೆಯ ಜಾಗದಲ್ಲಿ ಪ್ರತ್ಯೇಕ ಪೊಲೀಸ್ ಚೆಕ್‌ಪೋಸ್ಟ್ ತೆರೆಯಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು ಎನ್ನುವುದು ತಿಳಿಸಿದೆ.

ಮಲೆ ಮಹದೇಶ್ವರ ಬೆಟ್ಟದಿಂದ ಬರುವ ಹಾಗೂ ಹೊಗೇನಕಲ್ ಕಡೆಗೆ ಹೋಗುವ ವಾಹನಗಳು ಮತ್ತು ಅನುಮಾನಸ್ಪದ ವ್ಯಕ್ತಿಗಳನ್ನು ಪರಿಶೀಲನೆ ಮಾಡಲು ಸಾಧ್ಯವಾಗುತ್ತಿಲ್ಲ. ಗೋಪಿನಾಥಮ್ ಹಾಗೂ ಸುತ್ತಮುತ್ತಲ ಗ್ರಾಮದ ಜನರ ಚಲನವಲನಗಳನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಪಾಲಾರ್ ಅಕ್ಕಪಕ್ಕ ತಮಿಳುನಾಡಿನ ಗ್ರಾಮಗಳಾದ ಗೋವಿಂದಪಾಡಿ, ಶೆಟ್ಟಿಪಟ್ಟಿ, ಕರಂಗಲೂರು, ಕಾರೆಕಾಡು ಕತ್ತರಿಮಲೈ ಮತ್ತು ಇನ್ನಿತರ ಗ್ರಾಮಗಳಲ್ಲಿ ಕಳ್ಳ ಬೇಟೆಗಾರರಿದ್ದಾರೆ. ಇವರುಗಳ ಮೇಲೆ ನಿಗಾವಹಿಸುವ ಆವಶ್ಯಕತೆ ಇರುತ್ತದೆ. ಪೊಲೀಸ್ ಇಲಾಖೆಗೆ ಸಂಬಂಧಿಸಿದ ಆಯುಧಗಳು ಹಾಗೂ ವೈರ್‌ಲೆಸ್ ಉಪಕರಣಗಳನ್ನು ಸಹ ಅಳವಡಿಸಲಾಗಿದ್ದು ಅವುಗಳನ್ನು ಸುರಕ್ಷಿತವಾಗಿಡುವುದು ಅವಶ್ಯಕವಾಗಿರುತ್ತದೆ ಎಂದು ತಿಳಿಸಿದ್ದರು.

ಎಸ್‌ಪಿ ಬರೆದ ಈ ಪತ್ರಕ್ಕೆ ಹಾಗೂ ಕಾಡಂಚಿನ ಜನರ ಮನವಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಂದಿಸಿದ್ರೆ ಹುಲಿಗಳ ಜೀವವಾದ್ರೂ ಉಳಿಯುತ್ತಿತ್ತೋ ಏನೋ. ಸದ್ಯ ಹಸುವಿನ ಮಾಲೀಕ ಸಿಕ್ಕ ಬಳಿಕವಷ್ಟೇ ಹುಲಿ ಸಾವಿಗೆ ಕಾರಣ ಗೊತ್ತಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ