Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣ ಪಿನಾಕಿನಿ ನದಿ ನೀರಿನ ವಿಷಯದಲ್ಲಿ ಕೇಂದ್ರವು ಕನ್ನಡಿಗರನ್ನು ಮತ್ತೊಮ್ಮೆ ಜಲದಾಸ್ಯಕ್ಕೆ ದೂಡುವುದನ್ನು ಸಹಿಸುವುದಿಲ್ಲ: ಎಚ್​ಡಿಕೆ

ದಕ್ಷಿಣ ಪಿನಾಕಿನಿ ನದಿ ನೀರಿನ ವಿಷಯದಲ್ಲಿ ಕೇಂದ್ರ ಸರ್ಕಾರ ಕನ್ನಡಿಗರ ಹಕ್ಕು ಕಸಿಯಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ದೂರಿದ್ದಾರೆ.

ದಕ್ಷಿಣ ಪಿನಾಕಿನಿ ನದಿ ನೀರಿನ ವಿಷಯದಲ್ಲಿ ಕೇಂದ್ರವು ಕನ್ನಡಿಗರನ್ನು ಮತ್ತೊಮ್ಮೆ ಜಲದಾಸ್ಯಕ್ಕೆ ದೂಡುವುದನ್ನು ಸಹಿಸುವುದಿಲ್ಲ: ಎಚ್​ಡಿಕೆ
HD Kumaraswamy
Follow us
TV9 Web
| Updated By: ನಯನಾ ರಾಜೀವ್

Updated on: Nov 18, 2022 | 9:28 AM

ದಕ್ಷಿಣ ಪಿನಾಕಿನಿ ನದಿ ನೀರಿನ ವಿಷಯದಲ್ಲಿ ಕೇಂದ್ರ ಸರ್ಕಾರ ಕನ್ನಡಿಗರ ಹಕ್ಕು ಕಸಿಯಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ದೂರಿದ್ದಾರೆ. ರಾಷ್ಟ್ರೀಯ ಪಕ್ಷಗಳು ಕರ್ನಾಟಕದ ಪಾಲಿಗೆ ಮಾರಕ ಎನ್ನುವುದು ಪದೇ ಪದೆ ರುಜುವಾತಾಗುತ್ತಿದೆ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

ಕಾವೇರಿ ವಿವಾದದಲ್ಲಿ ಕರ್ನಾಟಕವು ಒಂದು ಶತಮಾನ ಕಾಲ ಸಂಘರ್ಷ ನಡೆಸಿದ್ದಾಯಿತು. ಮೇಕೆದಾಟು ವಿವಾದಕ್ಕೆ ನರೇಂದ್ರ ಮೋದಿ ಸರಕಾರ ಇನ್ನೂ ತುಪ್ಪ ಸುರಿಯುತ್ತಾ, ಆ ಯೋಜನೆಗೆ ಅನುಮತಿ ನೀಡಲು ಮೀನಾಮೇಷ ಎಣಿಸುತ್ತಿದೆ. ಆಗಲೇ, ಪಿನಾಕಿನಿ ನದಿ ವಿಷಯದಲ್ಲಿ ರಾಜ್ಯಕ್ಕೆ ಕಾನೂನು ಕುಣಿಕೆ ಬಿಗಿಯಲು ಬಿಜೆಪಿ ಸರ್ಕಾರ ಹುನ್ನಾರ ನಡೆಸಿದೆ ಎಂದಿದ್ದಾರೆ.

ರಾಜಕೀಯ ಕಾರಣಕ್ಕಾಗಿ ದಕ್ಷಿಣ ಪಿನಾಕಿನಿ ನದಿ ನೀರಿನ ಹಕ್ಕನ್ನು ಕರ್ನಾಟಕದಿಂದ ಕಸಿಯಲು ಕೇಂದ್ರ ಹವಣಿಸುತ್ತಿದೆ. ಕಾವೇರಿ, ಕೃಷ್ಣಾ, ಮಹದಾಯಿ ಸೇರಿ ವಿವಿಧ ಜಲ ವಿವಾದಗಳಲ್ಲಿ ಕರ್ನಾಟಕವನ್ನು ಕಾಡಿದಂತೆ, ವಿವಾದವೇ ಅಲ್ಲದ ದಕ್ಷಿಣ ಪಿನಾಕಿನಿಯನ್ನೂ ವಿವಾದದ ಕೂಪಕ್ಕೆ ತಳ್ಳಿ ಕನ್ನಡಿಗರನ್ನು ಕಾಡುವ ಹವಣಿಕೆ ಇದಷ್ಟೇ.

ದಕ್ಷಿಣ ಪಿನಾಕಿನಿ ನದಿ ನೀರಿನ ವಿಷಯಕ್ಕೆ ಹೊಸ ನ್ಯಾಯಾಧಿಕರಣ ರಚನೆ ಮಾಡುವ ಕೇಂದ್ರ ಬಿಜೆಪಿ ಸರಕಾರದ ನಿರ್ಧಾರ ಅಕ್ಷಶಃ ರಾಜ್ಯದ ಪಾಲಿಗೆ ಮರಣಶಾಸನ. ಇದನ್ನು ರಾಜ್ಯ ಸರ್ಕಾರ ಮುಲಾಜಿಲ್ಲದೆ ವಿರೋಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜಕೀಯ ಲಾಭದ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರವು ನೆಲ, ಜಲ, ಭಾಷೆಯಂಥ ವಿಷಯಗಳನ್ನು ಇಟ್ಟುಕೊಂಡು ದಕ್ಷಿಣದ ನಡುವೆ ಜಗಳ ಹಚ್ಚಲು ಷಡ್ಯಂತ್ರ ನಡೆಸಿದೆ. ರಾಜ್ಯದ ವಿರೋಧವಿದ್ದರೂ ಕೇಂದ್ರವು ನ್ಯಾಯಾಧಿಕರಣ ರಚನೆ ಮಾಡಲು ಹೊರಟಿದೆ. ಇದು ಸರಿಯಲ್ಲ.

ಕನ್ನಡಿಗರನ್ನು ಮತ್ತೊಮ್ಮೆ ಜಲದಾಸ್ಯಕ್ಕೆ ದೂಡುವುದನ್ನು ನಾವು ಸಹಿಸುವುದಿಲ್ಲ. ಗೋದಾವರಿ-ಕೃಷ್ಣಾ-ಪಿನಾಕಿನಿ-ಕಾವೇರಿ ನದಿ ಜೋಡಣೆ ಯೋಜನೆಯಲ್ಲೂ ಕೇಂದ್ರವು ರಾಜ್ಯಕ್ಕೆ ಸೊನ್ನೆ ಸುತ್ತಿದೆ. 2022 ಫೆ.18ರಂದು ಸಭೆ ನಡೆಸಿದ ಕೇಂದ್ರವು, ಗೋದಾವರಿಯಿಂದ 247 ಟಿಎಂಸಿ ನೀರನ್ನು ಕೃಷ್ಣಾ, ಪೆನ್ನಾರ್‌ ಮೂಲಕ ಕಾವೇರಿಗೆ ಹರಿಸುವ ಯೋಜನೆಯ ಮಾಹಿತಿ ನೀಡಿತು. ಇಷ್ಟೂ ನೀರನ್ನು ತೆಲಂಗಾಣ, ಆಂಧ್ರ, ತಮಿಳುನಾಡಿಗೆ ಮಾತ್ರ ಹಂಚಿತು.

ಈ ನದಿ ಜೋಡಣೆ ಯೋಜನೆಯಲ್ಲಿ ಕರ್ನಾಟಕ ಪ್ರಮುಖ ಪಾಲುದಾರ & ಹಕ್ಕುದಾರ ರಾಜ್ಯ. ಆದರೆ, 247 ಟಿಎಂಸಿಯಲ್ಲಿ ರಾಜ್ಯಕ್ಕೆ ಸಿಕ್ಕಿರುವುದು ಶೂನ್ಯ ಆ ಸಭೆಯಲ್ಲಿ ರಾಜ್ಯಕ್ಕೆ ಅಪಮಾನ ಮಾಡಲಾಯಿತು ಎಂಬ ಮಾಹಿತಿಯೂ ಬಂದಿತ್ತು.

ಗೋದಾವರಿ-ಕೃಷ್ಣಾ-ಪಿನಾಕಿನಿ-ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ ರಾಜ್ಯಕ್ಕೆ ಹನಿ ನೀರನ್ನೂ ಹಂಚಿಕೆ ಮಾಡಿಲ್ಲ ಎಂದರೆ, ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ಮೇಲೆ ಅದೆಷ್ಟು ನಿರ್ಲಕ್ಷ್ಯ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.

“ಕನ್ನಡಿಗರು ತಬ್ಬಲಿಗಳಾಗುತ್ತಿದ್ದಾರೆ” ಎಂದು ಮಾಜಿ ಪ್ರಧಾನಿ ಶ್ರೀ ಹೆಚ್.ಡಿ.ದೇವೇಗೌಡರು ಸಂಸತ್ತಿನಲ್ಲಿ ಅಲವತ್ತುಕೊಂಡರೂ ಕೇಂದ್ರವು ಕನ್ನಡಿಗರ ಮೇಲೆ ಕಠಿಣ ನೀತಿ ಮುಂದುವರಿಸಿದೆ.

ಮತ್ತಷ್ಟು ಓದಿ: ಬತ್ತಿ ಹೋಗಿದ್ದ ನದಿ-ನಾಲೆಗಳಲ್ಲಿ ನೀರಿನ ವೈಭವ; ಧಾರಾಕಾರ ಮಳೆಯಿಂದ ಒಂದೆಡೆ ಸಂತಸ ಮತ್ತೊಂದೆಡೆ ಸಂಕಷ್ಟ!

ದಕ್ಷಿಣ ಪಿನಾಕಿನಿ ವಿಷಯದಲ್ಲಿ ನ್ಯಾಯಾಧೀಕರಣ ರಚನೆ ಒಪ್ಪುವುದಿಲ್ಲ. ನೆಲ, ಜಲ, ಭಾಷೆ ವಿಚಾರದಲ್ಲಿ ದಕ್ಷಿಣ ರಾಜ್ಯಗಳನ್ನು ಒಡೆದಾಳುವ ಬಿಜೆಪಿಯ ಕುತ್ಸಿತ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ. ರಾಜ್ಯದ ನೀರಾವರಿ ಹಿತಾಸಕ್ತಿಗಳ ಬಗ್ಗೆ ರಾಜಿ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ