ಹಿರಿಯ ಪತ್ರಕರ್ತ, ದಿ ವೀಕ್‌ನ ಮಾಜಿ ರೆಸಿಡೆಂಟ್ ಎಡಿಟರ್ ಸಚ್ಚಿದಾನಂದ ಮೂರ್ತಿ ವಿಧಿವಶ

|

Updated on: Oct 13, 2023 | 4:41 PM

Sachidananda Murthy Passes away: ಫೆಬ್ರವರಿ 1989 ರಲ್ಲಿ ಬೆಂಗಳೂರಿನಲ್ಲಿ ಪತ್ರಿಕೆಯ ವಿಶೇಷ ವರದಿಗಾರರಾದ ಅವರು ಏಪ್ರಿಲ್ 1990 ರಲ್ಲಿ ಬ್ಯೂರೋ ಮುಖ್ಯಸ್ಥರಾಗಿ ದೆಹಲಿಗೆ ತೆರಳಿದರು. ಏಪ್ರಿಲ್ 2000 ರಲ್ಲಿ, ಅವರು ಸ್ಥಾನಿಕ ಸಂಪಾದಕರಾಗಿ ನೇಮಕಗೊಂಡರು. 31 ವರ್ಷಗಳ ಕಾಲ, ಸಚ್ಚಿಯವರ ಸಾಪ್ತಾಹಿಕ ಅಂಕಣವು ಮಲಯಾಳ ಮನೋರಮಾದ ಎಡಿಟ್ ಪೇಜ್ ನಲ್ಲಿ ಕಾಣಿಸಿಕೊಂಡಿತ್ತು. ಆರಂಭದಲ್ಲಿ ಇದನ್ನು New Delhi ಎಂದು ಕರೆಯಲಾಯಿತು. 1991 ರಲ್ಲಿ ಅದನ್ನು ದೇಶಿಯಮ್ ಎಂದು ಮರುನಾಮಕರಣ ಮಾಡಲಾಯಿತು.

ಹಿರಿಯ ಪತ್ರಕರ್ತ, ದಿ ವೀಕ್‌ನ ಮಾಜಿ ರೆಸಿಡೆಂಟ್ ಎಡಿಟರ್ ಸಚ್ಚಿದಾನಂದ ಮೂರ್ತಿ ವಿಧಿವಶ
ಸಚ್ಚಿದಾನಂದ ಮೂರ್ತಿ
Follow us on

ಬೆಂಗಳೂರು ಅಕ್ಟೋಬರ್ 13: ದಿ ವೀಕ್ (THE WEEK) ಮತ್ತು ಮಲಯಾಳ ಮನೋರಮಾ(Malayala Manorama) ದೈನಿಕದ ಮಾಜಿ ಸ್ಥಾನಿಕ ಸಂಪಾದಕ ಕೆ.ಎಸ್. ಸಚ್ಚಿದಾನಂದ ಮೂರ್ತಿ (68) (Sachidananda Murthy) ಇಂದು (ಶುಕ್ರವಾರ) ಬೆಂಗಳೂರಿನಲ್ಲಿ ನಿಧನರಾದರು. ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆಯ ನಂತರ ಅವರು ಚೇತರಿಸಿಕೊಂಡಿದ್ದರು. ದೆಹಲಿಯ ರಾಜಕೀಯ ಮತ್ತು ಮಾಧ್ಯಮ ವಲಯಗಳಲ್ಲಿ ಚಿರಪರಿಚಿತರಾದ ಸಚ್ಚಿ ಎಂದೇ ಕರೆಯಲ್ಪಡುವ ಸಚ್ಚಿದಾನಂದ ಮೂರ್ತಿ ಅವರು,  ನವೆಂಬರ್ 1982 ರಲ್ಲಿ ದಿ ವೀಕ್‌ಗೆ ಬೆಂಗಳೂರು ವರದಿಗಾರರಾಗಿ ಸೇರಿಕೊಂಡರು. ಸೆಪ್ಟೆಂಬರ್ 2022 ರಲ್ಲಿ ನಿವೃತ್ತರಾಗುವವರೆಗೂ ಮಲಯಾಳ ಮನೋರಮಾ ಗ್ರೂಪ್​​ನಲ್ಲಿದ್ದರು.

ಫೆಬ್ರವರಿ 1989 ರಲ್ಲಿ ಬೆಂಗಳೂರಿನಲ್ಲಿ ಪತ್ರಿಕೆಯ ವಿಶೇಷ ವರದಿಗಾರರಾದ ಅವರು ಏಪ್ರಿಲ್ 1990 ರಲ್ಲಿ ಬ್ಯೂರೋ ಮುಖ್ಯಸ್ಥರಾಗಿ ದೆಹಲಿಗೆ ತೆರಳಿದರು. ಏಪ್ರಿಲ್ 2000 ರಲ್ಲಿ, ಅವರು ಸ್ಥಾನಿಕ ಸಂಪಾದಕರಾಗಿ ನೇಮಕಗೊಂಡರು. 31 ವರ್ಷಗಳ ಕಾಲ, ಸಚ್ಚಿಯವರ ಸಾಪ್ತಾಹಿಕ ಅಂಕಣವು ಮಲಯಾಳ ಮನೋರಮಾದ ಎಡಿಟ್ ಪೇಜ್ ನಲ್ಲಿ ಕಾಣಿಸಿಕೊಂಡಿತ್ತು. ಆರಂಭದಲ್ಲಿ ಇದನ್ನು New Delhi ಎಂದು ಕರೆಯಲಾಯಿತು. 1991 ರಲ್ಲಿ ಅದನ್ನು ದೇಶಿಯಮ್ ಎಂದು ಮರುನಾಮಕರಣ ಮಾಡಲಾಯಿತು.

ಮನಮೋಹನ್ ಸಿಂಗ್ ಜತೆ ಸಚ್ಚಿ

ಸಚ್ಚಿ ಅವರು ಈ ಹಿಂದೆ (2007ರಲ್ಲಿ) ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಸೆಂಟ್ರಲ್ ಪ್ರೆಸ್ ಅಕ್ರೆಡಿಟೇಶನ್ ಕಮಿಟಿಯ ಸದಸ್ಯರಾಗಿದ್ದರು. 2009 ರಲ್ಲಿ ಅವರು ಲೋಕಸಭೆ ಪತ್ರಿಕಾ ಸಲಹಾ ಸಮಿತಿಯ ಅಧ್ಯಕ್ಷರಾದರು.

ದುರ್ಲಭ್ ಸಿಂಗ್ ಮಾಧ್ಯಮ ಪ್ರಶಸ್ತಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪತ್ರಿಕೋದ್ಯಮಕ್ಕೆ ಜೀವಮಾನದ ಕೊಡುಗೆಗಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿಗಳನ್ನು ನೀಡಿ ಸಚ್ಚಿದಾನಂದ ಮೂರ್ತಿ ಅವರನ್ನು ಗೌರವಿಸಲಾಗಿದೆ. ಕರ್ನಾಟಕದ ಕೋಲಾರ ಜಿಲ್ಲೆಯ ಅಷ್ಟಗ್ರಾಮ ಹಳ್ಳಿಯ ಮೂಲದವರಾದ ಸಚ್ಚಿ ಅವರು ಪತ್ನಿ ಚಂದ್ರಿಕಾ, ಪುತ್ರರಾದ ನಿತಿನ್ ಮತ್ತು ರೋಹನ್ ಮತ್ತು ಸೊಸೆಯರಾದ ಲಕ್ಷ್ಮಿ ಭಾರದ್ವಾಜ್ ಮತ್ತು ವೈಷ್ಣವಿ ನಾರಾಯಣ್ ಅವರನ್ನು ಅಗಲಿದ್ದಾರೆ.

ಕೆ. ಆರ್ ನಾರಾಯಣ ಜತೆ ಸಚ್ಚಿ

 

ಸಚ್ಚಿದಾನಂದ ಮೂರ್ತಿ ಅವರ ಕಿರುಪರಿಚಯ

1982 ನವೆಂಬರ್ 01- ಬೆಂಗಳೂರಿನಲ್ಲಿ ದಿ ವೀಕ್ ವರದಿಗಾರರಾಗಿ ಸೇರ್ಪಡೆ

1989 ಫೆಬ್ರವರಿ 01- ವಿಶೇಷ ವರದಿಗಾರರಾಗಿ ಬಡ್ತಿ

1990 ಏಪ್ರಿಲ್ 01- ದಿ ವೀಕ್ ಮತ್ತು ಮಲಯಾಳ ಮನೋರಮಾದ ಬ್ಯೂರೋ ಮುಖ್ಯಸ್ಥರಾಗಿ ಬಡ್ತಿ ನೀಡಿ ದೆಹಲಿಗೆ ವರ್ಗ

1991 ಫೆಬ್ರವರಿ 26- ಮನೋರಮಾ ಸಂಪಾದಕೀಯ ಪುಟದಲ್ಲಿ ‘ನ್ಯೂ ಡೆಲ್ಲಿ’ ಅಂಕಣವನ್ನು ಪ್ರಾರಂಭ. ನಂತರ ಅದನ್ನು ದೇಶೀಯಂ (ರಾಷ್ಟ್ರೀಯ) ಎಂದು ಮರುನಾಮಕರಣ ಮಾಡಲಾಯಿತು, ಇದು ದೀರ್ಘಾವಧಿಯ ರಾಜಕೀಯ ಅಂಕಣಗಳಲ್ಲಿ ಒಂದಾಗಿದೆ. 2022 ರ ಸೆಪ್ಟೆಂಬರ್‌ನಲ್ಲಿ ನಿವೃತ್ತಿಯಾಗುವವರೆಗೂ ವಿರಾಮವಿಲ್ಲದೆ ಸಚ್ಚಿ ಈ ಅಂಕಣ ಬರೆದಿದ್ದರು,

2000 ಏಪ್ರಿಲ್ 01- ನವದೆಹಲಿಯ ರೆಸಿಡೆಂಟ್ ಎಡಿಟರ್ ಆಗಿ ಬಡ್ತಿ ಪಡೆದಿದ್ದಾರೆ

2004- ಕೇಂದ್ರ ಪತ್ರಿಕಾ ಮಾನ್ಯತೆ ಸಮಿತಿ ಮತ್ತು ಪತ್ರಿಕಾ ಮಂಡಳಿಯ ಸದಸ್ಯರಾಗಿ ನೇಮಕ
2006- ಕರ್ನಾಟಕ ರಾಜ್ಯ ಮಾಧ್ಯಮ ಪ್ರಶಸ್ತಿ

2007- ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ

2009- ಲೋಕಸಭೆ ಪತ್ರಿಕಾ ಸಲಹಾ ಸಮಿತಿಯ ಅಧ್ಯಕ್ಷರು

2011- ಮಾಧ್ಯಮ ಸಲಹಾ ಸದಸ್ಯ, NHRC

ಇದನ್ನೂ ಓದಿ: Viral Video: ಸಿಂಗಲ್ ಪೇರೆಂಟ್​; ತಾಯಂದಿರ ದಿನಕ್ಕೆ ಅಮ್ಮನಂತೆ ವೇಷ ಧರಿಸಿ ಅಪ್ಪ ಶಾಲೆಗೆ ಬಂದ ಆ ದಿನ

ಸಿಎಂ ಸಿದ್ದರಾಮಯ್ಯ ಸಂತಾಪ

ಹಿರಿಯ ಪತ್ರಕರ್ತ ಸಚ್ಚಿದಾನಂದ ಮೂರ್ತಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.


ಹಿರಿಯ ಪತ್ರಕರ್ತ, ‘ಮಲಯಾಳ ಮನೋರಮಾ’ ಮತ್ತು ‘ದಿ ವೀಕ್’ ಪತ್ರಿಕೆಗಳ ಮಾಜಿ ಸ್ಥಾನೀಯ ಸಂಪಾದಕರಾಗಿದ್ದ ಕೆ.ಎಸ್.ಸಚ್ಚಿದಾನಂದಮೂರ್ತಿ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ನನಗೆ ಆತ್ಮೀಯರು ಮತ್ತು ಹಿತೈಷಿಗಳಾಗಿದ್ದ ಸಚ್ಚಿದಾನಂದಮೂರ್ತಿಯವರು ದೆಹಲಿಯ ಮಾಧ್ಯಮರಂಗದಲ್ಲಿ ಸಕ್ರಿಯರಾಗಿದ್ದ ಕೆಲವೇ ಕೆಲವು ಹಿರಿಯ ಕನ್ನಡಿಗ ಪತ್ರಕರ್ತರಲ್ಲಿ ಒಬ್ಬರಾಗಿದ್ದರು. ರಾಜ್ಯ-ರಾಷ್ಟ್ರಗಳ ವಿದ್ಯಮಾನಗಳ ಜ್ಞಾನಕೋಶದಂತಿದ್ದ ಸಚ್ಚಿದಾನಂದ ಮೂರ್ತಿಯವರ‌ ಸಾವು ಮಾಧ್ಯಮರಂಗಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬ ಮತ್ತು ಸ್ನೇಹಿತರ ದು:ಖದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.


ಹಿರಿಯ ಪತ್ರಕರ್ತ ಸಚ್ಚಿದಾನಂದ ಮೂರ್ತಿ (ಸಚ್ಚಿ) ಅವರ ನಿಧನದ ಸುದ್ದಿ ಅತ್ಯಂತ ನೋವಿನ ಸಂಗತಿ. ಮಲಯಾಳಂ ಮನೋರಮಾ, ದಿ ವೀಕ್ ಪತ್ರಿಕೆಯ ಸಂಪಾದಕರಾಗಿ ರಾಷ್ಟ್ರ ಮಟ್ಟದಲ್ಲಿ ಪತ್ರಿಕೋದ್ಯಮದ ಮೂಲಕ ತಮ್ಮದೇ ಆದ ಸೇವೆ ಸಲ್ಲಿಸಿದ್ದರು. ಅವರ ಆತ್ಮಕ್ಕೆ ಸದ್ಗತಿ ಕೋರುತ್ತಾ. ಅವರ ಕುಟುಂಬ ವರ್ಗಕ್ಕೆ ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿಯೆಂದು ಪ್ರಾರ್ಥಿಸುತ್ತೇನೆ ಎಂದು ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:27 pm, Fri, 13 October 23